ಊರ ತುಂಬೆಲ್ಲ ಕಲಾತ್ಮಕ ಬಾವಿ: ನೀರಿಗಿಲ್ಲ ಆಸರೆ

7

ಊರ ತುಂಬೆಲ್ಲ ಕಲಾತ್ಮಕ ಬಾವಿ: ನೀರಿಗಿಲ್ಲ ಆಸರೆ

Published:
Updated:

ಹನುಮಸಾಗರ: ತಂಗಮ್ಮಳಬಾವಿ, ಗುಡ್ಡದಬಾವಿ, ಅನುಪಕ್ಕನಬಾವಿ, ವಿಭೂತಿಯವರ ಬಾವಿ, ಆಶ್ರೀತರಬಾವಿ, ಹುನುಗುಂದವರ ಬಾವಿ, ಎಣ್ಣಿಯವರಬಾವಿ, ಮೇಹರವಾಡೆಬಾವಿ, ಪಾಟೀಲಬಾವಿ, ದಿಡ್ಡಿಬಾವಿ, ಮಠದಬಾವಿ, ಮನ್‌ಸಾಬನಬಾವಿ, ಗಾಣಿಗೇರಬಾವಿ, ಹಾಲಬಾವಿ, ಗಡಿಗೆಬಾವಿ ಹೀಗೆ ಲೆಕ್ಕ ಹಾಕುತ್ತಾ ಹೋದರೆ ಹನುಮಸಾಗರದಲ್ಲಿರುವ ಬಾವಿಗಳ ಲೆಕ್ಕ ಹನುಮಂತನ ಬಾಲದ ಹಾಗೆ ಬೆಳೆಯುತ್ತಾ ಹೋಗುತ್ತದೆ. ಆದರೆ ಇಷ್ಟೆಲ್ಲ ಬಾವಿಗಳಿದ್ದರೂ ಇವ್ಯಾವೂ ಇಲ್ಲಿನ ಜನರ ಸದ್ಯದ ದಾಹ ಹಿಂಗಿಸುತ್ತಿಲ್ಲ.ಕಾಲಮಾನಕ್ಕೆ ತಕ್ಕಂತೆ ಕೆಲಬಾವಿಗಳನ್ನು ಮುಚ್ಚಿದ್ದರೆ ಇನ್ನು ಕೆಲವು ಬಾವಿಗಳು ತಮ್ಮಲ್ಲಿರುವ ಕಲಾನೈಪುಣ್ಯತೆಯಿಂದ ಈಗಲೂ ಮೆರಗು ಹೊಂದಿರುವುದು ಕಂಡು ಬರುತ್ತದೆ.ಸುಮಾರು 1970ರ ಆಸುಪಾಸಿನಲ್ಲಿ ಈ ಎಲ್ಲ ಬಾವಿಗಳು ನೀರಿನಿಂದ ತುಂಬಿರುತ್ತಿದ್ದವು, ಕೆಲವೊಂದು ಸಂದರ್ಭದಲ್ಲಿ 8-10 ಮಾರಿನ ಉದ್ದನೆಯ ಹಗ್ಗವೂ ನೀರು ಸೇದೋಕೆ ಬೇಕಾಗುತ್ತಿತ್ತು, ನೀರಿನ ವಿಷಯದಲ್ಲಿ ಆಗ ಎಲ್ಲರೂ ನಿರಂಬಳವಾಗಿದ್ದೆವು, ಪ್ರತಿಯೊಂದು ಬಾವಿಗಳು ಶುದ್ಧವಾದ ನೀರು ಹೊಂದಿದ್ದವು. ಈ ಎಲ್ಲ ಬಾವಿಗಳ ನಿರ್ಮಾಣವೂ ಅಷ್ಟೆ ರೋಚಕವಾಗಿದೆ. ಅರಸರ ಅಥವಾ ಸರ್ಕಾರದ ನೆರವು ಬಯಸದೇ ಸುತ್ತಮುತ್ತಲಿನ ಜನರು ಆರ್ಥಿಕ ಇಲ್ಲವೆ ದೈಹಿಕ ಶ್ರಮದ ಮೂಲಕ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಹಿರಿಯರಾದ ಸುರೇಶಬಾಬು ಜಮಖಂಡಿಕರ ಬಾವಿಗಳ ಹಿಂದಿರುವ ಇತಿಹಾಸ ಹೀಗೆ ಬಿಚ್ಚಿಡುತ್ತಾರೆ.ಇಲ್ಲಿರುವ ಗುಡ್ಡದಬಾವಿಯ ನೀರು ಅತ್ಯಂತ ಶ್ರೇಷ್ಠವಾದ ನೀರು ಎಂದು ಪ್ರತಿಯೊಬ್ಬರು ಹೇಳುತ್ತಾರೆ. ಹಿಂದೆ ನಿಜಾಮ ಸರ್ಕಾರ ಇರುವ ಸಂದರ್ಭದಲ್ಲಿ ಈ ಭಾಗಕ್ಕೆ ನಿಜಾಮನ ಅಧಿಕಾರಿಗಳು ಬಂದರೆ ಗುಡ್ಡದಬಾವಿಯ ನೀರನ್ನೇ ಅವರು ತರಿಸುತ್ತಿದ್ದರು ಎಂಬ ಪ್ರತೀತಿಯೂ ಇದೆ. ಕಡಿಮೆ ಮಳೆಗಾಲ, ಸುತ್ತಮುತ್ತಲು ಕೊರೆಸಿರುವ ಕೊಳೆವೆಬಾವಿಗಳು, ಕೆರೆಗಳಲ್ಲಿ ನೀರು ನಿಲ್ಲದೆ ಇರುವುದು ಈ ಎಲ್ಲ ಕಾರಣಗಳಿಂದ ಕಳೆದ ಹತ್ತು ವರ್ಷಗಳಿಂದೀಚೆಗೆ ಬಹುತೇಕ ಬಾವಿಗಳು ಬತ್ತಿ ಹೋಗಿವೆ.ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ಕೆಲ ಹೆಣ್ಣುಮಕ್ಕಳು ತಮ್ಮ ಉದಾರತೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕಲಾತ್ಮಕವಾಗಿ ಬಾವಿ ಕೆತ್ತಿಸಿರುವುದು ಇಲ್ಲಿ ಕಂಡು ಬರುತ್ತದೆ. ನೂರಾರು ವರ್ಷಗಳು ಗತಿಸಿದರೂ ಗಟ್ಟಿಮುಟ್ಟಾಗಿರುವ ಅಂತಹ ಬಾವಿಗಳು ಈಗಲೂ ಕಣ್ಮನಸೆಳೆಯುತ್ತವೆ. ತಂಗಮ್ಮನಬಾವಿ ಈ ಎಲ್ಲ ಬಾವಿಗಳಿಗೆ ಮುಕುಟುಪ್ರಾಯದಂತೆ ಕಂಗೊಳಿಸುತ್ತಿರುವುದು ಸೋಜಿಗ. ಹೊರ ನೋಟದಲ್ಲಿ ಸಾಲು ಸಾಲು ಮನೆಗಳ ರೀತಿ ಕಂಡು ಬಂದರೂ ಸಮೀಪಿಸಿದಾಗ ಅದರಲ್ಲಿನ ಇಮಾರತಿ ಆಶ್ಚರ್ಯ ಮೂಡಿಸುತ್ತದೆ.ನಯವಾಗಿ ಹೊಂದಿಸಿರುವ ಹಾಸುಬಂಡೆಗಳ ಮೆಟ್ಟಿಲು, ಕಮಾನುಗಳು, ಬಾವಿ ಇಣುಕಿ ನೋಡಲು ಇರುವ ಕಲಾತ್ಮಕ ಕಿಂಡಿಗಳು, ದಂಡೆಗೆ ಕುಳಿತು ಸ್ನಾನ ಮಾಡಲೆಂದೆ ಹಾಕಿದ ಹಾಸುಬಂಡೆಗಳು, ಈಶ್ವರ ದೇವಾಲಯ, ಎರಡ್ಮೂರು ಚಿಕ್ಕ ಕೋಣೆಗಳು ಇವೆಲ್ಲವೂ ನೆಲಮಟ್ಟದಲ್ಲಿಯೇ ನಿರ್ಮಾಣವಾಗಿರುವುದು ವಿಶೇಷ.ಹನುಮಸಾಗರದಲ್ಲಿನ ಈ ಬಾವಿಗಳ ಸೊಬಗು ಹೇಳಿದರೆ ತೀರದು, ಕುಡಿಯಲು ಯೋಗ್ಯವಾಗಿರುವ ಬಾವಿಯ ನೀರನ್ನು ಪುನರ್‌ಬಳಕೆ ಮಾಡುವ ಉದ್ದೇಶದಿಂದ ವಿಭೂತಿಯವರ ಬಾವಿಯ ಹೂಳು ತೆಗೆಸಿದೆವು ನೀರೇನೂ ಬಂತು, ಆದರೆ ಬಹುಕಾಲ ಉಳಿಯಲಿಲ್ಲ, ಸುತ್ತಲೂ ಕೊಳವೆಬಾವಿಗಳು ಇರುವುದರಿಂದ ಬಾವಿಗೆಲ್ಲಿಂದ ನೀರಿನ ಸೆಲೆ ಬರಬೇಕ್ರಿ ಎಂದು ಹಿರಿಯರಾದ ಮುರಳೀಧರರಾವ್ ಪ್ಯಾಟಿ ಹೇಳುತ್ತಾರೆ.ಇಲ್ಲಿನ ಮುಜುಮದಾರ ಅವರ ಖಾಸಗಿ ಒಡೆತನಕ್ಕೆ ಸೇರಿದ ತಂಗಮ್ಮನಬಾವಿಯ ಕಲಾತ್ಮಕತೆ ಮುಂದಿನ ಪೀಳಿಗೆಯವರೆಗೂ ಉಳಿಯಬೇಕಾದರೆ ಅದಕ್ಕೆ ಸೂಕ್ತವಾದ ಭದ್ರತೆ ಅವಶ್ಯವಾಗಿದೆ. ನಾವು ವರ್ಷಕ್ಕೊಮ್ಮೆ ಸ್ವಚ್ಛ ಮಾಡಿಸ್ತೀವಿ, ಸುಣ್ಣಬಣ್ಣ ಬಳಿತೀವಿ, ಆದ್ರ ಈಗಿರುವುದನ್ನು ಬಿಟ್ಟು ಇನ್ನೇನೂ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಜಗನ್ನಾಥರಾವ್ ಮುಜುಮದಾರ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry