ಭಾನುವಾರ, ಜನವರಿ 26, 2020
30 °C

ಊನ ಗೆದ್ದ ನಾಸಿ ಸೋದರರು

–ಪವನ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಊನ ಗೆದ್ದ ನಾಸಿ ಸೋದರರು

ಕೆಂಭಾವಿ: ಅಂಗವಿಕಲತೆ ಒಂದು ಶಾಪವಲ್ಲ, ಅದು ಕೇವಲ ದೈಹಿಕ ನ್ಯೂನತೆ ಮಾತ್ರ. ನಾನು ಅಂಗವಿಕಲ. ಏನು ಮಾಡಲು ಸಾಧ್ಯ ಎಂದು ಕುಳಿತರೆ ಆಗದು. ಬದುಕಲು ನೂರೆಂಟು ದಾರಿಗಳಿವೆ ಎಂದು ಇಲ್ಲಿಯ ಕಾಸಿಮ್‌ಸಾಬ ನಾಸಿ, ಮಹಿಬೂಬ ನಾಸಿ ಸಹೋದರರು ಹೇಳುತ್ತಾರೆ.ಅವರು ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಯಾರಿಗೂ ಅವರಿಗೆ ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ ಎಂದು ಅನ್ನಿಸುವುದೇ ಇಲ್ಲ. ಮಹಿಬೂಬ್ 5ನೇ ತರಗತಿ ಓದಿದ್ದು, ಕಾಸಿಮ್ 1ನೇ ತರಗತಿ ಓದಿದ್ದಾನೆ.ಪಟ್ಟಣ ಹೊರವಲಯದ ಹುಣಸಗಿ ರಸ್ತೆಯಲ್ಲಿ ಸೈಕಲ್, ಬೈಕ್‌ಗಳ ಪಂಚರ್ ಅಂಗಡಿ ಇಟ್ಟುಕೊಂಡು ತಮ್ಮ ಉಪಜೀವನ ನಡೆಸುತ್ತಿರುವ ಈ ಸಹೋದ­ರರು, ನಿರುದ್ಯೋಗಿಗಳಿಗೆ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೂ ಅಂಗವಿಕಲರಾಗಿರುವ ಇವರ ಸಹೋದರಿಯೂ ಇವರಂತೆಯೇ ಇದ್ದಾರೆ. ಆದರೂ, ದುಡಿದು ಜೀವನ ಸಾಗಿಸುತ್ತೇವೆ ಎಂಬ ಆತ್ಮವಿಶ್ವಾಸಕ್ಕೆ ಇವರಲ್ಲಿ ಬರವಿಲ್ಲ. ಮಾತು ಬರುವುದಿಲ್ಲ ಹಾಗೂ ಕಿವಿ ಕೇಳಿಸುವುದಿಲ್ಲ ಎನ್ನುವುದು ಬಿಟ್ಟರೆ ನಮಗೆ ಯಾವುದೇ ಕೊರತೆ ಇಲ್ಲ, ಮಾನಸಿಕವಾಗಿ ನಾವು ಸದೃಢವಾಗಿದ್ದೇವೆ.

ಯಾವುದೇ ಕೆಲಸವಿದ್ದರೂ ಮಾಡಬಲ್ಲೆವು ಎಂಬ ಅವರ ಛಲ ಮಾತ್ರ ಮೆಚ್ಚುವಂತಹದು. ‘ಚಿಕ್ಕವರಿದ್ದಾಗ ಶಾಲೆಗೆ ಹೋಗುತ್ತಿದ್ದೆವು. ಆದರೆ, ಕಿವಿ ಕೇಳಿಸದ ಕಾರಣ ಶಾಲೆ ಬಿಟ್ಟೆವು’ ಎಂದು ಸನ್ನೆಗಳ ಮೂಲಕವೇ ಹೇಳುವ ಇವರು, ‘ನಾವು ಯಾರಿ­ಗಿಂತಲೂ ಕಮ್ಮಿ ಇಲ್ಲ, ಓದು ಬರದಿದ್ದರೇನಾಯಿತು. ದುಡಿಯಲು ನೂರು ದಾರಿಗಳಿವೆ’ ಎಂದು ವಿಶ್ವಾಸದಿಂದ ಹೇಳುತ್ತಾರೆ. ಒಬ್ಬ ಪಂಚರ್‌ ಅಂಗಡಿ ನೋಡಿಕೊಳ್ಳುತ್ತಿದ್ದು, ಇನ್ನೊಬ್ಬರು ಮನೆ ಕಟ್ಟುವ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಈಗ ಗೌಂಡಿ ಕೂಡ ಆಗಿದ್ದಾರೆ.ಸರ್ಕಾರದಿಂದ ಮಾಶಾಸನ ಬಿಟ್ಟರೆ, ಯಾವುದೇ ಸವಲತ್ತುಗಳು ಇವರಿಗೆ ದೊರೆತಿಲ್ಲ. ಸರ್ಕಾರ ಅಂಗವಿಕಲರಿಗೆ ಆಶ್ರಯ ಮನೆ ನೀಡುತ್ತಿದೆ. ಆದರೆ, ಇದುವರೆಗೂ ಇವರಿಗೆ ಆ ಭಾಗ್ಯ ಕೂಡಿ ಬಂದಿಲ್ಲ. ತಮ್ಮ ಕಾಯಕಕ್ಕೆ ಸರ್ಕಾರವೇನಾದರೂ ಧನ ಸಹಾಯ ಮಾಡಿದರೆ ಇನ್ನೂ ಹೆಚ್ಚು ಉದ್ಯೋಗ ಮಾಡಲು ಸಾಧ್ಯವಾಗುತ್ತದೆ ಎಂದು ಈ ಸಹೋದರರು ಹೇಳುತ್ತಾರೆ.

 

ಪ್ರತಿಕ್ರಿಯಿಸಿ (+)