ಭಾನುವಾರ, ಜೂಲೈ 12, 2020
29 °C

ಎಂಟು ಪಥದ ರಸ್ತೆ ನಿರ್ಮಾಣಕ್ಕೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪಶ್ಚಿಮ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಓಕಳಿಪುರದಿಂದ ಫೌಂಟೆನ್ ವೃತ್ತದವರೆಗೆ (ದೇವರಾಜ ಅರಸು) 115.50 ಕೋಟಿ ರೂಪಾಯಿ ವೆಚ್ಚದಲ್ಲಿ ಎಂಟು ಪಥದ ರಸ್ತೆ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.ಬಸವೇಶ್ವರ ನಗರ, ರಾಜಾಜಿನಗರ, ವಿಜಯನಗರ ಬಡಾವಣೆಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕೆ ಬೇಕಾಗಿರುವ 12,818 ಚದರ ಮೀಟರ್ ಜಾಗವನ್ನು ರೈಲ್ವೆ ಇಲಾಖೆಯಿಂದ ಪಡೆದು ಅವರಿಗೆ ಬೇರೆ ಕಡೆ ಜಾಗ ನೀಡಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ನೈರುತ್ಯ ರೈಲ್ವೆಗೆ 28 ಕೋಟಿ ರೂಪಾಯಿ, ರಸ್ತೆ ಕಾರಿಡಾರ್‌ಗೆ 57.5 ಕೋಟಿ ರೂಪಾಯಿ, ಬೆಸ್ಕಾಂ ಮತ್ತು ಜಲಮಂಡಳಿಗೆ 20 ಕೋಟಿ ರೂಪಾಯಿ ಹಾಗೂ ಸರ್ವಿಸ್ ರಸ್ತೆಗೆ ಏಳು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಕ್ಕಿದೆ ಎಂದರು.ಕಾರಿಡಾರ್‌ಗೆ ಒಟ್ಟು 660 ಮೀಟರ್ ಜಾಗ ಬೇಕಾಗಿದೆ.  ಈ ಪೈಕಿ 251 ಚದರ ಮೀಟರ್ ಖಾಸಗಿ ಜಾಗವಾಗಿದ್ದು, ಇದರ ಸ್ವಾಧೀನಕ್ಕೂ ಅನುಮತಿ ನೀಡಲಾಗಿದೆ.ಆದಷ್ಟು ಬೇಗ ಟೆಂಡರ್ ಕರೆದು 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬಾಷ್ಯಂ ವೃತ್ತದಿಂದ ಕೆ.ಆರ್.ವೃತ್ತದವರೆಗೆ ಸಿಗ್ನಲ್‌ಮುಕ್ತ ಕಾರಿಡಾರ್ ನಿರ್ಮಾಣವಾಗಲಿದೆ ಎಂದು ತಿಳಿಸಿದರು.ಸಾಲಕ್ಕೆ ಖಾತರಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು 1564 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಬಿಬಿಎಂಪಿ ರೂಪಿಸಿದೆ. ಇದಕ್ಕೆ ಹಣದ ಕೊರತೆ ಇರುವುದರಿಂದ ಬಿಬಿಎಂಪಿ 200 ಕೋಟಿ ರೂಪಾಯಿ ಸಾಲ ಪಡೆಯುವುದಕ್ಕೆ ಸರ್ಕಾರ ಖಾತರಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.