ಸೋಮವಾರ, ಜುಲೈ 26, 2021
21 °C

ಎಐಇಇಇ ಪ್ರಶ್ನೆಪತ್ರಿಕೆ ಬಹಿರಂಗ: ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲಾದ ಹಿನ್ನೆಲೆಯಲ್ಲಿ ಎರಡು ಪರೀಕ್ಷೆಗಳ ಸಮಯವನ್ನು ಮುಂದೂಡಿದ ಪರಿಣಾಮ ನಗರದ ಹೆಬ್ಬಾಳ ಕೇಂದ್ರೀಯ ವಿದ್ಯಾಲಯದಲ್ಲಿ ಭಾನುವಾರ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಅಖಿಲ ಭಾರತ ಮಟ್ಟದ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ (ಎಐಇಇಇ) ಬೆಳಗ್ಗೆ 9.30 ಗಂಟೆಗೆ ಆರಂಭವಾಗಬೇಕಿತ್ತು. ವಿದ್ಯಾರ್ಥಿಗಳು 9 ಗಂಟೆಗೆ ಪರೀಕ್ಷೆ ಬರೆಯುವ ಕೊಠಡಿಗೆ ಪ್ರವೇಶಿಸಿದರು. ಪ್ರಶ್ನೆಪತ್ರಿಕೆ ವಿತರಿಸಬೇಕಿದ್ದ ಸಂದರ್ಭದಲ್ಲಿ ಪುಣೆಯಲ್ಲಿ ಇದೇ ವಿಷಯದ ಪ್ರಶ್ನೆ ಪತ್ರಿಕೆ ಬಯಲಾದ ಸುದ್ದಿ ದೆಹಲಿಯ ಸಿಬಿಎಸ್‌ಸಿ ಪರೀಕ್ಷಾ ಕೇಂದ್ರದಿಂದ ತಲುಪಿತು. ತಕ್ಷಣ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪರೀಕ್ಷೆಯನ್ನು ರದ್ದುಪಡಿಸಿದರು.

ಯಾವುದೇ ಮಾಹಿತಿ ನೀಡದೆ ಪರೀಕ್ಷೆ ರದ್ದುಪಡಿಸಿದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಕೆಲಕಾಲ ಗೊಂದಲಕ್ಕೀಡಾದರು. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮಧ್ಯ ಪ್ರವೇಶಿಸಿ, ಇದೇ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 12ರಿಂದ 3ರವರೆಗೆ ನಡೆಸುವುದಾಗಿ ಘೋಷಿಸಿದರು. ನಂತರ ಪ್ರಶ್ನೆಪತ್ರಿಕೆಯನ್ನು ಬದಲಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಲಾಯಿತು.

ಸಂಚಾರ ವ್ಯತ್ಯಯ: ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಗುಂಪು ಮುಖ್ಯರಸ್ತೆಗೆ ಬಂದ ಪರಿಣಾಮ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

‘ಪೋಷಕರು ಒತ್ತಾಯಿಸಿದ ನಂತರವಷ್ಟೇ ಪರೀಕ್ಷೆ ರದ್ದತಿಗೆ ಕಾರಣವೇನು ಎಂಬುದನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ತಿಳಿಸಿದರು. ಪರೀಕ್ಷಾ ಕೇಂದ್ರದ ಅಂಗಳದಲ್ಲಿ ಸ್ಥಳಾವಕಾಶ ಇದ್ದರೂ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಹೊರಗೆ ಕಳುಹಿಸಲಾಯಿತು ಇದರಿಂದ ರಸ್ತೆ ಸಂಚಾರದಲ್ಲಿ ಏರುಪೇರು ಉಂಟಾಯಿತು’ ಎಂದು ಎಐಇಇಇ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯೊಬ್ಬರ ತಂದೆ ಕುಲಕರ್ಣಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೆ ಗೊಂದಲ: ಇದೇ ಕೇಂದ್ರದಲ್ಲಿ ಮಧ್ಯಾಹ್ನ 2.30 ಗಂಟೆಗೆ ಆರಂಭ ವಾಗಬೇಕಾಗಿದ್ದ ಸಶಸ್ತ್ರ ಪಡೆ ವೈದ್ಯಕೀಯ ಪ್ರವೇಶ ಪರೀಕ್ಷೆಯ (ಎಎಫ್‌ಎಂಸಿ) ಸಮಯವನ್ನು ಸಂಜೆ 4.30 ಗಂಟೆಗೆ ಮುಂದೂಡಲಾಯಿತು. ಪರೀಕ್ಷಾ ಸಮಯವನ್ನು ಮುಂದೂಡಿರುವ ಬಗ್ಗೆ ಮಾಹಿತಿ ದೊರೆಯದೆ ವಿದ್ಯಾರ್ಥಿಗಳು ಗೊಂದಲಕ್ಕೀಡಾದರು. ಪರೀಕ್ಷೆ ನಡೆಯುವ ಸಮಯವನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿದ ನಂತರವಷ್ಟೆ ಸಮಸ್ಯೆ ಬಗೆಹರಿಯಿತು.

ಎರಡೂ ಪರೀಕ್ಷೆಗಳ ಸಮಯ ಬದಲಾವಣೆಯಾದ ಪರಿಣಾಮ ದೂರದ ಆಂಧ್ರ, ತಮಿಳುನಾಡು, ಉತ್ತರ ಕರ್ನಾಟಕ ಭಾಗಗಳಿಂದ ಆಗಮಿಸಿದ್ದ ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ಮೊದಲೇ ರೈಲು ಹಾಗೂ ಬಸ್‌ನ ಪ್ರಯಾಣದ ಸಮಯದ ಟಿಕೆಟ್‌ಅನ್ನು ಕಾಯ್ದಿರಿಸಿದ್ದರಿಂದ ತೊಂದರೆ ಅನುಭವಿಸಬೇಕಾಯಿತು. ಆದರೆ ಗೊಂದಲ ಉಂಟಾದ ಬಗ್ಗೆ ಪ್ರಾಂಶುಪಾಲರಿಂದ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ.

ಅವಕಾಶ: ಎರಡೂ ವಿಷಯಗಳ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಮುಂದಿನ ಭಾನುವಾರ ಎಐಇಇಇ ಪರೀಕ್ಷೆ ಬರೆಯಲು  ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.