ಎಐಸಿಟಿಇ ಪ್ರವೇಶಾತಿಯಲ್ಲಿ ಮಹತ್ವದ ಬದಲಾವಣೆ

7

ಎಐಸಿಟಿಇ ಪ್ರವೇಶಾತಿಯಲ್ಲಿ ಮಹತ್ವದ ಬದಲಾವಣೆ

Published:
Updated:

ಬೆಂಗಳೂರು: ತಾಂತ್ರಿಕ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡುವ ದೃಷ್ಟಿಯಿಂದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪ್ರವೇಶಾತಿಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದರಿಂದಾಗಿ ಎಂಜಿನಿಯರಿಂಗ್, ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತಾ ಪರೀಕ್ಷೆಗಳಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

2011-12ನೇ ಸಾಲಿನಿಂದಲೇ ಎಐಸಿಟಿಇ ಮಾಡಿರುವ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ಸಾವಿರಾರು ಬಡ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಡಿಪ್ಲೊಮಾ ಶಿಕ್ಷಣದಿಂದ ವಂಚಿತರಾಗುವ ಆತಂಕ ಎದುರಾಗಿದೆ.

ತಾಂತ್ರಿಕ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ಕೈಪಿಡಿಯನ್ನು ಎಐಸಿಟಿಇ ಎಲ್ಲ ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ. ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಪ್ರವೇಶಾತಿಯಲ್ಲಿ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಪಾಲಿಟೆಕ್ನಿಕ್‌ಗಳು ಹೊಸ ಸಂಯೋಜನೆ, ಮಾನ್ಯತೆ ನವೀಕರಣಕ್ಕಾಗಿ ಎಐಸಿಟಿಇಗೆ ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ವಿಷಯದಲ್ಲಿ ರಾಜ್ಯಗಳಿಗೆ ಇದ್ದ ಅಧಿಕಾರವನ್ನೂ ಹಿಂದಕ್ಕೆ ಪಡೆಯಲಾಗಿದೆ.

ಈ ಬದಲಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇದನ್ನು ರದ್ದು ಮಾಡುವಂತೆ ಒತ್ತಡ ತರುವ ಸಲುವಾಗಿ ನವದೆಹಲಿಗೆ ನಿಯೋಗ ತೆರಳಲು ಖಾಸಗಿ ಶಿಕ್ಷಣ ಸಂಸ್ಥೆಗಳು ಸಿದ್ಧತೆಯಲ್ಲಿ ತೊಡಗಿವೆ.

ಎಐಸಿಟಿಇ ತಂದಿರುವ ಬದಲಾವಣೆಯಿಂದಾಗಿ ಮುಖ್ಯವಾಗಿ ಪಾಲಿಟೆಕ್ನಿಕ್‌ಗಳ ಸಂಯೋಜನೆ, ಪ್ರವೇಶ ನಿಯಂತ್ರಣ ರಾಜ್ಯಗಳ ಕೈತಪ್ಪಿ ನೇರವಾಗಿ ಎಐಸಿಟಿಇ ವ್ಯಾಪ್ತಿಗೆ ಒಳಪಡಲಿದೆ. ಅಲ್ಲದೆ ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳನ್ನು ಪಡೆದವರು ಮಾತ್ರ ಡಿಪ್ಲೊಮಾ ಪ್ರವೇಶಕ್ಕೆ ಅರ್ಹರಾಗಲಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇದುವರೆಗೆ ದ್ವಿತೀಯ ಪಿಯುಸಿಯಲ್ಲಿ ಶೇ 45ರಷ್ಟು ಅಂಕಗಳನ್ನು (ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1 ಶೇ 40) ಗಳಿಸಿದವರು ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗಿದ್ದರು. ಪಿಯುಸಿ ಮತ್ತು ಸಿಇಟಿಯಲ್ಲಿನ ತಲಾ ಶೇ 50ರಷ್ಟು ಅಂಕಗಳನ್ನು ಗಣನೆಗೆ ತೆಗೆದುಕೊಂಡು ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಪಿಯುಸಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಪಡೆದವರು ಮಾತ್ರ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗುತ್ತಾರೆ.

ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ ಶೇ 50ರಷ್ಟು (ಎಸ್‌ಸಿ/ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳು ಶೇ 45ರಷ್ಟು) ಅಂಕಗಳನ್ನು ಪಡೆಯಲೇಬೇಕು. ಇದುವರೆಗೆ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಮಾಡಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿತ್ತು. ಅರ್ಹತೆ ಮತ್ತು ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಆಗುತ್ತಿತ್ತು.

ಎಐಸಿಟಿಇಯ ಈ ಬದಲಾವಣೆಗೆ ಅನುಗುಣವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ನಿಗದಿ ಮಾಡಿರುವ ಅರ್ಹತೆಯ ಮಾನದಂಡಕ್ಕೆ ತಿದ್ದುಪಡಿ ತರುವುದು ಅನಿವಾರ್ಯವಾಗಿದ್ದು, ಮುಂದಿನ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದಿಂದ ಎಐಸಿಟಿಇ ಕಾರ್ಯವೈಖರಿಯಲ್ಲಿ ಬದಲಾವಣೆಯಾಗಿದ್ದು, ಮಂಡಳಿಯ ಹಂಗಾಮಿ ಅಧ್ಯಕ್ಷ ಎಸ್.ಎಸ್.ಮಂಥಾ ಅವರು ಸುಧಾರಣೆಗಳನ್ನು ತರುವ ದೃಷ್ಟಿಯಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಒಂದು ವೇಳೆ ಇದನ್ನು ಪಾಲಿಸದೆ ಇದ್ದರೆ ಮಾನ್ಯತೆ ನವೀಕರಿಸದೆ ಇರುವ ಅಥವಾ ಹೊಸ ಕೋರ್ಸ್, ಕಾಲೇಜುಗಳಿಗೆ ಅನುಮತಿ ನೀಡದೆ ಇರುವ ಸಾಧ್ಯತೆಗಳಿವೆ. ಹೀಗಾಗಿ ಸರ್ಕಾರ ಎಐಸಿಟಿಇ ಪರಿಷ್ಕೃತ ನಿಯಮಗಳನ್ನು ಯಥಾವತ್ತಾಗಿ ಜಾರಿಗೆ ತರುವ ಸಂಭವವಿದೆ.

ಆದರೆ ಈ ಬದಲಾವಣೆಯಿಂದಾಗಿ ಒಂದೆಡೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಡಿಪ್ಲೊಮಾ ಪ್ರವೇಶ ಕೈತಪ್ಪಲಿದೆ ಎಂಬ ಆತಂಕ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪಾಲಿಟೆಕ್ನಿಕ್‌ಗಳನ್ನು ಆರಂಭಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಸೀಟುಗಳನ್ನು ಭರ್ತಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

ರಾಜ್ಯದಲ್ಲಿ ಒಟ್ಟು 273 ಪಾಲಿಟೆಕ್ನಿಕ್‌ಗಳಿದ್ದು, ಈ ಪೈಕಿ 81 ಸರ್ಕಾರಿ, 148 ಖಾಸಗಿ, 44 ಅನುದಾನಿತ ಪಾಲಿಟೆಕ್ನಿಕ್‌ಗಳಾಗಿವೆ. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪಾಲಿಟೆಕ್ನಿಕ್‌ಗಳಲ್ಲಿ ಸುಮಾರು 80 ಸಾವಿರ ಸೀಟುಗಳು ಲಭ್ಯವಿದ್ದು, ಪ್ರತಿ ವರ್ಷ 20 ಸಾವಿರ ಸೀಟುಗಳು ಭರ್ತಿಯಾಗದೆ ಉಳಿಯುತ್ತವೆ. ಪರಿಸ್ಥಿತಿ ಹೀಗಿರುವಾಗ ಡಿಪ್ಲೊಮಾ ಪ್ರವೇಶಕ್ಕೆ ಶೇ 50ರಷ್ಟು ಅಂಕಗಳನ್ನು ನಿಗದಿ ಮಾಡಿದರೆ ಅರ್ಧದಷ್ಟು ಸೀಟುಗಳು ಸಹ ಭರ್ತಿಯಾಗುವುದಿಲ್ಲ ಎಂದು ಖಾಸಗಿ ಪಾಲಿಟೆಕ್ನಿಕ್‌ಗಳ ಆಡಳಿತ ಮಂಡಳಿಯವರು ಆತಂಕಗೊಂಡಿದ್ದಾರೆ.

ಎಸ್ಸೆಸ್ಸೆಲ್ಸಿ ನಂತರ ಪಿಯುಸಿ, ಪದವಿ, ಉನ್ನತ ಶಿಕ್ಷಣ ಪೂರೈಸಲಾಗದವರು, ಎಂಜಿನಿಯರಿಂಗ್‌ಗೆ ದುಬಾರಿ ಶುಲ್ಕವನ್ನು ಭರಿಸಲಾಗದ, ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ವರ್ಷಗಳ ಡಿಪ್ಲೊಮಾ ಪೂರೈಸಿ ಯಾವುದಾದರೂ ಸಣ್ಣಪುಟ್ಟ ಉದ್ಯೋಗದಲ್ಲಿ ತೊಡಗುತ್ತಿದ್ದರು. ಆದರೆ ಈಗ ಎಐಸಿಟಿಇ ಅದಕ್ಕೂ ಅಡ್ಡಗಾಲು ಹಾಕಿದೆ ಎಂದು ಸರ್ಕಾರಿ, ಅನುದಾನಿತ ಪಾಲಿಟೆಕ್ನಿಕ್ ನೌಕರರ ಸಂಘದ ಅಧ್ಯಕ್ಷ ಕೆ.ಜೆ.ಶಿವಶಂಕರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry