`ಎಂಡೊ ನಿಷೇಧ, ಕಂಪೆನಿಯಿಂದಲೇ ಪರಿಹಾರ'

7
ಜಿಲ್ಲಾಧಿಕಾರಿ ಕಚೇರಿ ಬಳಿ ಉಪವಾಸ ಸತ್ಯಾಗ್ರಹ

`ಎಂಡೊ ನಿಷೇಧ, ಕಂಪೆನಿಯಿಂದಲೇ ಪರಿಹಾರ'

Published:
Updated:

ಮಂಗಳೂರು: ಎಂಡೋಸಲ್ಫಾನ್‌ನಿಂದ ಶಾಶ್ವತವಾಗಿ ಅಂಗವಿಕಲರಾದವರ ಬಗ್ಗೆ ಇದೀಗ ಸಮೀಕ್ಷೆ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಎಂಡೊ ಕೀಟನಾಶಕವನ್ನು ಸಂಪೂರ್ಣವಾಗಿ ನಿಷೇಧಿಸುವುದು ಹಾಗೂ ಕಂಪೆನಿಯಿಂದಲೇ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಚಿಂತಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.ಎಂಡೊ ಪೀಡಿತರಿಗೆ ಸೂಕ್ತ ಪುನರ್ವಸತಿ, ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಬಳಿ ನಡೆದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬಂದ ಅವರು ಈ ಭರವಸೆ ನೀಡಿದರು.ಎಂಡೊ ಅನಾಹುತದ ಬಗ್ಗೆ ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಜತೆಗೆ ಚರ್ಚಿಸಲಾಗಿದೆ. ಈ ಅನಾಹುತದಲ್ಲಿ ಕೇಂದ್ರದಂತೆ ರಾಜ್ಯಕ್ಕೂ ಸಮಾನ ಹೊಣೆಗಾರಿಕೆ ಇದೆ. ಕೇಂದ್ರ ಸಚಿವರು ಮುಂದಿನ ಬಾರಿ ಮಂಗಳೂರಿಗೆ ಬಂದಾಗ ಅವರನ್ನು ಎಂಡೊ ಸಂತ್ರಸ್ತರ ಬಳಿಗೂ ಕರೆದೊಯ್ಯಲಾಗುವುದು ಎಂದು ಹೇಳಿದರು.ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಉಪವಾಸ ಸತ್ಯಾಗ್ರಹ ಆರಂಭವಾಯಿತು. ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವಿಶ್ವನಾಥ್, ಬದ್ರಿಯಾ ಕಾಲೇಜಿನ ಪ್ರಾಚಾರ್ಯ ಡಾ.ಇಸ್ಮಾಯಿಲ್, ಮಹಾನಗರ ಪಾಲಿಕೆಯ ಮಾಜಿ ಆಯುಕ್ತ ಜೆ.ಆರ್.ಲೋಬೊ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಇತರರು ಮಾತನಾಡಿ, ಎಂಡೊ ಪೀಡಿತರಿಗೆ ಕೇರಳ ಮಾದರಿಯ ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಟಿ.ಕೆ.ಸುಧೀರ್, ಕೃಪಾ ಆಳ್ವ ಇತರರು ಇದ್ದರು. ಬಳಿಕ 11 ಬೇಡಿಕೆಗಳು ಇರುವ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಅವರಿಗೆ ಕಳುಹಿಸಿಕೊಡಲಾಯಿತು. ಚಳಿಗಾಲದ ಅಧಿವೇಶನದಲ್ಲೇ ವಿಸ್ತೃತ ಪರಿಹಾರ ಪ್ಯಾಕೇಜ್ ಪ್ರಕಟಿಸಬೇಕು ಮತ್ತು ಆಲಂಗಾರಿನಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.ಕಾಂಗ್ರೆಸ್‌ಗೆ ಕೆಜಿಪಿ ಭಯವಿಲ್ಲ: ಕಾಂಗ್ರೆಸ್ ತನ್ನದೇ ರೀತಿಯ್ಲ್ಲಲಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಕೆಜಿಪಿ ಪಕ್ಷದ ಭಯ ಪಕ್ಷಕ್ಕಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಹೇಳಿದರು. ಶಾಸಕರ ಉಚ್ಚಾಟನೆ ಅಥವಾ ಸರ್ಕಾರದ ಪತನದ ಬಗ್ಗೆ ಕಾಂಗ್ರೆಸ್ತ ವಲೆಕೆಡಿಸಿಕೊಳ್ಳುವುದಿಲ್ಲ, ಕಾಂಗ್ರೆಸ್‌ಗೆ ತನ್ನ ಶಕ್ತಿಯ ಮೇಲೆ ನಂಬಿಕೆ ಇದೆ ಎಂದು ಪತ್ರಕರ್ತರಿಗೆ ತಿಳಿಸಿದರು.

ಸರ್ಕಾರಕ್ಕೆ ಕಿವಿ ಕೇಳಿಸುವುದಿಲ್ಲ: ಯಡಿಯೂರಪ್ಪ

ರಾಜ್ಯ ಸರ್ಕಾರಕ್ಕೆ ಕಿವಿ ಕೇಳಿಸುವುದಿಲ್ಲ. ಹಾಗಾಗಿ ಮುಖ್ಯ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ಜಿಲ್ಲಾಡಳಿತದಿಂದ ವರದಿ ತರಿಸಿಕೊಂಡು ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಲು ಹೇಳುತ್ತೇನೆ'ಎಂಡೊ ಸಂತ್ರಸ್ತರ ಅಳಲಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು ಹೀಗೆ.ಎಂಡೊ ಪೀಡಿತರಿಗೆ ಸೂಕ್ತ ಪುನರ್ವಸತಿ, ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಬಳಿ ನಡೆದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬಂದ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.`ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ 200 ಮಂದಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ತಲಾ 50 ಸಾವಿರ ರೂಪಾಯಿಯಂತೆ ಪರಿಹಾರ ಬಿಡುಗಡೆ ಮಾಡಿತ್ತು. ಸಚಿವೆ ಶೋಭಾ ಕರಂದ್ಲಾಜೆ ಅವರೂ ಸಂತ್ರಸ್ತರ ಪರ ಸಾಕಷ್ಟು ಹೋರಾಟ ಮಾಡಿದ್ದಾರೆ. ಸರ್ಕಾರ ಬರುತ್ತದೆ, ಹೋಗುತ್ತದೆ. ಆದರೆ ಅಧಿಕಾರಿಗಳು ಇಂತಹ ವಿಷಯದಲ್ಲಿ ಆಸ್ಥೆ ವಹಿಸಿ ಕೆಲಸ ಮಾಡಬೇಕು' ಎಂದರು.`45 ವರ್ಷ ದಾಟಿಯೂ ಮದುವೆ ಆಗದ ಮಹಿಳೆಯರಿಗೆ ರೂ 1ಸಾವಿರ ಮಾಸಾಶನ ನೀಡುವ ಯೋಜನೆಯನ್ನು ಸರ್ಕಾರ ರೂಪಿಸಿತ್ತು. ಅಧಿಕಾರಿಗಳ ಅಸಡ್ಡೆಯಿಂದಾಗಿ ಈ ಯೋಜನೆ ಕಾರ್ಯರೂಪಕ್ಕೆ ಬರಲೇ ಇಲ್ಲ' ಎಂದು ಅವರು ದೂರಿದರು.`ಎಂಡೊ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ. ಆದರೆ, ಮುಖ್ಯಮಂತ್ರಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ' ಎಂದು ಅವರು ವ್ಯಂಗ್ಯವಾಡಿದರು.ರೀಟಾ ನೊರೋನ್ಹ ಅವರು ನೀಡಿದ ಎಳನೀರು ಸೇವಿಸುವ ಮೂಲಕ ಪಿ.ವಿ ಮೋಹನ್ ಉಪವಾಸ ಅಂತ್ಯಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry