ಊಹಾಪೋಹಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೆರೆ.ದೆಹಲಿ ಭೇಟಿಗೆ ವಿಶೇಷ ಅರ್ಥಬೇಡ

7

ಊಹಾಪೋಹಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೆರೆ.ದೆಹಲಿ ಭೇಟಿಗೆ ವಿಶೇಷ ಅರ್ಥಬೇಡ

Published:
Updated:

ಬೆಂಗಳೂರು:  ‘ತಮ್ಮ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಇದೊಂದು ಸಾಮಾನ್ಯ ಭೇಟಿ. 15-20 ದಿನಗಳಿಗೊಮ್ಮೆ ದೆಹಲಿಗೆ ಹೋಗುವುದು, ರಾಜಕೀಯ ಚರ್ಚೆ ಮಾಡುವುದು... ಇವೆಲ್ಲವೂ ಸಹಜ ಪ್ರಕ್ರಿಯೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದರು.ತಮ್ಮ ಅಧಿಕೃತ ನಿವಾಸದಲ್ಲಿ ಶನಿವಾರ ಕರೆದಿದ್ದ ಸಚಿವರ ಸಭೆ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಇದೇ 20ರಂದು ಸರ್ಕಾರದ ಸಹಸ್ರ ದಿನಾಚರಣೆ ನಡೆಯಲಿದ್ದು, ಅದರ ಪೂರ್ವ ತಯಾರಿ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು ಎಂದರು.‘ಯುಗಾದಿ ಹಬ್ಬದಂದು ‘ನಮ್ಮ ಮೆಟ್ರೊ’ ಉದ್ಘಾಟಿಸುವ ಉದ್ದೇಶ ಇದ್ದು, ಇದಕ್ಕೆ ಪ್ರಧಾನಿಯವರನ್ನು ಆಹ್ವಾನಿಸಲು ದೆಹಲಿಗೆ ಹೋಗಿದ್ದೆ. ಆದರೆ, ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಕೃಷಿ ಬಜೆಟ್ ಬಗ್ಗೆ ವಿವರಿಸಲಾಗಿದೆ. ಇದಕ್ಕೆ ವರಿಷ್ಠರು ಮೆಚ್ಚುಗೆ ವ್ಯಕ್ತಪಡಿಸಿದರು. ಇದಲ್ಲದೆ, ಇನ್ನೂ ಅನೇಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾಗಿ ಅವರು ಹೇಳಿದರು.ಪ್ರತಿಪಕ್ಷಗಳಿಗೆ ವಿನಂತಿ: ಬಜೆಟ್ ಅಧಿವೇಶನ ಸಂದರ್ಭದಲ್ಲಾದರೂ ಪ್ರತಿಪಕ್ಷಗಳು ಸಹಕಾರ ನೀಡಲಿ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿ ಎಂದು ಯಡಿಯೂರಪ್ಪ ಮನವಿ ಮಾಡಿದರು.

ಕೇಂದ್ರ ಬಜೆಟ್‌ಗೂ ಮುನ್ನವೇ ರಾಜ್ಯ ಬಜೆಟ್ ಮಂಡಿಸುವುದು ತಪ್ಪೇನೂ ಅಲ್ಲ. ಹಿಂದೆಯೂ ಅನೇಕ ಬಾರಿ ಈ ರೀತಿ ಮೊದಲೇ ಬಜೆಟ್ ಮಂಡಿಸಿದ ಉದಾಹರಣೆಗಳು ಇವೆ. ಕೇಂದ್ರ ಕೊಡುವ ಅನುದಾನವನ್ನು ನಂತರ ಸರಿದೂಗಿಸಿಕೊಳ್ಳಬಹುದು. ಹೀಗಾಗಿ ಈ ವಿಷಯವನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ ಎಂದರು.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಫೆ.20ರ ಕಾರ್ಯಕ್ರಮಕ್ಕೆ ಪ್ರತಿ ಬೂತ್ ಮಟ್ಟದಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. ಸಹಕಾರ ಸಂಘಗಳ ಪ್ರತಿನಿಧಿಗಳು, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಆಯಾ ವಿಧಾನಸಭಾ ಕ್ಷೇತ್ರದ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇದನ್ನು ಯಶಸ್ವಿಗೊಳಿಸಲು ಎಲ್ಲರಿಗೂ ಸೂಚಿಸಲಾಗಿದೆ ಎಂದರು.ಕಾಂಗ್ರೆಸ್‌ಗಿಂತ ಪರ್ವಾಗಿಲ್ಲ
: ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಕ್ರಮವನ್ನು ಈಶ್ವರಪ್ಪ ಸಮರ್ಥಿಸಿಕೊಂಡರು. ‘ಅಧಿಕಾರದ ದೂರ ಉಳಿಯಲು ನಾವೇನೂ ಸನ್ಯಾಸಿಗಳಲ್ಲ’ ಎಂದೂ ತಿರುಗೇಟು ನೀಡಿದರು.ಇನ್ನೂ ನಿಮಗೆ ಜೆಡಿಎಸ್ ಬಗ್ಗೆ ನಂಬಿಕೆ ಇದೆಯೇ ಎಂದು ಕೇಳಿದಾಗ ‘ಇಲ್ಲಿ ನಂಬಿಕೆ ಪ್ರಶ್ನೆ ಉದ್ಭವಿಸುವುದಿಲ್ಲ. ನಾವು ಒಳ್ಳೆಯವರೆಂದುಕೊಂಡೇ ಮೈತ್ರಿ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ಸೇತರ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ಸದಾ ಸಿದ್ಧ ಇರುತ್ತದೆ’ ಎಂದರು.ಶೆಟ್ಟರ್ ಗೈರು: ಯಡಿಯೂರಪ್ಪ ಕರೆದಿದ್ದ ಸಭೆಗೆ 12 ಮಂದಿ ಸಚಿವರು ಭಾಗವಹಿಸಿದ್ದರು. ಸಚಿವ ಜಗದೀಶ ಶೆಟ್ಟರ್, ಬಳ್ಳಾರಿಯ ಸಚಿವರು ಸೇರಿದಂತೆ ಇತರ ಪ್ರಮುಖರು ಸಭೆಯಲ್ಲಿ ಹಾಜರಿರಲಿಲ್ಲ. ಕೆಲವರು ಕ್ಷೇತ್ರದಲ್ಲಿನ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಭೆಗೆ ಗೈರುಹಾಜರಾಗಿದ್ದರು ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry