ಎಐಟಿಎ ಟೆನಿಸ್: ರಮ್ಯಾ, ನಿಶಾಂಗನ್‌ಗೆ ಪ್ರಶಸ್ತಿ

ಬೆಂಗಳೂರು: ಶ್ರೀಲಂಕಾದ ಎಂ.ಎನ್.ನಿಶಾಂಗನ್ ಹಾಗೂ ತಮಿಳುನಾಡಿನ ಎನ್.ರಮ್ಯಾ ಅವರು ಇಲ್ಲಿ ನಡೆಯುತ್ತಿರುವ ಮಹಿಳಾ ಸೇವಾ ಸಮಾಜ ಆಶ್ರಯದ ಎಐಟಿಎ ಟ್ಯಾಲೆಂಟ್ ಸರಣಿ ರಾಷ್ಟ್ರೀಯ ರ್ಯಾಂಕಿಂಗ್ ಟೆನಿಸ್ ಟೂರ್ನಿಯ 14 ವರ್ಷ ವಯಸ್ಸಿನೊಳಗಿನವರ ಸ್ಪರ್ಧೆಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಗುರುವಾರ ನಡೆದ ಫೈನಲ್‌ನಲ್ಲಿ ನಿಶಾಂಗನ್ 6-0, 6-1ರಲ್ಲಿ ಎಸ್.ಗಣೇಶ್ ಅವರನ್ನು ಸೋಲಿಸಿದರು. ಲಂಕಾದ ಈ ಆಟಗಾರ ಮೂರನೇ ಶ್ರೇಯಾಂಕದ ಗಣೇಶ್ ಮೇಲೆ ಪೂರ್ಣ ಪಾರಮ್ಯ ಮೆರೆದರು.
ರಮ್ಯಾ ಕೂಡ ಅಂತಿಮ ಘಟ್ಟದ ಪಂದ್ಯದಲ್ಲಿ ಗೆಲ್ಲಲು ಹೆಚ್ಚು ಕಷ್ಟಪಡಬೇಕಾಗಲಿಲ್ಲ. ಅವರು 6-2, 6-3ರಲ್ಲಿ ಶಿಖಾ ಎನ್.ಸಿಂಗ್ ಅವರನ್ನು ಸೋಲಿಸಿದರು.
ಆದರೆ ಕರ್ನಾಟಕದ ಬಾಲಕರು 16 ವರ್ಷದೊಳಗಿನವರ ವಿಭಾಗದಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಎ.ಕಷ್ಯಪ್ 6-0, 6-2ರಲ್ಲಿ ಗೌತಮ್ ರಾಮ್ ಕುಮಾರ್ ಅವರನ್ನು ಪರಾಭವಗೊಳಿಸಿದರು.
ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಆಂಟನಿ ಸವಿಯೊ 6-2, 3-6, 6-4ರಲ್ಲಿ ನಿಶಾಂಗನ್ ಅವರನ್ನು ಮಣಿಸಿದರು. ಫೈನಲ್‌ನಲ್ಲಿ ಕಷ್ಯಪ್ ಹಾಗೂ ಆಂಟನಿ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದ್ದಾರೆ.
ಡಬಲ್ಸ್ ವಿಭಾಗದಲ್ಲಿ ಕಷ್ಯಪ್ ಹಾಗೂ ಆಂಟನಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅವರು ಫೈನಲ್‌ನಲ್ಲಿ 6-4, 6-3ರಲ್ಲಿ ಎಸ್.ಗಣೇಶ್ ಹಾಗೂ ಎಲ್.ಹರ್ಷ ಅವರನ್ನು ಸೋಲಿಸಿದರು.
16 ವರ್ಷದೊಳಗಿನವರ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ತಾನ್ಯಾ ಸಿಂಗ್ ಹಾಗೂ ಶ್ರೀಲಂಕಾದ ಟಿ.ಶಂಕರಿ ಪೈಪೋಟಿ ನಡೆಸಲಿದ್ದಾರೆ. ಸೆಮಿಫೈನಲ್‌ನಲ್ಲಿ ತಾನ್ಯಾ ವಾಕ್ ಓವರ್ ಪಡೆದರು. ಶಂಕರಿ 6-7, 6-0, 6-4ರಲ್ಲಿ ಶಿಖಾ ಎನ್.ಸಿಂಗ್ ಅವರನ್ನು ಮಣಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.