ಗುರುವಾರ , ಅಕ್ಟೋಬರ್ 24, 2019
21 °C

ಎಂಆರ್‌ಐ: 8ರಂದು ಬಸವೇಶ್ವರದಲ್ಲಿ ಕಾರ್ಯಾರಂಭ

Published:
Updated:

ಗುಲ್ಬರ್ಗ: ತಲೆ, ಕುತ್ತಿಗೆ, ಬೆನ್ನು ಹುರಿಗಳ ತೊಂದರೆ, ನರ, ಕ್ಯಾನ್ಸರ್ ಮತ್ತಿತರ ರೋಗಗಳನ್ನು ಅತಿವೇಗದಲ್ಲಿ ಗುರುತಿಸಬಲ್ಲ, ಸಮಗ್ರ ದೇಹದ ಸೂಕ್ಷ್ಮಾತಿಸೂಕ್ಷ್ಮ ಕೋಶಗಳ ಸ್ಪಷ್ಟ ಚಿತ್ರಣ ಮತ್ತು ಖಚಿತ ಪರಿಶೀಲನೆ ನಡೆಸುವ ಅತ್ಯಾಧುನಿಕ `ಕಾಂತ ಅನುರಣಿಕೆ ಪ್ರತಿಮಾ ತಂತ್ರ~ (ಮ್ಯಾಗ್ನೆಟಿಕ್ ರಿಸೋನೆನ್ಸ್ ಇಮೇಜಿಂಗ್-ಎಂಐಆರ್) ಯಂತ್ರವು ಜ.8ರಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಫಿಲಿಪ್ಸ್ 1.5 ಟೆಸ್ಲಾ ಮಾದರಿಯ ಯಂತ್ರವು ಇದಾಗಿದ್ದು, ಸೋಲಾಪುರ, ರಾಯಚೂರು, ಯಾದಗಿರಿ, ಬೀದರ್‌ಸೇರಿದಂತೆ ಸುತ್ತಲ ಆಸ್ಪತ್ರೆಯಲ್ಲಿ ಇಷ್ಟೊಂದು ಆಧುನಿಕ ಯಂತ್ರವಿಲ್ಲ. ಇದರಲ್ಲಿ ಕ್ಷ-ಕಿರಣಕ್ಕೆ ದೇಹದ ಅಂಗವನ್ನು ಒಡ್ಡಿಕೊಳ್ಳಬೇಕಾದ ಅಥವಾ ಅಡ್ಡ ಪರಿಣಾಮಗಳಿಲ್ಲ.ಎಂಆರ್‌ಐ ಯಂತ್ರದಲ್ಲಿ ವಿಕಿರಣ ಹಾಗೂ ಭಯ ಮೂಡಿಸುವ ಶಬ್ದವಿಲ್ಲ. ಇದರ ಮೂಲಕ ಮಿದುಳು ಮತ್ತು ಬೆನ್ನುಹುರಿ ಚಿತ್ರಣ ಪಡೆಯಲು ಸಾಧ್ಯ. ಶಿಶು ದೇಹಸ್ಥಿತಿ ಪರಿಶೀಲನೆ, ಪಾರ್ಶ್ವವಾತ ಸಂದರ್ಭದಲ್ಲಿ ತಕ್ಷಣದ ನಿರ್ಣಯ,  ತಲೆಗೆ ಗಂಭೀರ ಗಾಯಗಳಾಗಿದ್ದಲ್ಲಿ ತಕ್ಷಣ ಪರಿಶೀಲನೆ, ಆ್ಯಂಜಿಯೋಗ್ರಾಫಿ ರಹಿತವಾಗಿ ಮೆದುಳು ರಕ್ತಚಲನೆ ವ್ಯವಸ್ಥೆಯ ಪತ್ತೆ, ಸೂಕ್ಷ್ಮಾತಿ ಸೂಕ್ಷ್ಮ ಮೃದು ಕೋಶಗಳ ಚಿತ್ರಣ, ಹೃದಯದ ಹುಟ್ಟು ಸಮಸ್ಯೆಗಳ ಹಾಗೂ ಸ್ತನ ಕ್ಯಾನ್ಸರ್ ಪತ್ತೆ, ಜೀರ್ಣಾಂಗಗಳ ವೀಕ್ಷಣೆ ಮತ್ತಿತರ ಕಾರ್ಯಗಳು ಎಂಆರ್‌ಐಯಲ್ಲಿ ಅತಿವೇಗವಾಗಿ ಸಾಧ್ಯ.ಯಂತ್ರದ ಬೆಲೆ 3.70 ಕೋಟಿ ರೂಪಾಯಿ ಸೇರಿದಂತೆ ಸಂಪೂರ್ಣ ಅನುಷ್ಠಾನಕ್ಕೆ ಒಟ್ಟು  4.25 ಕೋಟಿ ರೂಪಾಯಿ ವೆಚ್ಚವಾಗಿದೆ. ಒಬ್ಬರ ಪರಿಶೀಲನೆಗೆ ಸುಮಾರು 4,500ರಿಂದ 5,000 ರೂಪಾಯಿ ತಗಲುವ ಸಾಧ್ಯತೆ ಇದೆ.ಬಸವೇಶ್ವರ ಕಾಲೇಜಿನ ಹಳೇ ವಿದ್ಯಾರ್ಥಿ, ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗಳ ನಿರ್ದೇಶಕ, ಹೃದ್ರೋಗ ತಜ್ಞ ಡಾ.ವಿವೇಕ ಜವಳಿ ಜ.8ರಂದು ಸಂಜೆ 5 ಗಂಟೆಗೆ ಎಂ.ಆರ್.ಐ. ಯಂತ್ರವನ್ನು ಉದ್ಘಾಟಿಸುವರು.  ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ನೂತನ ಕಟ್ಟಡವನ್ನು ಉದ್ಘಾಟಿಸುವರು. ನೂತನ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಮುರಳೀಧರ ಎಸ್.ರಾವ್ ಪಾಲ್ಗೊಳ್ಳುವರು ಎಂದು ಅಂದಿನ ಸಮಾರಂಭದ ಅಧ್ಯಕ್ಷತೆ ವಹಿಸಲಿರುವ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಶೀಲ್ ಜಿ. ನಮೋಶಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಎಂಆರ್‌ಐ ಬಳಕೆ ಬಗ್ಗೆ ವೈದ್ಯರು ಹಾಗೂ ತಂತ್ರಜ್ಞರು ತರಬೇತಿ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಕಾಯಂ ಆಗಿ ನರರೋಗ ತಜ್ಞ ಶಶಾಂಕ ರಾಮದುರ್ಗ ಸೇವೆ ದೊರೆಯಲಿದೆ. ಎರಡು ತಿಂಗಳ ಬಳಿಕ ನರರೋಗ ವಿಭಾಗಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಯನ್ನೂ ಆರಂಭಿಸಲಾಗುವುದು ಎಂದ ಅವರು, ಆಸ್ಪತ್ರೆಯನ್ನು ಆಧುನೀಕರಣಗೊಳಿಸಿದ ಹಾಗೂ ಸೇವೆಯ ಮಟ್ಟವನ್ನು ಉನ್ನತ ದರ್ಜೆಗೇರಿಸಿದ ಬಗ್ಗೆ ಮಾಹಿತಿ ನೀಡಿದರು. ಸರ್ಕಾರದ ಬಾಲಸಂಜೀವಿನಿ, ತಾಯಿ ಭಾಗ್ಯ ಮತ್ತಿತರ ಯೋಜನೆಗಳೂ ಸುಸೂತ್ರವಾಗಿ ಸಾಗುತ್ತಿವೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ನಿರ್ದೇಶಕ ಡಾ.ಪಿ.ಎಸ್.ಶಂಕರ್, ವೈದ್ಯಕೀಯ ಅಧೀಕ್ಷಕ ಡಾ. ದಿಲೀಪ್ ರಾಂಪುರೆ, ಡೀನ್ ಡಾ.ಬಿ. ಮಲ್ಲಿಕಾರ್ಜುನ, ಸಂಸ್ಥೆಯ ಪದಾಧಿಕಾರಿಗಳಾದ ಡಾ.ಸೂರ್ಯಕಾಂತ ಜಿ.ಪಾಟೀಲ, ಶಿವರಾಜ ಎಸ್. ನಿಗ್ಗುಡಗಿ, ಡಾ.ಬಸವರಾಜ ಜಿ.ಪಾಟೀಲ, ಡಾ.ಎ.ವಿ.ದೇಶಮುಖ, ಡಾ.ಎಸ್.ಆರ್.ಹರವಾಳ, ಆರ್.ಎಸ್.ಹೊಸಗೌಡ, ರಾಜಶೇಖರ ಆರ್.ಕಣಕಿ, ಎನ್.ಡಿ.ಪಾಟೀಲ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)