ಮಂಗಳವಾರ, ಡಿಸೆಂಬರ್ 10, 2019
26 °C

ಎಐಸಿಸಿ ವೀಕ್ಷಕರಿಗೆ ‘ಪ್ರತಿಭಟನೆ’ಯ ಸ್ವಾಗತ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಐಸಿಸಿ ವೀಕ್ಷಕರಿಗೆ ‘ಪ್ರತಿಭಟನೆ’ಯ ಸ್ವಾಗತ !

ಚಿತ್ರದುರ್ಗ: ‘ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಠಾವೋ ಕಾಂಗ್ರೆಸ್‌ ಬಚಾವೋ...’ ಸೇತೂರಾಮ್ ಹಠಾವೊ, ಕಾಂಗ್ರೆಸ್ ಬಚಾವೋ... ಎನ್ನುತ್ತಾ ಕಾಂಗ್ರೆಸ್ ಪಕ್ಷದ ಯುವಕರ ಗುಂಪೊಂದು ಬುಧವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿ ಡಾ.ಎ.ಚಲ್ಲಕುಮಾರ್ ಎದರು ಆಕ್ರೋಶ ವ್ಯಕ್ತಪಡಿಸಿದರು.ಮುಂದಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ್ದ ಚಲ್ಲಕುಮಾರ್ ಅವರಿಗೆ ಕಾರ್ಯಕರ್ತರು ಪ್ರತಿಭಟನೆಯೊಂದಿಗೆ ಸ್ವಾಗತ ಕೋರಿದರು !ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಸಂಪೂರ್ಣ ಕ್ಷೀಣಿಸಿದೆ. ಜಿಲ್ಲಾ ಘಟಕದ ಅಧ್ಯಕ್ಷರನ್ನು ಮೊದಲು ಬದಲಾಯಿಸಿ ಎಂದು ಕಾಂಗ್ರೆಸ್‌ ಮುಖಂಡರಾದ ವೆಂಕಟೇಶ್ ಬಾಬು, ಶಿವುಯಾದವ್ ವೀಕ್ಷಕರನ್ನು ಒತ್ತಾಯಿಸಿದರು.ಪ್ರತಿಭಟನಾಕಾರರ ಆರೋಪಗಳನ್ನು ಸಮಾಧಾನದಿಂದ ಕೇಳಿಸಿಕೊಂಡ ವೀಕ್ಷಕ ಚಲ್ಲಕುಮಾರ್, ‘ತಮ್ಮ ದೂರುಗಳನ್ನು ರಾಜ್ಯದ ವರಿಷ್ಠರಿಗೆ ಅರ್ಜಿ ಮೂಲಕ ಸಲ್ಲಿಸುವಂತೆ’ ಸೂಚಿಸಿ, ಸಮಾಧಾನ ಮಾಡಲು ಮುಂದಾದರು.ಅದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, ‘ಈವರೆಗೆ ಸಾಕಷ್ಟು ಬಾರಿ ಅಂಥ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ. ಅಧ್ಯಕ್ಷರು ಹೀಗೆ ಮುಂದುವರಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ’ ಎಂದು ಅವರು ಎಚ್ಚರಿಸಿದರು.ಅಲ್ಪಸಂಖ್ಯಾತರ ವಿಭಾಗದ ಮುಖಂಡ ಸೈಯದ್ ವಲಿ ಖಾದ್ರಿ ಅವರ ನೇತೃತ್ವದಲ್ಲಿ ಅಲ್ಪಸಂಖ್ಯಾತ ಮುಖಂಡರು ಅಧ್ಯಕ್ಷರನ್ನು ಪ್ರತ್ಯೇಕ ಕೊಠಡಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಅವರು ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಮಾನ್ಯತೆ ಇಲ್ಲ. ಜಿಲ್ಲೆಯಲ್ಲಿ 2.25 ಲಕ್ಷಕ್ಕೂ ಹೆಚ್ಚು ನಮ್ಮ ಸಮುದಾಯದ ಮತಗಳಿವೆ. ಆದರೂ ಕಾಂಗ್ರೆಸ್ ವರಿಷ್ಠರಾಗಲಿ, ವೀಕ್ಷಕರಾಗಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುತ್ತಿಲ್ಲ. ಹೀಗೆ ಮುಂದುವರಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಕೂಗಾಡಿದರು.ಪಕ್ಷದ ಕಚೇರಿಯಲ್ಲಿ ‘ಶಿಷ್ಟಾಚಾರ’ಕ್ಕೆ ಸಂಬಂಧಿಸಿದಂತೆ ಒಂದು ಹಂತದಲ್ಲಿ ವಾಗ್ಯುದ್ಧವೇ ನಡೆದುಹೋಯಿತು. ಮಾಧ್ಯಮದವರಿಗೆ ಕುಳಿತುಕೊಳ್ಳಲು ಅವಕಾಶ ನೀಡದಂತೆ ಕಾರ್ಯಕರ್ತರು ಅಡ್ಡಿಪಡಿಸಲಾರಂಭಿಸಿದರು. ಒಂದು ಹಂತದಲ್ಲಿ ವೀಕ್ಷಕರನ್ನು ಪ್ರತ್ಯೇಕ ಕೊಠಡಿಗೆ ಕಳುಹಿಸಿ, ಸುದ್ದಿಗೋಷ್ಠಿ  ನಡೆಸುವ ಪರಿಸ್ಥಿತಿ ಎದುರಾಯಿತು.ಈ ಮಧ್ಯೆ ‘ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಪಕ್ಷದಲ್ಲಿ ಬೆಲೆ ಇಲ್ಲ. ಇದೇನು ಕಾಂಗ್ರೆಸ್ ಕಚೇರಿಯೋ ಅಥವಾ ದನಗಳ ದೊಡ್ಡಿಯೋ’ ಎಂದು ಹಿರಿಯ ಮುಖಂಡರೊಬ್ಬರು ಆಕ್ರೋಶದಿಂದ ಪ್ರಶ್ನಿಸಿದರು. ‘ಅಶಿಸ್ತಿನಿಂದ ವರ್ತಿಸುತ್ತಿರುವವರನ್ನು ಕೂಡಲೇ ಪಕ್ಷದಿಂದ ಹೊರ ಹಾಕಬೇಕು’ ಎಂದು ಆಗ್ರಹಿಸಿದರು.ಮೊಳಕಾಲ್ಮುರಿನಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ದುಡಿದವರಿಗೆ, ಕಾಂಗ್ರೆಸ್ ವಿರುದ್ದ ಸದಾ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಿರತರಾದವರಿಗೆ ಜಿಲ್ಲೆಯಲ್ಲಿ ಮನ್ನಣೆ ದೊರೆಯುತ್ತಿದೆ. ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರವವರಿಗೆ ದೊಡ್ಡಮಟ್ಟದ ಬೆಲೆ ದೊರೆಯುತ್ತಿದೆ. ಜಿಲ್ಲಾ ಸಮಿತಿಯಲ್ಲಿ ಎಷ್ಟು ಜನ ಪ್ರಧಾನ ಕಾರ್ಯದರ್ಶಿಗಳು, ಎಷ್ಟು ಜನ ಉಪಾಧ್ಯಕ್ಷರಿದ್ದಾರೆ, ಎಲ್ಲರೂ ವೇದಿಕೆ ಮೇಲೆ ಕುಳಿತುಕೊಳ್ಳಬೇಕು ಎಂದು ತಾಮುಂದು, ನಾಮುಂದು ಎಂದು ಕುರ್ಚಿಗಾಗಿ ಹೊಡೆದಾಡುತ್ತಾರೆ. ಶಿಷ್ಟಾಚಾರದಲ್ಲಿ ವೇದಿಕೆ ಹಂಚಿಕೊಳ್ಳಿ ಎಂದು ಕಾರ್ಯಕರ್ತರೊಬ್ಬರು ಕೂಗು ಹಾಕಿದರು.ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ್ದ ವೀಕ್ಷಕ ಡಾ.ಎ.ಚಲ್ಲಕುಮಾರ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪಕ್ಷದ ಕಾರ್ಯಕರ್ತರ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ಗುಂಪು ಗುಂಪಾಗಿ ಆಗಮಿಸಿ ಇಂಥವರಿಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ ಎಂದು ತಮ್ಮ ಅಭಿಪ್ರಾಯಗಳನ್ನು ವೀಕ್ಷಕರ ಎದರು ಹೇಳಿಕೊಂಡರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ಸೇತೂರಾಮ್, ಕಾಂಗ್ರೆಸ್‌ ಮುಖಂಡ ಜಿ.ಎಸ್.ಮಂಜುನಾಥ್, ಲೋಕಸಭೆಯ ಟಿಕೆಟ್‌ ಆಕಾಂಕ್ಷಿಗಳಾದ ರಾಜ್ಯ ಪೌರಸೇವಾ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಜೆಜೆಹಟ್ಟಿ ಡಾ.ತಿಪ್ಪೇಸ್ವಾಮಿ, ಎಂ.ರಾಮಪ್ಪ, ಪ್ರಕಾಶ್ ಮೂರ್ತಿ, ನೂರುಲ್ಲಾ ಷರೀಫ್, ಓ.ಶಂಕರ್, ಬಿ.ಟಿ.ಜಗದೀಶ್, ಕೆ.ಪಿ.ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ ಮತ್ತಿತರರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಪ್ರತಿಕ್ರಿಯಿಸಿ (+)