ಊರಿಗೊಂದೇ ಬಾವಿ: ನೀರಿಗೆ ತತ್ವಾರ!

ಕಾಳಗಿ: `ದಿನ ಬೆಳಗಾದರೆ ಶಂಭುಲಿಂಗೇಶ್ವರ ದೇವಾಲಯ ಆವರಣದ ಬಾವಿಯ ದಾರಿ ತುಳಿಯಬೇಕು. ಸ್ವಲ್ಪ ತಡವಾದರೆ ದನಕರುಗಳು ಹಳ್ಳದಲ್ಲಿ ಈಜಾಡುತ್ತವೆ~. ಎನ್ನುತ್ತ ಹೆಜ್ಜೆ ಹಾಕುವ ದುಸ್ಥಿತಿ ಚಿತ್ತಾಪುರ ತಾಲ್ಲೂಕಿನ ಡೊಣ್ಣೂರ ಗ್ರಾಮದ ಜನರಿಗೆ ಬಂದೋದಗಿದೆ.
ಏಕೈಕ ನೀರಿನ ಬಾವಿ, ಅರ್ಧಕ್ಕೆ ನಿಂತಿರುವ ನೀರಿನ ಟ್ಯಾಂಕ್, ಕಸಕಡ್ಡಿ ತುಂಬಿ ಮಣ್ಣು ಪಾಲಾದ ಕಿರು ನೀರು ಸರಬರಾಜಿನ ಕೊಳವೆಗಳೇ ಸಾಕ್ಷಿ ಹೇಳುವಂತಿವೆ.
ರಾಜಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಡೊಣ್ಣೂರ ಊರಲ್ಲಿ ಅಂದಾಜು ಎರಡು ಸಾವಿರ ಜನರ ಇದ್ದಾರೆ. ಈ ನಿವಾಸಿಗಳಿಗೆಂದು ಸುಮಾರು ವರ್ಷಗಳ ಹಿಂದೆ ತೋಡಲಾದ ಕೊಳವೆ ಬಾವಿಯ ಕಿರು ನೀರು ಸರಬರಾಜು ಸ್ಥಗಿತಗೊಂಡು ಹಲವು ವರ್ಷಗಳೇ ಉರುಳಿವೆ. ಸಾರ್ವಜನಿಕ ನಳಗಳ ಪೈಪ್ಗಳಂತೂ ನೀರಿಲ್ಲದೆ ನಶಿಸಿ ಹೋಗಿವೆ.
ಇನ್ನೂ ಹಿಂದಿನ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳರ ಅಧಿಕಾರ ಅವಧಿಯಲ್ಲಿ `ಡೊಣ್ಣೂರ-ಕ್ರಾಸ್~ ರಸ್ತೆ ಬದಿಯ ಒಂದು ಕಿ.ಮೀ.ದೂರದಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ `ಕಾಸು~ ಎಲ್ಲ ಖಾಲಿಯಾಗಿ ಅರ್ಧಕ್ಕೆ ನಿಂತುಬಿಟ್ಟಿದೆ.
ಪರಿಣಾಮ ಸ್ಥಳೀಯರಿಗೆ ಕುಡಿಯುವ ನೀರಿನ ಬರಸಿಡಿಲು ಬಂದೆರಗಿ ಊರಿಗೊಂದೇ ಇರುವ ಬಾವಿಯ ಹಾದಿ ಹಿಡಿಯಬೇಕಾಗಿದೆ. ವಿಳಂಬವಾದರೆ ಹೊಲಸು ಹರಿಯುವ ಕಲಗುರ್ತಿ-ಡೊಣ್ಣೂರ ನಡುವಿನ ಹಳ್ಳಕ್ಕೆ ಕೊಡಹೊತ್ತು ನಡೆಯಬೇಕಾಗಿದೆ. ಈ ಪರಿಯ ನಿತ್ಯದ ರೂಢಿ ಚಳಿಗಾಲ, ಬೇಸಿಗೆಯಲ್ಲಿ ಬೇಷ್ ಎನಿಸಿದರೆ ಮಳೆಗಾಲದಲ್ಲಿ ಎದುರಾಗುವ ಕಷ್ಟಕ್ಕೆ ಆ `ಮಹಾದೇವ~ನೇ ಉತ್ತರಿಸಬೇಕು. ಈ ನೀರಿನಿಂದ ಬರುವ ರೋಗಗಳಿಗೆ ಚಿಕಿತ್ಸೆ ಸಿಗುವುದಾದರೂ ಎಲ್ಲಿ ಎಂಬ ಗ್ರಾಮಸ್ಥರ ಕೊರಗು ಕನಸಾಗಿ ಉಳಿದಿದೆ.
ಇಷ್ಟೆಲ್ಲ ಗೋಳು ಅನುಭವಿಸುತ್ತಿರುವ ಇಲ್ಲಿನ ಜನರ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮತ್ತು ಪಂಚಾಯತಿ ಆಡಳಿತಕ್ಕೆ ಸಮಸ್ಯೆಗಳು ಗೊತ್ತಿದ್ದರು ಮೌನತಾಳಿದ್ದಾರೆ. ಗ್ರಾಮಾಡಳಿತ ಡೊಣ್ಣೂರಿನ ಗೋಳು ಆಲಿಸಿ ಕುಡಿಯುವ ನೀರಿನ ಸರಬರಾಜಿಗೆ ಮುಂದಾಗಬೇಕು ಎಂದು ದಲಿತ ಮುಖಂಡ ಕಲ್ಯಾಣರಾವ ಘಾಳೆನೋರ, ಮಲ್ಲಣ್ಣ ನಾಟೀಕಾರ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.