ಮಂಗಳವಾರ, ಮಾರ್ಚ್ 2, 2021
28 °C

ಋತುಮಾನ ಪ್ರೇಮದ ಋತುಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಋತುಮಾನ ಪ್ರೇಮದ ಋತುಗಾನ

ಅದ್ದೂರಿ ಪ್ರೇಮಕಥೆ. ವಿಶಿಷ್ಟ ಪ್ರೇಮಕಥೆ. 1942ರ ಪ್ರೇಮಕಥೆ. ಹೀಗೆ, ಪ್ರೇಮಕಥೆಯ ಹಲವು ಬಣ್ಣನೆಗಳ ಸಿನಿಮಾಗಳನ್ನು ಅನುಭವಿ ಪ್ರೇಕ್ಷಕರು ಬಲ್ಲರು. ಆದರೆ, ನಿರ್ದೇಶಕ ಸುನೀಲ್ ಕುಮಾರ್ ಹೇಳಹೊರಟಿರುವುದು ಸಿಂಪಲ್ಲಾದ ಲವ್ ಸ್ಟೋರಿಯನ್ನು.ಪ್ರೇಮ ನವನವೀನ ಎನ್ನುವುದರಲ್ಲಿ ಸುನೀಲ್ ಅವರಿಗೂ ನಂಬಿಕೆ ಇರುವುದರಿಂದ ಅವರು ಹೇಳಲಿರುವ ಲವ್ ಸ್ಟೋರಿಯನ್ನೂ ಹೊಸತೆಂದು ನಂಬಬಹುದು.ದಿನೇಶ್ ಬಾಬು ಅವರಂಥ ಹಿರೀಕರ ಗರಡಿಯಲ್ಲಿ ಪಳಗಿರುವ ಸುನೀಲ್ ಕುಮಾರ್ ನಿರ್ದೇಶನಕ್ಕೆ ಹೊಸಬರು. ಚೊಚ್ಚಿಲ ಚಿತ್ರದ ಪುಳಕದಲ್ಲಿರುವ ಅವರನ್ನು ಸುನಿ ಎಂದೇ ಕರೆಯೋಣ. ಹಾಗೆ ಕರೆದರೆ ಅವರಿಗೂ ಸಂತೋಷ.

 

ಚಿತ್ರದ ಮುಹೂರ್ತ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರದರ್ಶನಗೊಂಡ ಟ್ರೈಲರ್‌ನಲ್ಲೂ ಅವರ ಹೆಸರು `ಸುನಿ~ ಎಂದೇ ಇತ್ತು. ಈ ಸುನಿ ನಿರ್ದೇಶಿಸುತ್ತಿರುವ ಚಿತ್ರದ ಹೆಸರೇ- `ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ~.ಹೆಸರಿನಲ್ಲಿ ಸಿಂಪಲ್ ಇದೆಯಾದರೂ, ನಿರ್ದೇಶಕರ ಕನಸು ಸರಳವಾಗಿಯೇನೂ ಇಲ್ಲ. ನೋಡಿದವರು ಅಹುದಹುದೆನ್ನುವ ಲವ್‌ಸ್ಟೋರಿಯನ್ನು ನಿರೂಪಿಸುವ ಹಂಬಲ ಅವರದು. ಅಂದಹಾಗೆ, ಅವರು ನಿರ್ದೇಶಕರು ಮಾತ್ರವಲ್ಲ. ನಿರ್ಮಾಣ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವೂ ಅವರದೇ.ಮಗನ ಕನಸಿಗೆ ನೀರೆರೆಯಲಿಕ್ಕಾಗಿ ಸುನಿ ಪೋಷಕರು ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್ಟನ್ನು `ಲವ್ ಸ್ಟೋರಿ~ಗೆಂದು ಎತ್ತಿಟ್ಟಿದ್ದಾರೆ.ಸುನಿ ಅವರದ್ದು ಋತುಮಾನವನ್ನು ಆಧರಿಸಿದ ಪ್ರೇಮ ಕಥಾನಕ. ಬಿಸಿಲು ಮಳೆ ಚಳಿಯ ರಂಗುಗಳೆಲ್ಲ ಚಿತ್ರದಲ್ಲಿ ಇರಲಿವೆಯಂತೆ.ಸಿಂಪಲ್ಲಾಗಿ ಹೇಳುವುದಾದರೆ ಋತುಗಳು ಕೂಡ ಚಿತ್ರದ ಪಾತ್ರಗಳು. ಮಳೆ ಕಣ್ಣು ಬಿಟ್ಟಿರುವ ದಿನಗಳಿವು. ಹಾಗಾಗಿ, ಮಳೆಯ ತವರುಗಳಲ್ಲೊಂದಾದ ಕೊಡಗು ಪರಿಸರಕ್ಕೆ ಸುನಿ ಅವರ ಪ್ರೇಮಕಥೆ ಪಾದ ಬೆಳೆಸಲಿದೆ.ಮಳೆಯ ನಂತರ ಚಳಿಯ ಅನುಭವಕ್ಕೆ ಮೈಸೂರು ಪ್ರಶಸ್ತವಂತೆ. ಆನಂತರ ಮೈ ಕಾಯಿಸಿಕೊಳ್ಳಲೆಂದು ಲವ್‌ಸ್ಟೋರಿ ತಂಡ ಮಂಗಳೂರು ದಾರಿ ಹಿಡಿಯಲಿದೆ. ಇಷ್ಟೆಲ್ಲ ಚಿತ್ರೀಕರಣವನ್ನು ಮೂವತ್ತೆರಡು ದಿನಗಳಲ್ಲಿ ಮುಗಿಸಲು ನಿರ್ದೇಶಕರು ಅಚ್ಚುಕಟ್ಟು ಯೋಜನೆ ರೂಪಿಸಿದ್ದಾರಂತೆ.ಮನೋಹರ್ ಜೋಷಿ ಚಿತ್ರದ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಲೇಟೆಸ್ಟ್ ಡಿಜಿಟಲ್ ಕ್ಯಾಮೆರಾವನ್ನು ಕೈಯಲ್ಲಿ ಹಿಡಿದಿರುವ ಅವರು, ಮೂರು ಋತುಗಳನ್ನು ಚಿತ್ರೀಕರಿಸುವ ಸವಾಲನ್ನು ಕಲ್ಪಿಸಿಕೊಂಡೇ ಪುಳಕಗೊಂಡಿದ್ದರು.ರಕ್ಷಿತ್ ಶೆಟ್ಟಿ ಹಾಗೂ ಶ್ವೇತಾ ಶ್ರೀವಾಸ್ತವ್ `ಲವ್‌ಸ್ಟೋರಿ~ಯಲ್ಲಿ ಡುಯೆಟ್ ಹಾಡಲಿದ್ದಾರೆ. ರಕ್ಷಿತ್‌ಗೆ ಟ್ರೈಲರ್ ನೋಡಿಯೇ ಖುಷಿಯಾಗಿದೆ. ಶ್ವೇತಾಗೆ ನಿರ್ದೇಶಕರು ಹೇಳಿದ ಚಿತ್ರಕಥೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಮಾಹಿತಿ, ಮನರಂಜನೆಯ ಜೊತೆಗೆ ಶಿಕ್ಷಣದ ಗುಣವೂ ನಮ್ಮ ಸಿನಿಮಾದ ಕಥೆಗಿದೆ ಎನ್ನುವುದು ನಾಯಕಿಯ ಬಣ್ಣನೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.