ಶನಿವಾರ, ಜುಲೈ 24, 2021
23 °C

ಋತುಮಾನದ ಬೆಳೆ: ಆದ್ಯತೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಇಸ್ರೇಲ್ ದೇಶದ ರೈತರ ನಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರೇ ಹೆಚ್ಚು ಶ್ರಮಜೀವಿಗಳು. ಈಗ ಋತುಮಾನದ ಬೆಳೆಗಳಿಗೆ ಆದ್ಯತೆ ನೀಡಿದಾಗ ಇನ್ನು ಹೆಚ್ಚಿನ ಫಲ ದೊರೆಯುತ್ತದೆ ಎಂದು  ಕೃಷಿ ವಿಜ್ಞಾನ ಪ್ರಾಧ್ಯಾಪಕ ಪ್ರೊ.ವಿಜಯೇಂದ್ರ ತಿಳಿಸಿದರು.ನಗರದಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ `ಚಿಕ್ಕಬಳ್ಳಾಪುರ ಜಿಲ್ಲೆಯ ಅಂತರ್ಜಲ ಸಮಸ್ಯೆಗಳು, ಪರ್ಯಾಯಗಳು ಎಂಬ ವಿಷಯ ಮಂಡಿಸಿ ಮಾತನಾಡಿ, ಜಿಲ್ಲೆಯಲ್ಲಿ 4.04 ಲಕ್ಷ ಹೆಕ್ಟೇರ್ ಭೂಮಿ ಇದ್ದು, 12.54 ಲಕ್ಷ ಜನಸಂಖ್ಯೆ ಇದೆ.ವಾರ್ಷಿಕ 750 ಮಿ.ಮೀ. ಮಳೆಯಾದರೂ ಸಮಯಕ್ಕೆ ಸರಿಯಾಗಿ ಮಳೆಯಾಗುವುದಿಲ್ಲ. 1,243 ಕೆರೆಗಳಿದ್ದು, 45 ಸಾವಿರ ಕೊಳವೆ ಬಾವಿಗಳಿವೆ. ಬರಗಾಲ, ಅಂತರ್ಜಲ ಕುಸಿತದಿಂದ ಸಾವಿರಾರು ಅಡಿಗಳಿಂದ ನೀರು ತೆಗೆಯಬೇಕಾದ ಪರಿಸ್ಥಿತಿ ಇದೆ. ಹಲವು ಸಮಸ್ಯೆಗಳ ನಡುವೆಯೂ ಉತ್ತಮ ಇಳುವರಿ ಪಡೆಯುತ್ತಿರುವುದು ಶ್ಲಾಘನೀಯ ಎಂದರು.ಕೊಳವೆ ಬಾವಿಗಳ ನೀರು ಫ್ಲೊರೈಡ್ ಮತ್ತು ಕ್ಲೋರೈಡ್‌ನಿಂದ ಕೂಡಿದ್ದು ಜನತೆ ಹಲವಾರು ಕಾಯಿಲೆಗಳಿಗೆ ತುತ್ತಾಗಬೇಕಾಗಿದೆ. ಪರಿಸರವನ್ನು ಸಂರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಕೆರೆ ಅಚ್ಚುಕಟ್ಟು ಸಂಘಗಳ ಮೂಲಕ ಮಣ್ಣಿನ ಪರೀಕ್ಷೆ, ನೀರಿನ ಲಭ್ಯತೆ, ಮಾರುಕಟ್ಟೆ ಅಂದಾಜು ಹಾಗೂ ಋತುಮಾನಕ್ಕೆ ಅಗತ್ಯವಾದ ಬೆಳೆಗಳನ್ನು ಬೆಳೆಯಲು ರೈತರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.ನೀರಿನ ಮಿತ ಬಳಕೆ, ಮಳೆ ನೀರು ಸಂಗ್ರಹ, ಚೆಕ್‌ಡ್ಯಾಂಗಳಲ್ಲಿ ಹೆಚ್ಚಿನ ನೀರು ಶೇಖರಣೆ. ಶೇ.33ರಷ್ಟು ಅರಣ್ಯೀಕರಣ ಮಾಡುವುದು ಮುಂತಾದ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ಸಾಧ್ಯವಾದಷ್ಟು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಬೇಕು. ಬೇರೆ ವಿಷಯಗಳು ಮಾತನಾಡುವುದಕ್ಕೆ ಬೇರೆ ಬೇರೆ ವೇದಿಕೆಗಳಿವೆ. ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರು ಮತ್ತು ಸಾಹಿತಿಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.ನಿವೃತ್ತ ಶಿಕ್ಷಕ ಎಂ.ವೆಂಕಟಸ್ವಾಮಿರೆಡ್ಡಿ ಉಪಸ್ಥಿತರಿದ್ದರು. ಬಿ.ಜನಾರ್ದನರೆಡ್ಡಿ ಸ್ವಾಗತಿಸಿದರು. ಕೆ.ವಿ.ಚೌಡಪ್ಪ ನಿರೂಪಿಸಿದರು. ಸುರೇಶಬಾಬು ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.