ಎಂಟರಘಟ್ಟಕ್ಕೆ ಪೋರ್ಚುಗಲ್, ಜರ್ಮನಿ
ಕಾರ್ಕಿವ್ (ರಾಯಿಟರ್ಸ್): ಕ್ರಿಸ್ಟಿಯಾನೊ ರೊನಾಲ್ಡೊ ತಂದಿತ್ತ ಎರಡು ಗೋಲುಗಳ ನೆರವಿನಿಂದ ಹಾಲೆಂಡ್ ತಂಡವನ್ನು ಮಣಿಸಿದ ಪೋರ್ಚುಗಲ್ ಯೂರೊ -2012 ಫುಟ್ಬಾಲ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ಗೆ ಮುನ್ನಡೆಯಿತು. ಡೆನ್ಮಾರ್ಕ್ ತಂಡವನ್ನು ಮಣಿಸಿದ ಜರ್ಮನಿ ಕೂಡಾ ಎಂಟರಘಟ್ಟ ಪ್ರವೇಶಿಸಿತು.
ಮೆಟಾಲಿಸ್ಟ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ 2-1 ಗೋಲುಗಳ ಜಯ ಸಾಧಿಸಿತು. ರಫಾಯೆಲ್ ವಾನ್ ಡೆರ್ವಾರ್ಟ್ 11ನೇ ನಿಮಿಷದಲ್ಲಿ ಹಾಲೆಂಡ್ಗೆ ಮುನ್ನಡೆ ತಂದಿತ್ತರು. ಆದರೆ ಪೋರ್ಚುಗಲ್ನ ನೆರವಿಗೆ ನಿಂತ ರೊನಾಲ್ಡೊ 28 ಮತ್ತು 74ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ `ಹೀರೊ~ ಆಗಿ ಮೆರೆದರು.
ಈ ಗೆಲುವಿನ ಮೂಲಕ ಪೋರ್ಚುಗಲ್ ಆರು ಪಾಯಿಂಟ್ ಕಲೆಹಾಕಿ `ಬಿ~ ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ನಾಕೌಟ್ ಹಂತ ಪ್ರವೇಶಿಸಿತು. ಆಡಿದ ಎಲ್ಲ ಮೂರು ಪಂದ್ಯಗಳಲ್ಲಿ ಗೆಲುವು ಪಡೆದ ಜರ್ಮನಿ `ಬಿ~ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಡೆನ್ಮಾರ್ಕ್ (3 ಪಾಯಿಂಟ್) ಮತ್ತು ಹಾಲೆಂಡ್ (0) ತಂಡಗಳ ನಾಕೌಟ್ ಪ್ರವೇಶದ ಕನಸು ಭಗ್ನಗೊಂಡಿತು.
ಕಳೆದ ಎರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಪೋರ್ಚುಗಲ್ ನಾಯಕ ರೊನಾಲ್ಡೊ ಭಾನುವಾರ ಅದ್ಭುತ ಫಾರ್ಮ್ನಲ್ಲಿದ್ದರು. ಕನಿಷ್ಠ ನಾಲ್ಕು ಗೋಲುಗಳನ್ನು ಗಳಿಸುವ ಅತ್ಯುತ್ತಮ ಅವಕಾಶ ಅವರಿಗೆ ಒದಗಿತ್ತು.
11ನೇ ನಿಮಿಷದಲ್ಲಿ ಗೋಲು ಗಳಿಸಿದ ಹಾಲೆಂಡ್ ಮುಂದಿನ 15 ನಿಮಿಷಗಳ ಕಾಲ ಪ್ರಭುತ್ವ ಸಾಧಿಸಿತ್ತು. ಆ ಬಳಿಕ ಪೋರ್ಚುಗಲ್ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ರೊನಾಲ್ಡೊ ಅವರನ್ನು ತಡೆಯಲು ಎದುರಾಳಿ ರಕ್ಷಣಾ ಆಟಗಾರರು ಸಾಕಷ್ಟು ಪ್ರಯಾಸಪಟ್ಟರು.
24 ನೇ ನಿಮಿಷದಲ್ಲಿ ಜಾವೊ ಪೆರೇರಾ ನೀಡಿದ ಪಾಸ್ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ರೊನಾಲ್ಡೊ ಎದುರಾಳಿ ಗೋಲ್ ಕೀಪರ್ ಮಾರ್ಟಿನ್ ಸ್ಟೆಕೆನ್ಬರ್ಗ್ ಅವರನ್ನು ತಪ್ಪಿಸುವಲ್ಲಿ ಯಶಸ್ವಿಯಾದರು. ವಿರಾಮದ ವೇಳೆಗೆ ಉಭಯ ತಂಡಗಳು 1-1 ರಲ್ಲಿ ಸಮಬಲ ಸಾಧಿಸಿದ್ದವು.
ಎರಡನೇ ಅವಧಿಯಲ್ಲಿ ಪೋರ್ಚುಗಲ್ ರಕ್ಷಣೆಗೆ ಒತ್ತು ನೀಡುವ ಜೊತೆಗೆ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತು. ಹಾಲೆಂಡ್ ಕೂಡಾ ಪ್ರತ್ಯುತ್ತರ ನೀಡಿದ ಕಾರಣ ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವ ಸಾಧ್ಯತೆ ಕಂಡುಬಂತು. ಆದರೆ ಪಂದ್ಯ ಕೊನೆಗೊಳ್ಳಲು 16 ನಿಮಿಷಗಳಿದ್ದಾಗ ರೊನಾಲ್ಡೊ ಅವರಿಂದ ಗೆಲುವಿನ ಗೋಲು ದಾಖಲಾಯಿತು.
ನಾನಿ ಅವರು ನೀಡಿದ ಪಾಸ್ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ರೊನಾಲ್ಡೊ ಗುರಿಯತ್ತ ಮುನ್ನುಗ್ಗಿದರು. ಅದನ್ನು ತಡೆಯಲು ಬಂದ ಎದುರಾಳಿ ಡಿಫೆಂಡರ್ ಗ್ರೆಗೊರಿ ವಾನ್ಡೆರ್ ವೀಲ್ ಅವರನ್ನು ಸಮರ್ಥವಾಗಿ ತಪ್ಪಿಸಿ ಚೆಂಡನ್ನು ನೆಟ್ನೊಳಕ್ಕೆ ಕಳುಹಿಸುವಲ್ಲಿ ಯಶ ಕಂಡರು. ಪೋರ್ಚುಗಲ್ ತಂಡ ಗುರುವಾರ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯವನ್ನು ಎದುರಿಸಲಿದೆ.
ಜರ್ಮನಿ ಜಯಭೇರಿ: ಲೆವಿವ್ನಲ್ಲಿ ನಡೆದ ಪಂದ್ಯದಲ್ಲಿ ಜರ್ಮನಿ 2-1 ಗೋಲುಗಳಿಂದ ಡೆನ್ಮಾರ್ಕ್ ತಂಡವನ್ನು ಮಣಿಸಿತು. ಈ ಮೂಲಕ ಅಜೇಯವಾಗಿ ಕ್ವಾರ್ಟರ್ ಫೈನಲ್ಗೇರಿದ ಸಾಧನೆ ಮಾಡಿತು. ಲೂಕಾಸ್ ಪೊಡೊಲ್ಸ್ಕಿ (19ನೇ ನಿಮಿಷ) ಮತ್ತು ಲಾ ರ್ಸ್ ಬೆಂಡೆರ್ (80) ಗೋಲು ಗಳಿಸಿ ಜರ್ಮನಿ ಗೆಲುವಿಗೆ ಕಾರಣರಾದರು.
ಡೆನ್ಮಾರ್ಕ್ ತಂಡದ ಏಕೈಕ ಗೋಲನ್ನು ಮಿಖಾಯೆಲ್ ಕ್ರಾನ್ ಪಂದ್ಯದ 24ನೇ ನಿಮಿಷದಲ್ಲಿ ತಂದಿತ್ತರು. ಪೋಲೆಂಡ್ ಮೂಲದ ಪೊಡೊಲ್ಸ್ಕಿ ಜರ್ಮನಿ ಪರ ಆಡಿದ 100ನೇ ಪಂದ್ಯ ಇದಾಗಿತ್ತು. ತಮ್ಮ 44ನೇ ಅಂತರರಾಷ್ಟ್ರೀಯ ಗೋಲು ಗಳಿಸುವ ಮೂಲಕ ಈ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು.
ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದರೂ ಜರ್ಮನಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಗಿಟ್ಟಿಸುತ್ತಿತ್ತು.
ಆದರೆ ಫಿಲಿಪ್ ಲಾಮ್ ನೇತೃತ್ವದ ತಂಡ ಸಕಾರಾತ್ಮಕ ಆಟವಾಡಿ ಪೂರ್ಣ ಪಾಯಿಂಟ್ ಗಿಟ್ಟಿಸಿಕೊಂಡಿತು. ಜರ್ಮನಿ ಶುಕ್ರವಾರ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೀಸ್ ತಂಡದ ಸವಾಲನ್ನು ಎದುರಿಸಲಿದೆ.
ಇಂದಿನ ಪಂದ್ಯಗಳು
ಇಂಗ್ಲೆಂಡ್-ಉಕ್ರೇನ್ (ಡಿ ಗುಂಪು)
ಸ್ವೀಡನ್- ಫ್ರಾನ್ಸ್ (ಡಿ ಗುಂಪು)
ಭಾರತೀಯ ಕಾಲಮಾನ :
ಮಧ್ಯರಾತ್ರಿ: 12.15ಕ್ಕೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.