ಎಂಜಿನಿಯರ್ ಅಮಾನತ್ತಿಗೆ ಆಗ್ರಹ

7

ಎಂಜಿನಿಯರ್ ಅಮಾನತ್ತಿಗೆ ಆಗ್ರಹ

Published:
Updated:

ಧಾರವಾಡ: “ಕರ್ನಾಟಕ ಗೃಹ ಮಂಡಳಿ ವಸತಿ ವಿನ್ಯಾಸಕ್ಕಾಗಿ ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದ್ದು ಸಿಐಡಿ ತನಿಖೆಯಿಂದ ಸಾಬೀತಾಗಿದ್ದು, ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು” ಎಂದು ಸಂಸದ ಪ್ರಹ್ಲಾದ ಜೋಶಿ ಒತ್ತಾಯಿಸಿದರು.ಮಂಗಳವಾರ ಸಿಐಡಿ ಅಧಿಕಾರಿಗಳು ಲೋಕಾಯುಕ್ತರಿಗೆ ಸಲ್ಲಿಸಿರುವ ವರದಿಯ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಕಕ್ಕಯ್ಯ ಅವರ ನಿರ್ಲಕ್ಷ್ಯತನದಿಂದ ರೈತರಿಗೆ ಹಾಗೂ ಸರ್ಕಾರಕ್ಕೆ ಹಾನಿಯಾಗಿದೆ. ಈ ಕುರಿತು ವರದಿಯಲ್ಲಿಯೂ ಹೇಳಲಾಗಿದೆ. ಸುಮಾರು 12 ಜನ ಮಧ್ಯವರ್ತಿಗಳು ಹಾಗೂ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಹಣ ಪಡೆಯುವ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ ಎಂದು ಆಪಾದಿಸಿದರು.ರೈತರು ತಮ್ಮ ಬಳಿ ಈ ಕುರಿತು ದೂರು ಸಲ್ಲಿಸಿದಾಗ ಕಕ್ಕಯ್ಯ ಅವರಿಗೆ ಹೇಳಲಾಗಿತ್ತು. ಆದರೆ ಅವರು ಗಂಭೀರವಾಗಿ ಪರಿಗಣಿಸದೇ ಮತ್ತೆ ಇಂಥ ಕಾರ್ಯದಲ್ಲಿಯೇ ತೊಡಗಿದ್ದರು.ಈರೇಶ ಅಂಚಟಗೇರಿ ಹಾಗೂ ತಾವು ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರು ಸಿಐಡಿ ತನಿಖೆಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆದು ವರದಿ ಬಂದಿದೆ. ಸಧ್ಯದಲ್ಲಿಯೇ ಮುಖ್ಯಮಂತ್ರಿಗಳಿಗೂ ವರದಿ ಸಲ್ಲಿಸಿ ಕಕ್ಕಯ್ಯ ಅವರ ಅಮಾನತಿಗೆ ಮನವಿ ಮಾಡಲಾಗುವುದು.ಮಧ್ಯವರ್ತಿಗಳ ಮೇಲೆಯೂ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.ಹಿರೇಮಲ್ಲಿಗವಾಡ, ಚಿಕ್ಕಮಲ್ಲಿಗವಾಡ, ಮುಮ್ಮಿಗಟ್ಟಿ ಗ್ರಾಮದಲ್ಲಿ 300 ಎಕರೆ, ಅಮರಗೋಳದಲ್ಲಿ 85 ಎಕರೆ, ಗಾಮನಗಟ್ಟಿಯಲ್ಲಿ 130 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಭೂಮಿಗೆ ನಿಗದಿ ಪಡಿಸಿದ ದರವನ್ನು ಮಧ್ಯವರ್ತಿಗಳು ಹಾಗೂ ಆಧಿಕಾರಿಗಳು ಪಡೆದು, ಅರ್ಧದಷ್ಟು ಹಣವನ್ನು ರೈತರಿಗೆ ನೀಡುವ ಮೂಲಕ ವಂಚಿಸಿದ್ದಾರೆ. 2005ರ ಡಿಸೆಂಬರ್ 28 ರಂದು ಅಂದಿನ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಭೂ ಖರೀದಿ ಸಮಿತಿ ಸಭೆಯಲ್ಲಿ ಪ್ರತಿ ಎಕರೆಗೆ 5.75 ಲಕ್ಷ ರೂ. ನಿಗದಿಪಡಿಸಲಾಗಿತ್ತು. ಸಭೆಗೆ ರೈತರಲ್ಲದ ಮೂವರನ್ನು ಆಹ್ವಾನಿಸಲಾಗಿತ್ತು. ನಿಗದಿ ಪಡಿಸಿದ ದರವನ್ನು ರೈತರಿಗೆ ತಿಳಿಸಿರಲಿಲ್ಲ. ರೈತರಿಗೆ ಕೇವಲ 2-3 ಲಕ್ಷ ರೂ. ಮಾತ್ರ ನೀಡಲಾಗಿದೆ ಎಂದು ಹೇಳಿದರು.ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಈಗಿರುವ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ತಿಳಿಸಲಾಗಿದೆ. ಅನ್ಯಾಯವನ್ನು ಸರಿಪಡಿಸುವುದಾಗಿ ಅವರು ಸಹ ಭರವಸೆ ನೀಡಿದ್ದಾರೆ. ಆದ್ದರಿಂದ ರೈತರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹಿಸಿ ಸಚಿವರಿಗೆ ತಿಳಿಸಲಾಗುವುದು. ಈ ಅನ್ಯಾಯವನ್ನು ಸರಿಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.ರೈತರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಿದವರಿಂದ ಹಣವನ್ನು ಮರಳಿ ಪಾವತಿ ಮಾಡಿಕೊಳ್ಳುವ ಬಗ್ಗೆಯೂ ಒತ್ತಾಯಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಈರೇಶ ಅಂಚಟಗೇರಿ, ಸುರೇಶ ಬೇದರೆ, ಸಂಜಯ ಕಪಟಕರ, ಕಲಂದರ ಮುಲ್ಲಾ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry