ಮಂಗಳವಾರ, ಜೂನ್ 15, 2021
20 °C

ಎಂಥಾ ಮರುಳಯ್ಯಾ ಮಳಲಿಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಥಾ ಮರುಳಯ್ಯಾ ಮಳಲಿಗೆ...

ಅದು ಮಟಮಟ ಮಧ್ಯಾಹ್ನ, ನೆತ್ತಿ ಸುಡುವ ರಣಬಿಸಿಲು. ಅದರಲ್ಲೇ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ನಿಡಗುರ್ತಿ ಕೆರೆ ಕೋಡಿ ಬೀಳುವ ಜಾಗದಲ್ಲಿ ಜನ ಕಿಕ್ಕಿರಿದಿದ್ದರು. ಕೋಡಿಯ ಬಾಯಿಯಲ್ಲಿದ್ದ 3-4 ಗುಂಡಿಗಳಲ್ಲಿ ಮೊಳಕಾಲಿನ ಮಟ್ಟಕ್ಕೆ ನೀರು ಬಿಟ್ಟರೆ ಇಡೀ ಕೆರೆಯೆಲ್ಲಾ ಬಣಬಣ. ಆದರೂ ಜನಕ್ಕೆ ನಿಂತ ನೀರಿನ ಮೇಲೆಯೇ ಕಣ್ಣು.ಕೆಲವರು ನೀರಿನಲ್ಲಿಳಿದು ಹುಡುಕಾಡುತ್ತಿದ್ದರೆ, ಮತ್ತೆ ಕೆಲವರು ಮನೆಯಿಂದ ತಂದಿದ್ದ ಪರದೆ, ಬಟ್ಟೆ ಇತ್ಯಾದಿಗಳಿಂದ ನೀರು ಸೋಸುತ್ತಿದ್ದರು. ಮುದಿ ಜೀವಗಳು ದಂಡೆಯ ಮೇಲೆ ಕುಳಿತು ಕಣ್ಣು ಪಿಳುಕಿಸದೇ ತಿನ್ನುವಂತೆ ಇವರನ್ನೇ ನೋಡುತ್ತಿದ್ದರು.ಕುತೂಹಲದಿಂದ ಕೇಳಿದಾಗ `ಮಳಲಿ~ಗಾಗಿ ತಡಕಾಡುತ್ತಿದ್ದಾರೆ ಅಂತಾ ಗೊತ್ತಾಯಿತು.

ಅರೆ! ಮಳಲಿ ಎಂದರೆ ಏನಿದು ಎನ್ನುವ ಪ್ರಶ್ನೆ ಮತ್ತೆ ಕಾಡಿತು. ದಂಡೆ ಮೇಲೆ ಕುಳಿತು ಮಳಲಿಗಾಗಿ ಕಾಯುತ್ತಿದ್ದ ನಿಡಗುರ್ತಿ ಭಜನೆ ಅಂಜಿನಪ್ಪನನ್ನು ವಿಚಾರಿಸಿದಾಗ ಮಾಹಿತಿ ಸಿಕ್ಕಿತು. `ಮಳಲಿ~ ಥೇಟ್ ಮೀನಿನಂತೆ ಕಾಣುವ ಜಲಚರ. ಇದು ಸಹ ನೀರಿನೊಳಗಿದ್ದರೂ ಮೀನಿಗಿಂತಲೂ ಪ್ರತ್ಯೇಕವಾಗಿ ಗುರುತಿಸುವ ಪ್ರಭೇದ.

 

ಇದು ನೀರಿಗಿಂತ ಮುಖ್ಯವಾಗಿ ಕೆಸರನ್ನೇ ಆಶ್ರಯಿಸಿಕೊಂಡು ಬೆಳೆಯುತ್ತದೆ. ಇದನ್ನು `ಮಟ್ಟು~ ಎಂದೂ ಕರೆಯುತ್ತಾರೆ.  ತೆಲುಗಿನಲ್ಲಿ `ಉಲುಸಿ~ ಎಂಬ ಹೆಸರೂ ಇದೆ. ಅಂದ ಹಾಗೆ ಇವು ಕೆರೆಕುಂಟೆ, ಹಳ್ಳಕೊಳ್ಳ, ನದಿಗಳಲ್ಲಿಯೂ ಕಂಡುಬರುತ್ತವೆ, ನೀರು ಹರಿಯುವ ಜಾಡು ಹಿಡಿದು ಸಾಗುತ್ತವೆ. ಈ ಸಮಯದಲ್ಲಿ ಇದನ್ನು ಹಿಡಿಯುವುದು ಸ್ವಲ್ಪ ಕಷ್ಟಕರವೇ. ಆಗ ಕುಳೆವುಗಳನ್ನು ಬಳಸುತ್ತಾರೆ. ಆದರೆ ಇವುಗಳು ಅಧಿಕವಾಗಿ ಸಿಗುವುದು ನೀರಿನ ಶೇಖರಣೆಯ ತಾಣಗಳಲ್ಲಿ ನೀರು ತಳಮಟ್ಟಕ್ಕೆ ಸರಿದಾಗ.ಕೆರೆ ಕುಂಟೆಗಳಲ್ಲಿ ನೀರು ತಳಮಟ್ಟಕ್ಕೆ ಇಳಿದಾಗ ಕೆರೆ ಗುತ್ತಿಗೆ ಹಿಡಿದವರು ಬಲೆ ಹಾಕಿ ಮೀನು ಹಿಡಿಸುತ್ತಾರೆ. ಉಳಿದ ಅಲ್ಪಸ್ವಲ್ಪ ನೀರಿನಲ್ಲಿ ಮೀನುಗಳು ಇಲ್ಲದೇ ಹೋದರೂ ಗುತ್ತಿಗೆದಾರರು ಕೈ ತೊಳೆದುಕೊಳ್ಳುವುದಿಲ್ಲ. ಬದಲಿಗೆ ಮಳಲಿ ಹಿಡಿಯುವವರ ಮೊರೆ ಹೋಗುತ್ತಾರೆ.ಮಳಲಿ ಹಿಡಿಯುವುದಕ್ಕೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಲಂಬಾಣಿ ಜನಾಂಗದವರು ಹೆಸರುವಾಸಿ. ಅಲ್ಲಿಂದ ಬರುವ ಸುಮಾರು 200 ಕುಟುಂಬಗಳು ಮಳಲಿ ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಸಿಕ್ಕ ಮಳಲಿಗಳಲ್ಲಿ ಎರಡು ಭಾಗ ಮಾಡಲಾಗುತ್ತದೆ. ಒಂದು ಪಾಲು ಕೆರೆ ಗುತ್ತಿಗೆದಾರರಿಗೆ ಹೋದರೆ ಮತ್ತೊಂದು ಇವರಿಗೆ ಸೇರುತ್ತದೆ.ಮಳಲಿ ಹಿಡಿಯಲು ನೀಟಾದ ಪರದೆಯನ್ನು ಕಟ್ಟಿಗೆಗೆ ಅರ್ಧಚಂದ್ರಾಕೃತಿಯಲ್ಲಿ ಕಟ್ಟುತ್ತಾರೆ. ನೀರಿನ ತಳಭಾಗದಲ್ಲಿ ಸವರಾಡಲು ಒಂದು ಕೋಲು ಇದ್ದರೆ ಸಾಕು, ಪಾತ್ರೆ ತುಂಬಿ ತುಳುಕುವಷ್ಟು ಮಳಲಿ ಹಿಡಿಯುತ್ತಾರೆ. ಹೀಗೆ ಬಲೆಯಲ್ಲಿ ಬಿದ್ದವುಗಳಲ್ಲಿ ಮೀನುಗಳೂ ಸೇರಿರುತ್ತವೆ. ಅತ್ತ ಮಳಲಿ ಹಿಡಿಯುವುದು ಜೋರಾಗಿ ಸಾಗಿದ್ದರೆ ಇತ್ತ ಮಳಲಿಗಳನ್ನು ಮೀನಿನಿಂದ ಬೇರ್ಪಡಿಸಿ ಮಾರಾಟ ಮಾಡಲಾಗುತ್ತದೆ. ನೋಡ ನೋಡುತ್ತಿದ್ದಂತೆ ಪಾತ್ರೆ ಖಾಲಿಯಾಗಿ ಮಾರಾಟಗಾರರ ಜೇಬು ಭರ್ತಿಯಾಗುತ್ತದೆ. ಅಷ್ಟಾದರೂ ಮಳಲಿಗೆ ಬೇಡಿಕೆ ಮಾತ್ರ ಕರಗುವುದಿಲ್ಲ.ಭಾರೀ ರುಚಿ

ಮಳಲಿಯ ರುಚಿಯ ಮುಂದೆ ಮೀನುಗಳು ಲೆಕ್ಕಕ್ಕೇ ಇಲ್ಲ ಎಂಬುದು ಅನುಭವಸ್ಥರ ಮಾತು. ಮೀನುಗಳನ್ನು ಎಚ್ಚರತಪ್ಪಿ ತಿಂದರೆ ನಾಟಿದ ಮುಳ್ಳಿನಿಂದ ಮುಕ್ತಿ ಹೊಂದುವಷ್ಟರಲ್ಲಿ ಮರುಜನ್ಮ ಪಡೆದಂತಾಗುತ್ತದೆ. ಆದರೆ ಮಳಲಿ ಹಾಗಲ್ಲ. ಗಾತ್ರದಲ್ಲಿ ಚಿಕ್ಕದಾದರೂ ರುಚಿಯಲ್ಲಿ ಮಾತ್ರ ಇದಕ್ಕೆ ಸರಿಸಾಟಿಯಾದ ಜಲಚರವಿಲ್ಲವಂತೆ.ಮುಳ್ಳುಗಳ ಉಪದ್ರವವಂತೂ ಇಲ್ಲವೇ ಇಲ್ಲ. ಅಲ್ಲದೆ ಪುಷ್ಟಿಕರ ಆಹಾರವೂ ಹೌದು.

ಕೆರೆಯಲ್ಲಿ ಹಿಡಿದ ಮಳಲಿಯನ್ನು ಜೋಳದ ಹಿಟ್ಟಿನಿಂದ ಉಜ್ಜಿ ಸ್ವಚ್ಛಗೊಳಿಸಲಾಗುತ್ತದೆ. ನಂತರ ಮಸಾಲೆ ಅರೆದು, ಹುಣಸೆ ಹುಳಿ ಬೆರೆಸಿ, ಒಗ್ಗರಣೆ ಹಾಕಿದರೆ ಬಾಯಲ್ಲಿ ಸುರಿಸುವ ನೀರು ನಿಲ್ಲುವುದು ಇದರ ರುಚಿಯನ್ನು ಸವಿದ ನಂತರವೇ! ಹೀಗಾಗಿಯೇ ಗ್ರಾಮೀಣ ಭಾಗದಲ್ಲಿ ಇದಕ್ಕೆ ಮೀನಿಗಿಂತಲೂ ಬೇಡಿಕೆ.ಕೆರೆಯ ಗುತ್ತಿಗೆದಾರರಿಗೆ ಮಳಲಿ ಹಿಡಿಸಿದ್ದು ಸಾಕು ಎಂದಾಗ ಕೆರೆಯನ್ನು ಕುಳೆವು ಬಿಡುತ್ತಾರೆ. ಅಂದರೆ ಕೆರೆಗೆ ಗಂಗೆಪೂಜೆ ಸಲ್ಲಿಸುತ್ತಾರೆ. ಪೂಜೆ ಸಲ್ಲಿಸಿದರೆಂದರೆ ಕೆರೆ ಸಾರ್ವಜನಿಕರ ಸ್ವತ್ತಾಗಿ ಬಿಡುತ್ತದೆ. ಸಿಕ್ಕರಿಗೆ ಮುಕ್ಕಣ್ಣ ಎಂಬಂತೆ  ಮಳಲಿ ಬೇಕಾದವರೆಲ್ಲಾ ಕೆರೆಯನ್ನೆಲ್ಲಾ ಜಾಲಾಡಿಬಿಡುತ್ತಾರೆ.ಇಷ್ಟೆಲ್ಲಾ ಕೇಳಿದ ಮೇಲೆ ನಿಮಗೂ ಮಳಲಿಯನ್ನು ಚಪ್ಪರಿಸುವ ಆಸೆಯಾಯಿತೇ? ತಡ ಮಾಡಬೇಡಿ. ಕೆರೆ ಕುಂಟೆ ಸೇರಿದಂತೆ ನೀರಿನ ಶೇಖರಣೆ ತಾಣಗಳತ್ತ ಹೆಜ್ಜೆ ಹಾಕಿ. ಮಳೆಗಾಲ ಕೈಕೊಟ್ಟಿದ್ದರಿಂದ ತುಂಬಿ ತುಳುಕಬೇಕಾಗಿದ್ದ ಕೆರೆಗಳು ಬೇಸಿಗೆ ಬಲಿಯುವ ಮುನ್ನವೇ ಸೊರಗಿ ಹೋಗುತ್ತಿವೆ. ಯಾವುದಕ್ಕೂ ಕೆರೆಯಂತೆ ಅದರಲ್ಲಿನ ಮಳಲಿ ಬರಿದಾಗುವ ಮುನ್ನವೇ ಬಲೆ ಹಾಕಿ. ತಿಂದು ಬಾಯಿ ಚಪ್ಪರಿಸಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.