ಎಚ್ಚರಿಕೆ ಗಂಟೆ ಬಾರಿಸುವವರ ಕುತ್ತಿಗೆಗೆ ಮಾಫಿಯಾ ಕೈ

7

ಎಚ್ಚರಿಕೆ ಗಂಟೆ ಬಾರಿಸುವವರ ಕುತ್ತಿಗೆಗೆ ಮಾಫಿಯಾ ಕೈ

Published:
Updated:
ಎಚ್ಚರಿಕೆ ಗಂಟೆ ಬಾರಿಸುವವರ ಕುತ್ತಿಗೆಗೆ ಮಾಫಿಯಾ ಕೈ

ನಮ್ಮ ಸರ್ಕಾರಿ ಅಧಿಕಾರಿಗಳೇಕೆ ಕೊಲೆಯಾಗುತ್ತಿದ್ದಾರೆ. ಸಮಾಜವಿರೋಧಿ ಕೃತ್ಯಗಳ ಬಗ್ಗೆ ದನಿ ಎತ್ತಿದ ಪ್ರಾಮಾಣಿಕ ಸರ್ಕಾರಿ ನೌಕರರು ಲೋಕವಿರೋಧಿಗಳಂತೆ ಕಾಣುತ್ತಿದ್ದಾರೆ. ಇದಕ್ಕೆ ಭ್ರಷ್ಟ ವ್ಯವಸ್ಥೆಯೇ ಕಾರಣ. ಸರ್ಕಾರಿ ನೌಕರರ ಕತ್ತು ಹಿಚುಕಲು ಭೂ ಮಾಫಿಯಾ, ಗಣಿ ಮಾಫಿಯಾ, ಮದ್ಯ ಮಾಫಿಯಾ, ಮರಳು ಮಾಫಿಯಾ, ಭೂಗತ ಮಾಫಿಯಾ, ಗ್ರಾನೈಟ್ ಮಾಫಿಯಾ, ತೈಲ ಮಾಫಿಯಾ, ಗುತ್ತಿಗೆ ಮಾಫಿಯಾಗಳು ಯಮದೂತರಂತೆ ಕಾಯುತ್ತಿವೆ .

                                  -------------

ಇದೇ ತಿಂಗಳು ರಾಜ್ಯದ ಇಬ್ಬರು ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಮತ್ತು ಹತ್ಯೆಯ ಘಟನೆಗಳು ಕರ್ನಾಟಕದಲ್ಲಿನ ಪರಿಸ್ಥಿತಿ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನೆಗಳು ಏಳುವಂತೆ ಮಾಡಿವೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮದನ ನಾಯಕ ಹತ್ಯೆಯ ಹಿಂದಿನ ಸತ್ಯಗಳು ಈಗಾಗಲೇ ಬಯಲಾಗಿವೆ.ಆದರೆ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ನಿರ್ದೇಶನಾಲಯದ ಉಪ ನಿರ್ದೇಶಕ ಎಸ್.ಪಿ.ಮಹಾಂತೇಶ್ ಹತ್ಯೆಯ ಹಿಂದಿನ ನಿಗೂಢತೆ ಇನ್ನೂ ಬಯಲಾಗಿಲ್ಲ. ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಈಗ ಬೃಹತ್ತಾಗಿ ಎದ್ದು ನಿಂತಿದೆ.ಸರ್ಕಾರಿ ಅಧಿಕಾರಿಗಳ ಮುಕ್ತ ಮತ್ತು ನಿರ್ಭೀತ ಕಾರ್ಯನಿರ್ವಹಣೆಗೆ ಅವಕಾಶ ಇರುವ ರಾಜ್ಯಗಳಲ್ಲಿ ಕರ್ನಾಟಕ ಹಿಂದಿನಿಂದಲೂ ಮುಂಚೂಣಿಯಲ್ಲಿತ್ತು. ಮೈಸೂರು ರಾಜ್ಯ ಇದ್ದ ದಿನಗಳಿಂದಲೂ ಕನ್ನಡ ನಾಡು ಈ ಕೀರ್ತಿಗೆ ಹೆಸರಾಗಿತ್ತು. ಸರ್ಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದಂತಹ ಘಟನೆಗಳು ಇಲ್ಲಿ ನಡೆಯುತ್ತಿದ್ದುದೂ ವಿರಳ.ಆದರೆ, ಕಾಲ ಬದಲಾದಂತೆ ಕರ್ನಾಟಕವೂ ಹೊರಳು ದಾರಿಯತ್ತ ಸಾಗುತ್ತಿದೆ. ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಕಾಣುತ್ತಿದ್ದ ದೃಶ್ಯಗಳು ಇಲ್ಲಿಯೂ ರಾರಾಜಿಸತೊಡಗಿವೆ. ಸರ್ಕಾರಿ ಅಧಿಕಾರಿಗಳು, ನೌಕರರು ರಕ್ಷಣೆಗಾಗಿ ಪರದಾಡಬೇಕಾದ ವಾತಾವರಣ ನಿರ್ಮಾಣವಾಗುತ್ತಿದೆ.ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಇಲ್ಲಿ ದೊರೆಯುತ್ತಿದ್ದ ಗೌರವ ಮತ್ತು ರಕ್ಷಣೆಯೆ ಕಾರಣಕ್ಕಾಗಿಯೇ ಅಖಿಲ ಭಾರತ ಸೇವೆಗಳಿಗೆ ಆಯ್ಕೆಯಾದವರು ಕರ್ನಾಟಕಕ್ಕೆ ಬರಲು ಪೈಪೋಟಿ ನಡೆಸುತ್ತಿದ್ದರು. ಐಎಎಸ್, ಐಪಿಎಸ್, ಐಎಫ್‌ಎಸ್‌ನಂತಹ ಅತ್ಯುನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಹೊರ ರಾಜ್ಯದವರು ಕರ್ನಾಟಕಕ್ಕೆ ಬರಲು ತುದಿಗಾಲ ಮೇಲೆ ನಿಂತಿರುತ್ತಿದ್ದರು.ನಿಯೋಜನೆ ವೇಳೆ ತಮ್ಮ ಸ್ವಂತ ರಾಜ್ಯದಲ್ಲಿ ಅವಕಾಶ ದೊರೆಯದಿದ್ದರೆ, ಕರ್ನಾಟಕ ಶ್ರೇಣಿಯಾದರೂ ಸಿಗಲಿ ಎಂದು ಹಂಬಲಿಸುತ್ತಿದ್ದವರೇ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕರ್ನಾಟಕದ ಗೌರವಕ್ಕೆ ಕಳಂಕ ತರುತ್ತಿವೆ.  ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿರುವ ರಾಜ್ಯದವರೇ ಆದ ಅಧಿಕಾರಿಗಳೂ ಆತಂಕದಲ್ಲಿ ಬದುಕು ಸಾಗಿಸುವಂತಾಗಿದೆ.ಬಲಿಯುತ್ತಿದೆ ಮಾಫಿಯಾ ಹಿಡಿತ: 1990ರ ದಶಕದ ಕೊನೆಯವರೆಗೂ ರಾಜ್ಯದಲ್ಲಿ ಅಬಕಾರಿ ಗುತ್ತಿಗೆದಾರರು, ದೊಡ್ಡ ಜಮೀನ್ದಾರರು ರಾಜ್ಯ ಸರ್ಕಾರದ ಮೇಲೆ ಒಂದಷ್ಟು ಹಿಡಿತ ಹೊಂದಿದ್ದರು. ಆ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ, ಹಲ್ಲೆಗೆ ಯತ್ನಿಸಿದ ಘಟನೆಗಳು ಆಗಾಗ ಕೇಳಿಬರುತ್ತಿದ್ದವು.ಆದರೆ ನಂತರದ ದಿನಗಳಲ್ಲಿ ಆಡಳಿತ ವ್ಯವಸ್ಥೆಯ ಮೇಲಿನ ಹಿಡಿತ ಗಣಿ, ರಿಯಲ್ ಎಸ್ಟೇಟ್ ಮಾಫಿಯಾಗಳ ಕೈಗೆ ಸಿಲುಕಿದೆ. ಕಾರ್ಪೋರೇಟ್ ಲಾಬಿಯೂ ಒಂದಷ್ಟು ಹಿಡಿತ ಹೊಂದಿದೆ. ಗಣಿ ಮತ್ತು ರಿಯಲ್ ಎಸ್ಟೇಟ್ ಮಾಫಿಯಾದ ಹಿಡಿತ ಜಾಸ್ತಿ ಆದಂತೆಲ್ಲ ಅಧಿಕಾರಿಗಳು, ನೌಕರರು ಹೆಚ್ಚು ಅಭದ್ರತೆಯತ್ತ ಸಾಗುತ್ತಿದ್ದಾರೆ.ಚೀನಾ ಒಲಿಂಪಿಕ್ಸ್ ಸಿದ್ಧತೆಯ ಪರಿಣಾಮವಾಗಿ 2000ನೇ ಇಸವಿಯ ನಂತರ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯ ಪ್ರಮಾಣ ಹೆಚ್ಚತೊಡಗಿತ್ತು. ಅದರೊಂದಿಗೆ ಅಲ್ಲಿ ಆಡಳಿತ ವ್ಯವಸ್ಥೆಯ ಮೇಲೆ ಗಣಿ ಮಾಫಿಯಾದ ಹಿಡಿತವೂ ಹೆಚ್ಚಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರುವ, ಬೆದರಿಕೆ ಹಾಕುವ, ಹಲ್ಲೆ ಮಾಡುವ ಘಟನೆಗಳು ಬಹುಪಾಲು ಹೊರಗಿನವರಿಗೆ ತಿಳಿಯುತ್ತಿರಲಿಲ್ಲ. ಅಧಿಕಾರಿಗಳು ಮತ್ತು ನೌಕರರ ಶಕ್ತಿ ಅಲ್ಲಿನ ಗಣಿ ಮಾಲೀಕರ ಹಣದ ರಾಶಿಯ ಮುಂದೆ ಸೋತು ಸುಣ್ಣವಾಗುತ್ತಿತ್ತು.2009ರ ಸೆಪ್ಟೆಂಬರ್‌ನಲ್ಲಿ ಇದೇ ಗಣಿ ಮಾಫಿಯಾ ಹಿರಿಯ ಐಎಫ್‌ಎಸ್ ಅಧಿಕಾರಿ ಡಾ.ಯು.ವಿ.ಸಿಂಗ್ ಅವರಿಗೆ ಬೆದರಿಕೆ ಹಾಕಿತ್ತು. ಲೋಕಾಯುಕ್ತ ತನಿಖೆಯ ಭಾಗವಾಗಿ ಗಣಿ ಪ್ರದೇಶವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಬೆಂಬಲಿಗರು ಸಿಂಗ್ ಅವರಿಗೆ ಬೆದರಿಕೆ ಹಾಕಿದ್ದರು. ಸೋಮಶೇಖರ ರೆಡ್ಡಿ ಕೂಡ ದೂರವಾಣಿ ಮೂಲಕ ಬೆದರಿಸಿದ್ದರು. ಆದರೆ, ಎದೆಗುಂದದ ಯು.ವಿ.ಸಿಂಗ್ ಈ ಬಗ್ಗೆ ಸಂಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಚ್ಚರಿಯ ಸಂಗತಿ ಎಂದರೆ ಈಗಲೂ ದೂರಿನ ತನಿಖೆ ಮುಗಿದಿಲ್ಲ.ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕೋಟ್ಯಂತರ ಟನ್ ಅದಿರನ್ನು ವಿದೇಶಕ್ಕೆ ರಫ್ತು ಮಾಡಿರುವ ಕುರಿತು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ಎಲ್ಲರ ಗಮನ ಸೆಳೆದಿದ್ದ ಐಎಫ್‌ಎಸ್ ಅಧಿಕಾರಿ ಆರ್.ಗೋಕುಲ್ ಅವರಿಗೂ ಗಣಿ ಮಾಫಿಯಾ 2010ರ ಜುಲೈ ತಿಂಗಳಿನಲ್ಲಿ ಬೆದರಿಸಿತ್ತು. ಹೊನ್ನಾವರದಿಂದ ಕಾರವಾರಕ್ಕೆ ಪ್ರಯಾಣಿಸುತ್ತಿದ್ದ ಅವರನ್ನು  ಬೆನ್ನಟ್ಟಿ ಬಂದ ವಾಹನದ ನೋಂದಣಿ ಸಂಖ್ಯೆ ನೀಡಿದರೂ, ಪೊಲೀಸರು ಹೆಚ್ಚೇನೂ ಕ್ರಮ ಜರುಗಿಸಿರಲಿಲ್ಲ.2011ರ ಫೆಬ್ರುವರಿಯಲ್ಲಿ ಬೆಂಗಳೂರಿನ ನಾಗವಾರ ಕೆರೆಗೆ ಕೈಗಾರಿಕಾ ತ್ಯಾಜ್ಯ ಸುರಿಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಚಂದ್ರು ನೇತೃತ್ವದ ತಂಡ ಯು.ವಿ.ಸಿಂಗ್ ಅವರ ಮೇಲೆ ಹಲ್ಲೆಯನ್ನೇ ನಡೆಸಿತ್ತು. 15 ದಿನಗಳ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.ಈ ಘಟನೆ ರಾಷ್ಟ್ರದ ಗಮನ ಸೆಳೆದಿತ್ತು.ನಂತರದ ದಿನಗಳಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಕೆಲ ತಿಂಗಳ ಹಿಂದೆ ಹಾಸನದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಗ್ರಾಮ ಸಹಾಯಕರೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.ಈ ಘಟನೆ ಜನರ ನೆನಪಿನಿಂದ ಮರೆಯಾಗುವ ಮುನ್ನವೇ ಇಬ್ಬರು ಅಧಿಕಾರಿಗಳ ಹತ್ಯೆ ನಡೆದಿದೆ. ಬಳ್ಳಾರಿಯಲ್ಲಿ ಆರಂಭವಾದ `ಅಧಿಕಾರಿಗಳ ಮೇಲಿನ ದಾಳಿ ಸಂಸ್ಕೃತಿ~ ಕರ್ನಾಟಕವನ್ನೇ ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳುವ ಅಪಾಯದ ಲಕ್ಷಣಗಳು ಕಾಣಿಸುತ್ತಿವೆ.ಯಾರು ಕಾರಣ?: ಇದಕ್ಕಿದ್ದಂತೆ ಕರ್ನಾಟಕ ಸರ್ಕಾರಿ ಅಧಿಕಾರಿಗಳು, ನೌಕರರ ಪಾಲಿಗೆ ಅಭದ್ರತೆಯ ತಾಣವಾಗಿ ಮಾರ್ಪಾಟಾಯಿತೇ? ಇದಕ್ಕೆ ಕಾರಣಗಳೇನು ಎಂದು ಹುಡುಕಲು ಹೊರಟರೆ ಹಲವು ಅಂಶಗಳು ಕಣ್ಣಿಗೆ ಕಾಣುತ್ತವೆ.ರಾಜ್ಯದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಜಿಲ್ಲಾಧಿಕಾರಿಯಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿವರೆಗಿನ ಹುದ್ದೆಗಳನ್ನು ನಿರ್ವಹಿಸಿ, ನಿವೃತ್ತಿಯ ನಂತರವೂ ಎರಡು ತನಿಖಾ ಸಮಿತಿಗಳಲ್ಲಿ ಕೆಲಸ ಮಾಡಿದ ವಿ.ಬಾಲಸುಬ್ರಮಣಿಯನ್ ಅವರು ಹೇಳುವಂತೆ, `ಈ ಬೆಳವಣಿಗೆಗೆ ಸರ್ಕಾರ ಮತ್ತು ಸರ್ಕಾರಿ ನೌಕರರೇ ಕಾರಣ~.`ನಾನು ಐಎಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ಬಂದಾಗ ಇದ್ದ ಸ್ಥಿತಿ ಈಗ ಇಲ್ಲ. ಆಗ, ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚು ಗೌರವ ದೊರೆಯುತ್ತಿತ್ತು. ಅಧಿಕಾರಿಗಳೂ ಜನರನ್ನು ಗೌರವಿಸುತ್ತಿದ್ದರು. ಈ ಗೌರವವೇ ಅಧಿಕಾರಿಗಳು ಮತ್ತು ನೌಕರರಿಗೆ ರಕ್ಷಣೆ ಒದಗಿಸುತ್ತಿತ್ತು.

ಅಲ್ಲದೇ ಇತ್ತೀಚಿನ ಕೆಲ ವರ್ಷಗಳವರೆಗೂ ಸರ್ಕಾರದಲ್ಲಿರುವ ರಾಜಕಾರಣಿಗಳೂ ಅಧಿಕಾರಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದರು. ವರ್ಗಾವಣೆಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪವೂ ಕಡಿಮೆ ಇರುತ್ತಿತ್ತು. ಇವೆಲ್ಲವೂ ಭದ್ರತೆಯ ಭಾವ ಒದಗಿಸಲು ಕಾರಣವಾಗಿತ್ತು~ ಎನ್ನುತ್ತಾರವರು.ಯು.ವಿ.ಸಿಂಗ್ ಮೇಲೆ ನಡೆದ ಹಲ್ಲೆ, ಗೋಕುಲ್ ಅವರಿಗೆ ಬೆದರಿಕೆ ಹಾಕಿದಂತಹ ಪ್ರಕರಣದಲ್ಲಿ ಸರ್ಕಾರವೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ. ಆರೋಪಿಗಳು ರಾಜಾರೋಷವಾಗಿ ಸುತ್ತಾಡಲು ಪೊಲೀಸರು ಅವಕಾಶ ನೀಡಿದರು. ಸಚಿವರು, ಶಾಸಕರು ಸೇರಿದಂತೆ ಜನ ಪ್ರತಿನಿಧಿಗಳು ಸಾರ್ವಜನಿಕವಾಗಿ ಅಧಿಕಾರಿಗಳನ್ನು ನಡೆಸಿಕೊಳ್ಳುವ ರೀತಿ ಬದಲಾಗಿದೆ.ಎಲ್ಲಕ್ಕಿಂತಲೂ ಮುಖ್ಯವಾಗಿ ಸರ್ಕಾರದ ಮೇಲೆ ಮಾಫಿಯಾಗಳ ಹಿಡಿತ ಬಲವಾಗುತ್ತಿದೆ. ತಮ್ಮ ನಡವಳಿಕೆಗಳಿಂದಾಗಿಯೇ ಅಧಿಕಾರಿಗಳು ಗೌರವ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ ಎನ್ನುತ್ತಾರೆ ಬಾಲಸುಬ್ರಮಣಿಯನ್.ಪ್ರಯೋಗವಾಗದ ಅಸ್ತ್ರಗಳು:ಸರ್ಕಾರಿ ಅಧಿಕಾರಿಗಳು ಬಾಹ್ಯ ಒತ್ತಡ ಮತ್ತು ಬೆದರಿಕೆಯಿಂದ ರಕ್ಷಣೆ ಪಡೆಯಲು ಭಾರತೀಯ ದಂಡ ಸಂಹಿತೆಯಲ್ಲೇ (ಐಪಿಸಿ) ಅವಕಾಶವಿದೆ. ಯಾವುದೇ ಸರ್ಕಾರಿ ಅಧಿಕಾರಿ ಅಥವಾ ನೌಕರನಿಗೆ ಯಾರಾದರೂ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ಬೆದರಿಕೆ ಹಾಕಿದರೆ ಅಂತಹವರ ವಿರುದ್ಧ ಐಪಿಸಿ ಕಲಂ 353ರ ಅಡಿ ಪೊಲೀಸರಿಗೆ ದೂರು ನೀಡಬಹುದು.ಹಲ್ಲೆ ನಡೆದಲ್ಲಿ ಕಲಂ 332ರ ಅಡಿ ದೂರು ದಾಖಲಿಸಬಹುದು. ಯಾವುದೇ ಅಧಿಕಾರಿ ಅಥವಾ ನೌಕರ ತನಗೆ ಬೆದರಿಕೆ ಇದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿದರೆ ತಕ್ಷಣವೇ ಆತನಿಗೆ ಭದ್ರತೆ ಒದಗಿಸಬೇಕಾಗುತ್ತದೆ.ಆದರೆ, ಇತ್ತೀಚಿನ ಅನೇಕ ಪ್ರಕರಣಗಳಲ್ಲಿ ಹಲ್ಲೆ, ಹತ್ಯೆಯಂತಹ ಘಟನೆಗಳು ನಡೆದ ಬಳಿಕವೇ ಅಧಿಕಾರಿಗೆ ಬೆದರಿಕೆ ಇದ್ದ ಮಾಹಿತಿ ಬಹಿರಂಗವಾಗುತ್ತಿದೆ. ಬಹುತೇಕ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿನ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ದಿನಚರಿ ಅಥವಾ ಕಡತಗಳಲ್ಲಿ ದಾಖಲಿಸುವುದಕ್ಕೂ ಹಿಂಜರಿಯುತ್ತಿದ್ದಾರೆ.

 

ಭ್ರಷ್ಟಾಚಾರ, ಅವ್ಯವಹಾರ, ಕಾನೂನು ಉಲ್ಲಂಘನೆಯಂತಹ ಪ್ರಕರಣಗಳು ಗಮನಕ್ಕೆ ಬಂದ ತಕ್ಷಣವೇ ಪತ್ರ ಬರೆದು ಸರ್ಕಾರದ ಗಮನ ಸೆಳೆಯುವ ಪರಿಪಾಠವೂ ಕಡಿಮೆಯಾಗುತ್ತಿದೆ. ಇದರಿಂದ ಅಭದ್ರತೆಯ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ. 

                              ಬೆದರಿಕೆ ಮಾಹಿತಿ ಇಲ್ಲ
ಅಧಿಕಾರಿಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, `ಅಧಿಕಾರಿಗಳು ಮತ್ತು ನೌಕರರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಅದು ಸರ್ಕಾರದ ಜವಾಬ್ದಾರಿ ಕೂಡ.ಆದರೆ, ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಬೆದರಿಕೆ ಇರುವ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಇರುವುದಿಲ್ಲ. ಬೆದರಿಕೆ, ಒತ್ತಡ ಬಂದಾಗ ಅದನ್ನು ಸರ್ಕಾರದ ಗಮನಕ್ಕೆ ತರುವುದನ್ನು ಅಧಿಕಾರಿಗಳು ರೂಢಿಸಿಕೊಳ್ಳಬೇಕು. ಆಗ ಮಾತ್ರ ಇಂತಹ ಘಟನೆಗಳನ್ನು ತಡೆಯಬಹುದು~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry