ಎಂಡೋ ಸಂತ್ರಸ್ತರ ಬೆಂಬಲಕ್ಕೆ ಕೋರ್ಟ್‌

7
ಪರಿಹಾರ ನೀಡುವಲ್ಲಿ ಉದಾಸೀನ: ಸರ್ಕಾರಕ್ಕೆ ತರಾಟೆ

ಎಂಡೋ ಸಂತ್ರಸ್ತರ ಬೆಂಬಲಕ್ಕೆ ಕೋರ್ಟ್‌

Published:
Updated:

ಬೆಂಗಳೂರು: ‘ಎಂಡೋಸಲ್ಫಾನ್‌ ಕೀಟನಾಶಕದಿಂದ ತೊಂದರೆಗೆ ಒಳಗಾದ­ವರಿಗೆ ಪರಿಹಾರ ನೀಡುವ ವಿಚಾರ­ದಲ್ಲಿ ಸರ್ಕಾರ ಗಂಭೀರ­ವಾಗಿಲ್ಲ. ಅದು ತನ್ನನ್ನು ತಾನೇ ವಂಚಿಸಿ­ಕೊಳ್ಳುತ್ತಿದೆ. ಸರ್ಕಾರ ನಮ್ಮ ಮುಂದೆ ರಾಜಕೀಯ ಹೇಳಿಕೆ ನೀಡಬೇಕಾಗಿಲ್ಲ’ ಎಂದು ಹೈಕೋರ್ಟ್‌ ಗುರುವಾರ ಕಟುವಾಗಿ ಹೇಳಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್‌ ಕೀಟನಾಶಕದಿಂದ ಹಾನಿಗೊಳಗಾದ ಕುಟುಂಬಗಳ ಕುರಿತು ನ್ಯಾಯ­ಮೂರ್ತಿ ಕೆ.ಎಲ್‌. ಮಂಜುನಾಥ್‌ ಅವರು ಬರೆದ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಲಾಗಿದೆ.‌ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ‘ಹಾನಿಗೆ ಒಳಗಾದವರಿಗೆ ಪರಿಹಾರ ನೀಡಲು ರೂ. 500 ಕೋಟಿ ಬೇಕೇ? ಈ ಕುರಿತು ನಮಗೆ ಸೂಕ್ತ ಮಾಹಿತಿ ನೀಡಿ. ಅಷ್ಟು ಹಣ ನೀಡುವಂತೆ ನಾವೇ ಸರ್ಕಾರಕ್ಕೆ ಆದೇಶ ನೀಡುತ್ತೇವೆ’ ಎಂದು ಪ್ರಕರಣದ ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ನೆರವಾಗುವ ನ್ಯಾಯವಾದಿ) ಆಗಿರುವ ವಕೀಲೆ ವೈಶಾಲಿ ಹೆಗಡೆ ಅವರಿಗೆ ಹೇಳಿತು.‘ಪರಿಹಾರದ ವಿಚಾರವನ್ನು ಸರ್ಕಾರದ ವಿವೇಚನೆಗೇ ಬಿಟ್ಟರೆ, ಸಂತ್ರಸ್ತರಿಗೆ ಬಿಡಿಗಾಸು ನೀಡಿ ಸುಮ್ಮನಾಗುತ್ತದೆ. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಏನು ಆಗಬೇಕು ಎಂಬುದನ್ನೂ ನಮಗೆ ತಿಳಿಸಿ’ ಎಂದು ಪೀಠ ವೈಶಾಲಿ ಅವರಿಗೆ ಸೂಚಿಸಿತು.ಎಂಡೋಸಲ್ಫಾನ್‌ನಿಂದ ಆಗಿರುವ ಹಾನಿ ಭೋಪಾಲ್ ಅನಿಲ ದುರಂತಕ್ಕಿಂತ ಗಂಭೀರವಾಗಿರುವಂತಿದೆ ಎಂದೂ ಪೀಠ ಮೌಖಿಕವಾಗಿ ಅನಿಸಿಕೆ ವ್ಯಕ್ತಪಡಿಸಿತು.ಎಂಡೋಸಲ್ಫಾನ್ ನಿಷೇಧಿಸಿ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ನೀಡಿದ ನಂತರ ಅದರ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಆದರೆ ಅಲ್ಲಿಯವರೆಗೆ ಉತ್ಪಾದನೆ ಆಗಿದ್ದ ಎಂಡೋ ಕೀಟನಾಶಕ ಮಾರಾಟ ಆಗುತ್ತಿದೆಯೇ ಎಂಬುದು ತನಗೆ ತಿಳಿದಿಲ್ಲ ಎಂದು ಉತ್ಪಾದಕರ ಪರ ವಕೀಲರು ಪೀಠಕ್ಕೆ ತಿಳಿಸಿದರು. ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry