ಎಂಪಿಎಲ್ ಶಾಸ್ತ್ರಿ ಸ್ಮರಣೆ

7

ಎಂಪಿಎಲ್ ಶಾಸ್ತ್ರಿ ಸ್ಮರಣೆ

Published:
Updated:
ಎಂಪಿಎಲ್ ಶಾಸ್ತ್ರಿ ಸ್ಮರಣೆ

 ಮುತ್ತೂರು ಪುರುಷೋತ್ತಮ ಲಕ್ಷ್ಮಿನರಸಿಂಹ ಶಾಸ್ತ್ರಿ ಎಂಪಿಎಲ್ ಶಾಸ್ತ್ರಿ ಎಂದೇ ಪ್ರಸಿದ್ಧಿಯಾದವರು.ವಿದ್ವಾಂಸರ ಕುಟುಂಬದಲ್ಲಿ ಜನಿಸಿದ ಶಾಸ್ತ್ರಿ ಬಾಲ್ಯದಲ್ಲೇ ಸಂಸ್ಕೃತದಲ್ಲಿ ಪರಿಣತಿ ಪಡೆದು, ಶೃಂಗೇರಿ ಸಂಸ್ಥಾನದಿಂದ ಬಾಲ ಸರಸ್ವತಿ ಹಾಗೂ ವಿದ್ಯಾಸಾಗರ ಬಿರುದು ಗಿಟ್ಟಿಸಿಕೊಂಡಿದ್ದರು. ಕಾಶಿ ವಿದ್ಯಾಲಯ ಅವರಿಗೆ ಶಾಸ್ತ್ರ ರತ್ನ ಹಾಗೂ ವಿದ್ಯಾಭೂಷಣ ಪಟ್ಟ ನೀಡಿತ್ತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅದೇ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ಸಂಸ್ಕೃತದೊಂದಿಗೆ ಕನ್ನಡ ಹಾಗೂ ಆಂಗ್ಲ ಸಾಹಿತ್ಯದಲ್ಲೂ ಪ್ರೌಢ ಪಾಂಡಿತ್ಯ ಪಡೆದಿದ್ದರು.1944ರಲ್ಲಿ ಮೈಸೂರು ವಿವಿಯ ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ವಿಧಾನ ಪರಿಷತ್‌ಗೂ ಕಾಲಿಟ್ಟರು. ಸತತ ಮೂರು ಬಾರಿ ಟೀಚರ್ಸ್‌ ಕಾನ್‌ಸ್ಟಿಟ್ಯೂಶನ್ ಹಾಗೂ ಒಂದು ಬಾರಿ ಸರ್ಕಾರದಿಂದ ನೇರ ಆಯ್ಕೆಯಾಗಿ 1968ರವರೆಗೆ ಸದಸ್ಯರಾಗಿದ್ದರು. ಬಳಿಕ ಬೆಂಗಳೂರು ವಿವಿ ಸ್ಥಾಪನೆಗೂ ಕಾರಣರಾದರು.ದೇವುಡು ನರಸಿಂಹಶಾಸ್ತ್ರಿ ಅವರೊಂದಿಗೆ ಕೈಸೇರಿಸಿ ಕುಮಾರಪಾರ್ಕ್ ಸಮೀಪದಲ್ಲಿ ಗಾಂಧಿನಗರ ಹೈಸ್ಕೂಲ್ ಸ್ಥಾಪಿಸಿದರು. ಭಾರತೀಯ ವಿದ್ಯಾಭವನದ ಸಂಸ್ಥಾಪನಾ ಕಾರ್ಯದರ್ಶಿಯಾಗಿ, ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಲವಾರು ಶಾಲಾ ಕಾಲೇಜುಗಳ ಶೈಕ್ಷಣಿಕ ವಿಭಾಗದಲ್ಲೂ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.ಅವರ ಕನಸಿನ ಕೂಸಾದ `ಮೈಸೂರು ಎಜುಕೇಶನಲ್ ಸೊಸೈಟಿ~ (ಎಂಇಎಸ್) ಬ್ಯಾನರ್ ಅಡಿ 1956ರಲ್ಲಿ ಎಂಇಎಸ್ ಕಾಲೇಜು ಆರಂಭಿಸಿದರು. ಸಂಸ್ಥೆಯನ್ನು ಅವರು ಕಟ್ಟಿ ಬೆಳೆಸಿದ ರೀತಿ ಭಾರೀ ಪ್ರಶಂಸೆಗೆ ಪಾತ್ರವಾಯಿತು. ಕೆಲವೇ ವರ್ಷಗಳಲ್ಲಿ ಭಾರತದ ಹತ್ತು ಅತ್ಯುತ್ತಮ ಕಾಲೇಜುಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿಯೂ ಇದೇ ಸಂಸ್ಥೆಯಲ್ಲಿ ಓದಿದ್ದಳು ಎಂಬುದು ಇಲ್ಲಿ ಸ್ಮರಣೀಯ.ಶೈಕ್ಷಣಿಕ ಜ್ಞಾನದೊಂದಿಗೆ ವಿದ್ಯಾರ್ಥಿಗಳು ಇತರ ರಂಗಗಳಲ್ಲೂ ಪರಿಣತಿ ಹೊಂದಬೇಕೆಂಬ ಕಾರಣಕ್ಕೆ ಕಾಲೇಜಿನಲ್ಲಿ ಕಲೆ, ಸಂಗೀತಕ್ಕೂ ಸಮಾನ ಪ್ರಾಧಾನ್ಯ ನೀಡುತ್ತಿದ್ದರು.ಕಾಲೇಜಿನಲ್ಲಿ `ಕಲಾವೇದಿ~ ಎಂಬ ಪ್ರತ್ಯೇಕ ವಿಭಾಗ ಸೃಷ್ಟಿಸಿ ಅಲ್ಲಿ ಸೃಜನಶೀಲ ಮನಸ್ಸುಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಇಂಡಾಲಜಿ ವಿಭಾಗ ತೆರೆದು ಅಲ್ಲಿ ಭಾರತದ ಮೂಲೆಮೂಲೆಯಿಂದ ಸಂಸ್ಕೃತ ವಿದ್ವಾಂಸರನ್ನು ಕರೆಯಿಸಿ ವಿಚಾರ ಸಂಕಿರಣಗಳನ್ನು ಏರ್ಪಡಿಸಿದರು. ಸರಳ ಜೀವನವನ್ನೇ ನೆಚ್ಚಿಕೊಂಡಿದ್ದ ಅವರು ಎಂದಿಗೂ ಹಣದ ಹಿಂದೆ ಹೋದವರಲ್ಲ.ಕಾಲೇಜಿನ ಕುಲಪತಿ ಹಾಗೂ ರಾಜ್ಯಸಭಾ ಸದಸ್ಯನಾಗುವ ಅವಕಾಶ ಸಿಕ್ಕರೂ ತಿರಸ್ಕರಿಸಿ ವಿದ್ಯಾರ್ಥಿಗಳಿಗಾಗಿ ಬದುಕು ಮುಡುಪಾಗಿಟ್ಟವರು. ಒಂದಾದ ಮೇಲೊಂದು ಶಿಕ್ಷಣ ಸಂಸ್ಥೆ ಆರಂಭಿಸಿದರೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡವರಲ್ಲ. ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದ ಅವರು ಬಹುತೇಕ ಎಲ್ಲಾ ಶಾಲೆಗಳಲ್ಲೂ ಸಂಸ್ಕೃತವನ್ನು ಕಡ್ಡಾಯ ಭಾಷೆಯನ್ನಾಗಿಸಿದ್ದರು.ಎಂಪಿಎಲ್ ಶಾಸ್ತ್ರಿಯವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕಾಣಿಕೆಗಳನ್ನು ಸ್ಮರಿಸುವ ಸಂದರ್ಭ ಇತ್ತೀಚೆಗೆ ಒದಗಿಬಂದಿತ್ತು. ಕಳೆದ ತಿಂಗಳು ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಕೆಲವು ಮಹತ್ವದ ಕಾರ್ಯಕ್ರಮಗಳು ನಡೆದವು.ಸದಾ ಗುಣಮಟ್ಟದ ಶಿಕ್ಷಣ ನೀಡಿ ಜಾಗತಿಕ ಮಟ್ಟದಲ್ಲಿ ನಮ್ಮ ಮಕ್ಕಳು ಸ್ಪರ್ಧಿಸುವಂತೆ ಮಾಡಬೇಕು ಎನ್ನುತ್ತಿದ್ದ ಶಾಸ್ತ್ರಿ ಅವರ ಪುಣ್ಯತಿಥಿ ಇಂದು. ನಗರದ ಶೈಕ್ಷಣಿಕ ಅಭಿವೃದ್ಧಿಗೆ ಹೊಸ ಮಾರ್ಗಸೂಚಿ ತೋರಿಸಿಕೊಟ್ಟ ಅವರ ಸ್ಮರಣೆಗೆ ಇದೇ ಸುದಿನ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry