ಎಂಡೊ ಸಂತ್ರಸ್ತರ ಸಮೀಕ್ಷೆ 31ರೊಳಗೆ ಪೂರ್ಣ

7

ಎಂಡೊ ಸಂತ್ರಸ್ತರ ಸಮೀಕ್ಷೆ 31ರೊಳಗೆ ಪೂರ್ಣ

Published:
Updated:

 ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಇದೇ 31ರೊಳಗೆ ಸಮೀಕ್ಷಾ ಕಾರ್ಯ ಮುಗಿಸಿ ವರದಿ ನೀಡಲು ಸಿದ್ಧತೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಇದೇ 31ಕ್ಕೆ ಮುಂಚೆಯೇ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯ 92 ಗ್ರಾಮಗಳಲ್ಲಿ ಎಂಡೋಸಲ್ಫಾನ್ ಪೀಡಿತರಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ 78 ಗ್ರಾಮಗಳ ಪೀಡಿತರು ಗಂಭೀರ ಸಮಸ್ಯೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ 78 ತಂಡಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲ ಗ್ರಾಮಸ್ಥರನ್ನು ಪರೀಕ್ಷೆಗೆ ಒಳಪಡಿಸಿ ವರದಿ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.ಈ ತಂಡಗಳಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಎಎನ್‌ಎಂಗಳು, ಗ್ರಾಮಲೆಕ್ಕಿಗರು, ಗ್ರಾಮ ಆರೋಗ್ಯ ಅಧಿಕಾರಿಗಳು ಇರಲಿದ್ದು, ಪರೀಕ್ಷಾ ಕಾರ್ಯ ಮಾಡುವರು. ಇವರನ್ನು ಆಯಾ ವಿಭಾಗ ತಹಶೀಲ್ದಾರರು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳುವರು ಎಂದರು.ಈ 78 ಗ್ರಾಮಗಳು ಸುಳ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಇದ್ದು, ಒಟ್ಟು 23 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 78 ಉಪ ಕೇಂದ್ರಗಳಿವೆ. ಇಲ್ಲಿನ ಒಟ್ಟು 400 ಸಿಬ್ಬಂದಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುವರು. ಈ ಸಿಬ್ಬಂದಿಗೆ ವಾರಕ್ಕೆ 350 ರೂಪಾಯಿಗಳ ಗೌರವಧನ ನೀಡಲಾಗುವುದು ಎಂದು ಹೇಳಿದರು.ಸಮೀಕ್ಷೆಗಾಗಿ 15 ಕಾಲಂಗಳ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದ್ದು, ಎಂಡೋಸಲ್ಫಾನ್‌ನಿಂದ ಉಂಟಾಗಿರುವ ತೊಂದರೆಗಳನ್ನು ಪಟ್ಟಿ ಮಾಡಲಾಗುವುದು. ದೃಷ್ಟಿಹೀನತೆ, ಪಾರ್ಶ್ವವಾಯು, ಕಿವುಡುತನ, ಕ್ಯಾನ್ಸರ್, ಬಂಜೆತನ ಮುಂತಾದ ಸಮಸ್ಯೆಗಳನ್ನು ಪಟ್ಟಿ ಮಾಡಲಾಗುವುದು. ಇದರ ಆಧಾರದ ಮೇಲೆ ತಜ್ಞ ವೈದ್ಯರ ಸಮಿತಿಯೊಂದನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರುತ್ತೇವೆ.ಈ ತಂಡ ನವೆಂಬರ್ ಎರಡನೇ ವಾರಕ್ಕೆ ಗ್ರಾಮಗಳಲ್ಲಿ ಶಿಬಿರ ಹೂಡಿ, ವೈದ್ಯಕೀಯ ತಪಾಸಣೆ ನಡೆಸುವುದು ಎಂದರು.ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಒ.ಆರ್. ಶ್ರೀರಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ, ಎಂಡೋಸಲ್ಫಾನ್ ಸಂತ್ರಸ್ತರ ಪ್ರತಿನಿಧಿ ಶ್ರೀಧರ ಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry