ಭಾನುವಾರ, ಜೂನ್ 13, 2021
24 °C

ಎಎಂಸಿ ಹೆಸರಿನಲ್ಲಿ ರೂ 2,800 ಕೋಟಿ ಲೂಟಿ

ಪ್ರಜಾವಾಣಿ ವಾರ್ತೆ ವಿ.ಎಸ್.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮೂಲಕ ರಾಜ್ಯದಿಂದ 80 ಲಕ್ಷ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಕುಟುಂಬ ಇದರಿಂದ 2,800 ಕೋಟಿ ರೂಪಾಯಿಗೂ ಹೆಚ್ಚು ನಿವ್ವಳ `ಲಾಭ~ ಸಂಪಾದಿಸಿತ್ತು ಎಂಬುದನ್ನು ಖಚಿತಪಡಿಸಬಲ್ಲ ದಾಖಲೆಗಳನ್ನು ಸಿಬಿಐ ಕಲೆಹಾಕಿದೆ.ಬಳ್ಳಾರಿಯ ವಿವಿಧೆಡೆ ಅಕ್ರಮವಾಗಿ ತೆಗೆದ ಅದಿರು ಆರು ಸ್ಥಗಿತ ಗಣಿಗಳು ಮತ್ತು 30ಕ್ಕೂ ಹೆಚ್ಚು ನೋಂದಾಯಿತ ಮಾರಾಟಗಾರರ ಮೂಲಕ ರಫ್ತುದಾರರು ಹಾಗೂ ದೇಶಿ ಉಕ್ಕು ಕೈಗಾರಿಕೆಗಳಿಗೆ ಪೂರೈಕೆಯಾಗಿದೆ. ವಿಭಿನ್ನ ಮಾರ್ಗಗಳ ಮೂಲಕ ವಹಿವಾಟು ನಡೆಸಿ, ಅಕ್ರಮ ಸಂಪಾದನೆಗೆ `ಸಕ್ರಮ~ದ ಮುದ್ರೆ ಒತ್ತುವ ಪ್ರಯತ್ನವನ್ನೂ ನಡೆಸಿದ್ದರು ಎನ್ನುವುದನ್ನು ಸಾಬೀತುಪಡಿಸಬಲ್ಲ ಬಲವಾದ ಸಾಕ್ಷ್ಯಗಳನ್ನು ಡಿಐಜಿ ಆರ್.ಹಿತೇಂದ್ರ ನೇತೃತ್ವದ ತನಿಖಾ ತಂಡ ಪತ್ತೆಮಾಡಿದೆ.`ರೆಡ್ಡಿ ಪರಿವಾರ ರಾಜ್ಯದಲ್ಲಿ ಅತ್ಯಂತ ಚಾಲಾಕಿತನದಿಂದಲೇ ಅಕ್ರಮ ಗಣಿಗಾರಿಕೆ ನಡೆಸಿದೆ. ತಮ್ಮ ವ್ಯವಹಾರಗಳು `ಕ್ರಮಬದ್ಧ~ ಎಂದು ನಿರೂಪಿಸುವಂತಹ ಪ್ರಯತ್ನವನ್ನು ಪ್ರತಿ ಹಂತದಲ್ಲೂ ಮಾಡಿದ್ದಾರೆ. ಅವರು ಹಣಕಾಸು ತಜ್ಞರೂ ನಾಚುವಂತೆ ವ್ಯವಹಾರ ನಿಭಾಯಿಸುತ್ತಿದ್ದರು. ಅಕ್ರಮವಾಗಿ ತೆಗೆದ ಅದಿರು ಖರೀದಿದಾರರ ಕೈಸೇರುವವರೆಗೂ ಕಿಂಚಿತ್ತೂ ಮಾಹಿತಿ ಹೊರಬೀಳದಂತೆ ಈ ಜಾಲ ಕೆಲಸ ಮಾಡುತ್ತಿತ್ತು~ ಎಂದು ಸಿಬಿಐ ಮೂಲಗಳು ತಿಳಿಸಿವೆ.

 

ಗುರು-ಶಿಷ್ಯ ಗಲಿಬಿಲಿ
ಅಲಿಖಾನ್ ಸಿಬಿಐ ವಶಕ್ಕೆ ದೊರೆತ ಬಳಿಕ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಆಗಿದೆ. ಎಎಂಸಿ ಹೆಸರಿನಲ್ಲಿ ಜನಾರ್ದನ ರೆಡ್ಡಿ ನಡೆಸಿದ ಸಮಸ್ತ ವ್ಯವಹಾರಗಳ ಬಗ್ಗೆಯೂ ಆತನ ಬಳಿ ಮಾಹಿತಿ ಇದೆ. ಅಕ್ರಮ ಅದಿರು ಸಂಗ್ರಹಣೆಯಿಂದ ಲಾಭಾಂಶ ಹಂಚಿಕೆವರೆಗೆ ಎಲ್ಲ ಹಂತಗಳ ಬಗ್ಗೆ ಸಿಬಿಐ ಡಿಐಜಿ ಆರ್.ಹಿತೇಂದ್ರ ನೇತೃತ್ವದ ತಂಡ ಆತನನ್ನು ನಿರಂತರವಾಗಿ ಪ್ರಶ್ನಿಸುತ್ತಿದೆ. ನೇರವಾದ ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನಿಸುತ್ತಿರುವುದರಿಂದ ಆತ ತಬ್ಬಿಬ್ಬುಗೊಂಡಿದ್ದಾನೆ ಎಂದು ಗೊತ್ತಾಗಿದೆ.

ಎಎಂಸಿ ಹೆಸರಿನಲ್ಲಿ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಡ್ರಾ ಮಾಡಲು ಬಳಸಿದ ಚೆಕ್ಕುಗಳನ್ನೇ ತೋರಿಸಿ ರೆಡ್ಡಿ ಅವರನ್ನು ಪ್ರಶ್ನಿಸಲಾಗಿದೆ. ಸ್ವಂತ ಚೆಕ್ಕುಗಳನ್ನು ಕಂಡ ರೆಡ್ಡಿ ಕೂಡ ಗಲಿಬಿಲಿಗೊಂಡಿದ್ದರು ಎಂದು ತಿಳಿದುಬಂದಿದೆ.ಎರಡೆರಡು ದಾರಿ: ಸಿಬಿಐ ಮೂಲಗಳ ಪ್ರಕಾರ, `ರೆಡ್ಡಿ ಪಾಳೆಯ ಅದಿರು ತೆಗೆಯುವ ಹಂತದಲ್ಲೇ ಎರಡು ಬಗೆಯ ಅಕ್ರಮ ಮಾರ್ಗಗಳನ್ನು ಅನುಸರಿಸುತ್ತಿತ್ತು. ಮೊದಲನೆಯದಾಗಿ ಕೆಲ ಗಣಿಗಳನ್ನು ಉಪ ಗುತ್ತಿಗೆಗೆ ಪಡೆದುಕೊಂಡಿದ್ದ ಜನಾರ್ದನ ರೆಡ್ಡಿ ಹಾಗೂ ಸಹಚರರು, ಅಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ್ದ ಅನುಮತಿಗಿಂತಲೂ ಹೆಚ್ಚು ಅದಿರು ತೆಗೆಯುತ್ತಿದ್ದರು. ಬೇರೆಡೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮೂಲಕವೂ ದೊಡ್ಡ ಪ್ರಮಾಣದ ಅದಿರು ತೆಗೆಯುತ್ತಿದ್ದರು.`ಎರಡು ಅಕ್ರಮ ಮಾರ್ಗಗಳಲ್ಲಿ ತೆಗೆದ ಅದಿರನ್ನು `ಸಕ್ರಮ~ಗೊಳಿಸುವುದಕ್ಕೆ ಎರಡು ಮಾರ್ಗಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಒಂದಷ್ಟು ಪ್ರಮಾಣದ ಅದಿರಿಗೆ ಎಎಂಸಿ ಸೇರಿದಂತೆ ಈಗಾಗಲೇ ಸ್ಥಗಿತಗೊಂಡಿದ್ದ ಆರು ಗಣಿಗಳ ಹೆಸರಿನಲ್ಲಿ ಸಾಗಣೆ ಪರವಾನಗಿ ಪಡೆಯಲಾಗುತ್ತಿತ್ತು. ಮತ್ತೊಂದಷ್ಟು ಅದಿರನ್ನು ಹಲವು ನೋಂದಾಯಿತ ಮಾರಾಟಗಾರರು ಇತರರಿಂದ ಖರೀದಿಸಿದಂತೆ ದಾಖಲೆ ಸೃಷ್ಟಿಸಲಾಗುತ್ತಿತ್ತು. ನಂತರ ಸ್ಥಗಿತ ಗಣಿಗಳು ಮತ್ತು ನೋಂದಾಯಿತ ಮಾರಾಟಗಾರರ ಹೆಸರಿನಲ್ಲೇ ವ್ಯವಹಾರ ಮುಂದುವರಿಯುತ್ತಿತ್ತು.`ಅಕ್ರಮ ಗಣಿಗಾರಿಕೆ ಮೂಲಕ ಸಂಗ್ರಹಿಸಿದ ಅದಿರನ್ನು ರೆಡ್ಡಿ ಅವರ ಗುಂಪು ವಿದೇಶಗಳಿಗೆ ರಫ್ತು ಮಾಡುವುದು ಮತ್ತು ದೇಶಿ ಉಕ್ಕು ಕಾರ್ಖಾನೆಗಳಿಗೆ ಪೂರೈಸುವ ಮೂಲಕ ವಿಲೇವಾರಿ ಮಾಡುತ್ತಿತ್ತು. ಇವರಿಂದ ಅದಿರು ಖರೀದಿಸುವವರು ಸ್ಥಗಿತ ಗಣಿಗಳ ಮಾಲೀಕರು ಮತ್ತು ನೋಂದಾಯಿತ ಮಾರಾಟಗಾರರಿಗೆ ಹಣ ಪಾವತಿಸಬೇಕಿತ್ತು.`ಲಾಭ~ದ ಹೊಳೆ: `ಖರೀದಿದಾರರು ಪಾವತಿಸುವ ಮೊತ್ತದಲ್ಲಿ ಗಣಿಗಾರಿಕೆ, ಸಾಗಣೆ, ಇತರೆ ನಿರ್ವಹಣಾ ವೆಚ್ಚಗಳನ್ನು ಕಳೆದ ಬಳಿಕ ಲಾಭಾಂಶ ಹಂಚಿಕೆ ನಡೆಯುತ್ತಿತ್ತು. ಸ್ಥಗಿತ ಗಣಿಗಳ ಹೆಸರಿನಲ್ಲಿ ನಡೆಯುವ ವಹಿವಾಟಿನಲ್ಲಿ ಶೇಕಡ 75ರಷ್ಟು ಲಾಭಾಂಶ ಜನಾರ್ದನ ರೆಡ್ಡಿ ಅವರಿಗೆ ಸಂದಾಯವಾಗುತ್ತಿತ್ತು. ಸ್ಥಗಿತ ಗಣಿಗಳ ಹೆಸರಿನಲ್ಲಿ ಅಕ್ರಮ ವ್ಯವಹಾರಕ್ಕೆ ಸಹಕಾರ ನೀಡಿದ ಗಣಿ ಮಾಲೀಕರಿಗೆ ಶೇ 25ರಷ್ಟು ಪಾಲು ದೊರೆಯುತ್ತಿತ್ತು. ನೋಂದಾಯಿತ ಮಾರಾಟಗಾರರ ಮೂಲಕ ನಡೆಯುವ ವ್ಯವಹಾರದಲ್ಲಿ ಶೇ 90ರಷ್ಟು ಲಾಭ ರೆಡ್ಡಿ ಅವರ ಪಾಲಾದರೆ, ಶೇ 10ರಷ್ಟು `ಮಾರಾಟಗಾರ~ರ ವೇಷಧಾರಿಗಳಿಗೆ ಸಲ್ಲುತ್ತಿತ್ತು.`ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿದ್ದ ಅವಧಿಯಲ್ಲಿ ಕಬ್ಬಿಣದ ಅದಿರಿನ ದರ ಪ್ರತಿ ಟನ್‌ಗೆ 10,000 ರೂಪಾಯಿವರೆಗೂ ಇತ್ತು. ಎಎಂಸಿ ಹೆಸರಿನಲ್ಲಿ ಅಕ್ರಮವಾಗಿ ಸಾಗಿಸಿದ 80 ಲಕ್ಷ ಟನ್ ಅದಿರಿನ ಒಟ್ಟು ಮೌಲ್ಯ ರೂ 8,000 ಕೋಟಿಗೂ ಹೆಚ್ಚು. ಎಲ್ಲ ವೆಚ್ಚಗಳನ್ನೂ ಹೊರತುಪಡಿಸಿದ ಬಳಿಕ ನಡೆಯುವ ಲಾಭಾಂಶ ಹಂಚಿಕೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಪ್ರತಿ ಟನ್‌ಗೆ ಕನಿಷ್ಠ 3,500 ರೂಪಾಯಿ ದೊರೆಯುತ್ತಿತ್ತು~ ಎಂಬುದಕ್ಕೆ ಸಿಬಿಐ ಬಳಿ ಪ್ರಬಲ ಸಾಕ್ಷ್ಯಾಧಾರಗಳಿವೆ.`ಸ್ಥಗಿತ ಗಣಿಗಳ ಮಾಲೀಕರು ಮತ್ತು ನೋಂದಾಯಿತ `ಮಾರಾಟಗಾರ~ರ ಬ್ಯಾಂಕ್ ಖಾತೆಗಳಿಂದ ಈ ಲಾಭಾಂಶದ ಮೊತ್ತ ಹಲವು ಖಾತೆಗಳನ್ನು ದಾಟಿಕೊಂಡು, ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಜಿ.ಲಕ್ಷ್ಮಿ ಅರುಣಾ ಅವರ ಖಾತೆ ಸೇರುತ್ತಿತ್ತು. ನಂತರ ರೆಡ್ಡಿ ದಂಪತಿ ಸ್ವಂತ ಚೆಕ್ಕುಗಳ ಮೂಲಕವೇ ಹಣವನ್ನು `ಡ್ರಾ~ ಮಾಡುತ್ತಿದ್ದರು. ಹೀಗೆ 2,800 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಅವರ `ಖಜಾನೆ~ಗೆ ಸೇರಿದೆ~ ಎಂದು ಸಿಬಿಐ ಮೂಲಗಳು ತಿಳಿಸಿವೆ.`ಬಳ್ಳಾರಿ ಮತ್ತು ಹೊಸಪೇಟೆಯ ಆ್ಯಕ್ಸಿಸ್ ಬ್ಯಾಂಕ್, ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್ ಮತ್ತು ಲಕ್ಷ್ಮಿ ವಿಲಾಸ ಬ್ಯಾಂಕ್ ಶಾಖೆಗಳ ಮೂಲಕ ಈ ವ್ಯವಹಾರ ನಡೆದಿದೆ.ಈ ಎಲ್ಲ ವ್ಯವಹಾರವನ್ನೂ ರೆಡ್ಡಿ ಆಪ್ತ ಮೆಹಫೂಜ್ ಅಲಿಖಾನ್ ನಿರ್ವಹಿಸಿ, ನಿಯಂತ್ರಿಸುತ್ತಿದ್ದ ಎಂಬುದನ್ನು ದೃಢಪಡಿಸುವ ದಾಖಲೆಗಳೂ ಸಿಬಿಐ ಬಳಿ ಇವೆ~ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ಖಚಿತಪಡಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.