ಶುಕ್ರವಾರ, ಮೇ 20, 2022
26 °C

ಎಂಎಸ್‌ಇಜೆಡ್ ಪೈಪ್‌ಲೈನ್‌ಗೆ ಭಾರೀ ವಿರೋಧ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್: ಯಾವುದೇ ಕಾರಣಕ್ಕೂ ಎಂಎಸ್‌ಇಜೆಡ್‌ನ ತ್ಯಾಜ್ಯ ನೀರು ಮುಕ್ಕ ಸಮುದ್ರಕ್ಕೆ ಬಿಡುವ ಪೈಪ್‌ಲೈನ್ ಪಡ್ರೆ ಪ್ರದೇಶದಲ್ಲಿ ಹಾದು ಹೋಗುವುದಕ್ಕೆ ಗ್ರಾಮಸ್ಥರು ಭಾನುವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಎಂಎಸ್‌ಇಜೆಡ್ ಯಾವುದೇ ಮಾಹಿತಿ ನೀಡದೆ ಕಿರಿದಾದ ಊರವರ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.ಪಡ್ರೆ ಧೂಮಾವತಿ ದೈವಸ್ಥಾನದಲ್ಲಿ ನಡೆದ ಊರವರ ಸಭೆಯಲ್ಲಿ ಪಾಲ್ಗೊಂಡ ನಾಗರಿಕರು ಎಂಎಸ್‌ಇಜೆಡ್‌ಗೆ ತಮ್ಮ ವಿರೋಧ ವ್ಯಕ್ತಪಡಿಸಿದರು ಹಾಗೂ ಸಭೆಗೆ ಆಗಮಿಸಿದ್ದ ಸಿವಿಲ್ ಎಂಜಿನಿಯರ್ ಪದ್ಮನಾಭ ಅವರಿಗೆ ಕಾಮಗಾರಿಯ ಅನುಮತಿ ಲಭಿಸಿರುವ ಬಗ್ಗೆ ದಾಖಲೆಗಳನ್ನು ಒದಗಿಸಲು ಘೇರಾವ್ ಹಾಕಿದರು.ಪಡ್ರೆಯ ಜನತೆ ತಮ್ಮ ಎಕರೆಗಟ್ಟಲೆ ಜಮೀನನ್ನು ಕೆಆರ್‌ಇಸಿ (ಈಗಿನ ಎನ್‌ಐಟಿಕೆ) ನಿರ್ಮಾಣ ವೇಳೆ ತ್ಯಾಗ ಮಾಡಿರುತ್ತಾರೆ. ಈಗಿರುವ  ಖಾಸಗಿ ಜಮೀನಿನಲ್ಲಿ ಊರವರು ತಮ್ಮ ಅಗತ್ಯಕ್ಕಾಗಿ ರಸ್ತೆ ನಿರ್ಮಿಸಿದ್ದಾರೆ.

 

ಈ ರಸ್ತೆಯಲ್ಲಿ ಕಾಮಗಾರಿ ನಡೆಸಲು ಎಂಎಸ್‌ಇಜೆಡ್‌ಗೆ ಅಧಿಕಾರವೇನಿದೆ? ಪೈಪ್‌ಲೈನ್ ಕಾಮಗಾರಿ ನಡೆಸಲು ಬದ್ಧವಿರುವುದಾದರೆ ಕಂಪೆನಿ ಎನ್‌ಐಟಿಕೆ ಪ್ರದೇಶದೊಳಗಿಂದ ಹಾದುಹೋಗುವಂತೆ ಕಾಮಗಾರಿ ನಡೆಸಲಿ ಎಂದು ಸ್ಥಳೀಯರಾದ ರಾಜೇಶ್ ಶೆಟ್ಟಿ ಒತ್ತಾಯಿಸಿದರು.ಚಿತ್ತರಂಜನ್ ಶೆಟ್ಟಿ  ಮಾತನಾಡಿ, ಪಡ್ರೆಯ ರಸ್ತೆ ಚಿಕ್ಕದಾಗಿರುತ್ತದೆ. ಸೂಕ್ತವಾದ ಚರಂಡಿ ವ್ಯವಸ್ಥೆಯಿಲ್ಲ, ಕಂಪೆನಿ ಸರಿಯಾದ ಸರ್ವೆ ಕಾರ್ಯವನ್ನೂ ಮಾಡಿಲ್ಲ, ಸ್ಥಳೀಯರಿಗೆ ಮಾಹಿತಿ ನೀಡದೆ ಜೆಸಿಬಿ ಮೂಲಕ ಕಾಮಗಾರಿ ನಡೆಸುವ ಉದ್ಧಟತನವನ್ನು ಎಂಎಸ್‌ಇಜೆಡ್ ಮಾಡಿದೆ ಎಂದು ಆರೋಪಿಸಿದರು.ಪೈಪ್‌ಲೈನ್ ಕಾಮಗಾರಿ ವಿರುದ್ಧ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲು ಒತ್ತಾಯಿಸುವುದಾಗಿ ಸ್ಥಳೀಯ ಪಾಲಿಕೆ ಸದಸ್ಯೆ ಸುಮಿತ್ರಾ ತಿಳಿಸಿದರು.ನಕಲಿ ಅಧಿಕಾರಿ?: ಎಂಜಿನಿಯರ್ ಪದ್ಮನಾಭ ಅವರೊಂದಿಗೆ ಆಗಮಿಸಿದ್ದ ಯುವಕನೋರ್ವ ಎಂಎಸ್‌ಇಜೆಡ್ ಪರವಾಗಿ ವಾದ ಮಂಡಿಸಿದ್ದು ನಾಗರಿಕರ ಸಿಟ್ಟಿಗೆ ಕಾರಣವಾಯಿತು.ಆತನ ಪರಿಚಯ ಕೇಳಿದಾಗ ಎಂಎಸ್‌ಇಜೆಡ್ ಅಧಿಕಾರಿ, ಇಂಜಿನಿಯರ್‌ರ ಸಹಾಯಕ ಹೀಗೆ ಹಲವು ರೀತಿಯಲ್ಲಿ ಪರಿಚಯ ಮಾಡಿಕೊಂಡಾಗ ಅನುಮಾನಗೊಂಡ ನಾಗರಿಕರು ಗುರುತು ಪತ್ರತೋರಿಸುವಂತೆ ತಿಳಿಸಿದಾಗ ಆತ ತಬ್ಬಿಬ್ಬಾದ, ಈತನನ್ನು ಗ್ರಾಮಸ್ಥರು ಸಭೆಯಿಂದಲೇ ಹೊರಹಾಕಿದ ಘಟನೆ ನಡೆಯಿತು.ಪರಿಹಾರ ಮೊತ್ತ ಹುನ್ನಾರ:
ಜಮೀನಿನ ಮಾಲಿಕರಿಗೆ ತಿಳಿಸದೇ ಎಂಎಸ್‌ಇಜೆಡ್ ಅಧಿಕಾರಿಗಳೇ ಪರಿಹಾರ ಮೊತ್ತ ನಿರ್ಧರಿಸಿರುವ ವಿಚಾರ ಸಭೆಯಲ್ಲಿ ಬೆಳಕಿಗೆ ಬಂದಿದೆ. ಪದ್ಮನಾಭರ ಕಡತದಿಂದ ಕೆಳಬಿದ್ದ ಪ್ರತಿಗಳು ಈ ವಿಚಾರವನ್ನು ಬೆಳಕಿಗೆ ತಂದು ಸ್ಥಳೀಯರನ್ನೇ ತಬ್ಬಿಬ್ಬುಗೊಳಿಸಿತ್ತು.ಪಡ್ರೆ ನಿವಾಸಿಗಳ ಜಮೀನುದಾರರ ಹೆಸರು, ಅವರ ಜಾಗದ ವಿಸ್ತೀರ್ಣ, ಸಂದಾಯ ಮಾಡುವ ಪರಿಹಾರ ಮೊತ್ತ ಸ್ಪಷ್ಟವಾಗಿ ನಮೂದಾಗಿತ್ತು. ಈ ಬಗ್ಗೆ ಉಗ್ರ ಪ್ರತಿರೋಧ ವ್ಯಕ್ತವಾದಾಗ ಎಂಎಸ್‌ಇಜೆಡ್ ಇಂಜಿನಿಯರ್ ಹೊರಹೋಗುವಂತಾಯಿತು.

 

ಅಂತಿಮವಾಗಿ ಸಭೆಯ ಎಂಎಸ್‌ಇಜೆಡ್ ಪೈಪ್‌ಲೈನ್ ವಿರುದ್ಧ ನಿರ್ಣಯ ಕೈಗೊಂಡು, ಪೈಪ್‌ಲೈನ್ ವಿರುದ್ದ ಕಾನೂನು ಹೋರಾಟ, ಸತ್ಯಾಗ್ರಹ, ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಊರಿನ ಹಿರಿಯರಾದ ಬಾಬು ಶೆಟ್ಟಿ ಬಂಡ್ರಿಯಾಲ್, ಸುಭಾಶ್ ಶೆಟ್ಟಿ, ಬಾಬು ಶೆಟ್ಟಿ,  ಕೇಶವ ಶೆಟ್ಟಿ, ಸುಭಾಷ್ ಶೆಟ್ಟಿ,ಜಯಶೆಟ್ಟಿ, ಅಶೋಕ್‌ಶೆಟ್ಟಿ ಇತರರು ಇದ್ದರು.ಮೀನುಗಾರರ ಸಮ್ಮತಿ?

ಸಮುದ್ರಕ್ಕೆ ಪೈಪ್‌ಲೈನ್ ಕಾಮಗಾರಿಗೆ ಭಾರೀ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ಮೀನುಗಾರರಿಂದ ಪೈಪಲೈನ್‌ಗೆ ಸಮ್ಮತಿ ಸೂಚಿಸಿರುವ ದಾಖಲೆಗಳು ಪತ್ರಿಕೆಗೆ ಲಭ್ಯವಾಗಿದೆ. ಈ ಬಗ್ಗೆ ಪಡ್ರೆಗೆ ಆಗಮಿಸಿದ ಎಂಜಿನಿಯರ್ ಕೂಡ ಸ್ಪಷ್ಟಪಡಿಸಿದ್ದು ಮೀನುಗಾರರು ಸಮ್ಮತಿ ನೀಡಿರುವುದಾಗಿ ಹೇಳಿದ್ದಾರೆ.ಮೀನುಗಾರರೊಂದಿಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಎಂಎಸ್‌ಇಜೆಡ್ ಅಧಿಕಾರಿಗಳು, ಮೀನುಗಾರ ಮುಖಂಡರು, ಐದು ಪಟ್ಣ ಮೊಗವೀರ ಸಭೆಯ ಅಧಿಕಾರಿಗಳು,ಪರಿಸರ ಅಧಿಕಾರಿಗಳು , ಹೋರಾಟಗಾರರ ನಡುವೆ ಹಲವು ಸುತ್ತಿನ ಸಭೆಗಳು ನಡೆದಿದೆ.2011ರ ಮಾ,3, ಎಪ್ರೀಲ್ 4, 8 ಮತ್ತು 14ರಂದು ಸಭೆ ನಡೆದಿದ್ದು ಅಂತಿಮ ಎರಡು ಸಭೆಗಳು  ಪೈಪ್‌ಲೈನ್ ಕಾಮಗಾರಿಗೆ ಮೀನುಗಾರರೊಂದಿಗಿನ ಒಪ್ಪಂದ ಮೇರೆಗೆ ಸಮ್ಮತಿ ಮೂಡಿಸುವಲ್ಲಿ ಯಶಸ್ಸು ಕಂಡಿರುವುದು ಸ್ಪಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.