ಎಂಎನ್‌ಆರ್‌ಇಜಿಎ : ಕಟ್ಟುನಿಟ್ಟಿನ ಕ್ರಮದ ಇಂಗಿತ

7

ಎಂಎನ್‌ಆರ್‌ಇಜಿಎ : ಕಟ್ಟುನಿಟ್ಟಿನ ಕ್ರಮದ ಇಂಗಿತ

Published:
Updated:

ನವದೆಹಲಿ (ಪಿಟಿಐ): ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಎಂಎನ್‌ಆರ್‌ಇಜಿಎ) ದುರ್ಬಳಕೆ, ಅದರ ಜಾರಿಯಲ್ಲಿನ ನ್ಯೂನತೆ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧನೆಯಾಗದ ಬಗ್ಗೆ ಕೇಂದ್ರ ಸರ್ಕಾರ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.ಈ ಮಹತ್ವಾಕಾಂಕ್ಷಿ ಯೋಜನೆಯಡಿ ಬರುವ ಎಲ್ಲ ಕಾರ್ಮಿಕರ ಸಂಖ್ಯಾ ಮಾಹಿತಿ ಸಂಗ್ರಹ ಹಾಗೂ ಸಂಪೂರ್ಣ ವ್ಯವಹಾರವನ್ನು ಲೆಕ್ಕಪರಿಶೋಧನೆಗೆ ಒಳಪಡಿಸುವ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಇಂಗಿತ ವ್ಯಕ್ತಪಡಿಸಿದೆ.ಯೋಜನೆ ಐದು ವರ್ಷ ಪೂರೈಸಿದ ನೆನಪಿಗಾಗಿ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಯೋಜನೆಯ ಸಮರ್ಪಕ ಜಾರಿಗೆ ಹಲವು ಸಲಹೆಗಳನ್ನು ಮುಂದಿಟ್ಟಿದ್ದಾರೆ.ಕಾರ್ಮಿಕರ ಸಂಖ್ಯಾ ಮಾಹಿತಿ ಸಂಗ್ರಹಿಸುವುದರಿಂದ ಪ್ರಾಮಾಣಿಕವಾಗಿ ಕೆಲಸ ಹಂಚಿಕೆ, ನಿಖರ ಹಾಜರಾತಿ ಮತ್ತು ಸಕಾಲದಲ್ಲಿ ಕೂಲಿ ಪಾವತಿ ಸಾಧ್ಯವಾಗುತ್ತದೆ. ನಕಲಿ ನೌಕರರ ಪಟ್ಟಿಯನ್ನು ತಡೆಗಟ್ಟಬಹುದಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಇಂತಹ ಜಿಲ್ಲೆಗಳು ಹಾಗೂ ವಾರ್ಷಿಕ ಯೋಜನಾ ವೆಚ್ಚ 100 ಕೋಟಿ ಮೀರಿರುವ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಿರಿಯ ಎಂಜಿನಿಯರ್ ಒಳಗೊಂಡ ತಾಂತ್ರಿಕ ತಂಡವನ್ನು ರಚಿಸಲಾಗುತ್ತದೆ ಎಂದು ಪ್ರಕಟಿಸಿದರು.ಪರಾಮರ್ಶೆಗೆ ಸಕಾಲ: ಯೋಜನೆಯಲ್ಲಿನ ನ್ಯೂನತೆಗೆ ರಾಜ್ಯ ಸರ್ಕಾರಗಳನ್ನು ಹೊಣೆ ಮಾಡಿದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದರ ಜೊತೆಗೆ ಇಡೀ ಯೋಜನೆಯನ್ನು ಪರಾಮರ್ಶೆಗೆ ಒಳಪಡಿಸಲು ಇದು ಸಕಾಲ ಎಂದರು.ಕೆಲವೆಡೆ ಇತರ ಕಾರ್ಯಗಳಿಗೆ ಹಣ ಬಳಕೆಯಾಗಿದೆ. ಕೂಲಿ ಪಾವತಿ ವಿಳಂಬ, ನಕಲಿ ಉದ್ಯೋಗ ಕಾರ್ಡ್‌ಗಳು, ನಕಲಿ ನೌಕರರ ಹೆಸರುಗಳು ಬೆಳಕಿಗೆ ಬಂದಿವೆ. ಉದ್ಯೋಗ ಬರೀ ಕಾಗದದ ಮೇಲಷ್ಟೇ ದಾಖಲಾದ ಉದಾಹರಣೆಗಳೂ ಇವೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಿದ್ದರೂ ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ವ್ಯವಸ್ಥೆ, ಉದ್ಯೋಗ ಸ್ಥಳದಲ್ಲಿನ ಮೂಲ ಸೌಲಭ್ಯ ತೃಪ್ತಿಕರವಾಗಿಲ್ಲ. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ಮಹಿಳೆಯರು ಯೋಜನೆಯ ವ್ಯಾಪ್ತಿಗೆ ಬಂದಿಲ್ಲ ಎಂದು ವಿಷಾದಿಸಿದರು.ಸರ್ಕಾರ ವಿಫಲ:
ಯೋಜನೆಯ ದುರ್ಬಳಕೆಗೆ ಸಂಬಂಧಿಸಿದ ಅಂಕಿಅಂಶ ಸಂಗ್ರಹದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಒಪ್ಪಿಕೊಂಡ ಗ್ರಾಮೀಣಾಭಿವೃದ್ಧಿ ಸಚಿವ ವಿಲಾಸ್‌ರಾವ್ ದೇಶಮುಖ್, ಸಾಮಾಜಿಕ ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ರಾಜ್ಯ ಸರ್ಕಾರಗಳು ಭ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸಬೇಕು ಎಂದು ಕೋರಿದರು.ಯೋಜನೆಯ ಹಣವನ್ನು ಈಗಿನ 40 ಸಾವಿರ ಕೋಟಿಯಿಂದ 64 ಸಾವಿರ ಕೋಟಿಗೆ ಹೆಚ್ಚಿಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇನ್ನಷ್ಟು ತಳಮಟ್ಟಕ್ಕೆ ಯೋಜನೆ ವಿಸ್ತರಿಸುವ, ರೈತರು- ಕೂಲಿ ಕಾರ್ಮಿಕರ ನಡುವೆ ಸಮನ್ವಯ ಸಾಧಿಸಿ ಕಾರ್ಮಿಕರು ವರ್ಷದ ಯಾವ ಸಂದರ್ಭದಲ್ಲೂ ನಿರುದ್ಯೋಗಿಗಳಾಗದಂತೆ ನೋಡಿಕೊಳ್ಳುವ ಉದ್ದೇಶ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.ಕೂಲಿ ದರ ಹೆಚ್ಚಳ

ನವದೆಹಲಿ (ಐಎಎನ್‌ಎಸ್): ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೂಲಿ ಮೊತ್ತವನ್ನು ಶೇ 17ರಿಂದ 30ರಷ್ಟು ಏರಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಪ್ರಕಟಿಸಿದರು.‘ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಕೂಲಿ ಮೊತ್ತ ಹೆಚ್ಚಳ ತೀರ್ಮಾನಕ್ಕೆ ಬರಲಾಗಿದೆ’ ಎಂದು ಅವರು ತಿಳಿಸಿದರು.2006ರಲ್ಲಿ ಯೋಜನೆ ಆರಂಭವಾದಾಗ ಕನಿಷ್ಠ ದಿನಗೂಲಿ ಮೊತ್ತ ರೂ 65 ಇತ್ತು. ಈಗ ಅದು ರೂ 100 ಆಗಿದ್ದು, ಇದು ಅತಿ ಹೆಚ್ಚಿನ ಏರಿಕೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry