ಭಾನುವಾರ, ಅಕ್ಟೋಬರ್ 20, 2019
27 °C

ಎಚ್ಚರಿಕೆ ಮಾತುಗಳ ಮಧ್ಯೆ ನಿರ್ಧಾರಕ್ಕೆ ಸ್ವಾಗತ

Published:
Updated:
ಎಚ್ಚರಿಕೆ ಮಾತುಗಳ ಮಧ್ಯೆ ನಿರ್ಧಾರಕ್ಕೆ ಸ್ವಾಗತ

ವಿಜಾಪುರ: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರು ವುದನ್ನು ಜಿಲ್ಲೆಯ ಜನ ಹಾಗೂ ರಾಜಕಾರಣಿಗಳು ಪಕ್ಷಾತೀತವಾಗಿ ಸ್ವಾಗತಿಸುತ್ತಿದ್ದಾರೆ. `ಯೋಜನೆಗೆ ಅನುಮೋದನೆ ನೀಡಿದರಷ್ಟೇ ಸಾಲದು. ಅಗತ್ಯ ಅನುದಾನ ನೀಡುವ ಮೂಲಕ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು~ ಎಂದೂ ಆಗ್ರಹಿಸುತ್ತಿದ್ದಾರೆ. ಏತನ್ಮಧ್ಯೆ `ಈ ಯೋಜನೆಗೆ ತರಾತುರಿ ಅನು ಮೋದನೆ ಪಡೆಯಲಾಗಿದೆ~ ಎಂಬ ವಿವಾದವೂ ಹುಟ್ಟಿಕೊಂಡಿದೆ.ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್ ವರೆಗೆ ನೀರು ಸಂಗ್ರಹಿಸುವುದು. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಮೂಲಕ ಅಂದಾಜು 28 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸು ವುದು ಕೃಷ್ಣಾ ಮೇಲ್ದಂಡೆ ಯೋಜನೆಯ ಮೂಲ ಸ್ವರೂಪ.ಬಚಾವತ್ ನೇತೃತ್ವದ ಕೃಷ್ಣಾ ಮೊದಲ ನ್ಯಾಯಮಂಡಳಿ ರಾಜ್ಯಕ್ಕೆ ಹಂಚಿಕೆ ಮಾಡಿದ್ದ 173 ಟಿಎಂಸಿ ನೀರನ್ನು ಬಳಸಿಕೊಳ್ಳಲು ಆಲಮಟ್ಟಿ ಜಲಾಶಯದಲ್ಲಿ 519.6 ಮೀಟರ್‌ವರೆಗೆ ನೀರು ಸಂಗ್ರಹಿಸಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸ ಲಾಗಿದೆ; ಇನ್ನೂ ಕೆಲ ಯೋಜನೆಗಳು ಜಾರಿಯಲ್ಲಿವೆ.ಬೃಜೇಶ್‌ಕುಮಾರ್ ನೇತೃತ್ವದ ಎರಡನೇ  ನ್ಯಾಯಮಂಡಳಿ ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್‌ವರೆಗೆ ನೀರು ಸಂಗ್ರಹಿಸಿಕೊಂಡು 130.9 ಟಿಎಂಸಿ ನೀರು ಬಳಸಿಕೊಳ್ಳಲು ರಾಜ್ಯಕ್ಕೆ ಅನುಮತಿ ನೀಡಿದೆ. ಈ ಯೋಜನೆಯಡಿ ಕೈಗೆತ್ತಿಕೊಳ್ಳ ಬೇಕಾಗಿರುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈಗ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಅನು ಮೋದನೆಗಾಗಿ ಅವಳಿ ಜಿಲ್ಲೆಯ ಜನಪ್ರತಿ ನಿಧಿಗಳು ಹಾಗೂ ಮಠಾಧೀಶರು ಸರ್ಕಾರದ ಮೇಲೆ ಒತ್ತಡವನ್ನೂ ಹಾಕಿದ್ದರು.`ವಿಜಾಪುರ, ಬಾಗಲಕೋಟೆ, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಗಳ 5.30 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿ ಸುವ 17,207 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಚರಿತ್ರಾರ್ಹ ನಿರ್ಧಾರ~ ಎಂಬುದು ಸಣ್ಣ ನೀರಾವರಿ ಖಾತೆ ಸಚಿವ ಗೋವಿಂದ ಕಾರಜೋಳ ಅವರ ಬಣ್ಣನೆ.`ಆಲಮಟ್ಟಿ ಜಲಾಶಯಕ್ಕಾಗಿ ಮನೆ-ಮಠ ತ್ಯಾಗ ಮಾಡಿರುವ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಬಹುಭಾಗ ನೀರಾವರಿ ಗೊಳಪಡಲಿದೆ. ಸರ್ಕಾರ ಅನು ಮೋದನೆ ದೊರೆತಿರುವುದರಿಂದ ಕಾಮಗಾರಿಯ ಅನುಷ್ಠಾನ ಸರಾಗ ವಾಗಲಿದೆ~ ಎನ್ನುತ್ತಾರೆ ಅವರು.`ಯುಕೆಪಿ-3ನೇ ಹಂತ ಈಗ ರೂಪಿಸಿರುವ ಹೊಸ ಯೋಜನೆ ಅಲ್ಲ. ಇದು ಚಾಲ್ತಿಯಲ್ಲಿರುವ ಯೋಜನೆ. ಮೂಲ ಯೋಜನೆಯಂತೆ ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್ ವರೆಗೆ ನೀರು ಸಂಗ್ರಹಿಸುವುದು ಹಾಗೂ ಅಷ್ಟು ಎತ್ತರದಲ್ಲಿ ನೀರು ನಿಲ್ಲಿಸಿದರೆ ಮುಳಗಡೆಯಾಗಲಿರುವ ಪ್ರದೇಶ, ಪುನರ್‌ವಸತಿ ಮತ್ತು ಪುನರ್ ನಿರ್ಮಾಣ ಕುರಿತು 1979ರಲ್ಲಿಯೇ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗದಿಂದ ಪರವಾನಿಗೆ ಪಡೆದುಕೊಳ್ಳಲಾಗಿದೆ~ ಎಂಬುದು ನೀರಾವರಿ ತಜ್ಞ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ನೀರಾವರಿ ಹೋರಾಟಗಾರ ಪಂಚಪ್ಪ ಕಲಬುರ್ಗಿ ಅವರ ವಿವರಣೆ.`ಹಿಂದೆ ರೂಪಿಸಿದ ಯೋಜನೆಗಳಿಗೆ ಈಗಿನ ದರದಲ್ಲಿ ಎಷ್ಟು ಮೊತ್ತ ವಾಗುತ್ತದೆ ಎಂಬುದನ್ನು ಲೆಕ್ಕಹಾಕಿ 17,207 ಕೋಟಿ ರೂಪಾಯಿ ಎಂದು ಅಂದಾಜಿಸಿ ಅದಕ್ಕೆ ಸಂಪುಟದ ಅನುಮೋದನೆ ಪಡೆಯಲಾಗಿದೆ. ಇದರಲ್ಲಿಯೇ ಹುಳುಕು ಹುಡುಕುವುದು ಸಲ್ಲ. ಮೆಟ್ರೊ ರೈಲ್ವೆ ಯೋಜನೆಗೆ 28 ಸಾವಿರ ಕೋಟಿ ರೂಪಾಯಿ ಸುರಿಯುವ ಅಧಿಕಾರಿಗಳು ಉತ್ತರ ಕರ್ನಾಟಕದ ಯೋಜನೆಗಳ ವಿಷಯ ಬಂದಾಗ ತಗಾದೆ ತೆಗೆದು ಅಡ್ಡಗಾಲು ಹಾಕುವುದು ಸರಿಯಲ್ಲ~ ಎಂಬುದು ಅವರ ಹೇಳಿಕೆ.`ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಸಚಿವ ಸಂಪುಟದಲ್ಲಿ ಅಪೂರ್ಣ ಯೋಜನಾ ವರದಿಗೆ ಆಡಳಿ ತಾತ್ಮಕ ಅನುಮೋದನೆ ನೀಡಲಾಗಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಸಚಿವರು ಸ್ಪಷ್ಟೀಕರಣ ನೀಡಬೇಕು. ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಅನುದಾನದ ಅಗತ್ಯವಿರುವುದರಿಂದ ಈ ಯೋಜನಾ ಮೊತ್ತವನ್ನು 25 ಸಾವಿರ ಕೋಟಿಗೆ ಹೆಚ್ಚಿಸಬೇಕು~ ಎಂಬುದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲರ ಆಗ್ರಹ.`ಈ ಪ್ರದೇಶಕ್ಕೆ ನೀರಾವರಿ ಕಲ್ಪಿಸಬೇಕು ಎಂಬ ನಮ್ಮ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ತರಾತುರಿಯಲ್ಲಿ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ ಎಂಬ ವಿಷಯವನ್ನೇ ದೊಡ್ಡದಾಗಿ ಮಾಡುವು ದರಲ್ಲಿ ಅರ್ಥವಿಲ್ಲ. ಬಿಟ್ಟು ಹೋಗಿರುವ ಯೋಜನೆಗಳನ್ನು ಸೇರ್ಪಡೆ ಮಾಡಲು ಮತ್ತು ಅದಕ್ಕೆ ಅನುಮೋದನೆ ಪಡೆಯಲು ಅವಕಾಶ ಇದ್ದೇ ಇರುತ್ತದೆ~ ಎನ್ನುತ್ತಾರೆ ವಿಧಾನಪರಿಷತ್ ವಿರೋಧ ಪಕ್ಷದ ಉಪ ನಾಯಕ ಎಸ್.ಆರ್. ಪಾಟೀಲ.`ಆಂಧ್ರಪ್ರದೇಶದಲ್ಲಿ 1 ಲಕ್ಷ ಕೋಟಿ ರೂಪಾಯಿ ವೆಚ್ಚಮಾಡಿ ನೀರಾವರಿ ಯಜ್ಞ ಮಾಡುತ್ತಿದ್ದಾರೆ. ಪ್ರತಿ ವರ್ಷ 10 ಸಾವಿರ ಕೋಟಿ ರೂಪಾಯಿ ನೀರಾವರಿಗೆ ಖರ್ಚು ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಒಂದು ಲಕ್ಷ ಕೋಟಿ ಬಜೆಟ್‌ನಲ್ಲಿ ನಮ್ಮ ಭಾಗದ ನೀರಾವರಿಗೆ ವರ್ಷಕ್ಕೆ 5 ಸಾವಿರ ಕೋಟಿ ಕೊಡುವುದು ಕಷ್ಟದ ಕೆಲಸವೇನಲ್ಲ~ ಎಂಬುದು ಅವರ ಹೇಳಿಕೆ.`ನೀರಾವರಿ ವಿಷಯದಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇಲ್ಲಿಯವರೆಗೆ ನಮ್ಮ ತ್ಯಾಗದ ಫಲ ಅನ್ಯರ ಪಾಲಾಗಿತ್ತು. ಇನ್ನು ನಮ್ಮ ಜಿಲ್ಲೆಯೂ ನೀರಾವರಿಗೊಳಪಡಲಿದೆ~ ಎನ್ನುತ್ತಾರೆ ಬಸವನ ಬಾಗೇವಾಡಿ ಶಾಸಕ ಎಸ್.ಕೆ. ಬೆಳ್ಳುಬ್ಬಿ.ಯುಕೆಪಿ-3 ಹಂತದ ಯೋಜನೆಗಳು

ಚಿಮ್ಮಲಗಿ (87 ಸಾವಿರ ಹೆಕ್ಟೇರ್), ಇಂಡಿ ಏತ ನೀರಾವರಿ (20 ಸಾವಿರ ಹೆಕ್ಟೇರ್), ಮುಳವಾಡ ಏತ ನೀರಾವರಿ ಹಂತ-3 (2.30 ಲಕ್ಷ ಹೆಕ್ಟೇರ್), ರಾಂಪೂರ ಏತ ನೀರಾವರಿ (13,500 ಹೆಕ್ಟೇರ್),  ನಾರಾಯಣಪೂರ ಬಲದಂಡೆ ಕಾಲುವೆ (62 ಸಾವಿರ ಹೆಕ್ಟೇರ್), ಕೊಪ್ಪಳ ಏತ ನೀರಾವರಿ (48,436 ಹೆಕ್ಟೇರ್),  ಭೀಮಾ ನದಿಯಿಂದ ನೀರಾವರಿ (21,572 ಹೆಕ್ಟೇರ್), ಹೆರಕಲ್ ಏತ ನೀರಾವರಿ (15,344 ಹೆಕ್ಟೇರ್), ಮಲ್ಲಾಬಾದ ಏತ ನೀರಾವರಿ (33,730 ಹೆಕ್ಟೇರ್) ಹೀಗೆ ಒಟ್ಟಾರೆ 130 ಟಿಎಂಸಿ ಅಡಿ ನೀರಿನಲ್ಲಿ 5.30 ಲಕ್ಷ ಹೆಕ್ಟೇರ್‌ಗೆ ನೀರಾವರಿ ಕಲ್ಪಿಸಲು ನಿರ್ಧರಿಸಲಾಗಿದೆ.ಮತ್ತೆ ಭೂಮಿ ಮುಳುಗಡೆ: ಯುಕೆಪಿ-3 ಕಾಮಗಾರಿಗಳ ಅನುಷ್ಠಾನಕ್ಕೆ ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಎತ್ತರಿಸಬೇಕು. ಬಾಗಲಕೋಟೆ ಪಟ್ಟಣದ ಭಾಗಶಃ ಪ್ರದೇಶ ಸೇರಿದಂತೆ 22 ಗ್ರಾಮಗಳು, 75 ಸಾವಿರ ಎಕರೆ ಭೂಮಿ ಮುಳುಗಡೆಯಾಗಲಿದೆ. ಇಷ್ಟೊಂದು ಪ್ರದೇಶದ ಭೂಸ್ವಾಧೀನ ಹಾಗೂ ಜನರಿಗೆ ಪುನರ್ವಸತಿ ಕಲ್ಪಿಸುವ ಬೃಹತ್ ಯೋಜನೆಯೂ ಇದಾಗಿದೆ.

Post Comments (+)