ಎಂಡೋಸಲ್ಫಾನ್ ನಾಶ ಪ್ರಕ್ರಿಯೆಗೆ ಚಾಲನೆ

7

ಎಂಡೋಸಲ್ಫಾನ್ ನಾಶ ಪ್ರಕ್ರಿಯೆಗೆ ಚಾಲನೆ

Published:
Updated:
ಎಂಡೋಸಲ್ಫಾನ್ ನಾಶ ಪ್ರಕ್ರಿಯೆಗೆ ಚಾಲನೆ

ಕಾಸರಗೋಡು: ತೋಟಗಾರಿಕಾ ನಿಗಮದ ಗೋದಾಮಿನಲ್ಲಿ ಅವೈಜ್ಞಾನಿಕವಾಗಿ ಸಂಗ್ರಹಿಸಿಡಲಾಗಿದ್ದ ಎಂಡೋಸಲ್ಫಾನ್ ಕೀಟನಾಶಕವನ್ನು ದುರ್ಬಲಗೊಳಿಸುವ ಪ್ರಕ್ರಿಯೆ ಭಾನುವಾರ ಪೆರಿಯದಲ್ಲಿ ಆರಂಭಗೊಂಡಿತು.ಎರಡು ಹಂತಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಪ್ರಾಥಮಿಕ ಹಂತದಲ್ಲಿ ಕೀಟನಾಶಕವನ್ನು ಅಂಗೀಕೃತ ಬ್ಯಾರೆಲ್‌ಗೆ ವರ್ಗಾಯಿಸಲಾಯಿತು. ಇದು ಪೂರ್ಣಗೊಂಡ ಬಳಿಕ ನಾಶಪಡಿಸುವ ಪ್ರಕ್ರಿಯೆ ನಡೆಯಲಿದೆ. ಇದರ ಬಳಿಕ ಪರಿಸರಕ್ಕೆ ಹಾನಿಯಾಗದಂತೆ ರಾಸಾಯನಿಕವನ್ನು ಸಂಸ್ಕರಿಸಲಾಗುವುದು. ಈ ಪ್ರಕ್ರಿಯೆ ಪೂರ್ಣವಾಗುವ ವರೆಗೆ 1,638 ಲೀಟರ್ ಎಂಡೋಸಲ್ಫಾನನ್ನು ಎಚ್.ಡಿ.ಪಿ.ಇ. (ಹೈ ಡೆನ್ಸಿಟಿ ಪೋಲಿ ಎಥಿಲಿನ್) ಬ್ಯಾರೆಲ್‌ಗಳಲ್ಲಿ ತುಂಬಿಸಿಡಲಾಗುತ್ತದೆ.ಕೀಟನಾಶಕವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಭಾರೀ ಸುರಕ್ಷತೆಯಿಂದ ನಿರ್ವಹಿಸಲಾಯಿತು. ಸಾರ್ವಜನಿಕರಿಗೆ ಸಿ.ಸಿ. ಕ್ಯಾಮೆರಾ ಮೂಲಕ ಇದನ್ನು ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗಿತ್ತು.ಎಚ್.ಡಿ.ಪಿ.ಇ. ಬ್ಯಾರೆಲನ್ನು ಸ್ಟಾಕ್‌ಹೋಮ್ ಸಮಾವೇಶದಲ್ಲಿ ಆಹಾರ ಮತ್ತು ಕೃಷಿ ಸಂಘಟನೆ (ಫುಡ್ ಅ್ಯಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್) ಶಿಫಾರಸು ಮಾಡಿದೆ. ಐಕ್ಯರಾಷ್ಟ್ರ ಅಂಗೀಕರಿಸಿದೆ. ಈ ಬ್ಯಾರೆಲ್ ಬಗ್ಗೆ ಡಾ. ಮುಹಮ್ಮದ್ ಅಶೀಲ್ (ಸ್ಟಾಕ್‌ಹೋಮ್ ಸಮಾವೇಶದಲ್ಲಿ ಭಾಗವಹಿಸಿದ ಕಾಸರಗೋಡಿನ ಪ್ರತಿನಿಧಿ), ಬಯೋ ಮೆಡಿಕಲ್ ಎಂಜಿನಿಯರ್ ವಿನೋದ್, ಎಚ್‌ಐಎಲ್ ಪ್ರೊಡಕ್ಷನ್ ಮ್ಯಾನೇಜರ್ ಸಂತೋಷ್ ಕುಮಾರ್ ಸಾಕಷ್ಟು ಅಧ್ಯಯನ ಮಾಡಿದ್ದಾರೆ.ನಿಲ್ಲದ ಹೋರಾಟ

ಎಂಡೋಸಲ್ಫಾನ್ ಬಗ್ಗೆ ಪ್ರಸಕ್ತ ಸರ್ಕಾರ ಹೊರಡಿಸಿದ ಆದೇಶ ಅಪೂರ್ಣವಾಗಿದೆ. ಅಲ್ಲದೆ ಆದೇಶ ಅಸ್ಪಷ್ಟವಾಗಿದೆ. ಸಾವನ್ನಪ್ಪಿದ ಕುಟುಂಬದ ಪರಿಹಾರ, ಚಿಕಿತ್ಸಾ ಸೌಲಭ್ಯಗಳ ಕುರಿತು ಈ ಆದೇಶದಲ್ಲಿ ಇಲ್ಲ ಎಂದು ಸ್ಥಳೀಯ ಎಂಡೊ  ಪೀಡಿತ ಹೋರಾಟಗಾರರು ಆರೋಪಿಸುತ್ತಾರೆ.ಎಂಡೋಸಲ್ಫಾನ್ ಪೀಡಿತರ ಹೋರಾಟವನ್ನು ಬಲಪಡಿಸಲು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ರಂಗದ ಮುಖಂಡರು ರಾಜ್ಯ ಮಟ್ಟದ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.ಮಾನವ ಹಕ್ಕು ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದ ನಿರ್ದೇಶನಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿಲ್ಲ ಎಂದು ಖಂಡಿಸಿ ನಗರದಲ್ಲಿ ಎಂಡೋಸಲ್ಫಾನ್ ಪೀಡಿತರು ಭಾನುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

 

11 ವರ್ಷ ಕಾಲ 11 ಬ್ಯಾರೆಲ್‌ನಲ್ಲಿ ಎಂಡೊ!

ಕಾಸರಗೋಡು: ನ್ಯಾಯಾಲಯ ಎಂಡೋಸಲ್ಫಾನ್ ನಿಷೇಧಿಸಿ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಎಂಡೋಸಲ್ಫಾನ್‌ಅನ್ನು 11 ವರ್ಷಗಳ ಕಾಲ 11 ಬ್ಯಾರೆಲ್‌ನಲ್ಲಿ ಸಂಗ್ರಹಿಡಲಾಗಿತ್ತು.2001ರಿಂದ ಈ ಮಾರಕ ಕೀಟನಾಶಕವನ್ನು ಸಂಗ್ರಹಿಡಲಾಗಿದ್ದು, ಭಾನುವಾರ ನಡೆದ ನಾಶಪಡಿಸುವ ಪ್ರಕ್ರಿಯೆಯಿಂದ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.ಕಾಸರಗೋಡು ಜಿಲ್ಲೆಯ ತೋಟಗಾರಿಕಾ ನಿಗಮದ ಪೆರಿಯ, ಮುಳಿಯಾರು, ಪೆರ್ಲ ಮತ್ತು ಆದೂರಿನಿಂದ ಸಂಗ್ರಹಿಸಿದ ಎಂಡೋಸಲ್ಫಾನನ್ನು ಪೆರಿಯ ಪ್ಲಾಂಟೇಶನ್‌ನ ಬಂಗಲೆಯ ಗೋದಾಮಿನಲ್ಲಿ ಇಡಲಾಗಿತ್ತು. ಚೀಮೇನಿಯಿಂದ ವಿಭಾಗೀಯ ಕಚೇರಿಗೂ, ರಾಜಪುರದಿಂದ ಪಾಣತ್ತೂರಿನ ಗೋದಾಮಿನಲ್ಲಿಡಲಾಗಿದೆ.ಅಧಿಕೃತ ಅಂಕಿ ಅಂಶಗಳ ಪ್ರಕಾರ ಪೆರಿಯದಲ್ಲಿ 6 ಬ್ಯಾರೆಲ್‌ಗಳಲ್ಲಿ 914.55ಲೀ., ರಾಜಪುರದಲ್ಲಿ 4 ಬ್ಯಾರೆಲ್‌ಗಳಲ್ಲಿ 650ಲೀ, ಚೀಮೇನಿಯಲ್ಲಿ ಒಂದು ಬ್ಯಾರೆಲ್‌ನಲ್ಲಿ 73.75ಲೀ ಸಂಗ್ರಹಿಸಿಡಲಾಗಿದೆ. 11 ಬ್ಯಾರೆಲ್‌ಗಳ ಪೈಕಿ 9 ಬ್ಯಾರೆಲ್‌ಗಳನ್ನು ಕಬ್ಬಿಣ ಮತ್ತು 2 ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿತ್ತು.ಚೀಮೇನಿಯಲ್ಲಿ ಸಂಗ್ರಹಿಸಲಾಗಿದ್ದ ಕಬ್ಬಿಣ ಬ್ಯಾರೆಲ್‌ನಲ್ಲಿ ಸೋರಿಕೆಯಾಗುತ್ತಿರುವ ವಿಷಯ 2011ರ ನವೆಂಬರ್‌ನಲ್ಲಿ ಬಹಿರಂಗಗೊಂಡಿತ್ತು. ಇದರ ಪರಿಣಾಮ ಜಿಲ್ಲೆಯಲ್ಲಿ ಹೋರಾಟ ಸ್ಫೋಟಗೊಂಡಿತ್ತು. 1,500ಲೀ. ಎಂಡೋಸಲ್ಫಾನ್ ಸ್ಥಳಾಂತರಿಸಿ ನಾಶಪಡಿಸಬೇಕು ಎಂದು 2012 ಫೆಬ್ರವರಿಯಲ್ಲಿ ಎಂಡೋ ಪೀಡಿತ ಹೋರಾಟಗಾರರು ಪ್ರಧಾನ ಕೃಷಿ ಕಚೇರಿಗೆ ಮುತ್ತಿಗೆ ಹಾಕಿದ್ದರು.ಎಂಡೋ ನಾಶಪಡಿಸುವಂತೆ ಮಾ.31ರಂದು ಜಿಲ್ಲಾಡಳಿತ ತೋಟಗಾರಿಕಾ ನಿಗಮಕ್ಕೆ ನೋಟೀಸು ನೀಡಿತ್ತು. ನಾಗಪುರದ ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್‌ನ(ಡಿ.ಆರ್.ಡಿ.ಇ.)ಯ ಹಿರಿಯ ವಿಜ್ಞಾನಿ ಡಾ.ಎ.ಕೆ.ಗುಪ್ತ ಕಳೆದ ಎಪ್ರಿಲ್‌ನಲ್ಲಿ ಕಾಸರಗೋಡಿಗೆ ಬಂದಿದ್ದರು. ಎಂಡೋ ನಾಶಪಡಿಸಲು ಕಳಮಶ್ಶೇರಿಯ ಹಿಂದುಸ್ಥಾನ್ ಇನ್‌ಸೆಕ್ಟಿಸೈಡ್ಸ್ ಲಿಮಿಟೆಡ್(ಎಚ್.ಐ.ಎಲ್.)ಗೆ ಕೇಂದ್ರದ ವಿಜ್ಞಾನಿಗಳು ಸಹಾಯ ನೀಡುವುದಾಗಿ ವಾಗ್ದಾನ ನೀಡಿದ್ದರು.ಕರಗದ ಬ್ಯಾರೆಲ್‌ಗಳನ್ನು ನಿರ್ಮಿಸಿ ಎಂಡೋ ಸಂಗ್ರಹಿಸುವ ಬಗ್ಗೆ ಕಳೆದ ಏಪ್ರಿಲ್ 16ರಂದು ಸಭೆ ಸೇರಿ ಚರ್ಚಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ತೀರ್ಮಾನ ಕೈಗೊಳ್ಳಲು ಡಾ.ಮುಹಮ್ಮದ್ ಅಶೀಲ್ ಮತ್ತು ಎಚ್. ಐ.ಎಲ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿತ್ತು.ಮೇ 22 ಮತ್ತು 24ರಂದು ಮೂರು ಪಂಚಾಯಿತಿಗಳ ಜನರಿಗೆ ಜಾಗೃತಿ ಮೂಡಿಸಲಾಯಿತು. ಜೂ.2ರಿಂದ 8ರ ವರೆಗೆ ಬ್ಯಾರೆಲ್‌ಗಳಿಗೆ ಎಂಡೊ ವರ್ಗಾಯಿಸಲು ತೀಮಾನಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ 17ರಿಂದ 19ರ ವರೆಗೆ ಮುಂದೂಡಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry