`ಎಕರೆಗೆ 40ಕ್ವಿಂಟಲ್ ಬತ್ತ ನೀಡುವ ತಳಿ'

7

`ಎಕರೆಗೆ 40ಕ್ವಿಂಟಲ್ ಬತ್ತ ನೀಡುವ ತಳಿ'

Published:
Updated:

ಹಿರೀಸಾವೆ: `ಕೆಆರ್‌ಎಚ್-4' ಎಂಬ ಬತ್ತದ ಹೊಸ ತಳಿಯನ್ನು ಕೃಷಿ ಇಲಾಖೆ ಬಿಡುಗಡೆ ಮಾಡಿದೆ ಎಂದು ಮಂಡ್ಯ ವಿ.ಸಿ. ಫಾರ್‌ಂನ ತಳಿ ತಜ್ಞ ಡಾ.ಶಿವಕುಮಾರ್ ತಿಳಿಸಿದರು.ಹೋಬಳಿಯ ಜಿನ್ನೇನಹಳ್ಳಿ ಗ್ರಾಮದಲ್ಲಿ ಗುರುವಾರ ರೈತ ರಾಮೇಗೌಡ ಪ್ರಾಯೋಗಿಕವಾಗಿ ಬೆಳೆದಿರುವ `ಕೆಆರ್‌ಎಚ್-4' ಬತ್ತದ ತಳಿಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.ನೂತನ ತಳಿಯ ಬಿತ್ತನೆ ಬೀಜವನ್ನು ಹಾಸನ, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕೆಲವು ರೈತರಿಗೆ ನೀಡಿ ಪ್ರಾಯೋಗಿಕವಾಗಿ ಬೆಳೆಯಲಾಗಿದೆ. ನಾಲ್ಕು ತಿಂಗಳ ಬೆಳೆ ಇದಾಗಿದ್ದು, ಪ್ರತಿ ಎಕರೆಗೆ ಉತ್ತಮ ಹುಲ್ಲು ಮತ್ತು 35ರಿಂದ 40 ಕ್ವಿಂಟಲ್ ಇಳುವರಿ ಬರುತ್ತದೆ. ಬೆಂಕಿ ರೋಗ ಹೊರತು ಪಡಿಸಿ ಉಳಿದ ರೋಗಳನ್ನು ತಡೆಗಟ್ಟುವ ರೋಗನಿರೋಧಕ ಶಕ್ತಿ ಹೊಂದಿದೆ. ಊಟಕ್ಕೆ ಯೋಗ್ಯವಾದ ಸಣ್ಣ ಅಕ್ಕಿ, ವಾಸನೆ ರಹಿತ, ಉತ್ತಮ ರುಚಿ ಗುಣಗಳು ಈ ತಳಿಗಿವೆ. ಹಾಸನ ಜಿಲ್ಲೆಯ ಕಡಿಮೆ ಮಳೆ ಬೀಳುವ ಭೂ ಪ್ರದೇಶದಲ್ಲಿ ಬತ್ತ ಬೆಳೆಯಲು ರೈತರಿಗೆ ಸಹಕಾರಿಯಾಗಿದೆ. ಕೆಆರ್‌ಎಚ್-1 ಮತ್ತು 2 ತಳಿಗಳಿಗಿಂತ ಇದು ಉತ್ತಮ ಎಂದರು.ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಬಿ. ಶಿವರಾಜು ಮಾತನಾಡಿ, ಹಾಸನದ ಜಿನ್ನೇನಹಳ್ಳಿ ಗ್ರಾಮದಲ್ಲಿ ಪ್ರಥಮವಾಗಿ ಈ ತಳಿ ಬೆಳೆಯಲಾಗಿದೆ. ಕೃಷಿ ಇಲಾಖೆಗೆ ಎನ್‌ಆರ್‌ಜಿ ಯೋಜನೆಯಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಸರ್ಕಾರ 50 ಲಕ್ಷ ರೂಪಾಯಿ ಅನುದಾನ ನೀಡಿದೆ. ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ರೈತ ಜೆ.ಬಿ. ರಾಮೇಗೌಡ ನೂತನ ಬತ್ತದ ತಳಿ ಬೆಳೆದ ಅನುಭವ ಹಂಚಿಕೊಂಡರು.ಸಹಾಯಕ ಕೃಷಿ ನಿರ್ದೇಶಕ ರಾಮಹನುಮಯ್ಯ, ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಶ್ರೀನಿವಾಸ್, ಹಿರೀಸಾವೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಂ.ಶ್ರೀನಿವಾಸ್, ರೈತ ಅನುವುಗಾರದ ಜಿನ್ನೇನಹಳ್ಳಿ ರವಿ, ಮಾದಲಗೆರೆ ನಂಜೇಗೌಡ, ಹಿರೀಸಾವೆ ಬಾಬು ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry