ಬುಧವಾರ, ಜುಲೈ 28, 2021
26 °C

ಎಂಜಿನಿಯರಿಂಗ್ ಕೋರ್ಸ್‌ ಶುಲ್ಕ ನಿಗಧಿ ಮಾತುಕತೆ ವಿಫಲ: ಸುಗ್ರೀವಾಜ್ಞೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ನಿಗದಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಸರ್ಕಾರದ ನಿಲುವನ್ನು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಸೋಮವಾರ ಪ್ರಕಟಿಸಲಿದ್ದಾರೆ.

ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಸರ್ಕಾರ ಮತ್ತು ಖಾಸಗಿ ವೃತ್ತಿಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ನಡೆದ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅಂತಿಮವಾಗಿ ಖಾಸಗಿ ಕಾಲೇಜುಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ.

ಎಂಜಿನಿಯರಿಂಗ್ ಕೋರ್ಸ್‌ಗಳಿಗೆ 50 ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಬೇಕು ಎಂದು ಖಾಸಗಿಯವರು ಪಟ್ಟು ಹಿಡಿದಿದ್ದರೆ, ಸರ್ಕಾರ 30 ಸಾವಿರ ರೂಪಾಯಿ ನಿಗದಿ ಮಾಡುವುದಾಗಿ ಹೇಳಿತ್ತು. ಅಂತಿಮವಾಗಿ ಈಗ 32,500 ರೂಪಾಯಿ ನಿಗದಿ ಮಾಡಲು ಆಸಕ್ತಿ ತೋರಿದೆ. ಆದರೆ ಖಾಸಗಿಯವರು ಇದಕ್ಕೂ ಒಪ್ಪುತ್ತಿಲ್ಲ. ಅಲ್ಲದೆ ಈ ವಿಷಯವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಖಾಸಗಿಯವರು ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದರೆ, ಸರ್ಕಾರ ಸುಗ್ರೀವಾಜ್ಞೆಗೆ ಮುಂದಾಗಿದೆ. ಪರಸ್ಪರ ಮಾತುಕತೆ ಮೂಲಕ ಶುಲ್ಕ ನಿಗದಿಪಡಿಸಿಕೊಂಡು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕಾಲೇಜುಗಳಿಗೆ ಒಂದು ರೀತಿಯ ಶುಲ್ಕ ನಿಗದಿಯಾದರೆ, ಒಪ್ಪಂದ ಮಾಡಿಕೊಳ್ಳದ ಕಾಲೇಜುಗಳಿಗೆ ನ್ಯಾಯಮೂರ್ತಿ ಪದ್ಮರಾಜ ಸಮಿತಿ ಮಾಡಿರುವ ಶಿಫಾರಸಿನಂತೆ ಶುಲ್ಕ ನಿಗದಿ ಮಾಡಲಾಗುತ್ತದೆ.

‘ಪದ್ಮರಾಜ ಸಮಿತಿಯ ವರದಿ ಇನ್ನೂ ಬಹಿರಂಗವಾಗಿಲ್ಲ. ಹೀಗಾಗಿ ಯಾವ ಕಾಲೇಜಿಗೆ ಎಷ್ಟು ಶುಲ್ಕ ನಿಗದಿ ಮಾಡಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಸಮಿತಿ ಶಿಫಾರಸು ಜಾರಿಯಾದರೆ ನಾವು ಕೇಳುತ್ತಿರುವ 50 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಶುಲ್ಕ ನಿಗದಿಯಾಗಲಿದೆ’ ಎಂಬ ವಿಶ್ವಾಸವನ್ನು ಒಕ್ಕೂಟದ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಸರ್ಕಾರ ಮತ್ತು ಖಾಸಗಿಯವರ ನಡುವೆ ಕ್ರಮವಾಗಿ ಶೇ 40: 60ರ ಪ್ರಮಾಣದಲ್ಲಿ ಸೀಟು ಹಂಚಿಕೆಯಾಗಲಿದೆ. ಈ ವರ್ಷದಿಂದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೊಸದಾಗಿ ಸೃಷ್ಟಿಸಿರುವ ಶೇ 5ರ ಸೂಪರ್ ನ್ಯೂಮರರಿ ಕೋಟಾ ಸೀಟುಗಳು ಸರ್ಕಾರಿ ಕೋಟಾದ ಮೂಲಕವೇ ಭರ್ತಿಯಾಗಲಿವೆ. ಹೀಗಾಗಿ ಸರ್ಕಾರಕ್ಕೆ ಒಟ್ಟಾರೆ ಶೇ 45ರಷ್ಟು ಸೀಟುಗಳು ಲಭ್ಯವಾಗಲಿವೆ. ಶೇ 5ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ.

ಸಿಇಟಿ ಪರೀಕ್ಷೆ ಮುಗಿದರೂ ಇನ್ನೂ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯಾಗದ ಕಾರಣ ಪೋಷಕರು, ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಸರ್ಕಾರಿ ಕೋಟಾದಲ್ಲಿ ಎಷ್ಟು ಸೀಟುಗಳಿವೆ, ಎಷ್ಟು ಶುಲ್ಕ ಎಂದು ತಲೆಕೆಡಿಸಿಕೊಂಡಿದ್ದಾರೆ. ಸಿಇಟಿ ಆರಂಭವಾದಾಗಿನಿಂದ ಯಾವ ವರ್ಷವೂ ಇಷ್ಟೊಂದು ವಿಳಂಬವಾಗಿರಲಿಲ್ಲ. ಸಾಮಾನ್ಯ ಪ್ರವೇಶ ಪರೀಕ್ಷೆ ಆರಂಭಕ್ಕೂ ಮೊದಲೇ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಯಾಗುತ್ತಿತ್ತು. ಆದರೆ ಈ ವರ್ಷ ಪರೀಕ್ಷೆ ಮುಗಿದ ನಂತರವೂ ಗೊಂದಲ ಮುಂದುವರಿದಿದೆ.

ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೂ ಅದೇ ಅಂತಿಮ ಎಂದು ಹೇಳುವಂತಿಲ್ಲ. ಈಗಾಗಲೇ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಒಂದು ವೇಳೆ ನ್ಯಾಯಾಲಯ ಪದ್ಮರಾಜ ಸಮಿತಿ ವರದಿ ಪ್ರಕಾರವೇ ಶುಲ್ಕ ನಿಗದಿ ಮಾಡಿ ಎಂದು ಆದೇಶಿಸಿದರೆ ಆಗ ಸುಗ್ರೀವಾಜ್ಞೆಗೆ ಮಹತ್ವ ಇರುವುದಿಲ್ಲ. ಹೀಗಾಗಿ ಕೌನ್ಸೆಲಿಂಗ್‌ನಲ್ಲಿ ಸೀಟು ಪಡೆದು ಕಾಲೇಜಿನಲ್ಲಿ ಪ್ರವೇಶ ಪಡೆಯುವವರೆಗೂ ವಿದ್ಯಾರ್ಥಿಗಳಿಗೆ ಆತಂಕ ತಪ್ಪಿದ್ದಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.