ಎಂಆರ್ ಹಗರಣ: ಸಿಬಿಐ ಆರೋಪಪಟ್ಟಿ ಸಲ್ಲಿಕೆ

7

ಎಂಆರ್ ಹಗರಣ: ಸಿಬಿಐ ಆರೋಪಪಟ್ಟಿ ಸಲ್ಲಿಕೆ

Published:
Updated:

ಹೈದರಾಬಾದ್: ಎಂಆರ್ ರಿಯಲ್ ಎಸ್ಟೇಟ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ನಿಯೋಜಿತ ನ್ಯಾಯಾಲಯಕ್ಕೆ ಕೆಲವು ಕಂಪೆನಿ ಸೇರಿ 12 ಜನರ ವಿರುದ್ಧ 300 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ.ಐಎಎಸ್ ಅಧಿಕಾರಿಗಳಾದ ಬಿ.ಪಿ.ಆಚಾರ್ಯ, ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ವಿ. ಸುಬ್ರಹ್ಮಣ್ಯಂ,  ನಿವೃತ್ತ ಐಎಎಸ್ ಅಧಿಕಾರಿ ಕೆ.ವಿಶ್ವೇಶ್ವರ ರಾವ್ ಆರೋಪಿಗಳಲ್ಲಿ ಸೇರಿದ್ದಾರೆ. ಆಚಾರ್ಯ ಸದ್ಯ ಸಿಬಿಐ ಸೆರೆಯಲ್ಲಿದ್ದು, ನಿಮ್ಸನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ (ಎಪಿಐಐಸಿ) ಮಾಜಿ ಮುಖ್ಯಸ್ಥರಾದ ಎಲ್.ವಿ.ಸುಬ್ರಹ್ಮಣ್ಯಂ ಅವರನ್ನು ತನಿಖೆಗೆ ಒಳಪಡಿಲು ಸಿಬಿಐ ಇನ್ನೂ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಬಾಕಿ ಇದೆ.ಇಲ್ಲಿನ ಎಂಆರ್ ಹಿಲ್ಸ್ ಟೌನ್‌ಷಿಪ್ ಯೋಜನೆಯಡಿ (ಇಎಚ್‌ಟಿಪಿಎಲ್) ಜಂಟಿ ಸಹಭಾಗಿತ್ವದಲ್ಲಿ 358.36 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿದ ವಿಲ್ಲಾಗಳನ್ನು ಅತಿ ಅಗ್ಗದ ಬೆಲೆಗೆ ಮಾರಾಟ ಮಾಡುವ ಮೂಲಕ ದುಬೈ ಮೂಲದ ಎಂಆರ್-ಎಂಜಿಎಫ್ ರಿಯಲ್ ಎಸ್ಟೇಟ್ ಕಂಪೆನಿ 138 ಕೋಟಿ ರೂಪಾಯಿ ಅವ್ಯವಹಾರ ಎಸಗಿದೆ ಎಂಬುದು ಸಿಬಿಐ ಆಪಾದನೆಯಾಗಿದೆ.ತನ್ನ ಆರೋಪಕ್ಕೆ ಪೂರಕವಾಗಿ ಸಿಬಿಐ 286 ಸಾಕ್ಷಿಗಳ ಹೇಳಿಕೆ ಹಾಗೂ 1834 ದಾಖಲೆಗಳನ್ನು ಸಂಗ್ರಹಿಸಿದೆ. ಒಟ್ಟಾರೆ  50,000 ಪುಟಗಳಷ್ಟಿರುವ ಈ ದಾಖಲೆಗಳನ್ನು ಸಿಬಿಐ ಜಂಟಿ ನಿರ್ದೇಶಕ ವಿ.ವಿ.ಲಕ್ಷ್ಮಿನಾರಾಯಣ ಖುದ್ದು ಆರು ಪೆಟ್ಟಿಗೆಗಳಲ್ಲಿ ತಂದು ನಾಂಪಲ್ಲಿಯಲ್ಲಿರುವ ನ್ಯಾಯಾಲಯಕ್ಕೆ ಸಲ್ಲಿಸಿದರು.ಇಎಚ್‌ಟಿಪಿಎಲ್ ಮುಖ್ಯ ಕಾರ್ಯನಿರ್ವಾಹಕ ವಿಜಯ ರಾಘವನ್ ಮತ್ತು ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ಆಪ್ತ ಸುನೀಲ ರೆಡ್ಡಿ ಅವರನ್ನೂ ಸಿಬಿಐ ಆರೋಪಿಗಳನ್ನಾಗಿಸುವ ನಿರೀಕ್ಷೆ ಇತ್ತಾದರೂ, ಅವರನ್ನು ಸದ್ಯಕ್ಕೆ ಕೈಬಿಡಲಾಗಿದೆ. ಆದರೆ, ಮುಂದೆ ಪೂರಕ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry