ಎಂಟರಘಟ್ಟಕ್ಕೆ ಸೈನಾ ನೆಹ್ವಾಲ್
ನವದೆಹಲಿ (ಪಿಟಿಐ): ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಸೈನಾ ನೆಹ್ವಾಲ್ ಸ್ವಿಟ್ಜರ್ಲೆಂಡ್ನಲ್ಲಿ ನಡೆಯುತ್ತಿರುವ ವಿಲ್ಸನ್ ಸ್ವಿಸ್ ಓಪನ್ ಗ್ರ್ಯಾನ್ ಫ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್ನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ 21-15, 17-21, 21-11ರಲ್ಲಿ ಜಪಾನ್ನ ಈರಿಕೋ ಹಿರೋಸೆ ಅವರನ್ನು ಮಣಿಸಿ ಎಂಟರಘಟ್ಟಕ್ಕೆ ಪ್ರವೇಶ ಪಡೆದರು. ಕಳೆದ ವಾರ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಎಂಟರಘಟ್ಟದ ಪಂದ್ಯದಲ್ಲಿ ಈರಿಕೋ ಹಿರೋಸೆ ಎದುರು ಸೈನಾ ಸೋಲು ಅನುಭವಿಸಿದ್ದರು. ಈಗ ಅವರ ವಿರುದ್ಧವೇ ಗೆಲುವು ಪಡೆದು ತಿರುಗೇಟು ನೀಡಿದ್ದಾರೆ.
ಮೊದಲ ಸೆಟ್ನಲ್ಲಿ ಸೈನಾ ಅಲ್ಪ ಪ್ರತಿರೋಧ ಎದುರಿಸಿ ಮುನ್ನಡೆ ಸಾಧಿಸಿದರು. ಆದರೆ ಎರಡನೇ ಸೆಟ್ನಲ್ಲಿ ಪ್ರಬಲ ಹೋರಾಟ ನಡೆಸಿದ ಹಿರೋಸೆ ಅವರಿಗೆ ಸೈನಾ ಶರಣಾಗಬೇಕಾಯಿತು. ನಿರ್ಣಾಯಕ ಘಟ್ಟದ ಸುತ್ತಿನಲ್ಲಿ ಮತ್ತೆ ಲಯ ಕಂಡುಕೊಂಡ ಭಾರತದ ಆಟಗಾರ್ತಿ ಸುಲಭವಾಗಿಯೇ ಹಿರೋಸೆ ಅವರನ್ನು ಮಣಿಸಿ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟರು.
ಅಜಯ್ಗೆ ಪ್ರಯಾಸದ ಜಯ: ಪುರುಷರ ವಿಭಾಗದ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಭಾರತದ ಅಜಯ್ ಜಯರಾಮನ್ 15-21, 23-21, 21-19ರಲ್ಲಿ ಡೆನ್ಮಾರ್ಕ್ನ ಹನ್ಸ್ ಕ್ರಿಸ್ಟಿಯನ್ ವಿರುದ್ಧ ಪ್ರಯಾಸದ ಗೆಲುವು ಪಡೆದರು.
ಪುರುಷರ ವಿಭಾಗದ ಡಬಲ್ಸ್ನಲ್ಲಿ ಭಾರತದ ರೂಪೇಶ್ ಕುಮಾರ್ ಹಾಗೂ ಸನ್ವೇ ಥಾಮಸ್ ಜೋಡಿ 17-21, 21-15, 21-15ರಲ್ಲಿ ಡೆನ್ಮಾರ್ಕ್ನ ಮಾರ್ಡ್ಸ್ ಕಾನ್ರರ್ಡ್ ಪೀಟರ್ಸ್ನ್ ಮತ್ತು ಜೋನಾಸ್ ರಸ್ಮು ಸುಸ್ ವಿರುದ್ಧ ಗೆಲುವು ಪಡೆಯಿತು. ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಮಹಿಳೆಯರ ವಿಭಾಗದ ಡಬಲ್ಸ್ನ ಎಂಟರಘಟ್ಟದ ಪಂದ್ಯದಲ್ಲಿ 16-21, 12-21ರಲ್ಲಿ ಶಿಜುಕಾ ಮತ್ಸೂ ಹಾಗೂ ಮಾಮಿ ನೇಷಿಯೊ ವಿರುದ್ಧ ಸೋಲು ಕಂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.