ಗುರುವಾರ , ಮೇ 19, 2022
21 °C

ಎಂಪಿಎಂ ಕಾರ್ಖಾನೆಗೆ ಅನುದಾನ.ಭದ್ರಾವತಿ: ಕಾರ್ಮಿಕರ ಮೊಗದಲ್ಲಿ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಈಬಾರಿ ಬಜೆಟ್‌ನಲ್ಲಿ ` 100 ಕೋಟಿ ಅನುದಾನ ಘೋಷಿಸಿರುವುದು ಕಾರ್ಮಿಕ ವಲಯದಲ್ಲಿ ನೆಮ್ಮದಿ ತಂದಿದೆ.ಕಳೆದ ಹಲವು ವರ್ಷಗಳಿಂದ ಸಾಕಷ್ಟು ನಷ್ಟದ ಹಾದಿಯಲ್ಲಿ ಸಾಗಿರುವ ಕಾರ್ಖಾನೆ ಇತ್ತೀಚಿನ ದಿನದಲ್ಲಿ ರೋಗಗ್ರಸ್ತ ಕಾರ್ಖಾನೆ ಪಟ್ಟಿಗೆ ಸಹ ಶಿಫಾರಸ್ಸಾಗಿತ್ತು. ಇದರ ವಿರುದ್ಧ ಕಾರ್ಮಿಕರು ದನಿ ಎತ್ತಿದ್ದರು.ಈ ಹಂತದಲ್ಲಿ ಭೇಟಿಯಾದ ಕಾರ್ಮಿಕರು, ಕಾರ್ಮಿಕ ಸಂಘದ ಮುಖಂಡರಿಗೆ ಮುಖ್ಯಮಂತ್ರಿಗಳು ಸಾಕಷ್ಟು ಭರವಸೆಯನ್ನು ನೀಡಿದ್ದರು. ಅದರ ಪ್ರತಿಫಲವಾಗಿ ಬಜೆಟ್‌ನಲ್ಲಿ ಅನುದಾನ ದೊರೆತಿರುವುದು ಕಾರ್ಮಿಕರ ಪಾಲಿಗೆ ಸಂತಸ ತಂದಿದೆ.ಸರ್ಕಾರ ಅನುದಾನ ಘೋಷಿಸಿರುವುದು ಸ್ವಾಗತಾರ್ಹ ಕ್ರಮ. ಇದಕ್ಕೆ ತಕ್ಕಂತೆ ನೆನೆಗುದಿಯಲ್ಲಿರುವ ಕಾರ್ಮಿಕರಿಗೆ ಡಿಎ ನೀಡುವ ಭರವಸೆಯನ್ನು ಸಹ ಈಡೇರಿಸಬೇಕು ಎನ್ನುತ್ತಾರೆ ಕಾರ್ಮಿಕ ಸಂಘದ ಅಧ್ಯಕ್ಷ ಬಿ.ಜೆ. ಸದಾಶಿವಲಿಂಗೇಗೌಡ.ಕಾರ್ಖಾನೆ ಬಿಐಎಫ್‌ಆರ್ ವ್ಯಾಪ್ತಿಗೆ ಸೇರಿದ ಸಂದರ್ಭದಲ್ಲಿ ಎಲ್ಲಾ ಕಾರ್ಮಿಕರು ಒಟ್ಟಾಗಿ ಸಿ.ಎಂ., ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಪುನಶ್ಚೇತನದ ಭರವಸೆ ನೀಡಿದ್ದರು. ಅದಕ್ಕೆ ತಕ್ಕಂತೆ ಅವರು ನಡೆದಿರುವುದಕ್ಕೆ ಅಭಿನಂದನೆ ಎನ್ನುತ್ತಾರೆ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷಎಸ್. ಚಂದ್ರಶೇಖರ್.ಎಐಟಿಯುಸಿ ಸಂಘಟನೆ ಮುಖಂಡ ಡಿ.ಸಿ. ಮಾಯಣ್ಣ ಪ್ರತಿಕ್ರಿಯೆ ನೀಡಿ ಹಲವು ವರ್ಷಗಳಿಂದ ಪುನಶ್ಚೇತನ ಹೋರಾಟ ನಡೆದಿತ್ತು. ಅದಕ್ಕೆ ಈಗ ಸ್ವಲ್ಪಮಟ್ಟಿನ ಅನುದಾನ ದೊರೆತಿರುವುದು ಸ್ವಾಗತಾರ್ಹ. ಇದರೊಂದಿಗೆ ಕಾರ್ಖಾನೆ ಅಭಿವೃದ್ಧಿ ಕುರಿತಾದ ಚಿಂತನೆ ಮತ್ತಷ್ಟು ನಡೆಯಬೇಕು ಎಂದು ಆಗ್ರಹಿಸಿದ್ದಾರೆ.ಕಳೆದ ಒಂದು ವರ್ಷದ ಅವಧಿಯಲ್ಲಿ ಕಾರ್ಖಾನೆ ಪುನಶ್ಚೇತನಕ್ಕಾಗಿ ರಾಜ್ಯ ಸರ್ಕಾರ ` 100ಕೋಟಿ ಬ್ಯಾಂಕ್ ಗ್ಯಾರಂಟಿ ನೀಡಿದೆ. ಇದರಡಿ ಡಿ.ಇಂಕಿಂಗ್ ಪ್ಲಾಂಟ್ ನಿರ್ಮಾಣ ಕಾಮಗಾರಿ ನಡೆದಿದೆ. ಇದರೊಂದಿಗೆ ಕರ್ನಾಟಕ ವಿದ್ಯುತ್ ನಿಗಮಕ್ಕೆ ನೀಡಬೇಕಿದ್ದ ಬಾಕಿ ಹಣವನ್ನು ಮನ್ನಾ ಮಾಡಲು ತೆಗೆದುಕೊಂಡಿರುವ ಸರ್ಕಾರದ ತೀರ್ಮಾನಗಳು ಕಾರ್ಮಿಕ ವಲಯದಲ್ಲಿ ಸಾಕಷ್ಟು ಚರ್ಚೆಯಲ್ಲಿ ಇರುವ ಸಂದರ್ಭದಲ್ಲಿಯೇ ಅನುದಾನ ಘೋಷಿಸಿರುವುದು ಕಾರ್ಮಿಕರ ಸಂತಸವನ್ನು ಹೆಚ್ಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.