ಭಾನುವಾರ, ಮೇ 16, 2021
22 °C

ಋಣವೆಂಬ ಸೂತಕವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಚನ: ಬುಧವಾರ `ಋಣವೆಂಬ ಸೂತಕವು~ (ರಚನೆ, ವಿನ್ಯಾಸ, ನಿರ್ದೇಶನ: ಎಂ.ಸಿ. ಆನಂದ್. ಬೆಳಕು: ಪ್ರಕಾಶ್ ಬೆಳವಾಡಿ. ಸಂಗೀತ ಮತ್ತು ಧ್ವನಿ: ಗಣೇಶ್ ಶೆಣೈ,ಪ್ರಸಾದನ: ರಾಮಕೃಷ್ಣ ಕನ್ನರಪಾಡಿ. ವಸ್ತ್ರವಿನ್ಯಾಸ: ರಮಾ ವಿದ್ಯಾಭೂಷಣ. ಪಾತ್ರವರ್ಗ: ಎಸ್. ಶಿವರಾಂ, ಭಾರ್ಗವಿ ನಾರಾಯಣ್, ಜಿ.ಆರ್. ಜಯರಾಂ, ಪುಷ್ಪಾ ಬೆಳವಾಡಿ, ಅಭಿರುಚಿ ಚಂದ್ರು, ರಾಜೇಶ್ ಭಗ್ನ, ರಾಘವೇಂದ್ರ, ಸುಪ್ರಭ ಹಾಗೂ ಸಂತೋಷ್, ಸಿದ್ಧರಾಜು) ನಾಟಕ ಪ್ರದರ್ಶನ. 

 

ವಿಲಾಸೀ ಜೀವನ, ವ್ಯಸನಗಳು, ತೋರಿಕೆಯ ಆಡಂಬರ, ಅರ್ಥಹೀನ ಡಂಬಾಚಾರಗಳು, ತನ್ನ ಯೋಗ್ಯತೆಗೆ ಮೀರಿದ ಐಷಾರಾಮವನ್ನು ದಕ್ಕಿಸಿಕೊಳ್ಳಲು ಮುಂದಾಲೋಚನೆಯಿಲ್ಲದೇ ಮಾಡುವ ಸಾಲ ಸ್ವಯಂಕೃತ ಅಪರಾಧ.ಇಂಥವರು ತಮ್ಮ ಹೀನ ಸ್ಥಿತಿಗೆ ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ಇವೆರಡಕ್ಕಿಂತ ಅಪಾಯಕಾರಿ ತಮ್ಮ ಅಧಿಕಾರ ಲೋಲುಪತೆ, ಸ್ವಾರ್ಥ ಸಾಧನೆಗಾಗಿ ಇಡೀ ಜನತೆಯನ್ನು ಋಣದ ಕೂಪಕ್ಕೆ ತಳ್ಳಿ ಅವರು ಪಡುವ ಸಂಕಟಗಳ ಬಗ್ಗೆ ಯಾವ ಪಾಪಪ್ರಜ್ಞೆಯೂ ಇಲ್ಲದೇ ದರ್ಪದಿಂದ ಮೆರೆಯುವ ರಕ್ತ ಪಿಪಾಸುಗಳದ್ದು.ಜಾಗತಿಕರಣದಿಂದಾಗಿ ನೂರಾರು ವರ್ಷಗಳಿಂದ ಅತ್ಯಂತ ಸರಳವಾಗಿ, ಸಹಜವಾಗಿ ಸುಲಭವಾಗಿ ದೊರೆಯುತ್ತಿದ್ದ ಆಹಾರ ಮತ್ತು ಅತ್ಯಾವಶ್ಯಕ ಪದಾರ್ಥಗಳು ಕೈಗೆಟುಕದಂತಾಗಿ ಎಲ್ಲಿಂದಲೋ ಹೇರಲ್ಪಟ್ಟ ನಮಗೆ ಒಗ್ಗದ, ಒಲ್ಲದ ವಸ್ತುಗಳಿಗೆ ನೂರಾರು ಪಟ್ಟು ಹಣ ತೆರಬೇಕಾದ ಅನಿವಾರ್ಯತೆ ಉಂಟಾಗಿದೆ.ಇಂಥ ಹಾಸ್ಯ, ವಿಡಂಬನೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಎಚ್ಚರಿಕೆಯ ಗಂಟೆ ಬಾರಿಸುವ ನಾಟಕ ಋಣವೆಂಬ ಸೂತಕ. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕೆಲಸವನ್ನು ಕಳೆದುಕೊಂಡು ಕ್ರೆಡಿಟ್ ಕಾರ್ಡಿನ ಜಾಲದಲ್ಲಿ ಸಿಲುಕಿ ಪರದಾಡುತ್ತಿರುವ ರಮಾ, ರಂಗಸ್ವಾಮಿ ದಂಪತಿಯ ನೆರವಿಗೆ ಬರುವವರೆಲ್ಲ ಇವರ ಋಣದ ಭಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಹೆಚ್ಚಿಸುವ ಸೂಚನೆಗಳೇ ಕಂಡುಬರುತ್ತವೆ.ಅವುಗಳನ್ನೆಲ್ಲ ತಿರಸ್ಕರಿಸಿ, ಸರಳ ಬದುಕಿಗೆ ತಮ್ಮದೇ ಆದ ಸೂತ್ರ ಕಂಡುಕೊಳ್ಳುವ ನಿರ್ಧಾರ ಮಾಡುತ್ತಾರೆ ಈ ದಂಪತಿ. ಇದು `ಋಣವೆಂಬ ಸೂತಕ~ದ ಕಥಾವಸ್ತು.

ಸಿಂಚನ 2004ರಲ್ಲಿ ಖ್ಯಾತ ನಿರ್ದೇಶಕ ಎಂ.ಎಸ್. ಸತ್ಯು ಉದ್ಘಾಟಿಸಿದಾಗಿನಿಂದ ಸತತವಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.ಅನೇಕ ಯಶಸ್ವಿ ನಾಟಕಗಳು, ಏಕವ್ಯಕ್ತಿ ಪ್ರದರ್ಶನಗಳು, ಯಕ್ಷಗಾನ, ಸಂಗೀತ, ನೃತ್ಯ, ವಿಚಾರ ಸಂಕಿರಣ, ಸಂವಾದ ಮುಂತಾದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ನಾಟಕದ ನಿರ್ದೇಶಕ ಎಂ.ಸಿ. ಆನಂದ್ 45 ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ನಟ, ನಿರ್ದೇಶಕ, ವಿನ್ಯಾಸಕಾರ, ನಾಟಕಕಾರರಾಗಿ ತೊಡಗಿಸಿಕೊಂಡಿದ್ದಾರೆ.

 

ಬಿ.ವಿ. ಕಾರಂತ, ಪ್ರಸನ್ನ, ಎಂ.ಎಸ್. ಸತ್ಯು, ಟಿ. ಎನ್. ನರಸಿಂಹನ್, ಸುರೇಶ್ ಆನಗಳ್ಳಿ ಮುಂತಾದವರ ನಿರ್ದೇಶನದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.ಸ್ಥಳ: ಕೆ ಎಚ್ ಕಲಾಸೌಧ, ಹನುಮಂತನಗರ.  ಸಂಜೆ 7. ಮಾಹಿತಿಗೆ: 2663 4887, 99800 07239. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.