ಊಪರ್ ಶೇರವಾನಿ, ಅಂದರ್ ಪರಿಶಾನಿ!

7

ಊಪರ್ ಶೇರವಾನಿ, ಅಂದರ್ ಪರಿಶಾನಿ!

Published:
Updated:
ಊಪರ್ ಶೇರವಾನಿ, ಅಂದರ್ ಪರಿಶಾನಿ!

ಬಹಳ ದಿನಕ್ಕೆ ಮಿಸ್ಸಮ್ಮನ ಚಾದಂಗಡಿ ಮುಂದೆ ತೆಪರೇಸಿ ಸಿಕ್ಕಿದ್ದ. ನನ್ನ ಕಂಡವನೇ `ನಮಸ್ಕಾರ ಸಾ, ಇಷ್ಟ್ ದಿನ ಎಲ್ಲೋಗ್‌ಬಿಟ್ಟಿದ್ರಿ ಸಾ? ನಾವು ಏನೇನೋ ಅನ್ಕಂಡು ಬಹಳ ಫೀಲ್ ಮಾಡ್ಕಂಡಿದ್ವಿ...' ಅಂದ.`ಅಲೆ ಇವ್ನ, ನಾನು ಆಗಾಗ್ಗೆ ಇಲ್ಲಿಗೆ ಬರ‌್ತಾನೇ ಇರ‌್ತೀನಪ್ಪ, ನೀನೇ ಕಾಣಿಸ್ತಿಲ್ಲ. ಬೇಕಾದ್ರೆ ಮಿಸ್ಸಮ್ಮನ್ನ ಕೇಳು. ಅದಿರ‌್ಲಿ, ನನ್ ಬಗ್ಗೆ ಏನೇನ್ ಅನ್ಕಂಡು ಫೀಲ್ ಮಾಡ್ಕಂಡಿದ್ರಿ?' ವಿಚಾರಿಸಿದೆ.`ಏನಿಲ್ಲ ಬಿಡಿ ಸಾ, ವಯಸ್ಸಾದೋರು ಆಗಾಗ್ಗೆ ಪಬ್ಲಿಕ್ಕಲ್ಲಿ ಕಾಣಿಸ್ತಾ ಇರ‌್ಬೇಕು ಸಾ, ಇಲ್ಲಾಂದ್ರೆ...'

`ಇಲ್ಲಾಂದ್ರೆ ಶಿವನ ಪಾದ ಸೇರ‌್ಕಂಬುಟ್ರು ಅನ್ಕೋತಿರೇನೋ ಅಲ್ವಾ?' ನಾನು ನಕ್ಕೆ. ತೆಪರೇಸಿಯೂ ನಕ್ಕ.

`ಅಲ್ಲೋ ತೆಪರೇಸಿ, ಏನನ್ನುತ್ತಪ್ಪ ನಿಮ್ಮ ರಾಜಕೀಯ? ಈ ಸಲದ ಎಲೆಕ್ಷನ್ನು ಮಜ ಇರುತ್ತಲ್ವಾ? ಪಕ್ಷಗಳೂ ಜಾಸ್ತಿ ಆಗಿದಾವೆ...'`ಹ್ಞೂ ಸಾ, ಪಕ್ಷಗಳಿಗೇನು ಬರ ಇಲ್ಲಬಿಡಿ. ಕಾಂಗ್ರೆಸ್ಸು, ಜೆಡಿಎಸ್ಸು, ಜೆಡಿಯು, ಬಿಜೆಪಿ, ಕೆಜೆಪಿ, ಕೆಬಿಜೆಪಿ... ಮ್ಯಾಲೊಂದು ಬಿಎಸ್ಸಾರು. ಅದರ ಮೇಲೆ ಒಂದೇಳೆಂಟು ಪಿಳ್ಳೆ ಪಿಸಕ ಪಕ್ಷಗಳು. ನೀವೇನರ ಟ್ರೈ ಮಾಡ್ತೀರ ಸಾ? ಟಿಕೆಟ್ ಬೇಕಾದ್ರೆ ನಾನು ಕೊಡಿಸ್ತೀನಿ...'ತೆಪರೇಸಿ ಸೀರಿಯಸ್ಸಾಗಿ ಹೇಳ್ತಿದ್ದನ್ನ ಕೇಳಿ ನನಗೆ ನಗು ಬಂತು. `ಎಲಾ ಇವನಾ' ಎಂದು ಮನಸ್ಸಲ್ಲೇ ಅಂದುಕೊಂಡು `ನಮ್ಮಂಥೋರಿಗೆಲ್ಲ ಯಾಕಪ್ಪ ರಾಜಕೀಯ? ಅದಿರ‌್ಲಿ, ನಂಗೆ ಬಿಜೆಪಿ-ಕೆಜೆಪಿ ಗೊತ್ತು, ಇದ್ಯಾವುದಿದು ಕೆಬಿಜೆಪಿ?' ಎಂದೆ.`ಅದೇ ಸಾ, ಬಿಜೆಪೀಲಿ ಇದ್ಕೊಂಡೇ ಕೆಜೆಪಿ ಕಟ್ತಾ ಇರೋರು, ಕೆಜೆಪಿ ಸೇರಿದ್ರೂ ಇನ್ನೂ ಬಿಜೆಪಿ ಸರ‌್ಕಾರದಲ್ಲಿ ಶಾಸಕರು-ಮಂತ್ರಿಗಳು ಆಗಿರೋರು. ಅವರ‌್ನೆಲ್ಲ ಕೆಬಿಜೆಪಿ ಅಂತ ಕರೀತೀವಿ. ಅಂದ್ರೆ `ಕಲಬೆರಕೆ ಜನತಾಪಕ್ಷ'ದೋರು ಅಂತ!' ತೆಪರೇಸಿ ಜೋರಾಗಿ ನಕ್ಕ.`ಓ ಹಾಗೋ... ಸರಿಯಪ್ಪ. ಆಮೇಲೇ... ಈ ಚುನಾವಣೇನೇ ಇನ್ನೂ ಡಿಕ್ಲೇರ್ ಆಗಿಲ್ಲ, ಆಗ್ಲೇ ಸಮಾವೇಶಗಳು, ಪಾದಯಾತ್ರೆಗಳು ಶುರುವಾಗಿ ಬಿಟ್ಟದಾವಲ್ಲೋ?'`ಅದೂ... ಮಳೆ ಬರೋಕೆ ಮುಂಚೆ ರೆಕ್ಕೆ ಹುಳುಗಳು ಏಳಲ್ವಾ ಸಾ? ಹಂಗೆ ಚುನಾವಣೆಗೆ ಮುಂಚೆ ರಾಜಕಾರಣಿಗಳು ಎದ್ದುಬಿಡ್ತಾರೆ. ಸಭೆ, ಸಮಾವೇಶ, ಪಾದಯಾತ್ರೆ ಶುರು ಹಚ್ಕಂಬಿಡ್ತಾರೆ. ಕಾಂಗ್ರೆಸ್‌ನೋರು `ನಡೆಮುಂದೆ ನಡೆಮುಂದೆ ನುಗ್ಗಿ ನಡೆಮುಂದೆ' ಅಂತ ಪಾದಯಾತ್ರೆ ಹೊರಟಿದಾರೆ. ಶ್ರೀರಾಮುಲು ರೈತರ ಸಮಾವೇಶ, ಮಹಿಳೆಯರ ಸಮಾವೇಶ, ಮಕ್ಕಳ ಸಮಾವೇಶ ಅಂತ ಹೊಂಟಿದಾರೆ. ಯಡ್ಯೂರಪ್ಪ ಹಳ್ಳಿ ಹಳ್ಳಿಗೆ ಹೋಗ್ತೀನಿ ಅಂದ್ರೆ, ಕುಮಾರಸ್ವಾಮಿ ಮನೆ ಮನೆಗೆ ಹೋಗ್ತೀನಿ ಅಂತಿದಾರೆ. ನಾನೂ ನಮ್ಮನೇಗೆ ಯಾವಾಗ ಬರ‌್ತಾರೆ ಅಂತ ಕಾಯ್ತಿದೀನಿ...' ಎಂದ ತೆಪರೇಸಿ ನಗುತ್ತ.`ಅಲ್ಲೋ, ಈ ಕಾಂಗ್ರೆಸ್‌ನೋರು `ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ' ಅಂತಿದ್ರಲ್ಲ, ಅದೇನದು?'

`ಅದೂ `ಕಾಂಗ್ರೆಸ್ ನಡಿಗೆ ಕುರ್ಚಿಯ ಕಡೆಗೆ' ಅಂತ ಇರಬೇಕಿತ್ತು ಸಾ, ಸ್ವಲ್ಪ ಮಿಸ್ಟೇಕ್ ಆಗಿಬಿಟ್ಟಿದೆ. ಡೈರೆಕ್ಟಾಗಿ ಹೇಳಿದ್ರೆ ಜನ ತಪ್ಪು ತಿಳ್ಕೋತಾರೆ ಅಂತ `ಕೃಷ್ಣೆಯ ಕಡೆಗೆ, ಭದ್ರೆಯ ಕಡೆಗೆ' ಅಂತಾರೆ ಅಷ್ಟೆ. `ಎಲ್ಲಾರು ಮಾಡುವುದು ಕುರ್ಚಿಗಾಗಿ, ಕಾಸು ಖರ್ಚಿಗಾಗಿ' ಅಲ್ವಾ ಸಾ?'`ಪರ‌್ವಾಗಿಲ್ಲ ಕಣಯ್ಯ, ಚೆನ್ನಾಗಿ ಮಾತಾಡ್ತೀಯ. ಆಮೇಲೆ ಇನ್ನೊಂದ್ ವಿಷ್ಯ ಕೇಳಿದೆ. ಯಡ್ಯೂರಪ್ಪ, ಸರ್ಕಾರಕ್ಕೆ ಡೆಡ್‌ಲೈನ್ ಕೊಡೋದನ್ನ ನಿಲ್ಸಿದಾರಂತೆ ಹೌದಾ?'`ಹೌದಂತೆ ಸಾ, ಪಾಪ ಅವರ ಪರಿಸ್ಥಿತಿ `ಊಪರ್ ಶೇರವಾನಿ, ಅಂದರ್ ಪರಿಶಾನಿ' ಅನ್ನೋತರ ಆಗಿಬಿಟ್ಟಿದೆಯಂತೆ. ಅವರ ಬಲಗೈ ಭಂಟರ ಲೈನ್‌ಗಳೆಲ್ಲ ಒಂದೊಂದೇ ಡೆಡ್ ಆಗ್ತಿರೋವಾಗ ಪಾಪ ಅವರು ಯಾರಿಗೆ ಡೆಡ್‌ಲೈನ್ ಕೊಟ್ಟು ಏನ್ ಪ್ರಯೋಜನ ಹೇಳಿ. ಯಡ್ಯೂರಪ್ಪ ಅವರೇನೋ ಕತ್ತಿ, ಕಿರೀಟ, ಭುಜಕೀರ್ತಿ ಎಲ್ಲ ಕಟ್ಕೊಂಡು ರಂಗದ ಮೇಲೆ ಬಂದು ನಿಂತುಬಿಟ್ಟಿದಾರೆ. ಆದ್ರೆ ಕುಣಿಯಂಗಿಲ್ಲ, ಬಿಡಂಗಿಲ್ಲ ಹಂಗಾಗಿದೆ ಅವರ ಪರಿಸ್ಥಿತಿ' ತೆಪರೇಸಿ ಬೇಸರ ವ್ಯಕ್ತಪಡಿಸಿದ.`ಹಂಗಾದ್ರೆ ಶೆಟ್ಟರ್ ಸಾಹೇಬ್ರು ಬಜೆಟ್ ಮಂಡಿಸೋದು ಗ್ಯಾರಂಟಿ ಅನ್ನು...'`ಗ್ಯಾರಂಟಿ ಸಾ, ಈಗ ಅವರಿಗೂ ಧೈರ‌್ಯ ಬಂದುಬಿಟ್ಟಿದೆಯಂತೆ. ಎಲ್ಲ ಕಡೆ ಒಬ್ಬೊಬ್ರೇ ಓಡಾಡ್ತಾರಂತೆ. ಮೊದ್ಲೆಲ್ಲ ಮಾತೇ ಆಡ್ತಿದ್ದಿಲ್ಲ. ಈಗ ಮುಂದಿನ ಮುಖ್ಯಮಂತ್ರಿ ನಾನೇ ಅನ್ನೋಷ್ಟರ ಮಟ್ಟಿಗೆ ಧೈರ‌್ಯ ತಗಂಬಿಟ್ಟಿದಾರಂತೆ.'`ಹೌದಾ? ಪರ‌್ವಾಗಿಲ್ಲ ಕಣಯ್ಯ, ಅದೇ ತರ ಮೊನ್ನೆ ನಮ್ಮ ಪ್ರಧಾನಿ ಮನ್‌ಮೋಹನ್ ಸಿಂಗರೂ ಬಾಯಿ ಬಿಟ್ಟು ಮಾತಾಡಿದ್ರಂತೆ? ಪೇಪರ್‌ನಲ್ಲಿ ಬಂದಿತ್ತಪ್ಪ'`ಹೌದು ಮಾತಾಡಿದ್ರಂತೆ. ಪಾಪ ಅದು ಅವರ ತಪ್ಪಲ್ಲ ಸಾ, ಜಾಸ್ತಿ ಮಾತಾಡಿದ್ರೆ ಸವೀತೀರ ಅಂತ ಡಾಕ್ಟ್ರು ಹೇಳಿದಾರಂತೆ. ಅದ್ಕೇ ಸೋನಿಯಾ ಮೇಡಂ ಹೇಳಿದಾಗ ಒಂದೆರಡು ಪದ ಮಾತಾಡ್ತಾರೆ. ಮಿಕ್ಕಂತೆ ಬರೀ ತಲೆ ಆಡಿಸ್ತಾರೆ ಅಷ್ಟೆ.'ತೆಪರೇಸಿ ಮಾತಿಗೆ ನನಗೆ ನಗು ತಡೆಯಲಾಗಲಿಲ್ಲ. `ಮಾರಾಯ, ಸುಮ್ನಿರಪ್ಪ ಸಾಕು. ನಮ್ ಪ್ರಧಾನಿಗಳನ್ನ ಹಂಗೆಲ್ಲ ಆಡ್ಕೋಬಾರ್ದು. ಅದಿರ‌್ಲಿ, ಇವತ್ತಿನ ಪೇಪರ್ ನೋಡಿದ್ಯಾ? ಆಂಧ್ರ ಮುಖ್ಯಮಂತ್ರಿ ಬಡವರಿಗೆ ಒಂದು ರೂಪಾಯಿಗೆ ಕೆ.ಜಿ. ಅಕ್ಕಿ ಕೊಡ್ತೀನಿ ಅಂತ ಹೇಳಿದಾರೆ?' ನಾನು ಮಾತು ಬದಲಿಸಿದೆ.`ಅಯ್ಯೋ ಅದ್ಯಾವ ದೊಡ್ಡ ವಿಷ್ಯ ಬಿಡಿ ಸಾ, ನಮ್ ಬಿಎಸ್ಸಾರ್ ಪಾರ್ಟಿ ಶ್ರೀರಾಮುಲು ಸಾಹೇಬ್ರು ತಾವು ಮುಖ್ಯಮಂತ್ರಿ ಆದ್ರೆ ಬಡವರಿಗೆಲ್ಲ ಫ್ರೀ ರೇಷನ್ ಕೊಡ್ತೀನಿ ಅಂತ ಹೇಳಿದಾರೆ. ಅದು ಗೊತ್ತಿಲ್ವಾ?'`ಹೌದಾ? ಅಷ್ಟಾದ್ರೆ ಸಾಕು ಬಿಡಪ್ಪ. ಬಡವರ ಊಟದ ಚಿಂತೆ ಕಳೆಯುತ್ತೆ. ಅದರ ಮುಂದೆ ಇನ್ನೇನ್ ಬೇಕು ಅಲ್ವಾ?'`ಹಂಗಂದ್ರೆ ಹೆಂಗೆ ಸಾ? ಬರೀ ಊಟ ಸಿಕ್ರೆ ಆಯ್ತೊ? ನಮ್ಮಂಥೋರೆಲ್ಲ ಏನ್ ಮಾಡ್ಬೇಕು? ನಾವೆಲ್ಲ ನಮ್ ಅಬ್ಕಾರಿ ಮಿನಿಸ್ಟ್ರು ರೇಣುಕಾಚಾರ‌್ಯರ ಮೇಲೆ ಭಾರೀ ನಂಬಿಕೆ ಇಟ್ಕಂಡಿದೀವಿ...'ತೆಪರೇಸಿ ಮಾತು ನನಗೆ ಅರ್ಥವಾಗಲಿಲ್ಲ `ಏನಯ್ಯಾ ಹಾಗಂದ್ರೆ?' ಎಂದೆ.`ಅರ್ಥ ಆಗಲಿಲ್ವಾ ಸಾ? ಶ್ರೀರಾಮುಲು ಫ್ರೀ ರೇಷನ್ ಕೊಡೋ ತರ ರೇಣುಕಾಚಾರ‌್ಯರು ತಮ್ಮ ಮಾನಸ ತಂದೆ ಯಡ್ಯೂರಪ್ಪ ಅವರ ಕೆಜೆಪಿ ಪಕ್ಷ ಅಧಿಕಾರಕ್ಕೆ ಬಂದ್ರೆ ಬಡವರಿಗೆಲ್ಲ ಫ್ರೀ `ಗುಂಡು' ಸ್ಯಾಂಕ್ಷನ್ ಮಾಡ್ತಾರೇನೋ ಅಂತ ಆಸೆಯಿಂದ ಕಾಯ್ತಿದೀವಿ' ತೆಪರೇಸಿ ನಕ್ಕ.`ಥೂ ನಿನ್ನ, ಆಸೆ ನೋಡು. ಹೋಗ್ಲಿ, ನೀನೇ ಒಂದು ಹೊಸ ಪಕ್ಷ ಕಟ್ಟಿದೆ ಅಂತ ಇಟ್ಕೋ. ಜನಕ್ಕೆ ಏನೇನ್ ಫ್ರೀ ಕೊಡ್ತೀಯ?'`ನಾನಾ ಸಾ? ಸರಿ ಬರ‌್ಕಳಿ. ಬಡವರಿಗೆ ಫ್ರೀ ಗುಂಡು, ಫ್ರೀ ರೇಷನ್ನು. ಫ್ರೀ ಕರೆಂಟು, ಫ್ರೀ ಎಜುಕೇಷನ್ನು. ಬಸ್ಸಲ್ಲಿ ರೈಲಲ್ಲಿ ಫ್ರೀ ಟಿಕೆಟ್ಟು, ಆರೋಗ್ಯ ಕೆಟ್ರೆ ಫ್ರೀ ಟ್ರೀಟ್‌ಮೆಂಟು. ಹೆಣ್ಮಕ್ಕಳಿಗೆಲ್ಲ ಬಂಗಾರದ ಒಡವೆ, ಫ್ರೀ ಮದುವೆ, ಆಮೇಲೆ ಫ್ರೀ ಹೆರಿಗೆ. ಮನೆಮನೆಗು ಫ್ರೀ ಗ್ಯಾಸು, ಎರಡನೇ ಹೆಂಡತಿ ಇದ್ರೆ ಔಟ್ ಹೌಸು. ಹಿಂಗೆ ಎಲ್ಲ ಫ್ರೀ ಫ್ರೀ ಫ್ರೀ...'`ಸ್ಟಾಪ್ ಸ್ಟಾಪ್... ಅಲ್ಲಯ್ಯಾ ಎಲ್ಲ ಫ್ರೀ ಕೊಟ್ಟು ಸರ‌್ಕಾರ ಹೆಂಗಯ್ಯ ನಡೆಸ್ತೀಯ?'

`ಅಲ್ಲ ಸಾ, ಬೆಲ್ಲ ಕೊಡದಿದ್ರು ಚಿಂತಿಲ್ಲ, ಬೆಲ್ಲದಂಗೆ ಮಾತಾಡೋಕೇನು ಟ್ಯಾಕ್ಸ್ ಕೊಡಬೇಕಾ? ಮೇಲಾಗಿ ನಾನು ಅಧಿಕಾರಕ್ಕೆ ಬಂದ್ರೆ ತಾನೇ ಕೊಡೋದು?' ತೆಪರೇಸಿ ನಕ್ಕ.ಕಿಲಾಡಿ ಕಣಯ್ಯ. ಅದಿರ‌್ಲಿ, ಯಡ್ಯೂರಪ್ಪ ಕರ್ನಾಟಕದ ಕೇಶುಭಾಯಿ ಆಗ್ತಾರೆ ನೋಡ್ತಿರಿ ಅಂತ ಅನಂತಕುಮಾರು ಹೇಳ್ತಿದ್ರಂತೆ. ಅಂದ್ರೇ ಶೆಟ್ಟರು ಕರ್ನಾಟಕದ ನರೇಂದ್ರ ಮೋದಿ ಆಗ್ತಾರೆ ಅಂತಾನಾ?'`ಯಡ್ಯೂರಪ್ಪ ಕೇಶುಭಾಯಿ ಆಗ್ತಾರೋ ಇಲ್ವೋ ಗೊತ್ತಿಲ್ಲಾ ಸಾ, ಆದ್ರೆ ಶೆಟ್ಟರು ಮಾತ್ರ ಮೋದಿ ಆಗೋಕೆ ಆಗಲ್ಲ.'

`ಯಾಕೆ?'ಮೋದಿ ತರ ಅವರು ಬ್ರಹ್ಮಚಾರಿ ಅಲ್ವಲ್ಲ ಸಾ, ಅದಕ್ಕೆ!'

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry