ಮಂಗಳವಾರ, ಮೇ 18, 2021
24 °C

ಎಂಇಎಸ್ ಶಾಸಕರ ಹೇಳಿಕೆ ಹಾಸ್ಯಾಸ್ಪದ: ಪಾಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಪ್ರಸ್ತುತ ವಿಧಾಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳು ಎಂಇಎಸ್ ಪಾಲಾಗಿರುವುದರಿಂದ ಬೆಳಗಾವಿ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಬೇಕು' ಎಂದು ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಹೇಳಿರುವುದು ಹಾಸ್ಯಾಸ್ಪದ ಸಂಗತಿ' ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.`ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಎರಡು ಕ್ಷೇತ್ರಗಳು ಎಂಇಎಸ್ ಪಾಲಾಗಿವೆ. 18 ಕ್ಷೇತ್ರಗಳ ಪೈಕಿ  2ರಲ್ಲಿ ಜಯ ಗಳಿಸಿರುವುದು ದೊಡ್ಡ ಸಾಧನೆಯೇನೂ ಅಲ್ಲ. ಅಷ್ಟಕ್ಕೇ ಬೆಳಗಾವಿ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಬೇಕು ಎಂದಿರುವುದು ಸಮಂಜಸವಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.`ಮುಂಬೈ ನಗರದ ದಾದರ್‌ನಿಂದ ಒಬ್ಬ ಕನ್ನಡಿಗ ಮುಂಬೈ ವಿಧಾನಸಭೆಗೆ ಆಯ್ಕೆಯಾಗಿ ಬರುತ್ತಿದ್ದ. ಹಾಗೆಂದ ಮಾತ್ರಕ್ಕೆ ದಾದರ್ ಕರ್ನಾಟಕಕ್ಕೆ ಬರಬೇಕೇನು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬರು ಸೋಲುತ್ತಾರೆ, ಒಬ್ಬರು ಗೆಲ್ಲುತ್ತಾರೆ. ಗೆದ್ದ ಮಾತ್ರಕ್ಕೆ ಆ ಸ್ಥಳ ಕರ್ನಾಟಕ ಬಿಟ್ಟು ಮಹಾರಾಷ್ಟ್ರಕ್ಕೆ ಹೋಗಲಾರದು. ಇಂಥ ಹಾಸ್ಯಾಸ್ಪದ ವಾದವನ್ನು ಮಹಾರಾಷ್ಟ್ರದವರು ನಿಲ್ಲಿಸಬೇಕು' ಎಂದು ಅವರು ತಿಳಿಸಿದ್ದಾರೆ.`ಬೆಳಗಾವಿ ಕರ್ನಾಟಕದ್ದೇ ಎನ್ನುವುದು ಎಲ್ಲ ಸಮಿತಿ, ಆಯೋಗಗಳಿಂದ ದೃಢಪಟ್ಟಿದೆ. ಬೆಳಗಾವಿ ನಗರದಲ್ಲಿರುವ ದೇವತೆಗಳೆಲ್ಲ ಕರ್ನಾಟಕದ ದೇವತೆಗಳಾಗಿವೆ. ಬೆಳಗಾವಿ ಸುತ್ತಲ ಪ್ರದೇಶದ ಮೇಲಿನ ಹಕ್ಕುದಾರಿಕೆಯಲ್ಲ ಕರ್ನಾಟಕಕ್ಕೆ ಸೇರಿದೆ.  ಬೆಳಗಾವಿ ನಗರದ ಬಗ್ಗೆ ಇಲ್ಲವೇ ಆ ಜಿಲ್ಲೆಯ ಬಗ್ಗೆ ಇಲ್ಲಸಲ್ಲದ ಕಿತಾಪತಿ ಎಬ್ಬಿಸುತ್ತಿರುವ ಮರಾಠಿಗರ ವಾದಕ್ಕೆ ಅರ್ಥವಿಲ್ಲ.1837ರಲ್ಲಿ ಬೆಳಗಾವಿಗೆ ಬಂದ ಕ್ರೈಸ್ತ ಮಿಶನರಿಗಳು ಬೆಳಗಾವಿ ನಗರದಲ್ಲಿ ಆ ನಗರದ ಭಾಷೆ ಕನ್ನಡವೆಂದು, ಅಲ್ಲಿ ಒಂದು ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿದ್ದರು.  ಅಲ್ಲಿ ಮರಾಠಿ ಭಾಷೆ ಇದ್ದಿದ್ದರೆ ಮರಾಠಿ ಶಾಲೆ ಆರಂಭಿಸುತ್ತಿದ್ದರು. ಹೊಟ್ಟೆ ಪಾಡಿಗೋಸ್ಕರ ಕೆಲಸ ಹುಡುಕಿಕೊಂಡು ಬಂದ ಕೆಲ ಮರಾಠಿಗರು ಈಗ ನಗರವೇ ತಮ್ಮದೆಂದು ಕೇಳುತ್ತಿರುವುದಕ್ಕೆ ಅರ್ಥ, ಔಚಿತ್ಯ ಯಾವುದೂ ಇಲ್ಲ' ಎಂದು ಪಾಪು ಹೇಳಿದ್ದಾರೆ.`ಬೆಳಗಾವಿಯ ಬಗ್ಗೆ ಮರಾಠಿಗರು  ಇನ್ನಾದರೂ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು. ಕರ್ನಾಟಕದ್ದೇ ಆದ ಬೆಳಗಾವಿ ಕರ್ನಾಟಕ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ಮಹಾರಾಷ್ಟ್ರದವರು ಇದನ್ನು ಬರೆದಿಟ್ಟುಕೊಳ್ಳಬೇಕು. ವಿನಾಕಾರಣ ಕಲಹ, ಕಿತ್ತಾಟ ಮಾಡುವ ತಮ್ಮ ಕಿತಾಪತಿಗೆ ಅವರು ಕೊನೆ ಹೇಳಬೇಕು. ಕನ್ನಡಿಗರೊಂದಿಗೆ ಕೂಡಿ ಬಾಳುವ ಸದ್ಭುದ್ಧಿ ಅಲ್ಲಿನ ಮರಾಠಿಗರಿಗೆ ಬರಲಿ ಎಂದು ಹಾರೈಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.