ಎಂದೂ ಮುಗಿಯದ ನೃತ್ಯ...

7

ಎಂದೂ ಮುಗಿಯದ ನೃತ್ಯ...

Published:
Updated:
ಎಂದೂ ಮುಗಿಯದ ನೃತ್ಯ...

ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನಲ್ಲಿ ಡಿ. 31, 1912ರಂದು ಕೃಷ್ಣರಾಯರ ಜನನ. ಮೈಸೂರು ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ಪ್ರಥಮ ರ‌್ಯಾಂಕ್‌ನಲ್ಲಿ ತೇರ್ಗಡೆ. ಸುವರ್ಣ ಪದಕ ಗಳಿಕೆ. ಬೆಂಗಳೂರಿನ ಪ್ರತಿಷ್ಠಿತ ಸೆಂಟ್ರಲ್ ಕಾಲೇಜ್‌ನಲ್ಲಿ ಬೋಧನೆ. ಜೊತೆಗೆ ಸಂಗೀತ, ನೃತ್ಯಗಳಲ್ಲಿ ಆಸಕ್ತಿ. ಕೊಳಲು, ತಬಲ, ಹಾರ್ಮೊನಿಯಂಗಳಲ್ಲಿ ಕೈಚಳಕ. ಅಲ್ಲದೆ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ನ ಕ್ಯಾಪ್ಟನ್. ಆಗಾಗ್ಗೆ ಕ್ರಿಕೆಟ್ ಅಂಪೈರ್ ಆಗಿಯೂ ಕಾರ್ಯ ನಿರ್ವಹಣೆ. ಹೀಗೆ ಕ್ರೀಡೆ-ಕಲೆ, ಒಳಾಂಗಣ-ಹೊರಾಂಗಣ ಎಲ್ಲದರಲ್ಲೂ ಕೃಷ್ಣರಾವ್ ಮಿಂಚುತ್ತಿದ್ದರು. ಹಾಗೆಯೇ ಕೋಲಾರ ಪುಟ್ಟಪ್ಪನವರಲ್ಲಿ ಕ್ರಮಬದ್ಧವಾಗಿ ಭರತನಾಟ್ಯ ಕಲಿಕೆ. ಮೈಸೂರು ಶೈಲಿಯ ನೃತ್ಯದಲ್ಲಿ ಪುಟ್ಟಪ್ಪನವರದು ದೊಡ್ಡ ಹೆಸರು. ಇದಲ್ಲದೆ ಕುಮಾರನ್ ಹಾಗೂ ಗುರು ಕುಂಜು ಕುರೂಪ್ ಅವರಲ್ಲಿ ಕಥಕ್ಕಳಿ ಅಭ್ಯಾಸವೂ ಸಾಗುತ್ತಿತ್ತು.ಚಂದ್ರಭಾಗಾದೇವಿ ಅವರು ಸೆಂಟ್ರಲ್ ಕಾಲೇಜಿಗೆ ಸೇರ್ಪಡೆ. ಅವರು ಹಿರಿಯ ಬರಹಗಾರರಾಗಿದ್ದ ಪಡುಕೋಣೆ ರಮಾನಂದರಾವ್ ಅವರ ಮಗಳು. ಬಾಲ್ಯದಲ್ಲಿ ಡಾ. ಶಿವರಾಮ ಕಾರಂತರಲ್ಲಿ ನೃತ್ಯಾಭ್ಯಾಸ ಮಾಡಿದ್ದೂ ಉಂಟು. ಕೃಷ್ಣರಾಯರು ಚಂದ್ರಭಾಗಾದೇವಿ ಅವರನ್ನು ವಿವಾಹವಾಗಿ (1941), ಇಬ್ಬರೂ ಒಟ್ಟಿಗೇ ಹೆಜ್ಜೆ ಹಾಕತೊಡಗಿದರು. ಬಹುತೇಕ ದೇವದಾಸಿಯರಿಗೇ ಮೀಸಲಾಗಿದ್ದ ನೃತ್ಯರಂಗಕ್ಕೆ ಈ ದಂಪತಿಯ ಪಾದಾರ್ಪಣೆ ಆ ಕಾಲಕ್ಕೆ ಒಂದು ಕ್ರಾಂತಿಯೇ! ಸುಶಿಕ್ಷಿತ ವ್ಯಕ್ತಿ-ವಿಜ್ಞಾನಿ, ಕಾಲಿಗೆ ಗೆಜ್ಜೆ ಕಟ್ಟುವುದೇ? ಸಂಪ್ರದಾಯಸ್ಥರು ಹುಬ್ಬೇರಿಸಿದರು! ನೃತ್ಯ ಕ್ಷೇತ್ರದಿಂದ ವಾಪಸ್ ಹೋಗಲು ಬೆದರಿಕೆಗಳೂ ಬಂದವು. ಆದರೆ ರಾಯರ ನಿಲುವು ಅಚಲ. ಸತತ ನೃತ್ಯಾಭ್ಯಾಸ. ನಿಲ್ಲದ ಗೆಜ್ಜೆಯ ನಿನಾದ.ರಾಮಗೋಪಾಲರ ನೃತ್ಯ ಮೇಳದಲ್ಲಿ ಲಯವಾದ್ಯ ವಿನಿಕೆ ಮಾಡುವುದರ ಮೂಲಕ ಕೃಷ್ಣರಾಯರು ನೃತ್ಯರಂಗಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ಮದುವೆಯಾಗಿ, ಒಂದು ಮಗುವಿನ ತಂದೆಯೂ ಆದ ಮೇಲೆ, ದಂಪತಿ (ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ) ಮೀನಾಕ್ಷಿ ಸುಂದರಂ ಪಿಳ್ಳೆ ಅವರಲ್ಲಿ ನೃತ್ಯಾಭ್ಯಾಸಕ್ಕೆ ಸೇರಿದರು. ಅದಕ್ಕಾಗೇ ತಂಜಾವೂರಿಗೆ ಪ್ರಯಾಣ. `ತಂಜಾವೂರು ಚತುಷ್ಟ'ರ ವಂಶಕ್ಕೆ ಸೇರಿದ ಪಿಳ್ಳೆಯವರು ಪೊನ್ನಯ್ಯನವರ ಮರಿ ಮಗ. ಅವರ ಮನೆ ನಾಟ್ಯ ವಿದ್ಯೆಯ ಆಗರ.ಅವರಿಂದ ಪಂಡನಲ್ಲೂರು ಶೈಲಿಯಲ್ಲಿ ಶಿಕ್ಷಣ. ಸೂರ್ಯೋದಯಕ್ಕೆ ಮುನ್ನವೇ ದಂಪತಿಗಳಿಗೆ ಪಾಠ ಪ್ರಾರಂಭ. `ತಟ್ಟು ಅಡವು'ಗಳ ಸಾಧನೆ. ಉಪಾಹಾರದ ನಂತರ ಇತರ ಅಡುವುಗಳು. ಅಪರಾಹ್ನದಲ್ಲಿ ಜತಿ, ತೀರ್ಮಾನಗಳು, ಸೂರ್ಯಾಸ್ತಮಾನದ ವೇಳೆ ಅಭಿನಯದ ಪಾಠ. ಕಠಿಣ ಶಿಕ್ಷೆ! ಕೆಲವು ಅಡವುಗಳನ್ನು ನೂರು ಬಾರಿ ಪುನರಾವರ್ತನೆ ಮಾಡಿಸುತ್ತಿದ್ದುದೂ ಉಂಟು! ಪದೇ ಪದೇ ತಪ್ಪು ಮಾಡಿದರೆ ನಟುವಾಂಗದ ಕೋಲನ್ನೇ ರೊಯ್ಯನೆ ಎಸೆಯುತ್ತಿದ್ದರು! ಪಾಠ ಮಾಡುತ್ತಿದ್ದಾಗ ಕಾಣುತ್ತಿದ್ದ ಕಾಠಿಣ್ಯ ವ್ಯಕ್ತಿ, ಪಾಠದ ನಂತರ ಕೋಮಲ ಹೃದಯದ `ತಾತ' ಆಗುತ್ತಿದ್ದರು. ದಿನದ 13 ಗಂಟೆಗಳ ಶಿಕ್ಷಣ!ಸತಿಪತಿಯರು ಸತತ ಶಿಕ್ಷಣ, ಶ್ರದ್ಧೆಯ ಸಾಧನೆಗಳಿಂದ ರಂಗಪ್ರವೇಶಕ್ಕೆ ಸಜ್ಜಾದರು. 1943ನೇ ಸಾಲಿನ ಕೊನೆಯ ದಿನ ತಂಜಾವೂರು ಅರಮನೆಯ ಒಳಾಂಗಣ. ಕಲಾವಿದರು, ಕಲಾಭಿಮಾನಿಗಳು, ನಟುವನಾರರು ತುಂಬಿದ ಸಭೆ. `ಕಾಲೇಜ್ ಲೆಕ್ಚರರ್ ಅರಂಗೇಟ್ರಂ ಮಾಡ್ತಾರಂತೆ! ಹೆಂಡತೀನೂ ಗೆಜ್ಜೆ ಕಟ್ಟುತ್ತಾಳಂತೆ! ಬ್ರಾಹ್ಮಣರ ಮನೆಯವರಾದರೂ ನೃತ್ಯ ಮಾಡ್ತಾರಂತೆ!' ಎಂಬ ಗುಸುಗುಸು, ಪಿಸುಪಿಸು ಮಾತಿನ ನಡುವೆಯೂ ಅರಂಗೇಟ್ರಂ ನಡೆಯಿತು!

ಸಭಿಕರಿಗೆ ಸಮ್ಮೊಹನ

ಅರಮನೆಯ ಭವ್ಯ ವಾತಾವರಣ. ಮೇಲಾಗಿ ವಿದ್ವತ್ ಸಭೆ. ಗುರುಗಳಿಂದ ಸಾಂಪ್ರದಾಯಿಕವಾಗಿ ಗೆಜ್ಜೆ ಪ್ರದಾನ. ಕೃಷ್ಣರಾವ್ ದಂಪತಿಯಿಂದ ಗುರುಗಳಿಗೆ ಪ್ರಣಾಮ. ನಂತರ ನರ್ತಿಸತೊಡಗಿದಾಗ ವೀಕ್ಷಕರಲ್ಲಿ ಹರ್ಷೋದ್ಗಾರ. ರತಿ ಮನ್ಮಥರಂತೆ ಕಾಣಿಸುತ್ತಿದ್ದ ಕೃಷ್ಣರಾವ್ ದಂಪತಿಯ ಗೆಜ್ಜೆಯ ನಾದ ಮುಂದೆ ಅನೇಕ ದಶಕಗಳು ನಿನದಿಸುತ್ತಲೇ ಇತ್ತು. ದಂಪತಿಯ `ರಂಗಪ್ರವೇಶ' ಒಂದು ಹೊಸ ಆಯಾಮಕ್ಕೆ ನಾಂದಿಯಾಯಿತು.ಕೃಷ್ಣರಾವ್ ಪ್ರಾಯದಿಂದಲೂ ಸ್ಫುರದ್ರೂಪಿ. ನೃತ್ಯಕ್ಕೆ ಹೇಳಿ ಮಾಡಿಸಿದ ಶರೀರ, ನಿಲುವು. ಚಂದ್ರಭಾಗಾದೇವಿಯೂ ಸೌಂದರ್ಯವತಿಯೇ. ರಂಗದ ಮೇಲೆ ಇಬ್ಬರೂ ಕಾಣಿಸಿಕೊಂಡಾಗ ಸಭೆಯಲ್ಲಿ ಸಮ್ಮೊಹನ! ಶಿವ, ಪಾರ್ವತಿಯರಾಗಿ, ಮೋಹಿನಿ ಭಸ್ಮಾಸುರರಾಗಿ ಕಾಣಿಸಿಕೊಳ್ಳತೊಡಗಿದ ಈ ಜೋಡಿ ಬೆಡಗು ಹಾಗೂ ವಿದ್ಯೆಯ ಪ್ರಭೆಯಿಂದ ಬೆಳಗುತ್ತಿದ್ದರು. ಲಾಸ್ಯ-ತಾಂಡವ, ಪ್ರಕೃತಿ-ಪುರುಷರ ರೂಪದಲ್ಲಿ ಮಿಂಚುತ್ತಿದ್ದರು. ಈ ದಂಪತಿ ನೃತ್ಯ ಸಂಯೋಜಕರಾಗಿ ಅನೇಕ ಚಾರಿತ್ರಿಕ, ಪೌರಾಣಿಕ, ಸಾಮಾಜಿಕ ವಸ್ತುಗಳನ್ನು ರಂಗಕ್ಕೆ ತಂದಿದ್ದಾರೆ. ಬುದ್ಧ, ಶಾಂತಳ, ಗೀತ ಗೋವಿಂದ, ಭರತ-ಬಾಹುಬಲಿ, ಲಾಸ್ಟ್ ಸಪ್ಪರ್ ಮುಂತಾದ ನೃತ್ಯ ನಾಟಕಗಳನ್ನು ಹೆಣೆದು ನಿರ್ದೇಶಿಸಿದ್ದಾರೆ.1965ರಲ್ಲಿ ಮೈಸೂರು ಸರ್ಕಾರವು ಕೃಷ್ಣರಾವ್ ದಂಪತಿಯನ್ನು ಇಂಗ್ಲೆಂಡಿಗೆ ಕಳುಹಿಸಿತು. ಲಂಡನ್‌ನಲ್ಲಿದ್ದ ಎರಡು ವರ್ಷಗಳಲ್ಲಿ ನೃತ್ಯ ಶಿಕ್ಷಣ, ಪ್ರಾತ್ಯಕ್ಷಿಕೆಗಳನ್ನು ಮಾಡಿದ್ದಲ್ಲದೆ ಆ ರಾಷ್ಟ್ರಾದ್ಯಂತ ಕಾರ್ಯಕ್ರಮಗಳನ್ನು ನೀಡಿದರು. ಅಲ್ಲಿ ಬುದ್ಧನ ಮೇಲೆ ಮಾಡಿದ ನೃತ್ಯ ಸಂಯೋಜನೆ ತುಂಬ ಜನಪ್ರಿಯವಾಯಿತು. ಅಮೆರಿಕದಿಂದ ಆಹ್ವಾನ. ಇಂಗ್ಲೆಂಡಿನಿಂದ ಅಮೆರಿಕಗೆ ಪ್ರಯಾಣ. ನಾಲ್ಕು ತಿಂಗಳು ಅಮೆರಿಕಾದ್ಯಂತ, ನೃತ್ಯ, ಉಪನ್ಯಾಸ, ಕಾರ್ಯಾಗಾರಗಳನ್ನು ಮಾಡಿದರು. ಹಿಂತಿರುಗುತ್ತಾ ಹಾಂಗ್‌ಕಾಂಗ್, ಸಿಂಗಾಪುರ್, ಬ್ಯಾಂಕಾಕ್, ಕೌಲಾಲಂಪೂರ್, ಕೊಲಂಬೊಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದರು. 1982ರಲ್ಲಿ ಮಾಂಟ್ರಲ್‌ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕೃಷ್ಣರಾಯರು ಮಾಡಿದ ದಿಕ್ಸೂಚಿ ಭಾಷಣ ವಿಶೇಷ ಮನ್ನಣೆಗೆ ಪಾತ್ರವಾಯಿತು.ಬೆಂಗಳೂರಿನಲ್ಲಿ ಕೃಷ್ಣರಾವ್ ದಂಪತಿ ಸ್ಥಾಪಿಸಿದ `ಮಹಾಮಾಯಾ' ನೃತ್ಯ ಕೇಂದ್ರ, ಬೆಂಗಳೂರಿನ ಸಾಂಸ್ಕೃತಿಕ ಬದುಕಿಗೆ ಹೊಸ ತಿರುವು ನೀಡಿತು. ಕ್ರಮಬದ್ಧ ನೃತ್ಯ ಶಿಕ್ಷಣ ನೀಡುವ ನೃತ್ಯ ಶಾಲೆಯ ಕೊರತೆಯನ್ನು `ಮಹಾಮಾಯಾ' ನೀಗಿತು. ಇಲ್ಲಿ ಕಲಿತ ನೂರಾರು ಜನ ಇಂದು ಪ್ರಪಂಚದ ವಿವಿಧೆಡೆ ನೃತ್ಯ ಮಾಡುತ್ತಿದ್ದಾರೆ-ಕಲಿಸುತ್ತಿದ್ದಾರೆ. ಮಹಾಮಾಯ ಒಂದು ಸಂಪೂರ್ಣ ಸುಸಜ್ಜಿತ ನೃತ್ಯ ಕೇಂದ್ರವಾಗಿದೆ. ಇಲ್ಲಿ ನಿರಂತರ ಗೆಜ್ಜೆಯ ನಾದ.

ಲಾಸ್ಯ ರಂಜನ

ಬರಹಗಾರರಾಗಿ ಕೃಷ್ಣರಾಯರು ಮಾಡಿರುವ ಸೇವೆಯೂ ಗಣನೀಯವಾದುದು. ಓರಿಯಂಟಲ್ ಲಾಂಗ್‌ಮನ್ ಪ್ರಕಟಿಸಿದ ನೃತ್ಯ ತಾಂತ್ರಿಕ ಪದಗಳ ಶಬ್ದಕೋಶ, ನೃತ್ಯ ಕಲೆ (ಬೆಂಗಳೂರು ವಿಶ್ವವಿದ್ಯಾನಿಲಯ), ಲಾಸ್ಯರಂಜನ (ಅನುವಾದ) ಅವುಗಳಲ್ಲಿ ಕೆಲವು. ಅವರ ವಿದೇಶ ಪ್ರವಾಸದ ಬಗೆಗೆ ಚಂದ್ರಭಾಗಾದೇವಿ ಬರೆದ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂದಿದೆ.ಸಹಜವಾಗಿ ಅನೇಕ ಪ್ರಶಸ್ತಿ-ಪುರಸ್ಕಾರಗಳು ಯು.ಎಸ್. ಕೃಷ್ಣರಾವ್ ಅವರ ಕೊರಳನ್ನು ಅಲಂಕರಿಸಿದೆ. ಕರ್ನಾಟಕದಲ್ಲಿ ನೃತ್ಯ ಕಲಾವಿದರಿಗೆ ನೀಡುವ ಉನ್ನತ ಪ್ರಶಸ್ತಿಯಾದ ಶಾಂತಲಾ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಅವುಗಳಲ್ಲಿ ಕೆಲವು. ಅವರಿಗೆ 1992ರಲ್ಲಿ ಅರ್ಪಣೆಗೊಂಡ `ಶೃಂಗಾರ' ಅಭಿನಂದನಾ ಕೃತಿ ಒಂದು ಸಂಗ್ರಹಯೋಗ್ಯ ಗ್ರಂಥ.1997 ಕೃಷ್ಣರಾಯರ ಜೀವನದಲ್ಲಿ ಒಂದು ಕರಾಳ ವರ್ಷ. ಬಾಳ ಸಂಗಾತಿ ಚಂದ್ರಭಾಗಾದೇವಿ ಅವರ ನಿಧನ. ತಮ್ಮ ಮದುವೆಯ ಸುವರ್ಣ ಮಹೋತ್ಸವವನ್ನು 1991ರಲ್ಲಿ ಆಚರಿಸಿಕೊಂಡ ಕೃಷ್ಣರಾಯರು, ತಮ್ಮ ನೃತ್ಯರಂಗ ಪಾದಾರ್ಪಣೆಯ 50ನೇ ವರ್ಷದ ಉತ್ಸವವನ್ನು 4 ದಿನಗಳ ವಿಚಾರ ಸಂಕಿರಣದೊಂದಿಗೆ ಆಚರಿಸಿಕೊಂಡರು. ಅವರ 90ನೇ ವರ್ಧಂತಿಯನ್ನು 2002ರಲ್ಲಿ ಅವರ ಶಿಷ್ಯರೆಲ್ಲಾ ಸೇರಿ ಆತ್ಮೀಯವಾಗಿ ಆಚರಿಸಿದರು. 92ರ ಇಳಿ ವಯಸ್ಸಿನಲ್ಲಿ (2005) ಯು.ಎಸ್. ಕೃಷ್ಣರಾಯರ ಕಾಲಗೆಜ್ಜೆಯ ಸಪ್ಪಳ ನಿಂತಿತು. `ಮಹಾಮಾಯ'ದಲ್ಲಿ ನೀರವತೆ ಮೂಡಿತು. ನಿಧನರಾಗುವುದಕ್ಕೆ ಕೆಲವು ದಿನಗಳ ಮೊದಲೂ ಅವರು ಪಾಠ ಮಾಡುತ್ತಿದ್ದರು. ಸಾಧಕರಿಗೆ ಎಂದೂ ಸ್ಫೂರ್ತಿದಾತರು  ಕೃಷ್ಣರಾವ್.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry