ಎಂಡೊ ಪೀಡಿತ ಸಂತ್ರಸ್ತರ ಪುನರ್ವಸತಿ, ಪರಿಹಾರಕ್ಕೆ ವಿಶೇಷ ಯೋಜನೆ

7

ಎಂಡೊ ಪೀಡಿತ ಸಂತ್ರಸ್ತರ ಪುನರ್ವಸತಿ, ಪರಿಹಾರಕ್ಕೆ ವಿಶೇಷ ಯೋಜನೆ

Published:
Updated:

ಕೊಕ್ಕಡ (ಉಪ್ಪಿನಂಗಡಿ): ದಕ್ಷಿಣ ಕನ್ನಡ ಜಿಲ್ಲೆಯ 92 ಗ್ರಾಮಗಳ ವ್ಯಾಪ್ತಿಯಲ್ಲಿರುವ ಎಂಡೊ ಪೀಡಿತ ಸಂತ್ರಸ್ತರ ಬಗ್ಗೆ ಆರೋಗ್ಯ ಮತ್ತು ಕಂದಾಯ ಇಲಾಖೆ ವತಿಯಿಂದ ಜಂಟಿಯಾಗಿ ಸರ್ವೆ ಕಾರ್ಯ ನಡೆಯಲಿದೆ. ಸರ್ಕಾರ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಾನವೀಯತೆಯ ನೆಲೆಯಲ್ಲಿ ಪರಿಹಾರ ನೀಡಲು ಯೋಜನೆ ಹಾಕಿಕೊಳ್ಳಲಿದೆ ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.ಕೊಕ್ಕಡದಲ್ಲಿರುವ ತಾತ್ಕಾಲಿಕ ಎಂಡೊ ಪಾಲನಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಸಚಿವರು ಸಂತ್ರಸ್ತರಿಗೆ ಸಾಂತ್ವನದ ಮಾತು ಹೇಳಿ ಸುದ್ದಿಗಾರರ ಜತೆ ಮಾತನಾಡಿದರು. ಪತ್ರಿಕಾ, ದೃಶ್ಯ ಮಾಧ್ಯಮದ ಮೂಲಕ ಸಂತ್ರಸ್ತರ ಬವಣೆ ತಿಳಿದಿದೆ. ಆದರೆ ಇಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ. 

ಇಲ್ಲಿನ ಎಂಡೊ ಸಂತ್ರಸ್ತರ ಬಗ್ಗೆ ವೈದ್ಯರು ಹೇಳುವ ಪ್ರಕಾರ ಕೆಲವರನ್ನಷ್ಟೇ ಸುಧಾರಣೆಗೆ ತರಲು ಸಾಧ್ಯವಾಗುತ್ತದೆ. ಅದರ ಜತೆಗೆ ಸಂತ್ರಸ್ತ ಕುಟುಂಬಗಳ ಜೀವನ ನಿರ್ವಹಣೆಗೆ ಬೇಕಾದ ಶಾಶ್ವತ ಪುನರ್ವಸತಿಗೆ ವ್ಯವಸ್ಥೆ ಕಲ್ಪಿಸಲು ಯೋಜನೆ ಹಾಕಿಕೊಳ್ಳಲಾಗುವುದು ಎಂದು ಹೇಳಿದರು.ಸಂತ್ರಸ್ತರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಕೊಕ್ಕಡದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ, ಇಲ್ಲಿನ ಕೊರತೆಗಳನ್ನು ನೀಗಿಸುವುದಕ್ಕೆ ಆದ್ಯತೆ ನೀಡಲಾಗುವುದು. ಜತೆಗೆ ಅಗತ್ಯ ಕಂಡುಬಂದವರಿಗೆ ಆಯುರ್ವೇದ ಔಷಧ, ಪಂಚಕರ್ಮ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.ಶಾಶ್ವತ ಪುನರ್ವಸತಿ ಕೇಂದ್ರ

ಪುತ್ತೂರು ತಾಲ್ಲೂಕಿನ ಆಲಂಕಾರಿನಲ್ಲಿ ಅಲ್ಲಿನ ಗ್ರಾಮ ಪಂಚಾಯಿತಿ ಐದು ಎಕರೆ ಜಮೀನು ನೀಡಲು ಮುಂದಾಗಿದೆ. ಅದರಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುವುದು. ಸಂತ್ರಸ್ತರಿಗೆ ಮತ್ತು ಅವರ ಕುಟುಂಬದವರಿಗೆ ಸ್ವಉದ್ಯೋಗ ಕಲ್ಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಲಿಂಬಾವಳಿ ತಿಳಿಸಿದರು.ಸಚಿವರ ಜತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀರಂಗಪ್ಪ, ಕೊಕ್ಕಡ ವೈದ್ಯಾಧಿಕಾರಿ ಡಾ.ಪ್ರಕಾಶ್, ಬೆಳ್ತಂಗಡಿ ತಹಶೀಲ್ದಾರ್ ಕುಸುಮಾ ಕುಮಾರಿ, ಕಂದಾಯ ನಿರೀಕ್ಷಕ ಶೇಷಾದ್ರಿ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಕುಶಾಲಪ್ಪ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಹಾಗೂ ಎಂಡೊ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀಧರ ಗೌಡ, ಪೀರ್ ಮಹಮದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry