ಭಾನುವಾರ, ಮೇ 16, 2021
23 °C

ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಹೊಸಕೆರೆಹಳ್ಳಿ ಸಮೀಪದ ದತ್ತಾತ್ರೇಯನಗರದಲ್ಲಿ ಮಂಗಳವಾರ ರಾತ್ರಿ ಅರ್ಚನಾ (21) ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವಕೀಲ ಎ.ಕೆ.ಪಾಟೀಲ್ ಎಂಬುವರ ಮಗಳಾದ ಅರ್ಚನಾ, ಬನಶಂಕರಿ ವರ್ತುಲ ರಸ್ತೆಯ ಖಾಸಗಿ ಕಾಲೇಜಿನಲ್ಲಿ ಬಿ.ಇ ಐದನೇ ಸೆಮಿಸ್ಟರ್ ಓದುತ್ತಿದ್ದರು. ಕೊಪ್ಪಳದಲ್ಲಿ ಉದ್ಯೋಗದಲ್ಲಿರುವ ಪಾಟೀಲ್ ಅವರು ಅಲ್ಲಿಯೇ ನೆಲೆಸಿದ್ದಾರೆ.ಅರ್ಚನಾ, ತಾಯಿ ಲತಾ ಅವರೊಂದಿಗೆ ದತ್ತಾತ್ರೇಯನಗರ ಮೂರನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಕೊಠಡಿಯೊಂದರಲ್ಲಿ ರಾತ್ರಿ ಅಧ್ಯಯನದಲ್ಲಿ ತೊಡಗಿದ್ದ ಅವರು ಅಲ್ಲಿಯೇ ನೇಣುಹಾಕಿಕೊಂಡಿದ್ದಾರೆ. ಲತಾ ಅವರು ಮಗಳನ್ನು ಊಟಕ್ಕೆ ಕರೆಯಲು ಕೊಠಡಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಗಿರಿನಗರ ಪೊಲೀಸರು ತಿಳಿಸಿದ್ದಾರೆ.`ಅರ್ಚನಾ, ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ 2ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು. ಇದರಿಂದ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬ ಸದಸ್ಯರು ಹೇಳಿಕೆ ಕೊಟ್ಟಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.ಚಿನ್ನಾಭರಣ ಅಪಹರಣ

ಸಜ್ಜನ್‌ರಾವ್ ವೃತ್ತದ ಸಮೀಪ ದುಷ್ಕರ್ಮಿಗಳು ಬುಧವಾರ ಬೆಳಿಗ್ಗೆ ಹುಚ್ಚಮ್ಮ ಎಂಬುವರ ಗಮನ ಬೇರೆಡೆ ಸೆಳೆದು ಸುಮಾರು 60 ಗ್ರಾಂ ತೂಕದ ಚಿನ್ನಾಭರಣ ದೋಚಿದ್ದಾರೆ.ಕುಮಾರಸ್ವಾಮಿಲೇಔಟ್ ನಿವಾಸಿಯಾದ ಹುಚ್ಚಮ್ಮ, ಸಜ್ಜನ್‌ರಾವ್ ವೃತ್ತದ ಬಳಿಯ ಟ್ರಾವೆಲ್ಸ್ ಏಜೆನ್ಸಿಯೊಂದರಲ್ಲಿ ಸ್ವಚ್ಛತಾ ಕಾರ್ಯ (ಹೌಸ್ ಕೀಪಿಂಗ್) ನಿರ್ವಹಿಸುತ್ತಿದ್ದರು. ಕೆಲಸ ಮುಗಿದ ಬಳಿಕ ಅವರು ಮನೆಗೆ ಹೋಗಲು ಏಜೆನ್ಸಿ ಸಮೀಪದ ಬಸ್ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.ಬೈಕ್‌ನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳಿಬ್ಬರು ಪೊಲೀಸರ ಸೋಗಿನಲ್ಲಿ ಹುಚ್ಚಮ್ಮ ಅವರನ್ನು ಪರಿಚಯಿಸಿಕೊಂಡು `ಈ ಭಾಗದಲ್ಲಿ ಸರಗಳ್ಳರ ಹಾವಳಿ ಹೆಚ್ಚಿದೆ. ಆಭರಣಗಳನ್ನು ಬಿಚ್ಚಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ' ಎಂದು ಹೇಳಿದ್ದಾರೆ. ಇದನ್ನು ನಂಬಿದ ಅವರು ಸರ ಮತ್ತು ಬಳೆಗಳನ್ನು ಬಿಚ್ಚಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಆಗ ಅವರಿಗೆ ನೆರವಾಗುವ ನೆಪದಲ್ಲಿ ಆಭರಣಗಳನ್ನು ಪಡೆದುಕೊಂಡ ಕಿಡಿಗೇಡಿಗಳು, ಅವುಗಳನ್ನು ಬ್ಯಾಗ್‌ನಲ್ಲಿ ಹಾಕಿದಂತೆ ಮಾಡಿ ಪರಾರಿಯಾಗಿದ್ದಾರೆ.ಸ್ವಲ್ಪ ಸಮಯದ ಬಳಿಕ ಹುಚ್ಚಮ್ಮ ಅವರು ಬ್ಯಾಗ್ ತೆರೆದು ನೋಡಿದಾಗ ಆಭರಣಗಳು ಇಲ್ಲದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಂಟ್ರಲ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಬೈಕ್ ಸವಾರರ ಸಾವು

ಬೆಂಗಳೂರು: ನಗರದ ಹೊಸೂರು ರಸ್ತೆಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಬಳಿ ಬುಧವಾರ ರಾತ್ರಿ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ.ರಾಮನಗರ ಜಿಲ್ಲೆ ಚನ್ನಪಟ್ಟಣದ ಮಧು (23) ಮತ್ತು ಮಂಡ್ಯ ಜಿಲ್ಲೆ ಹಲಗೂರಿನ ಧನರಾಜ್ (25) ಮೃತಪಟ್ಟವರು. ನಗರದಲ್ಲಿ ವಾಸವಾಗಿದ್ದ ಅವರು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಅವರು ಕಾರ್ಖಾನೆಯಿಂದ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‌ನಿಂದ ಕೆಳಗೆ ಬಿದ್ದ ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಂತರ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವ್ಯಕ್ತಿಯ ಕೊಲೆ

ಪೀಣ್ಯ ದಾಸರಹಳ್ಳಿ ಸಮೀಪದ ಕಾಳಹಸ್ತಿ ನಗರದಲ್ಲಿ ದುಷ್ಕರ್ಮಿಗಳು ಬುಧವಾರ ರಾತ್ರಿ ಗಂಗರಾಜ್ (32) ಎಂಬುವರನ್ನು ಕೊಲೆ ಮಾಡಿದ್ದಾರೆ.ಕಾಳಹಸ್ತಿನಗರ ನಿವಾಸಿಯಾದ ಗಂಗರಾಜ್, ಕೂಲಿ ಕೆಲಸ ಮಾಡುತ್ತಿದ್ದರು. ಅವರ ತಂಗಿ ಭಾಗ್ಯ ಅವರನ್ನು ವಿವಾಹವಾಗಿದ್ದ ಬಾಲು ಎಂಬಾತ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕೌಟುಂಬಿಕ ಕಾರಣಕ್ಕಾಗಿ ಗಂಗರಾಜ್ ಮತ್ತು ಬಾಲು ನಡುವೆ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಆತ ಸ್ನೇಹಿತರ ಜತೆ ಸೇರಿಕೊಂಡು ಬೈಕ್‌ನಲ್ಲಿ ಬರುತ್ತಿದ್ದ ಗಂಗರಾಜ್ ಅವರನ್ನು ಅಡ್ಡಗಟ್ಟಿ ತಲೆಗೆ ಕಬ್ಬಿಣ ಸಲಾಕೆಯಿಂದ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಘಟನೆ ನಂತರ ಆರೋಪಿಗಳು ಆಟೊದಲ್ಲಿ ಪರಾರಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೀಣ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.