ಮಂಗಳವಾರ, ನವೆಂಬರ್ 19, 2019
28 °C
ಬರಿದಾದ ಕೃಷ್ಣೆ, ಮಲಪ್ರಭೆ; ಪ್ರವಾಸಿಗರ ಸಂಖ್ಯೆ ಇಳಿಮುಖ

ಊರಿಗೆ ಬಂದವ್ರ ನೀರು ಕಾಣದೆ ನಿರಾಶೆ

Published:
Updated:

ಕೂಡಲಸಂಗಮ: ತುಂಬಿ ಹರಿಯುತ್ತಿದ್ದ ಕೃಷ್ಣಾ, ಮಲಪ್ರಭಾ ನದಿಗಳಲ್ಲಿ  20 ದಿನಗಳಿಂದ ನೀರು ಬರಿದಾಗಿರುವುದರಿಂದ ಕೂಡಲಸಂಗಮಕ್ಕೆ ಬಂದ ಪ್ರವಾಸಿಗರು, ಭಕ್ತರು ನಿರಾಸೆಯಿಂದ ಮರಳುವ ದೃಶ್ಯ ಒಂದು ವಾರದಿಂದ ಕಂಡು ಬರುತ್ತಿದೆ.ಕೂಡಲಸಂಗಮ ಕೃಷ್ಣ, ಮಲಪ್ರಭೆಯ ಸಂಗಮ ಸ್ಥಳ. ಜೊತೆಗೆ ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ ಹಾಗೂ ಐಕ್ಯಸ್ಥಳ, ಅಂತರರಾಷ್ಟ್ರೀಯ ಪ್ರವಾಸಿತಾಣ. ಕ್ಷೇತ್ರಾಧಿಪತಿ ಸಂಗಮನಾಥನ ದೇವಾಲಯ ಇರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಕೂಡಲಸಂಗಮಕ್ಕೆ ಅಪಾರ ಭಕ್ತರು ಬರುವರು. ಬರುವ ಬಹುತೇಕ ಭಕ್ತರು ಕೃಷ್ಣ ಮಲಪ್ರಭೆಯಲ್ಲಿ ಸ್ನಾನ ಮಾಡಿ ದೋಣಿ ಸಂಚಾರ ಮಾಡಿ ಸಂಗಮನಾಥ ಹಾಗೂ ಬಸವಣ್ಣನವರ ದರ್ಶನ ಪಡೆದು ಸಂಗಮದಲ್ಲಿ ಸಮ್ಮಿಲನವಾದ ಕೃಷ್ಣಾ ಹಾಗೂ ಮಲಪ್ರಭೆಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಹಾಗೆ ನೋಡಿ, ದೋಣಿ ಸಂಚಾರ ಮಾಡಿ ಸಂಭ್ರಮಿಸಿದ ಪ್ರವಾಸಿಗರು, ಭಕ್ತರು ಈಗ ರಜೆಯಲ್ಲಿ ಸದ್ಯ ಕೂಡಲಸಂಗಮಕ್ಕೆ ಬಂದರೆ ನದಿ ಬರಿದಾಗಿರುವುದನ್ನು ನೋಡಿ ನಿರಾಶೆಯಿಂದ ಮರಳುತ್ತಿರುವರು. ಇದರಿಂದ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ವ್ಯಾಪಾರವೂ ಕಡಿಮೆಯಾಗಿದೆ.ಕೂಡಲಸಂಗಮದಲ್ಲಿ ಕೃಷ್ಣ ಮಲಪ್ರಭೆ ನದಿಗಳು ನದಿಗಳು ವರ್ಷದ 8 ತಿಂಗಳು ಅಂದರೆ, ಜುಲೈದಿಂದ ಫೆಬ್ರುವರಿ ಅಂತ್ಯದವರೆಗೆ ತುಂಬಿಕೊಂಡಿರುತ್ತವೆ. ಆದರೆ ಮಾರ್ಚ್‌ದಿಂದ ಜೂನ್ ಅಂತ್ಯದವರೆಗೆ ಈ ನದಿಗಳು ಸಂಪೂರ್ಣವಾಗಿ ಬತ್ತುವುದರಿಂದ ಕೂಡಲಸಂಗಮಕ್ಕೆ ಬಂದ ಪ್ರವಾಸಿಗರು ಬರಿದಾದ ನದಿಯನ್ನು ನೋಡಿ ನಿರಾಸೆಯಿಂದ ಮರಳುವರು.ಕೂಡಲಸಂಗಮ ಅಭಿವೃದ್ದಿ ಮಂಡಳಿ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರ, ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ಸ್ನಾನ ಘಟ್ಟ ನಿರ್ಮಾಣ ಮಾಡಿ ಬರುವ ಭಕ್ತರು ಸ್ನಾನ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಜತೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಎರಡು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕಾರ್ಯವನ್ನೂ ಮಾಡುತ್ತಿದೆ. ಆದರೆ ಅವುಗಳ ನಿರ್ವಹಣೆ ಇನ್ನೂ  ಸುಧಾರಿಸಬೇಕು ಎಂಬ ಮಾತುಗಳು ಕೂಡಲಸಂಗಮಕ್ಕೆ ಬರುವ ಪ್ರವಾಸಿಗರಿಂದ ಕೇಳಿಬರುತ್ತಿವೆ.ಚಾಮರಾಜನಗರದ ಎ.ಆಶಾ ಮಾತನಾಡಿ, `ಕೂಡಲಸಂಗಮಕ್ಕೆ ಬಹಳ ಆಶೆಯಿಂದ ಬಂದೆವು. ನದಿಯಲ್ಲಿ ನೀರು ಇರದೇ ಇರುವುದು ನಿರಾಶೆಯನ್ನು ಉಂಟುಮಾಡಿತು. ಸರಕಾರ ಕೃಷ್ಣಾ ಹಾಗೂ ಮಲಪ್ರಭಾ ನದಿಗೆ ನೀರು ಬಿಡಿಸುವಂತಹ ಕಾರ್ಯ ಮಾಡಬೇಕು. ಇದರಿಂದ ಕೂಡಲಸಂಗಮಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವುದು. ಜೊತೆಗೆ ನದಿಯ ದಡದ ಜನರಿಗೆ ಅನುಕೂಲವಾಗುವುದು' ಎಂದು ಹೇಳಿದರು.ಕೂಡಲಸಂಗಮದ ಬಸವಣ್ಣನವರ ಐಕ್ಯ ಮಂಟಪ ದರ್ಶನ ಶುಲ್ಕ ವಸೂಲಾತಿಯ ಗುತ್ತಿಗೆದಾರ ಶಂಭು ಗೌಡರ, `15 ದಿನಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಸಂಪೂರ್ಣ ಇಳಿಮುಖವಾಗಿದೆ.  ಇದರಿಂದ ವ್ಯಾಪಾರವು ಸಂಪೂರ್ಣ ಕುಂಠಿತವಾಗಿದೆ' ಎಂದು ಹೇಳಿದರು.

ಪ್ರತಿಕ್ರಿಯಿಸಿ (+)