ಎಂಆರ್‌ಐ ಸ್ಕ್ಯಾನ್ ಮಾಡಿಸಿಕೊಳ್ಳಲಿರುವ ಸಚಿನ್

7

ಎಂಆರ್‌ಐ ಸ್ಕ್ಯಾನ್ ಮಾಡಿಸಿಕೊಳ್ಳಲಿರುವ ಸಚಿನ್

Published:
Updated:

ಬ್ರಿಸ್ಬೇನ್ (ಪಿಟಿಐ): ಆಸ್ಟ್ರೇಲಿಯಾ ವೇಗಿ ಬ್ರೆಟ್ ಲೀ ದಾಳಿಯಲ್ಲಿ ಪೆಟ್ಟುತಿಂದ ಸಚಿನ್ ತೆಂಡೂಲ್ಕರ್ ಅವರು ಮುನ್ನೆಚ್ಚರಿಕೆಯ ಕ್ರಮವಾಗಿ `ಎಂಆರ್‌ಐ~ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲಿದ್ದಾರೆ.

ತ್ರಿಕೋನ ಕ್ರಿಕೆಟ್ ಸರಣಿಯ ಭಾನುವಾರದ ಪಂದ್ಯದಲ್ಲಿ ಆಡುವಾಗ ಲೀ ಅವರ ಎರಡನೇ ಓವರ್‌ನಲ್ಲಿ ಪುಟಿದೆದ್ದ ಚೆಂಡಿನ ಗತಿಯನ್ನು ನಿಖರವಾಗಿ ನಿರ್ಧರಿಸುವಲ್ಲಿ ವಿಫಲರಾಗಿದ್ದರು ಸಚಿನ್.

ಆಗ ಚೆಂಡು ಹೆಲ್ಮೆಟ್‌ನ ಗ್ರಿಲ್‌ಗೆ ಅಪ್ಪಳಿಸಿತ್ತು. ಆ ಸಂದರ್ಭದಲ್ಲಿ ಭಾರತದ ಅನುಭವಿ ಬ್ಯಾಟ್ಸ್‌ಮನ್‌ಗೆ ದೇಹವೇ ಸಮತೋಲನ ತಪ್ಪಿದ ಅನುಭವ ಆಗಿತ್ತು. ಆದ್ದರಿಂದ ಯಾವುದೇ ರೀತಿಯ ಒಳಗಾಯ ಆಗಿರುವ ಸಾಧ್ಯತೆಯನ್ನು   ಖಚಿತ ಮಾಡಿಕೊಳ್ಳುವುದು ಅಗತ್ಯವಾಗಿದೆ.

ತೆಂಡೂಲ್ಕರ್ ಹೆಲ್ಮೆಟ್‌ಗೆ ಅಪ್ಪಳಿಸಿದ್ದ ಚೆಂಡು ಪುಟಿದೆದ್ದಾಗ ಮಿಡ್‌ಆನ್‌ನಲ್ಲಿದ್ದ ಕ್ಸೇವಿಯರ್ ಡೊಹರ್ಟಿ ಹಿಡಿತಕ್ಕೆ ಪಡೆದಿದ್ದರು. ಆಗ ಕಾಂಗರೂಗಳ ನಾಡಿನ ತಂಡದ ಎಲ್ಲರೂ ಒಕ್ಕೊರಲಿನಿಂದ ಮನವಿ ಸಲ್ಲಿಸಿದ್ದರು. ಆದರೆ ಅಂಪೈರ್ ಸ್ಟೀವ್ ಡೇವಿಸ್ ಚೆಂಡು ಬ್ಯಾಟ್‌ಗೆ ತಾಗಿರಲಿಲ್ಲವೆಂದು ಸನ್ನೆ ಮಾಡಿ ತೋರಿಸಿದ್ದರು. ನಂತರ ಬೆನ್ ಹಿಲ್ಫೆನ್ಹಾಸ್ ಓವರ್‌ನ ಮೊದಲ ಎಸೆತದಲ್ಲಿಯೇ   `ಲಿಟಲ್ ಚಾಂಪಿಯನ್~ ಔಟಾಗಿದ್ದರು.

ಡ್ರೆಸಿಂಗ್ ಕೋಣೆಗೆ ಹಿಂದಿರುಗಿದ ತಕ್ಷಣ ಐಸ್‌ಬ್ಯಾಗ್‌ನಿಂದ ನೋವಿದ್ದ ಭಾಗಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಆ ಹೊತ್ತಿಗಾಗಲೇ ಚೆಂಡು ಅಪ್ಪಳಿಸಿದ್ದ ಕಡೆ ಊತ ಕಾಣಿಸಿಕೊಂಡಿತ್ತು. ಆದ್ದರಿಂದ ಎಚ್ಚರಿಕೆ ಕ್ರಮವಾಗಿ ಎಂಆರ್‌ಐ ಸ್ಕ್ಯಾನಿಂಗ್‌ಗೆ ತೀರ್ಮಾನಿಸಲಾಯಿತು ಎಂದು ತಂಡದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry