ಗುರುವಾರ , ನವೆಂಬರ್ 21, 2019
20 °C
ಸಮುದ್ರದಲ್ಲಿ ಕೆಟ್ಟು ನಿಂತ ದೋಣಿ

ಎಂಟು ಮೀನುಗಾರರ ರಕ್ಷಣೆ

Published:
Updated:

ಉಡುಪಿ: ಸಮುದ್ರದಲ್ಲಿ ಮೀನುಗಾರಿಕೆಗಾಗಿ ಬುಧವಾರ ತೆರಳಿದ್ದ ಸಂದರ್ಭ ಅಂಜುದೀವ ದ್ವೀಪದ ಹತ್ತಿರ ಪಾತಿ ದೋಣಿಯ ಎಂಜಿನ್ ಕೆಟ್ಟು ಹೋಗಿ ಅಪಾಯಕ್ಕೆ ಸಿಲುಕಿದ್ದ ಕಾರವಾರದ ದೇವಬಾಗ ಗ್ರಾಮದ ಎಂಟು ಮಂದಿ ಮೀನುಗಾರರನ್ನು ಉಡುಪಿ ಕರಾವಳಿ ಕಾವಲು ಪಡೆ ಮತ್ತು ಕಾರವಾರ ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ.ಬೆಳಿಗ್ಗೆ 10 ಗಂಟೆಗೆ ಉಡುಪಿ ಕರಾವಳಿ ಕಾವಲು ಪೊಲೀಸ್ ನಿಯಂತ್ರಣ ಕೊಠಡಿಗೆ ಮತ್ತು ಕಾರವಾರ ಕರಾವಳಿ ಕಾವಲು ಪೊಲೀಸ್ ಠಾಣೆಯ ಸಹಾಯವಾಣಿ 1093ಕ್ಕೆ ಮೀನುಗಾರರು ಕರೆ ಮಾಡಿ ರಕ್ಷಿಸುವಂತೆ ಕೋರಿದ್ದಾರೆ. ಸಮುದ್ರ ಗಸ್ತು ಕರ್ತವ್ಯದಲ್ಲಿದ್ದ ಸಿಎಸ್‌ಪಿ ಠಾಣೆಯ ಸಿಬ್ಬಂದಿ ಮುಖ್ಯ ಕಾನ್‌ಸ್ಟೆಬಲ್ ಸಂತೋಷ್ ಬಿ.ನಾಯಕ್, ಶ್ರೀಧರ ಎ.ಹರಿಕಂತ್ರ, ಕಾನ್‌ಸ್ಟೆಬಲ್ ಕಿಶೋರ್ ಎಸ್.ನಾಯಕ್, ರಾಘವೇಂದ್ರ ಬಿ. ಗೌಡ ಹಾಗೂ ತಾಂತ್ರಿಕ ಸಿಬ್ಬಂದಿ ಮನೋಜ ಕೊಟಾರಕರ (ಸಹಾಯಕ ಬೋಟ್ ಕ್ಯಾಪ್ಟನ್) ರಾಜೇಶ ಕೊಟಾರಕರ (ಖಲಾಶಿ), ಗಿರಿಧರ ಹರಿಕಂತ್ರ (ಖಲಾಶಿ) ಅವರು ಇಲಾಖೆಯ ದೋಣಿಯಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ಮೀನುಗಾರರನ್ನು ರಕ್ಷಿಸಿ ಕರೆ ತಂದಿದ್ದಾರೆ. ಅಲ್ಲದೆ ದೋಣಿಯನ್ನೂ ದಡ ಸೇರಿಸಿದ್ದಾರೆ.ಪ್ರಚೋತ ಕುಮಟೇಕರ, ಸುದೇಶ ಸದಾನಂದ ಜುವೇಕರ, ಸೂರಜ, ಶುಭಂ ಚಂದ್ರಕಾಂತ ಕಿರ್ಲೋಸ್ಕರ, ಪ್ರಶಾಂತ ಮಹಾದೇವ ಜುವೇಕರ, ನಿತ್ಯಾನಂದ ಮೋಹನ ಚಂಡೇಕರ, ಅರವಿಂದ ಪಂಡರಿನಾಥ ಟಕ್ಕರ ರಕ್ಷಿಸಲ್ಪಟ್ಟವರು ಎಂದು ಉಡುಪಿ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮುಳುಗಿದ ದೋಣಿ  ಮೀನುಗಾರರು ಪಾರು

ಕಾರವಾರ: ತಳಭಾಗದಲ್ಲಿ ಹಲಗೆ ಬಿರುಕು ಬಿಟ್ಟಿದ್ದರಿಂದ ಆಳ ಸಮುದ್ರ ಮೀನುಗಾರಿಕೆ ದೋಣಿಯೊಂದು ಮುಳುಗಿ ಅಂದಾಜು 45 ಲಕ್ಷ ರೂಪಾಯಿ ಹಾನಿ ಆಗಿರುವ ಘಟನೆ ಇಲ್ಲಿಗೆ ಸಮೀಪದ ಅಂಜುದೀವ್ ದ್ವೀಪದ ಬಳಿ ಗುರುವಾರ ನಡೆದಿದೆ.ದೋಣಿಯಲ್ಲಿ ದುಡಿಯುತ್ತಿದ್ದ ಗೋವಿಂದ ಮೊಗೇರ, ರಾಮಾ ಹರಿಕಂತ್ರ, ನಾಗರಾಜ ಮೊಗೇರ, ದುರ್ಗಪ್ಪ ಮೊಗೇರ, ವಾಸು ಮೊಗೇರ, ನಾಗೇಶ ಹರಿಕಂತ್ರ ಮತ್ತು ನಾಗೇಶ ಬೆಳಕೆ ನೆರವಿಗೆ ಬಂದ ಇನ್ನೊಂದು ದೋಣಿ ಹತ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಲ್ಪೆಯ ಲಾಲ್ ಸಾಹೇಬ್ ಎಂಬುವರಿಗೆ ಸೇರಿದ `ಹ್ವಾಕ್-1' ಹೆಸರಿನ ದೋಣಿ ಎರಡು ದಿನಗಳ ಹಿಂದಷ್ಟೇ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿತ್ತು. ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿಕ್ರಿಯಿಸಿ (+)