ಬುಧವಾರ, ಮೇ 25, 2022
31 °C

ಎಎಂಸಿ ಗಣಿ ಸಿಬಿಐ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಡೂರು (ಬಳ್ಳಾರಿ ಜಿಲ್ಲೆ): ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸಿಬ್ಬಂದಿ, ಜಿಲ್ಲೆಯ ಸಂಡೂರು ತಾಲ್ಲೂಕಿನ ರಾಮಗಡ ಗಣಿ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ, ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಹಾಗೂ ಅವರ ಪತ್ನಿ ಅರುಣಾ ಲಕ್ಷ್ಮಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಗಣಿ ಹಾಗೂ ಡೆಕ್ಕನ್ ಸಿಂಡಿಕೇಟ್ ಮೈನಿಂಗ್‌ನ ಗಣಿಗಳ ಪರಿಶೀಲನೆ ನಡೆಸಿದರು.ಡಿಐಜಿ ವಿ.ವಿ.ಲಕ್ಷ್ಮಿನಾರಾಯಣ ನೇತೃತ್ವದ ತಂಡ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಸಿಬಿಐನ 15ಕ್ಕೂ ಹೆಚ್ಚು ಸಿಬ್ಬಂದಿ, ಈ ಎರಡೂ ಗಣಿ ಪ್ರದೇಶಗಳಲ್ಲಿ ನಡೆದಿರುವ ಅಕ್ರಮಗಳ ಕುರಿತ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದರು.ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಜನಾರ್ದನರೆಡ್ಡಿ ಮಾಲೀಕತ್ವದ, ಆಂಧ್ರದಲ್ಲಿರುವ ಓಬಳಾಪುರಂ ಗಣಿ ಕಂಪೆನಿಯ ಜತೆ ವ್ಯವಹಾರ ನಡೆಸಿರುವ ರಾಜೇಂದ್ರ ಜೈನ್ ಮಾಲೀಕತ್ವದ ಡೆಕ್ಕನ್ ಸಿಂಡಿಕೇಟ್ ಮೈನಿಂಗ್ ಕಂಪೆನಿಯ ಗಣಿ ಪ್ರದೇಶ ಮತ್ತು ಸಂಡೂರು ತಾಲ್ಲೂಕಿನ ರಾಮಗಡ ಅರಣ್ಯ ಪ್ರದೇಶದಲ್ಲಿನ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಗಣಿ ಪ್ರದೇಶಗಳ ಪರಿಶೀಲನೆ ನಡೆಸಿದ ಸಿಬಿಐ ಸಿಬ್ಬಂದಿ ಜತೆ ಸರ್ವೆ ಮತ್ತು ಅದಿರು ಗುಣಮಟ್ಟ ಪರೀಕ್ಷೆ ತಜ್ಞರೂ ಇದ್ದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿನಾರಾಯಣ, `ಓಎಂಸಿ ಜತೆ ಈ ಗಣಿ ಕಂಪೆನಿಗಳು ವ್ಯವಹಾರ ನಡೆಸಿರುವುದರ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪರೀಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆ ಮುಂದುವರಿಯಲಿದೆ~ ಎಂದು ತಿಳೀಸಿದರು.ಸಂಡೂರು ತಾಲ್ಲೂಕಿನ ಕಮತೂರು ಗ್ರಾಮದ ಬಳಿ ರಾಷ್ಟ್ರೀಯ ಖನಿಜ ಅಭಿವೃದ್ದಿ ನಿಗಮ (ಎನ್‌ಎಂಡಿಸಿ)ದ ಗಣಿಗೆ ಹೊಂದಿಕೊಂಡಂತೆ ಡೆಕ್ಕನ್ ಸಿಂಡಿಕೇಟ್ ಮೈನಿಂಗ್‌ನ ಗಣಿ ಇದ್ದು, ಅಸೋಸಿಯೇಟೆಡ್ ಮೈನಿಂಗ್‌ಕಂಪೆನಿಯ ಗಣಿಯು ಜೈಸಿಂಗ್‌ಪುರದ ಬಳಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.