ಎಂಜಿನಿಯರಿಂಗ್ ಸಿಇಟಿ: 2013ಕ್ಕೆ ಅನುಮಾನ

7

ಎಂಜಿನಿಯರಿಂಗ್ ಸಿಇಟಿ: 2013ಕ್ಕೆ ಅನುಮಾನ

Published:
Updated:

ನವದೆಹಲಿ: ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ಏಕರೂಪದ ಎಂಜಿನಿಯರಿಂಗ್ `ಸಾಮಾನ್ಯ ಪ್ರವೇಶ ಪರೀಕ್ಷೆ~ (ಸಿಇಟಿ) ಮುಂದಿನ ಶೈಕ್ಷಣಿಕ ವರ್ಷದಿಂದ (2013) ಜಾರಿಗೆ ಬರುವ ಕುರಿತು ಅನಿಶ್ಚತತೆ ತಲೆದೋರಿದೆ. ಅನೇಕ ರಾಜ್ಯಗಳು ತಮ್ಮ ಅಧೀನದಲ್ಲಿರುವ ಕಾಲೇಜುಗಳಿಗೆ ಸಿಇಟಿ ಅನ್ವಯಿಸುವ ಸಂಬಂಧ ಖಚಿತ ಬದ್ಧತೆ ನೀಡದಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.

ಆದರೆ, ಕೇಂದ್ರ ಸರ್ಕಾರದ ಅಧೀನದ ಕಾಲೇಜುಗಳಲ್ಲಿ ಹೊಸ ವ್ಯವಸ್ಥೆ ಮುಂದಿನ ವರ್ಷದಿಂದಲೇ ಜಾರಿಗೆ ಬರಲಿದೆ.

ಏಕರೂಪ ಸಿಇಟಿ ಆರಂಭ ಕುರಿತು ರಾಜ್ಯಗಳ ಜತೆ ಸಮಗ್ರವಾಗಿ ಸಮಾಲೋಚಿಸಬೇಕೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ 2014ರ ಶೈಕ್ಷಣಿಕ ವರ್ಷದಲ್ಲೂ ಇದು ಜಾರಿಯಾಗುವ ಕುರಿತು ಅನುಮಾನ ತಲೆದೋರಿದೆ. ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಸಮ್ಮುಖದಲ್ಲಿ ಬುಧವಾರ ನಡೆದ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಏಕರೂಪ ಸಿಇಟಿ ಕುರಿತು ಸಮಗ್ರವಾಗಿ ಚರ್ಚೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ಮಾನವ ಸಂಪನ್ಮೂಲ ಸಚಿವಾಲಯ ತನ್ನ ವ್ಯಾಪ್ತಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಮುಂದಿನ ವರ್ಷದಿಂದ ಏಕರೂಪ ಸಿಇಟಿ ಜಾರಿಗೆ ಕಟಿಬದ್ಧವಾಗಿದೆ. ಇದರಿಂದ ದೇಶದ 15 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), 30 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ಮಾಲಜಿ (ಎನ್‌ಐಟಿ), 4 ಮಾಹಿತಿ ತಂತ್ರಜ್ಞಾನ ಕಾಲೇಜ್ (ಐಐಐಟಿ), ಐದು ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್) ಹಾಗೂ ಡೀಮ್ಡ ಕಾಲೇಜುಗಳಿಗೆ ಸಾಮಾನ್ಯ ಪರೀಕ್ಷೆ ಪದ್ದತಿ ಅನ್ವಯವಾಗಲಿದೆ.

ಶಿಕ್ಷಣ ಸಚಿವರ ಸಭೆಯಲ್ಲಿ ಸಮಗ್ರವಾಗಿ ಚರ್ಚೆಸಿದ ಬಳಿಕ 2013ರಿಂದ ಏಕರೂಪ ಸಿಇಟಿ ಜಾರಿಗೆ ತಾತ್ವಿಕ ಒಪ್ಪಿಗೆ ಕೊಡಲಾಯಿತು. ಆದರೆ, ಸಾಮಾನ್ಯ ಪ್ರವೇಶ ಪರೀಕ್ಷೆ ಜತೆಗೆ ರಾಜ್ಯ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗೂ ಕೃಪಾಂಕ ನೀಡಲು ಮಾನವ ಸಂಪನ್ಮೂಲ ಸಚಿವಾಲಯ ಸಮ್ಮತಿಸಿದ ಬಳಿಕ ಈ ಏಕರೂಪ ಪರೀಕ್ಷೆ ಪದ್ಧತಿ ಜಾರಿಗೆ ಸಮ್ಮತಿಸಲಾಯಿತು. 2013ರಲ್ಲಿ ಸಿಇಟಿ ಎರಡು ಸಲ ಅಂದರೆ ಏಪ್ರಿಲ್- ಮೇ ಹಾಗೂ ನವೆಂಬರ್- ಡಿಸೆಂಬರ್‌ನಲ್ಲಿ ನಡೆಯಲಿದ್ದು ಫಲಿತಾಂಶ ಎರಡು ವರ್ಷಗಳ ಅವಧಿಗೆ ಮಾನ್ಯತೆ ಹೊಂದಿರುತ್ತದೆ. ಅನಂತರ ಇದನ್ನು ವರ್ಷಕ್ಕೆ ಮೂರು, ನಾಲ್ಕು ಸಲ ನಡೆಸಲಿದ್ದು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತಿಳಿಸಿದರು.

ಏಕರೂಪ ಸಿಇಟಿ ಕೇಂದ್ರ ಮತ್ತು ರಾಜ್ಯ ಅನುಸರಿಸುತ್ತಿರುವ ಮೀಸಲು ನೀತಿಗೆ ಯಾವುದೇ ರೀತಿಯಲ್ಲೂ ಅಡ್ಡಿ ಮಾಡದು ಎಂದು ಸ್ಪಷ್ಟಪಡಿಸಿದರು.

ರಾಜ್ಯ ಮಟ್ಟದ ಎಂಜಿನಿಯರಿಂಗ್ ಪ್ರವೇಶಕ್ಕೆ ರಾಜ್ಯಗಳು ತಮ್ಮ ಶಿಕ್ಷಣ ಮಂಡಳಿ ಪರೀಕ್ಷೆ ಜತೆಗೆ ತಮಗೆ ಅಗತ್ಯ ಕಂಡಷ್ಟು ಕೃಪಾಂಕ ನೀಡಬಹುದು. ಆದರೆ, ಕನಿಷ್ಠ ಶೇ. 40 ಕೃಪಾಂಕ ಕಡ್ಡಾಯ. ತಮಿಳುನಾಡಿನಂತೆ ಶೇ. 100 ಕೃಪಾಂಕ ಬೇಕಾದರೂ ನೀಡಬಹುದು. ಇದರಿಂದ ಉದ್ದೇಶಿತ ವ್ಯವಸ್ಥೆಗೆ ತೊಂದರೆ ಆಗದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry