ಗುರುವಾರ , ಅಕ್ಟೋಬರ್ 17, 2019
22 °C

ಎಂಜಿ ರಸ್ತೆ ದುರಸ್ತಿಗೆ ಒತ್ತಾಯ

Published:
Updated:

ಹಾವೇರಿ: ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಜ. 4ರಂದು ನಡೆಯಲಿದ್ದು, ಅಷ್ಟರೊಳಗೆ ಅತಿಕ್ರಮಣ ತೆರವಿನಿಂದ ಹಾಳಾಗಿರುವ ನಗರದ ಎಂಜಿ.ರಸ್ತೆಯನ್ನು ಸಮರ್ಪಕವಾಗಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಕನ್ನಡ ಜಾಗೃತಿ ವೇದಿಕೆ ನಗರಸಭೆಯನ್ನು ಒತ್ತಾಯಿಸಿದೆ.ಹುಕ್ಕೇರಿಮಠದ ರಥೋತ್ಸವ ನಗರದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಜಿಲ್ಲೆಯಾದ್ಯಂತ ಸಹಸ್ರಾರು ಜನರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ. ಆದರೆ, ರಥೋತ್ಸವ ಸಾಗುವ ರಸ್ತೆಗಳು ಅದರಲ್ಲೂ ಪ್ರಮುಖವಾಗಿ ನಗರದ ಹೃದಯ ಭಾಗವಾದ ಎಂ.ಜಿ. ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆಯ ಬಳಿಕ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ರಸ್ತೆಯಲ್ಲಿ ರಥೋತ್ಸವ ನಡೆಸುವುದು ಅಸಾಧ್ಯವಾಗಿದೆ ಎಂದು ಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ ದೊಡ್ಡಮನಿ ಹೇಳಿದ್ದಾರೆ.ತಕ್ಷಣವೇ ಈ ರಸ್ತೆಯಲ್ಲಿ ನಡೆಸುತ್ತಿರುವ ಚರಂಡಿ ಹಾಗೂ ಫುಟ್‌ಪಾತ್ ಕಾಮಗಾರಿಯನ್ನು ತೀವ್ರ ಗೊಳಿಸಿ ಎರಡು ದಿನಗಳಲ್ಲಿ ಮುಗಿಸಬೇಕು. ಇಲ್ಲವೇ ಜಾತ್ರಾ ಮಹೋತ್ಸವದ ವರೆಗೆ ಕಾಮಗಾರಿ ಸ್ಥಗಿತ ಗೊಳಿಸಬೇಕು ಹಾಗೂ ಶ್ರೀಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲತೆ ಕಲ್ಪಿಸಲು ಕೂಡಲೇ ರಸ್ತೆಯಲ್ಲಿ ಹರಡಿರುವ ಮಣ್ಣು, ಕಲ್ಲು ಕಬ್ಬಿಣದ ತುಂಡು ಗಳು ಹಾಗೂ ಕಾಂಕ್ರೀಟ್ ಪರಿಕರಗಳನ್ನು ತೆರವುಗೊಳಿಸಬೇಕು ಎಂದು ಅವರು ನಗರಸಭೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.ವ್ಯಾಪಾರ ವಹಿವಾಟಿಗೆ ಹೆಸರಾಗಿದ್ದ ಹಾವೇರಿ ಎಂ.ಜಿ. ಮಾರುಕಟ್ಟೆ ಅತಿಕ್ರಮಣ ತೆರವು ಕಾರ್ಯಾ ಚರಣೆಯಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತ ಗೊಂಡಿದೆ. ಇದನ್ನೆ ನಂಬಿದ ವರ್ತಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ವ್ಯಾಪಾರ ವಹಿವಾಟು ಹಿಂದಿನಂತೆ ನಡೆದುಕೊಂಡು ಬರುವಂತೆ ಅವಶ್ಯ ವಿರುವ ಎಲ್ಲ ಸೌಕರ್ಯಗಳನ್ನು ಒದಗಿಸ ಬೇಕೆಂದು ಅವರು ಹೇಳಿದ್ದಾರೆ. ನಗರ ಸಭೆ ಪೌರಾಯುಕ್ತ ಎಚ್.ಕೆ. ರುದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.ವೇದಿಕೆ ಪದಾಧಿಕಾರಿಗಳಾದ ಉಡಚಪ್ಪ ಮಾಳಗಿ, ಮಹ್ಮದಲಿ ಏರಿಮನಿ, ಕಿರಣ ಗಾಯಕವಾಡ, ಗುರು ರಾಜ ಸೋಮಣ್ಣನವರ, ಸಿದ್ದಪ್ಪ ಬಿರಾದಾರ, ಅಶೋಕ ಮಣ್ಣೂರ, ವೆಂಕಟೇಶ ಬಿಜಾಪುರ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

Post Comments (+)