ಎಂ.ಬಿ.ಎ. ಕಾಲೇಜ್ ಆಯ್ಕೆ ಹೇಗೆ?

7

ಎಂ.ಬಿ.ಎ. ಕಾಲೇಜ್ ಆಯ್ಕೆ ಹೇಗೆ?

Published:
Updated:
ಎಂ.ಬಿ.ಎ. ಕಾಲೇಜ್ ಆಯ್ಕೆ ಹೇಗೆ?

ಎಂ.ಬಿ.ಎ. ಅತ್ಯಂತ ಜನಪ್ರಿಯಕೋರ್ಸ್ ಎನ್ನುವುದು ನಿರ್ವಿವಾದವಾದರೂ, ನೀವು ಆಯ್ಕೆ ಮಾಡುವ ಕಾಲೇಜ್ ನಿಮ್ಮ ವೃತ್ತಿಜೀವನದ ಯಶಸ್ಸನ್ನು ನಿರ್ಧರಿಸುವುದಂತೂ ಖಚಿತ.

 

ಏಕೆಂದರೆ, ಅತಿಯಾದ ಜನಪ್ರಿಯತೆಯಿಂದ, ಎಲ್ಲೆಲ್ಲೂ ನಾಯಿಕೊಡೆಗಳಂತೆ ಎಂ.ಬಿ.ಎ. ಕಾಲೇಜುಗಳು ಬೆಳೆದಿದ್ದು, ಅವೆಲ್ಲವೂ ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿಲ್ಲ.ಕೆಲವು ಕಾಲೇಜುಗಳು ಹಗರಣಗಳಲ್ಲೂ ಸಿಲುಕಿದ್ದು, ಅಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದೆ. ಆದ್ದರಿಂದಲೇ, ನೀವು ಎಂ.ಬಿ.ಎ. ಎಲ್ಲಿ ಮಾಡುತ್ತೀರಿ ಎನ್ನುವುದು ಮುಖ್ಯ.ಎಂ.ಬಿ.ಎ. ಮಾಡುವುದೆಲ್ಲಿ?

ಸುಮಾರು ಮೂವತ್ತು ವರುಷಗಳ ಹಿಂದೆ, ನಾನು ಎಂ.ಬಿ.ಎ. ಮಾಡುವಾಗ ಬೆರಳೆಣಿಕೆಯಷ್ಟು ಕಾಲೇಜುಗಳಿದ್ದು, ಎಲ್ಲಿ ಎನ್ನುವುದು ತೊಡಕಿನ ಪ್ರಶ್ನೆಯಾಗಿರಲಿಲ್ಲ. ಆದರೆ, ಈಗ ದೇಶದಲ್ಲಿ ಸುಮಾರು 1600ಕ್ಕೂ ಹೆಚ್ಚು ಎಂಬಿ.ಎ. ಕಾಲೇಜು ಗಳಿವೆ.ಇದರಲ್ಲಿ ಎಂ.ಬಿ.ಎ. ಪದವಿ ನೀಡುವ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜುಗಳೂ, ಇನ್‌ಸ್ಟಿಟ್ಯೂಟ್‌ಗಳೂ ಮತ್ತು ಸ್ವಯಾಧಿಕಾರದ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಪಿ.ಜಿ.ಡಿ.ಎಂ. ನೀಡುವ ಇನ್‌ಸ್ಟಿಟ್ಯೂಟ್‌ಗಳೂ ಸೇರಿವೆ.ಸಾಮಾನ್ಯವಾಗಿ ಎಂ.ಬಿ.ಎ. ಮತ್ತು ಪಿ.ಜಿ.ಡಿ.ಎಂ. ಎರಡು ವರ್ಷಗಳ ಕೋರ್ಸ್ ಆಗಿದ್ದು, ಪಿ.ಜಿ.ಡಿ.ಎಂ.ಕೋರ್ಸ್ ಎಂ.ಬಿ.ಎ.ಗೆ ಸರಿಸಮಾನವೆಂದು ಪರಿಗಣಿಸಲಾಗುತ್ತದೆ.ಇದರ ಜೊತೆಗೆ, ಎಂ.ಬಿ.ಎ. ಕೋರ್ಸಿನಲ್ಲಿ ಹಲವಾರು ಸ್ಪೆಶಲೈೇಷನ್ ಇರುತ್ತದೆ. ಒಟ್ಟಾರೆ, ಮ್ಯೋನೇಜ್‌ಮೆಂಟ್ ಶಿಕ್ಷಣ ನೀಡುವ ಸಾವಿರಾರು ಕಾಲೇಜುಗಳಿದ್ದು, ನಿಮ್ಮ ಆಯ್ಕೆಯ ಮುನ್ನ, ಜಾಗರೂಕತೆಯಿಂದ ಕೆಳಕಂಡ ವಿವರಗಳನ್ನು ಗಮನಿಸಿ:ಕಾಲೇಜುಗಳ ಕೀರ್ತಿ

ವೃತ್ತಿಯ ಸಂದರ್ಶನದಲ್ಲಿ ಎಂ.ಬಿ.ಎ. ಎಲ್ಲಿ ಮಾಡಿದ್ದೀರಿ ಎನ್ನುವುದೊಂದು ಪ್ರಮುಖ ಪ್ರಶ್ನೆ. ಏಕೆಂದರೆ, ಉದ್ದಿಮೆಗಳ ಅಭಿಪ್ರಾಯದ ಪ್ರಕಾರ, ವಿವಿಧ ಕಾಲೇಜುಗಳಿಂದ ತೇರ್ಗಡೆಯಾಗುವ ವಿದ್ಯಾರ್ಥಿಗಳ ಪರಿಣತಿ, ಅರ್ಹತೆಗಳಲ್ಲಿ ತೀವ್ರವಾದ ವ್ಯತ್ಯಾಸಗಳಿರುತ್ತವೆ. ಯಾವುದೇ ಕಾಲೇಜಿನ ಯಶಸ್ಸಿನ ಹಿಂದೆ, ಹಲವಾರು ವರ್ಷಗಳ ಪರಿಶ್ರಮ, ಸಾಧನೆ ಇರುತ್ತದೆ.ಆದ್ದರಿಂದ, ಕಾಲೇಜಿನ ಸ್ಥಾಪನೆಯ ವರ್ಷ, ಅನುಭವ ಮತ್ತು ಸಾಧನೆಗಳನ್ನು ಪರಿಗಣಿಸಿ. ದೀರ್ಘಾವಧಿ ಕಾಲೇಜಿಗೂ, ನೂತನ ಕಾಲೇಜಿಗೂ ಇರುವ ವ್ಯತ್ಯಾಸಗಳನ್ನೂ, ಶಕ್ತಿ, ಸಾಮರ್ಥ್ಯಗಳನ್ನೂ ಮತ್ತು ದೌರ್ಬಲ್ಯಗಳನ್ನೂ ಗಮನಿಸಿ.

ಸಂಪನ್ಮೂಲಗಳು: ಎಂ.ಬಿ.ಎ. ಶಿಕ್ಷಣ ಪದ್ಧತಿ ಸರ್ವತೋಮುಖ ವ್ಯಕ್ತಿತ್ವದ ವಿಕಾಸಕ್ಕೆ ಬುನಾದಿ. ಇದಕ್ಕೆ ಮೂಲ ಕಾರಣ, ತರಗತಿಯ ಉಪನ್ಯಾಸಗಳಲ್ಲದೆ ಅಸೈನ್‌ಮೆಂಟ್‌ಗಳು, ಉದ್ದಿಮೆಯ ಸನ್ನಿವೇಶಗಳನ್ನಾಧರಿಸಿದ ಕೇಸ್-ಸ್ಟಡೀಸ್, ಗುಂಪು- ಚರ್ಚೆಗಳು, ವಾದ- ಪ್ರತಿವಾದಗಳು, ಮ್ಯೋನೇಜ್‌ಮೆಂಟ್-ಆಟಗಳು ಮತ್ತು ಉದ್ಯಮಗಳ ಭೇಟಿಗಳಿರುತ್ತದೆ. ಜೊತೆಗೆ, ಪರಿಣತ ಉದ್ಯಮಿಗಳ ಉಪನ್ಯಾಸ ಮತ್ತು ಒಡನಾಟದ ಅವಕಾಶಗಳಿರುತ್ತವೆ.

 

ವಿದ್ಯಾರ್ಥಿಗಳ ಅಭಿವೃದ್ಧಿಗೆ, ವೈವಿಧ್ಯಮಯ ಕಲಿಕೆಗೆ ಪೂರಕವಾಗುವ ವಿಶಾಲವಾದ ಸುಸಜ್ಜಿತ ಕ್ಯಾಂಪಸ್, ಆರೋಗ್ಯಕರ ವಾತಾವರಣ, ಸಮಗ್ರ ಗ್ರಂಥಾಲಯ, ಸಭಾಂಗಣ, ಇತರ ಸಂಪನ್ಮೂಲಗಳು ಮತ್ತು ಸಕಾರಾತ್ಮಕ ಮನೋಧರ್ಮವುಳ್ಳ ನಿರ್ವಾಹಕ ಮಂಡಳಿ ಅತ್ಯವಶ್ಯಕ. ಶಿಕ್ಷಣ ವ್ಯಾಪಾರೀಕರಣವಾಗಿರುವ ಈ ಸಮಯದಲ್ಲಿ, ನೀವು ಆಯ್ಕೆ ಮಾಡುವ ಮುನ್ನ ಈ ಬಗ್ಗೆ ಕಡ್ಡಾಯವಾಗಿ ಸಂಶೋಧಿಸಿ.ಶಿಕ್ಷಕ ವರ್ಗ

ನೀವು ಬಯಸುವ ಸ್ಪೆಶಲೈೇಶನ್ನಿಗೆ ಸಂಬಂಧಪಟ್ಟ ಶಿಕ್ಷಕ ವರ್ಗದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ. ಶಿಕ್ಷಕ ವರ್ಗದ ವಿದ್ಯಾರ್ಹತೆ, ಅನುಭವ, ಪ್ರಕಟಿತ ಪುಸ್ತಕಗಳು, ಸಂಶೋಧನಾ ಲೇಖನಗಳು, ವಿದ್ಯಾರ್ಥಿ-ಶಿಕ್ಷಕ ನಡುವಣ ಪ್ರಮಾಣ, ಇವೆಲ್ಲ ಅಂಶಗಳನ್ನುಳ್ಳ ಅಳತೆಗೋಲುಗಳೇ ಶಿಕ್ಷಕ ವರ್ಗದ ಶ್ರೇಷ್ಠತೆಯನ್ನು ಸೂಚಿಸುತ್ತವೆ.ಪ್ಲೇಸ್‌ಮೆಂಟ್ ಮಾಹಿತಿ

ನೀವು ಆರಿಸುವ ಕಾಲೇಜಿಗೆ ನೇರ ನೇಮಕಾತಿಗೆ ಪ್ರತಿ ವರ್ಷ ತಪ್ಪದೆ ಬರುವ ಉದ್ದಿಮೆಗಳ ವಿವರ, ವೃತ್ತಿಯ ಅವಕಾಶಗಳು, ಆಯ್ಕೆಯ ಕ್ರಮ, ವೇತನ ಶ್ರೇಣಿ ಮತ್ತು ಸೌಲಭ್ಯಗಳ ವಿವರವನ್ನು ತಿಳಿದುಕೊಳ್ಳಿ.ನಿಮ್ಮ ವೃತ್ತಿಜೀವನದ ಕನಸುಗಳನ್ನು ನನಸಾಗಿಸಲು ಅನುವಾಗುವಂತ ಉದ್ದಿಮೆಗಳು, ನೀವು ಆರಿಸುವ ಕಾಲೇಜಿಗೆ ಬರುತ್ತಾರೆಯೇ ಮತ್ತು ಉತ್ತೀರ್ಣರಾದ ಎಲ್ಲಾ ಪದವೀಧರರಿಗೂ ಆಕರ್ಷಕ ಕೆಲಸಗಳು ಸಿಕ್ಕಿವೆಯೇ ಎನ್ನುವುದನ್ನು ಪತ್ತೆ ಮಾಡಿ.ಉತ್ತಮವಾದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ - ಅಂದರೆ 100%- ನೇರ ನೇಮಕಾತಿಯಾಗುತ್ತದೆ. ನಿಮ್ಮ ಭವಿಷ್ಯದ ದೃಷ್ಟಿಯಿಂದ, ಈ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ.ಶಿಕ್ಷಣ ವಸ್ತು ಮತ್ತು ಕ್ರಮ

 ಎಂ.ಬಿ.ಎ. ಕೋರ್ಸಿನ ಕಲಿಕೆಯ ವಿಷಯಗಳು, ವ್ಯಾಪ್ತಿ ಮತ್ತು ವಿಧಾನಅತ್ಯುತ್ತಮವಾಗಿರಬೇಕು. ಎಂ.ಬಿ.ಎ. ಒಂದು ವೃತ್ತಿಪರ ಕೋರ್ಸ್ ಆಗಿರುವುದರಿಂದ, ಕಲಿಕೆಯ ವಿಷಯಗಳನ್ನು ನೀವು ವೃತ್ತಿಯಲ್ಲಿ ಉಪಯೋಗಿಸಬೇಕಾಗುತ್ತದೆ;

ಇಲ್ಲದಿದ್ದರೆ, ಇಂದಿನ ಸ್ಪರ್ದಾತ್ಮಕ ವೃತ್ತಿಯಲ್ಲಿ ಸೋಲುಂಟಾಗಬಹುದು. ಹಾಗಾಗಿ, ಏನನ್ನು ಕಲಿಯುತ್ತೀರಿ ಎನ್ನುವುದರ ಜೊತೆಗೆ ಹೇಗೆ ಕಲಿತಿದ್ದೀರಿ ಎನ್ನುವುದೂ ಮುಖ್ಯ. ಆದ್ದರಿಂದ, ಕಾಲೇಜ್ ಆರಿಸುವ ಮುನ್ನ, ಅಲ್ಲಿ ಕಲಿಕೆಯ ವೈವಿಧ್ಯತೆಯನ್ನು ಖಚಿತಪಡಿಸಿಕೊಳ್ಳಿ.ಉದ್ದಿಮೆ ಪರಿಣತರ ಲಭ್ಯತೆ

ಕಲಿಕೆಯ ವೈವಿಧ್ಯತೆಗೆ ಉದ್ದಿಮೆ ಪರಿಣತರ ಲಭ್ಯತೆ, ಉಪನ್ಯಾಸ ಮತ್ತು ಅವರೊಂದಿನ ಒಡನಾಟ ಅತ್ಯವಶ್ಯಕ. ನೀವು ಬಯಸುವ ಸ್ಪೆಶಲೈೇಷನ್‌ಗೆ ಸಂಬಂಧಪಟ್ಟ ವಿಷಯದಲ್ಲಿ ಪ್ರಮುಖ ಉದ್ದಿಮೆಗಳ ಪರಿಣತರು ಲಭ್ಯವಿರಬೇಕು.ಉದಾಹರಣೆಗೆ, ನಿಮಗೆ ವಿವಿಧ ಕೈಗಾರಿಕೆಗಳು, ಸಣ್ಣ ಉದ್ದಿಮೆಗಳು, ವಾಣಿಜ್ಯ, ವ್ಯಾಪಾರ, ಸರ್ವೀಸಸ್ ಇತ್ಯಾದಿಗಳ ಬಗ್ಗೆ ಸಮಗ್ರಮಾಹಿತಿಯನ್ನು ನೀಡುವ ಪರಿಣತರ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ, ಕಾಲೇಜುಗಳ ವೆಬ್‌ಸೈಟಿನಲ್ಲಿ ಈ ಮಾಹಿತಿಗಳಿರುತ್ತದೆ.ಸ್ಥಳದ ಮಹತ್ವಗಳು

ನೀವು ಪರಿಗಣಿಸುತ್ತಿರುವ ಕಾಲೇಜಿರುವ ಪ್ರದೇಶದ ಆರ್ಥಿಕ ಪರಿಸರ, ಪ್ರಭಾವ, ಅನುಕೂಲಗಳನ್ನೂ ತಿಳಿಯಿರಿ. ಉದಾಹರಣೆಗೆ, ನೀವು ಮೈನಿಂಗ್‌ವೃತ್ತಿಯಲ್ಲಿ ಆಸಕ್ತರಿದ್ದರೆ, ಮೈನಿಂಗ್ ಹೆಚ್ಚಿರುವ ಪ್ರದೇಶದಲ್ಲಿ ಎಂ.ಬಿ.ಎ. ಮಾಡುವುದು ಸೂಕ್ತ.  ಹಾಗೆಯೇ, ಏರೋನಾಟಿಕಲ್‌ಎಂಜಿನಿಯರಿಂಗ್ ಪದವೀಧರರು ಎಂ.ಬಿ.ಎ. ಮಾಡಲು ಕೆನಡ/ಆಮೆರಿಕ ದೇಶಗಳಿಗೆ ಹೋಗುತ್ತಾರೆ.ಏಕೆಂದರೆ, ಕೈಗಾರಿಕೆಗಳು ಪ್ರಾಯೋಜಿಕ ತರಬೇತಿಗೆ ಮತ್ತು ಕ್ಯಾಂಪಸ್ ನೇಮಕಾತಿಗೆ, ಪರಿಸರದಲ್ಲಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುತ್ತಾರೆ. ಹಾಗೆಯೇ, ಮುಂಬೈ, ದೆಹಲಿ, ಬೆಂಗಳೂರಿನಂತ ಮಹಾನಗರಗಳಲ್ಲಿ ಎಂ.ಬಿ.ಎ. ಮಾಡುವುದು ವೃತ್ತಿಯ ದೃಷ್ಟಿಯಿಂದ ಅನುಕೂಲಕರ. ಈ ರೀತಿ, ನಿಮ್ಮ ವೃತ್ತಿಯ ಯೋಜನೆಗಳಿಗೆ, ನೀವು ಎಂ.ಬಿ.ಎ. ಮಾಡುವ ಕಾಲೇಜಿನ ಸ್ಥಳ ಸೂಕ್ತವಾಗಿರಲಿ.ಕಾಲೇಜುಗಳ ಹಿನ್ನೆಲೆ

ಯಾವುದೇ ಕಾಲೇಜ್ ಸ್ಥಾಪಿಸುವ ಮುನ್ನ, ರಾಜ್ಯ/ಕೇಂದ್ರ ಸರ್ಕಾರಗಳ ಕಾನೂನಿನ ಅಡಿಯಲ್ಲಿ, ಸಂಬಂಧಪಟ್ಟ ವಿಶ್ವವಿದ್ಯಾಲಯ ಅಥವಾ ಎ.ಐ.ಸಿ.ಟಿ.ಐ. ಯಿಂದ ಅನುಮೋದನೆ ಇರಬೇಕು. ಎಂ.ಬಿ.ಎ.  ಕಾಲೇಜಿಗೆ ಕಾನೂನಿನ ಚೌಕಟ್ಟಿನಲ್ಲಿ ಮಾನ್ಯತೆ ಇರದಿದ್ದರೆ ಅಥವಾ ಸ್ವಾಯತ್ತೆ ಇಲ್ಲದಿದ್ದರೆ, ನಿಮ್ಮ ಪದವಿಗೆ ಬೆಲೆ ಇರದೆ, ಕೆಲಸ ಸಿಗುವುದು ಕಷ್ಟವಾಗುತ್ತದೆ.ಅನೇಕ ಕಾಲೇಜುಗಳು ಅನುಮೋದನೆ ಇಲ್ಲದೆ, ಅನಧಿಕೃತವಾಗಿ ಚಾಲನೆಯಲ್ಲಿರುವುದು ಬೆಳಕಿಗೆ ಬಂದಿರುವುದರಿಂದ, ನೀವು ಎಚ್ಚರದಿಂದಿರಬೇಕು. ಜೊತೆಗೆ, ಹಲವಾರು ಕಾಲೇಜುಗಳಲ್ಲಿ ಡೊನೇಷನ್ ಪದ್ಧತಿಯೂ ಇರಬಹುದು.ಖರ್ಚು, ವೆಚ್ಚ

ನೀವಿರುವ ಪ್ರದೇಶದಲ್ಲಿ ಎಂ.ಬಿ.ಎ. ಮಾಡುವುದಕ್ಕೆ ಅವಕಾಶವಿಲ್ಲದಿರಬಹುದು; ಅಥವಾ ನೀವು ಆರಿಸಿದ ಕಾಲೇಜ್ ದುಬಾರಿ ನಗರದಲ್ಲಿರಬಹುದು. ಇದಲ್ಲದೆ, ಎಂ.ಬಿ.ಎ. ಶಿಕ್ಷಣ ಶುಲ್ಕಕ್ಕೆ,  ಪುಸ್ತಕಗಳಿಗೆ, ಹಾಸ್ಟಲ್, ದಿನನಿತ್ಯದ ಖರ್ಚುಗಳಿಗೆ ಸಾಕಷ್ಟು ಹಣ ಬೇಕಾಗುತ್ತದೆ.

 

ಎಲ್ಲಾ ಕಾಲೇಜುಗಳ ಹಾಸ್ಟೆಲ್‌ಖರ್ಚು ಒಂದೇ ಇರುವುದಿಲ್ಲ. ಆದರೆ, ಹಣದ ಕೊರತೆ ಇದ್ದಲ್ಲಿ ಯೋಚಿಸಬೇಡಿ; ಈಗ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇದ್ದು, ಬ್ಯಾಂಕ್ ಸಾಲಗಳು ಸುಲಭವಾಗಿ ಲಭ್ಯ. ಈ ಬಗ್ಗೆ ವಿವರವಾಗಿ ಲೆಕ್ಕಾಚಾರ ಮಾಡಿ, ಹಣದ ವ್ಯವಸ್ಥೆಯ ಬಗ್ಗೆ ಆಪ್ತರೊಡನೆ, ಮಾರ್ಗದರ್ಶಕರೊಡನೆ ಸಮಾಲೋಚಿಸಿ.ರ‌್ಯಾಂಕಿಂಗ್ ಪಟ್ಟಿ

ಮೇಲಿನ ಪ್ರತಿಯೊಂದು ಅಂಶಗಳೂ ಮುಖ್ಯವಾಗಿರುವುದರಿಂದ, ಸಮಗ್ರ ಮಾಹಿತಿಯ ಆಧಾರದಿಂದ, ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಈ ತರ್ಕಬದ್ಧ ಆಲೋಚನಾ ಕ್ರಮ ಮತ್ತು ನಿರ್ಣಯ ಕ್ಲಿಷ್ಟವೆನಿಸುತ್ತದೆಯೇ? ಚಿಂತಿಸಬೇಡಿ;ಇದಕ್ಕೂ ಪರಿಹಾರಗಳಿವೆ. ದೇಶ ವಿದೇಶದ ನಾನಾ ಸಂಸ್ಥೆಗಳು, ಪತ್ರಿಕೆಗಳು ಈ ಎಲ್ಲಾ ಅಂಶಗಳ ಮಾಹಿತಿಯನ್ನು ಕಾಲೇಜುಗಳ ಬಗ್ಗೆ ಸಂಗ್ರಹಿಸಿ, ಆಯಾ ಕಾಲೇಜುಗಳ ಮುಖ್ಯಸ್ಥರ ಅಭಿಮತವನ್ನು ಪಡೆದು, ಸಮಗ್ರವಾದ ರ‌್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸುತ್ತವೆ.ನೀವು ಪತ್ರಿಕೆಗಳನ್ನು ಗಮನಿಸಿದರೆ, ಅಂತರ್ಜಾಲದಲ್ಲಿ ಶೋಧಿಸಿದರೆ, ಅನೇಕ ರ‌್ಯಾಂಕಿಂಗ್ ಪಟ್ಟಿಗಳು ಲಭಿಸಬಹುದು.ಈ ಪಟ್ಟಿಗಳಲ್ಲಿ, ಎಲ್ಲಾ ಕಾಲೇಜುಗಳನ್ನು ರ‌್ಯಾಂಕಿಂಗ್ ಪ್ರಕಾರ, ವರ್ಗೀಕರಿಸಲಾಗಿದೆ.

 

ರ‌್ಯಾಂಕಿಂಗ್ ಮಾಡಲು ಅನುಸರಿಸಿದ ಕ್ರಮ, ಸ್ಪಷ್ಟೀಕರಣಗಳೂ ದೊರೆಯುತ್ತದೆ. ಹಾಗೆಯೇ, ಅನೇಕ ವೆಬ್‌ಸೈಟ್‌ಗಳು ಎಲ್ಲಾ ರ‌್ಯಾಂಕಿಂಗ್ ಪಟ್ಟಿಗಳನ್ನು, ಕಾಲೇಜುಗಳ ಪಟ್ಟಿಗೆ ಹೋಲಿಸಿ, ಸಂಕ್ಷಿಪ್ತವಾದ ವರದಿಯನ್ನು ಪ್ರಕಟಿಸುತ್ತವೆ.

 

ಉದಾಹರಣೆಗೆ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯೋನೇಜ್‌ಮೆಂಟ್ ಸಾಮಾನ್ಯವಾಗಿ ಉತ್ತಮ ರ‌್ಯಾಂಕ್ ಪಡೆದು, ಎಲ್ಲಾ ರ‌್ಯಾಂಕಿಂಗ್‌ಗಳಲ್ಲೂ ಮೊದಲನೇ ವರ್ಗದಲ್ಲಿರುತ್ತದೆ.ಆದರೆ, ಎಲ್ಲಾ ಕಾಲೇಜುಗಳ ಬಗ್ಗೆ ಹಾಗಿರಲಾರದು. ವಿವಿಧ ರ‌್ಯಾಂಕಿಂಗ್ ಪಟ್ಟಿಗಳಲ್ಲಿ ಒಮ್ಮತವಿಲ್ಲದ್ದ್ದಿದರೆ, ಪಟ್ಟಿಗಳ ಅಭಿಮತವನ್ನು ಮಾಹಿತಿಯಂತೆ ಪರಿಗಣಿಸುವುದು ಒಳ್ಳೆಯದು. ಈಗ, ವಿದ್ಯಾರ್ಥಿಗಳನ್ನು ಆಕರ್ಷಿಸಲು, ಸಮಗ್ರವಾದ ಮಾಹಿತಿಯನ್ನು ನೀಡಲು, ಕಾಲೇಜುಗಳ ಪ್ರದರ್ಶನಗಳೂ ನಡೆಯುತ್ತಿರುತ್ತವೆ. ಉನ್ನತ ಕಾಲೇಜುಗಳ ಪ್ರವೇಶಕ್ಕೆ ಮುನ್ನ ಇಂಡಿಯನ್ ಇನ್‌ಸ್ಟಿಟ್ಯೂಟ್‌ಅಫ್ ಮ್ಯೋನೆಜ್‌ಮೆಂಟಿನ ಕ್ಯಾಟ್ ಅಥವಾ ಆಲ್ ಇಂಡಿಯ ಮ್ಯೋನೇಜ್‌ಮೆಂಟ್ ಅಸೋಸಿಯೇಶನ್ ನಡೆಸುವ ಮ್ಯೋಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.ಸಾಮಾನ್ಯವಾಗಿ ಎಲ್ಲಾ ಕಾಲೇಜುಗಳಿಂದ, ಈ ಪರೀಕ್ಷೆಗಳಿಗೆ ಮನ್ನಣೆ ಇದೆ. ಈ ಪರೀಕ್ಷೆಗಳಲ್ಲಿನ ನಿಮ್ಮ ರಾಂಕ್, ಗುಂಪು-ಚರ್ಚೆ ಮತ್ತು ಸಂದರ್ಶನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

 

ಸಾಮಾನ್ಯವಾಗಿ, ನಿಮ್ಮ ಅಪೇಕ್ಷೆ ಮತ್ತು ನಿರೀಕ್ಷೆಯಂತೆ, ಕನಿಷ್ಠ 8-10 ಕಾಲೇಜುಗಳಿಗೆ ಅರ್ಜಿಯನ್ನು ದಾಖಲಿಸುವ ಅವಶ್ಯಕತೆ ಇದ್ದು, ಹಲವೆಡೆ ಪ್ರವೇಶ ಸಿಗಬಹುದು. ಮೇಲೆ ವಿವರಿಸಿದ ಎಲ್ಲಾ ಅಂಶಗಳನ್ನು ಗಮನಿಸಿ, ನಿಮಗೆ ಸೂಕ್ತವಾದ ಕಾಲೇಜನ್ನು ಆರಿಸಿ. ಆದರೆ, ನಿಮಗೆ ಬೇಕಾದ ಕಾಲೇಜಿನಲ್ಲಿಯೇ ಪ್ರವೇಶ ಸಿಗದಿರಬಹುದು;ಆದ್ದರಿಂದ, ಇನ್ನಿತರ ಆದ್ಯತೆಗಳ ಬಗ್ಗೆಯೂ ಯೋಚಿಸಿ. ಈಗಿರುವ ಎಂ.ಬಿ.ಎ. ಪ್ರವೇಶ ಪರೀಕ್ಷೆಗಳಲ್ಲಿ ಬದಲಾವಣೆಗಳಾಗುವ  ಸಾಧ್ಯತೆಗಳಿರುವುದರಿಂದ, ಪರೀಕ್ಷೆಗಳಿಗೆ ದಾಖಲಿಸುವ ಮುನ್ನ, ವಿಚಾರಿಸಿ. ಹಾಗೂ, ಈ ನಿಟ್ಟಿನಲ್ಲಿ ದೂರ-ಶಿಕ್ಷಣ ಮತ್ತು ಸಂಜೆ ಕಾಲೇಜುಗಳಲ್ಲಿನ ಎಂ.ಬಿ.ಎ. ನಿಮಗೆ ಸೂಕ್ತವೇ ಎಂದು ಪರಿಶೀಲಿಸಿ. ಎಂ.ಬಿ.ಎ. ಮಾಡುವ ನಿರ್ಧಾರ ಸುಲಭ; ಆದರೆ ಎಲ್ಲಿ ಎನ್ನುವುದು ನಿಮ್ಮ ತರ್ಕಬದ್ಧ ಆಲೋಚನಾ ಕ್ರಮ ಮತ್ತು ವಿವೇಚನೆಗೆ ಸೇರಿದ್ದು. ಏನೇ ಗೊಂದಲ, ಆತಂಕಗಳಿದ್ದರೂ ಮಾರ್ಗದರ್ಶಕರೊಡನೆ ಸಮಾಲೋಚಿಸಿ.ಸಾಧ್ಯವಾದರೆ, ಕಾಲೇಜಿನಿಂದ ಪಾಸಾಗಿರುವ ಸೀನಿಯರ್‌ಗಳನ್ನೂ ಸಂಪರ್ಕಿಸಿ. ನಿಮ್ಮ ಭವಿಷ್ಯ ನೀವು ಮಾಡುವ ಆಯ್ಕೆಗಳಿಂದಾಗುತ್ತದೆ; ಅದೃಷ್ಟದಿಂದಲ್ಲ. ನಿಮ್ಮಆಯ್ಕೆ ಸರಿ ಇದ್ದರೆ, ಪ್ರಯತ್ನಗಳಲ್ಲಿ ಪರಿಶ್ರಮವಿದ್ದರೆ, ಅದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ.ಯಶಸ್ಸಿನ ಹಾದಿಯಲ್ಲಿ ಎಲಿವೇಟರ್ ಇರುವುದಿಲ್ಲ. ನಿಮ್ಮಉದ್ದೇಶಕ್ಕೂ, ಆಯ್ಕೆಗೂ ಹೊಂದಾಣಿಕೆ ಇರಲಿ.ಪ್ರಸಿದ್ಧ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಹೇಳಿದಂತೆ,  ಧೈರ್ಯದಿಂದಿರಿ, ದೃಢವಾದ ನಂಬಿಕೆಯಿಂದ ಮುನ್ನಡೆಯಿರಿ, ಯಶಸ್ಸು ನಿಮ್ಮದಾಗುತ್ತದೆ .ಲೇಖಕರು ಮ್ಯೋನೇಜ್‌ಮೆಂಟ್ ಮತ್ತು ವೃತ್ತಿ ಸಲಹಾಗಾರರು. ಇ-ಮೇಲ್: info@promaxintl.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry