ಎಂಡೋಸಲ್ಫಾನ್ ನಿಷೇಧ

7

ಎಂಡೋಸಲ್ಫಾನ್ ನಿಷೇಧ

Published:
Updated:

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ಗೇರು ಬೆಳೆಯ ಕೀಟ ನಾಶಕ್ಕಾಗಿ ಪ್ರತಿ ವರ್ಷ ಬಳಸುವ ಎಂಡೋಸಲ್ಫಾನ್‌ನಿಂದ ಮಕ್ಕಳು, ವಯಸ್ಕರು ಮತ್ತು ವೃದ್ಧರಿಗೆ ಉಂಟಾಗಿರುವ ಅಂಗವೈಕಲ್ಯ ಮತ್ತು ಇತರೆ ದುಷ್ಪರಿಣಾಮದ ಬಗೆಗೆ ಕೊನೆಗೂ ರಾಜ್ಯ ಸರ್ಕಾರ ಕಣ್ಣುತೆರೆದಿದೆ. ರಾಜ್ಯದಲ್ಲಿ ಎಂಡೋಸಲ್ಫಾನ್ ಕೀಟನಾಶಕ ಬಳಕೆಯನ್ನು ಸದ್ಯಕ್ಕೆ ಎರಡು ತಿಂಗಳವರೆಗೆ ನಿಷೇಧ ಮಾಡುವ ಮೂಲಕ, ಅದನ್ನು ಕಾಯಂ ಆಗಿ ನಿಷೇಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಚಿವ ಸಂಪುಟ ಕೈಗೊಂಡ ನಿರ್ಧಾರ ಸ್ವಾಗತಾರ್ಹ. ಕೆಲವು ವರ್ಷಗಳ ಹಿಂದೆ ಗೇರು ಬೆಳೆಗಳ ರಕ್ಷಣೆಗಾಗಿ ಎಂಡೋಸಲ್ಫಾನ್ ಕೀಟನಾಶಕವನ್ನು ಸಿಂಪರಣೆ ಮಾಡಿದ ಪರಿಣಾಮ ಕೊಕ್ಕಡ, ಪಟ್ರಮೆ, ಮಲ್ಲಿಗೆ ಮತ್ತು ನಿಡ್ಲೆ ಗ್ರಾಮಗಳ ಮಕ್ಕಳಲ್ಲಿ ಅಂಗವೈಕಲ್ಯ, ಬುದ್ಧಿಮಾಂದ್ಯತೆ ಮತ್ತು ಇತರೆ ವ್ಯಾಧಿಗಳು ಕಾಣಿಸಿಕೊಂಡು ಅವರ ಭವಿಷ್ಯ ಮಂಕಾಗಿದೆ. ಎಂಡೋಸಲ್ಫಾನ್ ಕೀಟ ನಾಶಕ ಒಮ್ಮೆ ನೆಲ, ಜಲ, ಗಾಳಿ ಮತ್ತು ಆಹಾರದಲ್ಲಿ ಬೆರಕೆ ಆಯಿತೆಂದರೆ ಭವಿಷ್ಯದ ಪೀಳಿಗೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.

 

ಹುಟ್ಟುವ ಮಕ್ಕಳಿಗೆ ಅಂಗವೈಕಲ್ಯ ಮಾತ್ರವಲ್ಲದೆ, ವಯಸ್ಕರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೂ ಪರಿಣಾಮ ಬೀರುವುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ. ಇಂತಹ ಮನುಕುಲದ ಜೀವಹಾನಿಕಾರಕ ಕೀಟನಾಶಕದ ನಿಷೇಧಕ್ಕೆ ನಡೆಸುತ್ತಿರುವ ಜನರ ಹೋರಾಟಕ್ಕೆ ಸದ್ಯಕ್ಕೆ ಜಯಸಿಕ್ಕಂತಾಗಿದೆ.ಎಂಡೋಸಲ್ಫಾನ್ ಬಳಕೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೆ ನೆರೆಯ ಕಾಸರಗೋಡು ಜಿಲ್ಲೆಯ ಹನ್ನೊಂದು ಗ್ರಾಮಗಳಲ್ಲಿ ಹೆಚ್ಚು ಅಪಾಯ ತಂದೊಡ್ಡಿದೆ. ಗೇರು ಅಭಿವೃದ್ಧಿ ನಿಗಮವು ಹನ್ನೊಂದು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಗೇರು ತೋಟಗಳ ಮೇಲೆ ಸಿಂಪರಣೆ ಮಾಡಿದ ಈ ಕೀಟನಾಶಕದ ಪರಿಣಾಮವಾಗಿ ಸಾವು-ನೋವುಗಳ ಜೊತೆಗೆ ಸಾವಿರಾರು ಮಂದಿ ಹಲವಾರು ರೀತಿಯ ಅಂಗವೈಕಲ್ಯತೆಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ 2003ರಿಂದ ಎಂಡೋಸಲ್ಫಾನ್ ಬಳಕೆಯನ್ನು ನಿಷೇಧಿಸುತ್ತಾ ಬಂದಿದೆ.ಎಂಡೋಸಲ್ಫಾನ್ ಕೀಟನಾಶಕವನ್ನು ಕಾಯಂ ಆಗಿ ನಿಷೇಧಿಸುವಂತೆ ಕೇರಳವೂ ತರುತ್ತಿರುವ ಒತ್ತಡಕ್ಕೆ ಕೇಂದ್ರ ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿರುವುದು ಅರ್ಥವಾಗದ ಸಂಗತಿ. ಎಂಡೋಸಲ್ಫಾನ್ ಕೀಟನಾಶಕವನ್ನು ಈಗಾಗಲೇ ಸುಮಾರು 70ಕ್ಕೂ ಹೆಚ್ಚು ರಾಷ್ಟ್ರಗಳು ನಿಷೇಧಿಸಿವೆ.ರಾಷ್ಟ್ರೀಯ ಔದ್ಯೋಗಿಕ ಸ್ವಾಸ್ಥ್ಯ ಸಂಸ್ಥೆಯು ಎಂಡೋಸಲ್ಫಾನ್ ನಿಷೇಧಿಸುವ ಅವಶ್ಯಕತೆ ಕುರಿತಂತೆ ಅಧ್ಯಯನ ವರದಿಯೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಸಲ್ಲಿಸಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ಕೇರಳದ ಸ್ಥಿತಿಯನ್ನು ಅಧ್ಯಯನ ಮಾಡಿ ಎಂಡೋಸಲ್ಫಾನ್ ಅಪಾಯದ ಬಗೆಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಈಗ ಕರ್ನಾಟಕವೂ ಎಂಡೋಸಲ್ಫಾನ್ ಕಾಯಂ ನಿಷೇಧಕ್ಕೆ ಮಾಡಿರುವ ಒತ್ತಾಯವನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಲೇಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry