ಶುಕ್ರವಾರ, ಜುಲೈ 30, 2021
28 °C

ಎಂಜಿನಿಯರಿಂಗ್: ಶುಲ್ಕ ರೂ 32,500

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಜಿನಿಯರಿಂಗ್ ಮತ್ತು ಅರ್ಕಿಟೆಕ್ಟ್ ಕೋರ್ಸ್‌ಗಳ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಕುರಿತು ಸ್ಪಷ್ಟ ತೀರ್ಮಾನಕ್ಕೆ ಬಂದಿರುವ ರಾಜ್ಯ ಸರ್ಕಾರ ವಾರ್ಷಿಕ ಶುಲ್ಕವನ್ನು 30 ಸಾವಿರದಿಂದ 32,500 ರೂಪಾಯಿಗೆ ಹೆಚ್ಚಿಸಿದೆ. ಹಾಗೆಯೇ ಇದುವರೆಗೂ ಇದ್ದ ಶೇ 50ರಷ್ಟು ಸೀಟುಗಳಿಗೆ ಬದಲಾಗಿ ಶೇ 55ರಷ್ಟು ಸೀಟುಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಟ್ಟುಕೊಡಲು ತೀರ್ಮಾನಿಸಿದೆ. ಇದರಿಂದ ಸರ್ಕಾರಿ ಕೋಟಾ ಶೇ 50ರಿಂದ 45ಕ್ಕೆ ಕುಸಿದಂತಾಗಿದೆ.

ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಯನ್ನಾಧರಿಸಿಯೇ ಈ ತೀರ್ಮಾನಕ್ಕೆ ಬಂದಿದ್ದು, ಇದನ್ನು ಒಪ್ಪದ ಶಿಕ್ಷಣ ಸಂಸ್ಥೆಗಳು ಸುಪ್ರೀಂಕೋರ್ಟ್ ಆದೇಶದನ್ವಯ ರಚನೆಗೊಂಡ 2006ರ ವೃತಿ ಶಿಕ್ಷಣ ಪ್ರವೇಶ ಮತ್ತು ಶುಲ್ಕ ನಿಗದಿ ಕಾಯ್ದೆ ಪ್ರಕಾರವೇ ಪ್ರವೇಶ ಮಾಡಿಕೊಳ್ಳಬೇಕಾಗುತ್ತದೆ’ ಎಂದೂ ಎಚ್ಚರಿಸಿದರು.

‘ಪ್ರಸ್ತುತ ಈ ಕಾಯ್ದೆ ಅಮಾನತಿನಲ್ಲಿದ್ದು, ಇದನ್ನು ಪುನಃ ಜಾರಿಗೊಳಿಸಲಾಗುತ್ತದೆ. ಸರ್ಕಾರ ರೂಪಿಸಿದ ಸರ್ವಸಮ್ಮತ ಒಪ್ಪಂದದ ಪ್ರಕಾರ ಯಾವ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶ ಮಾಡಿಕೊಳ್ಳುವುದಿಲ್ಲವೊ ಅಂತಹ ಸಂಸ್ಥೆಗಳು ಈ ಕಾಯ್ದೆ ವ್ಯಾಪ್ತಿಗೆ ಸೇರ್ಪಡೆಯಾಗುತ್ತವೆ ಎನ್ನುವುದನ್ನು ತಿದ್ದುಪಡಿಯಲ್ಲಿ ಸೇರಿಸಲಾಗುತ್ತದೆ’ ಎಂದು ಹೇಳಿದರು.

‘ಈ ತಿದ್ದುಪಡಿ ಸಂಬಂಧ ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು, ಆ ನಂತರ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೊಳಿಸಲಾಗುವುದು’ ಎಂದು ಅವರು ವಿವರಿಸಿದರು.

‘ಈ ಕಾಯ್ದೆಯ ನಿಯಮ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಆರು ತಿಂಗಳ ವರೆಗೆ ಶಿಕ್ಷೆ ಮತ್ತು 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶ ಇದೆ. ಹೀಗಾಗಿ ಇದರ ಅನುಷ್ಠಾನ ಕಷ್ಟ ಎಂದು ಶಿಕ್ಷಣ ಸಂಸ್ಥೆಗಳು 2006ರಲ್ಲೇ ಸರ್ಕಾರಕ್ಕೆ ಮನವಿ ಸಲ್ಲಿಸಿ, ಪರಸ್ಪರ ಮಾತುಕತೆ ಮೂಲಕವೇ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದವು. ಆದರೆ, ಇತ್ತೀಚೆಗೆ ಕೆಲವು ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ರೂ 50 ಸಾವಿರಕ್ಕೆ ಹೆಚ್ಚಿಸಲು ಬೇಡಿಕೆ ಸಲ್ಲಿಸಿದ್ದು, ಇದಕ್ಕೆ ಸರ್ಕಾರ ಒಪ್ಪಲು ತಯಾರಿಲ್ಲ. ಪೋಷಕರು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡೇ ಶುಲ್ಕವನ್ನು 30 ಸಾವಿರದಿಂದ 32,500 ರೂಪಾಯಿಗೆ ಹೆಚ್ಚಿಸಲಾಗಿದೆ. ಹಾಗೆಯೇ ಖಾಸಗಿ ಸಂಸ್ಥೆಗಳಿಗೆ ಅನುಕೂಲ ಆಗಲಿ ಎಂದೇ ಶೇ 50ರಷ್ಟು ಇದ್ದು ಸೀಟುಗಳನ್ನು ಶೇ 55ರಷ್ಟು ನೀಡಲು ತೀರ್ಮಾನಿಸಲಾಗಿದೆ’ ಎಂದರು.

‘ನನ್ನ ಪ್ರಕಾರ 184 ಎಂಜಿನಿಯರಿಂಗ್ ಕಾಲೇಜುಗಳಲ್ಲಿ 120ಕ್ಕೂ ಹೆಚ್ಚು ಕಾಲೇಜುಗಳು ಸರ್ಕಾರದ ಈ ತೀರ್ಮಾನಕ್ಕೆ ಬೆಂಬಲ ಸೂಚಿಸುವ ವಿಶ್ವಾಸ ಇದೆ. ಅನೇಕ ಕಾಲೇಜುಗಳು ಸಿಇಟಿ ಮೂಲಕವೇ ಸೀಟು ಕೊಡಿ ಎಂದು ಕೇಳುತ್ತಿವೆ. ಹೀಗಾಗಿ ಈ ವಿಷಯದಲ್ಲಿ ಯಾವುದೇ ಗೊಂದಲ ಮತ್ತು ಆತಂಕ ಬೇಡ’ ಎಂದೂ ಆಚಾರ್ಯ ಸ್ಪಷ್ಟಪಡಿಸಿದರು.

ಗಡುವು: ಸರ್ಕಾರದ ಈ ತೀರ್ಮಾನವನ್ನು ಒಪ್ಪಿದ ಶಿಕ್ಷಣ ಸಂಸ್ಥೆಗಳು ಮೇ 15ರೊಳಗೆ ಸರ್ಕಾರಕ್ಕೆ ತನ್ನ ಒಪ್ಪಿಗೆ ಪತ್ರ ನೀಡಬೇಕು. ಯಾವ ಸಂಸ್ಥೆಗಳು ಇದಕ್ಕೆ ಒಪ್ಪುವುದಿಲ್ಲವೊ ಅಂತಹ ಸಂಸ್ಥೆಗಳು ಕಾಯ್ದೆ ವ್ಯಾಪ್ತಿಗೆ ಸೇರಲಿದ್ದು, ನ್ಯಾಯಮೂರ್ತಿ ಪದ್ಮರಾಜ್ ಆಯೋಗದ ಶಿಫಾರಸ್ಸಿನ ಪ್ರಕಾರ ಶುಲ್ಕ ಸಂಗ್ರಹಿಸಬೇಕಾಗುತ್ತದೆ.

ಪ್ರತಿ ಕಾಲೇಜಿಗೂ ಪ್ರತ್ಯೇಕ ಶುಲ್ಕ ನಿಗದಿ ಮಾಡಿದ್ದು, ಆ ಪ್ರಕಾರವೇ ಶುಲ್ಕ ಸಂಗ್ರಹಿಸಬೇಕು. ಶೇ 15ರಷ್ಟು ಸೀಟುಗಳನ್ನು ಎನ್‌ಆರ್‌ಐ (ಅನಿವಾಸಿ ಭಾರತೀಯರು) ಮಕ್ಕಳಿಗೆ ಮೀಸಲಿಟ್ಟಿದ್ದು, ಅದಕ್ಕೆ ಮಾತ್ರ ಹೆಚ್ಚಿನ ಶುಲ್ಕ ಸಂಗ್ರಹಿಸಬೇಕು. ಕೇಂದ್ರ ವಿದೇಶಾಂಗ ಸಚಿವಾಲಯದ ವ್ಯಾಖ್ಯಾನದಂತೆ ಅರ್ಹರಾದ ಪೋಷಕರ ಮಕ್ಕಳಿಗೆ ಮಾತ್ರ ಎನ್‌ಆರ್‌ಐ ಕೋಟಾದಡಿ ಸೀಟು ನೀಡಬೇಕು. ಮೀಸಲಾತಿ ಪ್ರಕಾರವೇ ಸೀಟು ಹಂಚಿಕೆ ಮಾಡಬೇಕು... ಹೀಗೆ ಹತ್ತಾರು ಷರತ್ತುಗಳಿದ್ದು, ಅವೆಲ್ಲವನ್ನೂ ಪಾಲಿಸಬೇಕಾಗುತ್ತದೆ’ ಎಂದು ವಿವರಿಸಿದರು.

ಸರ್ಕಾರದ ಮೇಲ್ವಿಚಾರಣೆ: ಕಾಯ್ದೆ ಪ್ರಕಾರ ಶುಲ್ಕ ಸಂಗ್ರಹ ಮತ್ತು ಸೀಟು ಹಂಚಿಕೆ ಮಾಡಲಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಮೇಲ್ವಿಚಾರಣೆ ಮಾಡಲೂ ಸಮಿತಿಯನ್ನು ರಚಿಸಲಿದ್ದು, ಅದು ಪ್ರತಿ ಕಾಲೇಜಿನಲ್ಲೂ ಹಾಜರಿದ್ದು, ಪರಿಶೀಲನೆ ನಡೆಸಲಿದೆ. ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.

ಎಂಜಿನಿಯರಿಂಗ್ ಸೀಟುಗಳು ಕಳೆದ ವರ್ಷವೂ ಸುಮಾರು ಎಂಟು ಸಾವಿರ ಬಾಕಿ ಉಳಿದಿವೆ. ಹೀಗಾಗಿ ಶುಲ್ಕ ಹೆಚ್ಚಳಕ್ಕಿಂತ ಈಗಿರುವ ವ್ಯವಸ್ಥೆಯೇ ಉತ್ತಮ. ಆದರೂ ಶಿಕ್ಷಣ ಸಂಸ್ಥೆಗಳಿಗೆ ಇತ್ತೀಚೆಗೆ ಕಾಲೇಜುಗಳ ನಿರ್ವಹಣೆ ದುಬಾರಿಯಾದ ಕಾರಣ ಪ್ರವೇಶ ಶುಲ್ಕದಲ್ಲಿ ಸ್ವಲ್ಪ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸೂಪರ್ ನ್ಯೂಮರರಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೊಸದಾಗಿ ಸೃಷ್ಟಿಸಿರುವ ಶೇ 5ರಷ್ಟು  ಸೂಪರ್ ನ್ಯೂಮರರಿ ಕೋಟಾ ಸೀಟುಗಳು ಸರ್ಕಾರಿ ಕೋಟಾದ ಮೂಲಕವೇ ಭರ್ತಿಯಾಗುವುದರಿಂದ ಹಿಂದಿದ್ದಂತೆ ಶೇ 50ರಷ್ಟು ಸೀಟುಗಳು ಸರ್ಕಾರಕ್ಕೆ ಲಭ್ಯವಾಗಲಿದೆ. ಈ ಸೀಟುಗಳನ್ನು ಪ್ರತಿಭಾನ್ವಿತ ಬಡ ಮಕ್ಕಳಿಗೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ. ಇದು ಈ ವರ್ಷದಿಂದಲೇ ಜಾರಿಯಾಗಲಿದೆ ಎಂದರು.

ತಿದ್ದುಪಡಿ ಸಂಬಂಧ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಆಚಾರ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.