ಎಚ್ಚರ! ಬಿದ್ದೀರಿ ಹನಿ ಟ್ರ್ಯಾಪ್‌ಗೆ

7

ಎಚ್ಚರ! ಬಿದ್ದೀರಿ ಹನಿ ಟ್ರ್ಯಾಪ್‌ಗೆ

Published:
Updated:

ಶತ್ರು ರಾಷ್ಟ್ರಗಳ ರಹಸ್ಯ ಮಾಹಿತಿಯನ್ನು ಹೊರಗೆಳೆಯುವ ಬೇಹುಗಾರಿಕೆಯಲ್ಲಿನ ಪ್ರಮುಖ ಅಸ್ತ್ರವೇ `ಹನಿ ಟ್ರ್ಯಾಪಿಂಗ್'. ಈವರೆಗೆ ಸೇನೆ ಮತ್ತು ಗುಪ್ತಚರ ವಲಯಕ್ಕಷ್ಟೇ ಸೀಮಿತವಾಗಿದ್ದ ಈ ತಂತ್ರ ಇದೀಗ ಖಾಸಗಿ ಬದುಕಿಗೂ ಅಡಿ ಇಟ್ಟಿದೆ. ದಂಪತಿ ಪರಸ್ಪರರ ನಡತೆ ಮೇಲೆ ಕಣ್ಣಿಡಲು, ಪ್ರೇಮಿಗಳ ಸಾಚಾತನ ಬಯಲಿಗೆಳೆಯಲು, ಮಾಧ್ಯಮಗಳು ಸರ್ಕಾರಗಳ ಬಗ್ಗೆ ಗುಪ್ತ ಮಾಹಿತಿ ಪಡೆಯಲು ಸಹ  `ಹನಿ ಟ್ರ್ಯಾಪಿಂಗ್'ನ ಮೊರೆ ಹೋಗುತ್ತಿರುವುದು ಈಚಿನ ಬೆಳವಣಿಗೆ. 

 

`ಬಾಂಡ್... ಮೈ ನೇಮ್ ಈಸ್ ಜೇಮ್ಸ ಬಾಂಡ್...' ಎನ್ನುತ್ತಾ ಶತ್ರುಗಳ ನೆಲದಲ್ಲಿ ಕೆಚ್ಚೆದೆಯಿಂದ ಕಾಲಿಡುವ ಬಾಂಡ್‌ಗಾಗಿ ಹೊಂಚು ಹಾಕಿ ಕುಳಿತ ವೈರಿ ಪಡೆ ಹೆಜ್ಜೆ ಹೆಜ್ಜೆಗೂ ಅವನನ್ನು ಹಿಂಬಾಲಿಸುತ್ತದೆ. ವಿಮಾನ ನಿಲ್ದಾಣದಿಂದ ಹೋಟೆಲ್‌ವರೆಗೆ ಬೆನ್ನು ಬೀಳುತ್ತದೆ. ಎಲ್ಲವನ್ನೂ ಧೈರ್ಯದಿಂದಲೇ ಎದುರಿಸಿ ಪಾರಾಗುವ ನಾಯಕ ಕೊನೆಗೆ ಮೋಹಕ ಚೆಲುವೆಯೊಬ್ಬಳ ಬಲೆಗೆ ಬಿದ್ದುಬಿಡುತ್ತಾನೆ.

ಪರಿಚಯ ಪ್ರಣಯಕ್ಕೆ ತಿರುಗಿ ಮರುಕ್ಷಣದಲ್ಲಿ ಚೆಲುವೆ ಬಾಂಡ್‌ನ ತೋಳ ತೆಕ್ಕೆಯಲ್ಲಿರುತ್ತಾಳೆ. ಬಾಂಡ್‌ನ ಮೈಮರೆಸಿ ಏನನ್ನೋ ಕದಿಯಬೇಕೆಂಬ ಚೆಲುವೆಯ ಹೊಂಚು ಕೈಗೂಡುವುದೇ ಇಲ್ಲ. ಕೊನೆಗೆ ಕೋಣೆಯಲ್ಲಿ `ಮೈಕ್ರೋಚಿಪ್' ಪುಟ್ಟ ಸಾಧನ ಅಳವಡಿಸಿ ತೆರಳುತ್ತಾಳೆ. ಅದರ ನೆರವಿನಿಂದ ಶತ್ರುಪಡೆ, ಬಾಂಡ್‌ನ ಪ್ರತಿ ಚಲನವಲನವನ್ನೂ ಪತ್ತೆ ಹಚ್ಚುತ್ತದೆ. ಚತುರನಾದ ಬಾಂಡ್ ಇದನ್ನು ಪತ್ತೆ ಹಚ್ಚಿ ಪಾರಾಗುತ್ತಾನೆ. ಇದು ಜೇಮ್ಸಬಾಂಡ್ ಚಿತ್ರಸರಣಿಯ ಸಾರಾಂಶ.ಎರಡು ವರ್ಷಗಳ ಹಿಂದಿನ ಮಾತು. ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನರ್ ಕಚೇರಿಯಲ್ಲಿದ್ದ ಮಾಧುರಿ ಗುಪ್ತಾ ಎಂಬ ರಾಜತಾಂತ್ರಿಕ ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದಾಗ ಇಡೀ ದೇಶದ ಜನ ಬೆಚ್ಚಿಬಿದ್ದಿದ್ದರು. ಅಷ್ಟೇನೂ ಸುಂದರಳಲ್ಲದ ಮಧ್ಯ ವಯಸ್ಕ ಮಾಧುರಿ ಪಾಕಿಸ್ತಾನದ ಐಎಸ್‌ಐಗೆ ಭಾರತದ ಗೋಪ್ಯ ಮಾಹಿತಿ ಸೋರಿಕೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.

30 ವರ್ಷ ರಾಜತಾಂತ್ರಿಕ ಅಧಿಕಾರಿಯಾಗಿ ಕೆಲಸ ಮಾಡಿದ್ದ ಮಾಧುರಿ, ರಾಣಾ ಎಂಬ ವ್ಯಕ್ತಿಯ ಪ್ರೇಮಪಾಶಕ್ಕೆ ಸಿಲುಕಿದ್ದರು, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐನ ಅಧಿಕಾರಿಯಾಗಿದ್ದ ರಾಣಾ, ಭಾರತದ ಗೋಪ್ಯ ಮಾಹಿತಿಗಳನ್ನು ಮಾಧುರಿಯಿಂದ ಬಾಯ್ಬಿಡಿಸಿಬಿಟ್ಟಿದ್ದ ಎನ್ನಲಾಗಿದೆ.ಹನಿ ಟ್ರ್ಯಾಪಿಂಗ್...!

ಸೇನೆ ಮತ್ತು ಬೇಹುಗಾರಿಕೆ ವಲಯಗಳಲ್ಲಿ ಕೇಳಿಬರುವ ಈ ಹೆಸರು ಜನಸಾಮಾನ್ಯರಿಗೆ ಹೊಸತು. ಚೆಲುವೆಯರನ್ನು ಮುಂದಿಟ್ಟುಕೊಂಡು ನಡೆಸುವ `ಹನಿ ಟ್ರ್ಯಾಪಿಂಗ್' ಹೆಸರಿನ ಬೇಹುಗಾರಿಕೆಗೆ ಮೇಲಿನ ಎರಡೂ ಘಟನೆಗಳು ಕೇವಲ ಉದಾಹರಣೆ ಮಾತ್ರ. ಮಾಧುರಿ ಘಟನೆಯಲ್ಲಿ ಪುರುಷನನ್ನು ಮುಂದಿಟ್ಟುಕೊಂಡು ಮಹಿಳಾ ಅಧಿಕಾರಿಯನ್ನು ಖೆಡ್ಡಾಕ್ಕೆ ಬೀಳಿಸಲಾಯಿತು.

ನಮ್ಮ ಅಧಿಕಾರಿಗಳು ಬಾಂಡ್‌ನಷ್ಟು ಜಾಣರಲ್ಲ. ಹೀಗಾಗಿ ಎದುರಾಳಿಗಳು ತೋಡಿದ ಖೆಡ್ಡಾಕ್ಕೆ ಹೋಗಿ ಬೀಳುತ್ತಾರೆ. ಬಾಂಡ್ ಚಿತ್ರಗಳು, ಬಾಂಡ್ ಶೈಲಿಯ ಕನ್ನಡ ಸಿನಿಮಾಗಳಾದ `ಆಪರೇಷನ್ ಡೈಮಂಡ್ ರಾಕೆಟ್', `ಗೋವಾದಲ್ಲಿ ಸಿಐಡಿ 999', `ಹಾಂಕಾಂಗ್‌ನಲ್ಲಿ ಏಜೆಂಟ್ ಅಮರ್' ಮುಂತಾದ ಚಿತ್ರಗಳ ಜೀವಾಳವೇ ಪತ್ತೇದಾರಿಕೆ ಮತ್ತು ಇಂತಹ ಬೇಹುಗಾರಿಕೆ.ಮಹಿಳೆಯರನ್ನು ಮುಂದಿಟ್ಟುಕೊಂಡು ಶತ್ರು ರಾಷ್ಟ್ರಗಳ ಸೇನೆ, ಪರಮಾಣು ಯೋಜನೆ, ವಿಜ್ಞಾನಿಗಳ ಸಂಶೋಧನೆ, ಅಣ್ವಸ್ತ್ರ ಮತ್ತು ರಾಜತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಗೋಪ್ಯ ಮಾಹಿತಿ ಕದಿಯುವುದು ಸೇನೆ ಮತ್ತು ಗುಪ್ತಚರ ಸಂಸ್ಥೆಗಳ ವೃತ್ತಿ. ಇದಕ್ಕಾಗಿ ಸಿನಿಮಾ ನಟಿಯರು, ರೂಪದರ್ಶಿಗಳು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳು, ಗಗನಸಖಿಯರು, ಆಕರ್ಷಕ ತರುಣಿಯರನ್ನು ಛೂ ಬಿಡಲಾಗುತ್ತದೆ.ಅಧಿಕಾರ ಸ್ಥಾನದಲ್ಲಿ ಮಹಿಳೆಯರಿದ್ದರೆ ಸುಂದರ ತರುಣರನ್ನು ಮುಂದಿಟ್ಟು ಜಾಲ ಬೀಸಲಾಗುತ್ತದೆ. ಕೊನೆಗೆ ಮನೆಗೆಲಸದ ಆಳು, ಕಚೇರಿಗಳ ಪರಿಚಾರಕರು, ಪ್ರೇಮಿಗಳಾದರೂ ಸರಿ. ಅಷ್ಟೇ ಅಲ್ಲ, ಸಲಿಂಗ ಕಾಮಿಗಳನ್ನೂ ಈ ಕೆಲಸಕ್ಕಾಗಿ ಬಳಸಿಕೊಳ್ಳಲು ಹಿಂಜರಿಯುವುದಿಲ್ಲ.ಹಲವು ವಿಧ, ಹತ್ತು ಮುಖ

`ಹನಿ ಟ್ರ್ಯಾಪಿಂಗ್' ಭಾರತದ ಮಟ್ಟಿಗೆ ಹೊಸದೇನಲ್ಲ. ರಾಜ ಮಹಾರಾಜರ ಕಾಲದ `ವಿಷಕನ್ಯೆ'ಯರು, ವಿಶ್ವಾಮಿತ್ರನ ತಪಸ್ಸು ಭಂಗಗೊಳಿಸಿದ್ದ ಮೇನಕೆಯ ತಂತ್ರ ಕೂಡ `ಹನಿ ಟ್ರ್ಯಾಪಿಂಗ್'!  ಈಚೆಗೆ ಇಂತಹ ಬೇಹುಗಾರಿಕೆ ಕೇವಲ ಸೇನೆ, ಗುಪ್ತಚರ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಮಾಧ್ಯಮ, ಖಾಸಗಿ ಕಂಪೆನಿಗಳಿಗೂ ಕಾಲಿಟ್ಟಿದೆ. ಪರಸ್ಪರರ ನಡತೆ ಬಗ್ಗೆ ಶಂಕೆ ಹೊಂದಿದ ದಂಪತಿ ಇಂತಹ ಖಾಸಗಿ ಬೇಹುಗಾರರ ಮೊರೆ ಹೋಗುತ್ತಿರುವುದು ಇತ್ತೀಚೆಗೆ ಸಾಮಾನ್ಯ.

ಯುವ ಪ್ರೇಮಿಗಳ ಸಾಚಾತನ ಪರೀಕ್ಷಿಸಲು ಖಾಸಗಿ ಟಿ.ವಿ.ಗಳು ನಡೆಸಿದ ಕಾರ್ಯಕ್ರಮ, ಸುದ್ದಿವಾಹಿನಿಗಳ ಕುಟುಕು ಕಾರ್ಯಾಚರಣೆಗಳು (ಸ್ಟಿಂಗ್ ಆಪರೇಷನ್) ಕೂಡ `ಹನಿ ಟ್ರ್ಯಾಪಿಂಗ್'ನ ಮತ್ತೊಂದು ಮುಖ. ವಿದೇಶಿ ಮಾಧ್ಯಮಗಳಂತೂ ರಹಸ್ಯ ಮಾಹಿತಿ ಪಡೆಯಲು ಇಂತಹ ಹುಚ್ಚು ಸಾಹಸಕ್ಕೆ ಇಳಿದಾಗಿದೆ. ಭಾರತದ ಮಾಧ್ಯಮಗಳು ಇನ್ನೂ ಆ ಮಟ್ಟ ತಲುಪಿಲ್ಲ.ವೆಲ್ತ್, ವೈನ್ ಅಂಡ್ ವುಮನ್!

ಅತ್ಯಂತ ಚಾಕಚಕ್ಯತೆ, ನಯ, ನಾಜೂಕಿನಿಂದ ಕೊಂಚವೂ ಶಂಕೆ ಬಾರದಂತೆ ರಹಸ್ಯ ಮಾಹಿತಿ ಪಡೆಯುವಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಮರ್ಥರು ಎಂಬುದು ಸಾಮಾನ್ಯ ನಂಬಿಕೆ. ಮಹಿಳೆಯರ ವೃತ್ತಿಪರತೆ, ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವ ಗುಣ ಅವರನ್ನು ಈ ಕೆಲಸಗಳಿಗೆ ಆಯ್ಕೆ ಮಾಡಲು ಪ್ರಮುಖ ಮಾನದಂಡ.ಪುರುಷರ `ಸೆಕ್ಸ್' ದೌರ್ಬಲ್ಯ ಇಂತಹ ಬೇಹುಗಾರಿಕೆಯ ಮೂಲ ಬಂಡವಾಳ. ವೆಲ್ತ್, ವೈನ್ ಅಂಡ್ ವುಮನ್ (ಹಣ, ಹೆಂಡ ಮತ್ತು ಹೆಣ್ಣು) ಮೂರು ಪ್ರಬಲ ಅಸ್ತ್ರಗಳು. ಮೊದಲೆರಡು ಪ್ರಲೋಭನೆಗಳಿಗೆ ಎದುರಾಳಿ ಮಣಿಯದಿದ್ದಾಗ ಕೊನೆಯದಾಗಿ ಸುಂದರಿಯರನ್ನು ಮುಂದಿಟ್ಟುಕೊಂಡು ಬಳಸುವ ಬ್ರಹ್ಮಾಸ್ತ್ರವೇ ಹನಿ ಟ್ರ್ಯಾಪ್!ಚೀನಾ, ರಷ್ಯ, ವಿಯೆಟ್ನಾಂ, ಕ್ಯೂಬಾದಂತಹ ರಾಷ್ಟ್ರಗಳು ಇಂತಹ ಬೇಹುಗಾರಿಕೆಯಲ್ಲಿ ನೈಪುಣ್ಯ ಗಳಿಸಿವೆ. ಒಂದು ಕಾಲಕ್ಕೆ ರಷ್ಯಾದ ಬೇಹುಗಾರಿಕೆ ದಳ `ಕೆಜಿಬಿ' ಅಮೆರಿಕದ ಸೇನೆಯ ನಿದ್ದೆಗೆಡೆಸಿತ್ತು. ಅಮೆರಿಕದ `ಸಿಐಎ', ಭಾರತದ `ರಾ', ಪಾಕಿಸ್ತಾನದ `ಐಎಸ್‌ಐ' ಈ ತಂತ್ರಗಳನ್ನು ಬಳಸಿ ಶತ್ರು ರಾಷ್ಟ್ರಗಳ ಮಾಹಿತಿ ಪಡೆಯುತ್ತವೆ.ನೈತಿಕತೆಗೆ ಇಲ್ಲಿ ಜಾಗವಿಲ್ಲ

ಬೇಹುಗಾರಿಕೆಗೂ ಸೆಕ್ಸ್‌ಗೂ ಬಿಡದ ನಂಟು. ನೈತಿಕತೆಗೆ ಇಲ್ಲಿ ಜಾಗ ಇಲ್ಲ. ಬಹುತೇಕ ರಹಸ್ಯ, ಸ್ಫೋಟಕ ಮಾಹಿತಿ ಹೊರಬೀಳುವುದು ಸರಸ, ಸಲ್ಲಾಪದ (ಪಿಲ್ಲೊ ಟಾಕ್) ವೇಳೆ. ಹೀಗಾಗಿ ಆಕರ್ಷಕ ಮೈಮಾಟದ ಮಾದಕ ತರುಣಿಯರನ್ನೇ ಇದಕ್ಕೆ ಆಯ್ದುಕೊಳ್ಳಲಾಗುತ್ತದೆ.

ಸೌಂದರ್ಯದ ಜತೆ ಬುದ್ಧಿ, ಚಾತುರ್ಯ, ಆತ್ಮವಿಶ್ವಾಸ ಮತ್ತು ಧೈರ್ಯವೂ ಬೇಕಾಗುತ್ತದೆ. ಎದುರಿನ ವ್ಯಕ್ತಿಗೆ ಶಂಕೆ ಬಾರದಂತೆ ಪ್ರೀತಿ, ಪ್ರೇಮದ ನಾಟಕವಾಡುವ ಮತ್ತು ಅಗತ್ಯಬಿದ್ದರೆ ಹಾಸಿಗೆ ಹಂಚಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿರಬೇಕಾಗುತ್ತದೆ. ಗೆದ್ದರೆ ಕೈತುಂಬಾ ಹಣ, ಮೈಮರೆತರೆ ಜೈಲಿನ ಕತ್ತಲೆಯ ಕೂಪ.ಇದು ಒಂದೇ ದಿನದಲ್ಲಿ ಮಾಡಿ ಮುಗಿಸುವ ಕೆಲಸವಲ್ಲ. ನಮಗೆ ಬೇಕಾದ ರಹಸ್ಯ ಮಾಹಿತಿ ಎಲ್ಲಿದೆ, ಅದನ್ನು ಕಾವಲು ಕಾಯುತ್ತಿರುವ ವ್ಯಕ್ತಿ ಯಾರು, ಅವನ ಆಸಕ್ತಿ, ದೌರ್ಬಲ್ಯಗಳೇನು ಎಂದು ತಿಳಿದು ಸ್ನೇಹ ಕುದುರಿಸಬೇಕು. ಗೂಢಚಾರಿಣಿಯರು ಎಷ್ಟು ನಾಜೂಕಾಗಿ ಈ ಕೆಲಸ ಮಾಡಿ ಮುಗಿಸುತ್ತಾರೆಂದರೆ, ಮೋಸಕ್ಕೆ ಒಳಗಾದ ವ್ಯಕ್ತಿಗೆ ತಾನು ಮೋಸಹೋದ ವಿಷಯವೇ ಅರಿವಿಗೆ ಬಂದಿರುವುದಿಲ್ಲ.

ಹೀಗೆ ಎದುರಾಳಿಯನ್ನು ಬಲೆಗೆ ಬೀಳಿಸಲು ಹೋದವರು ತಾವೇ ಅವರ ಜೊತೆ ಭಾವನಾತ್ಮಕ ನಂಟು ಬೆಸೆದುಕೊಂಡ ನಿದರ್ಶನಗಳೂ ಇವೆ. ಪ್ರೀತಿಯ ನಾಟಕವಾಡಲು ಹೋಗಿ ನಿಜವಾಗಿಯೂ ಪ್ರೇಮದ ಬಲೆಗೆ ಬಿದ್ದ ಗೂಢಾಚಾರಿಣಿಯರಿದ್ದಾರೆ.ವಿದೇಶಗಳಿಗೆ ತೆರಳುವ ರಾಜತಾಂತ್ರಿಕ ಮತ್ತು ರಾಯಭಾರಿ ಕಚೇರಿ ಸಿಬ್ಬಂದಿಗೆ ಎಲ್ಲಿಯೂ `ಕಾಲು ಜಾರದಂತೆ' ಎಚ್ಚರಿಕೆ ನೀಡಲಾಗುತ್ತದೆ. ಒಮ್ಮೆ ಅಧಿಕಾರಿಗಳು ಕಾಲು ಜಾರಿದರೆ ಅವರ ಕಥೆ ಮುಗಿದಂತೆಯೇ!

ಮೈ ಹಾಸದೆ ಮಾಹಿತಿಗೆ ಕನ್ನ

ತೀರಾ ಇತ್ತೀಚಿನವರೆಗೂ ದೈಹಿಕ ಮತ್ತು ಭೌತಿಕ ಕಸರತ್ತಿನ ಕೆಲಸವಾಗಿದ್ದ ಬೇಹುಗಾರಿಕೆ ವ್ಯಾಖ್ಯಾನವನ್ನು ಮಾಹಿತಿ ತಂತ್ರಜ್ಞಾನ ನಿಧಾನವಾಗಿ ಬದಲಿಸುತ್ತಿದೆ. ಮೈಯೊಡ್ಡಿ ಮಾಹಿತಿ ಕದಿಯುವುದು ಈಗ ಅನಿವಾರ್ಯವಾಗಿ ಉಳಿದಿಲ್ಲ. ಅಂತರ್ಜಾಲದ ಮೂಲಕ ಮಾಹಿತಿ ಕಣಜಕ್ಕೆ ಕನ್ನ ಹಾಕಬಹುದು.ಅಮೆರಿಕದ ಸಾವಿರಾರು ರಹಸ್ಯ ದಾಖಲೆಗಳನ್ನು ವೆಬ್‌ಸೈಟ್ ಮೂಲಕ ಕನ್ನ ಹಾಕಿ ಕದ್ದ ವಿಕಿಲೀಕ್ಸ್‌ನ ಜೂಲಿಯನ್ ಅಸ್ಸಾಂಜ್, ಹೆಣ್ಣಿಲ್ಲದೆ ಬೇಹುಗಾರಿಕೆ ನಡೆಸುವುದನ್ನು ತೋರಿಸಿಕೊಟ್ಟ. ಅತ್ಯಾಧುನಿಕ ಕ್ಯಾಮೆರಾ, ಮೊಬೈಲ್, ರೆಕಾರ್ಡರ್, ಮೈಕ್ರೋಚಿಪ್, ಪೆನ್‌ಡ್ರೈವ್, ಇಂಟರ್‌ನೆಟ್ ಇತ್ಯಾದಿಗಳು ಬೇಹುಗಾರರ ಕೆಲಸವನ್ನು ಹಗುರ ಮಾಡಿವೆ.ಇಷ್ಟೆಲ್ಲ ಇದ್ದರೂ `ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯಸಮ್ಮತ' ಎನ್ನುವ ಮಾತೊಂದಿದೆ. ಶತಮಾನಗಳ ನಂತರವೂ ಎಂಥ ಯುದ್ಧವನ್ನಾದರೂ ಗೆಲ್ಲಬಹುದಾದ ಪ್ರಬಲ ಅಸ್ತ್ರವಾಗಿ ಇನ್ನೂ ಆ `ಪ್ರೇಮ'ಕ್ಕೆ ಇರುವ ಬೆಲೆ ಇದ್ದೇ ಇದೆ!ಫೇಸ್‌ಬುಕ್ ಮೂಲಕ ಸಂಪರ್ಕ

ಪಾಕ್ ಗಡಿಗೆ ಹೊಂದಿಕೊಂಡಿರುವ ರಾಜಸ್ತಾನದ ಸೂರತ್‌ಗಡ ಜಿಲ್ಲೆಯಲ್ಲಿ ಕರ್ತ್ಯವ್ಯದ ಮೇಲಿದ್ದ ಲೆಫ್ಟಿನೆಂಟ್ ಕರ್ನಲ್ ಸಂಜಯ್ ಶಾಂಡಿಲ್ಯಗೆ ಫೇಸ್‌ಬುಕ್ ಮೂಲಕ ಪರಿಚಯವಾದ, ಐಎಸ್‌ಐ ಏಜೆಂಟಳಾಗಿ ಕೆಲಸ ಮಾಡುತ್ತಿದ್ದ ಶೀಬಾ (ಜೇಬಾ) ಎಂಬ ಬಾಂಗ್ಲಾ ಮಹಿಳೆಯೊಬ್ಬಳು ಅಧಿಕಾರಿಯನ್ನು ಖೆಡ್ಡಾಕ್ಕೆ ಕೆಡವಿದ್ದಳು. ಇಬ್ಬರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ `ರಾ' ದೆಹಲಿಯ ಪಂಚತಾರಾ ಹೊಟೆಲ್‌ನಲ್ಲಿದ್ದಾಗ ಅಧಿಕಾರಿಯನ್ನು ಬಂಧಿಸಿತ್ತು.ಸೇನೆಯ ರಹಸ್ಯ ಮಾಹಿತಿ ಒಳಗೊಂಡ ಅಧಿಕಾರಿಯ ಲ್ಯಾಪ್‌ಟಾಪ್‌ನ್ನು ಶೀಬಾ ಕದ್ದು ಒಯ್ದಿದ್ದಳು. ಢಾಕಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮತ್ತೊಬ್ಬ ಭಾರತೀಯ ಸೇನಾಧಿಕಾರಿಯನ್ನು ಪರಿಚಯಿಸಿಕೊಂಡಿದ್ದ ಇದೇ ಮಹಿಳೆ ತನಗೆ ಬೇಕಾದ ಮಾಹಿತಿ ಕೋರಿದ್ದಳು. ಎಚ್ಚೆತ್ತುಕೊಂಡ ಆ ಅಧಿಕಾರಿ ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.ಮೀನು ಹಿಡಿಯಲು ಹೋದವರೇ ಗಾಳಕ್ಕೆ!

ಭಾರತದ ಪ್ರತಿಷ್ಠಿತ ಗೂಢಚಾರ ಸಂಸ್ಥೆ `ರಾ' (ರಿಸರ್ಚ್ ಅಂಡ್ ಅನಲಿಸಿಸ್ ವಿಂಗ್) ಅಧಿಕಾರಿಗಳೇ ಮಹಿಳೆಯರ ಮಾಯಾಜಾಲಕ್ಕೆ ಬ್ದ್ದಿದು ಒದ್ದಾಡಿದ ಸ್ವಾರಸ್ಯಕರ ಘಟನೆಗಳು ಸಾಕಷ್ಟಿವೆ. ಇದು ಭಾರತಕ್ಕೆ `ರಿವರ್ಸ್ ಹನಿ ಟ್ರ್ಯಾಪಿಂಗ್'ಬೀಜಿಂಗ್‌ನಲ್ಲಿದ್ದ `ರಾ' ಅಧಿಕಾರಿ ಮನಮೋಹನ್ ಶರ್ಮಾ 2008ರಲ್ಲಿ ಚೀನೀ ಭಾಷೆಯ ಮನೆಪಾಠ ಮಾಡುತ್ತಿದ್ದ ಶಿಕ್ಷಕಿಯ ಪ್ರೇಮದ ಬಲೆಗೆ ಬಿದ್ದರು. ಆ ಶಿಕ್ಷಕಿ ಚೀನಾ ಸರ್ಕಾರದ ಮಾಹಿತಿದಾರಳಾಗಿದ್ದಳು. ಆದರೆ ಅಧಿಕಾರಿಗೆ ಈ ಸಂಗತಿ ಗೊತ್ತಿರಲಿಲ್ಲ. ಗೊತ್ತಾಗುವ ಹೊತ್ತಿಗೆ ಭಾರತ ಸರ್ಕಾರ ಅವರನ್ನು ವಾಪಸ್ ಕರೆಸಿಕೊಂಡಿತ್ತು. 2007ರಲ್ಲಿ ಹಾಂಕಾಂಗ್‌ನಲ್ಲಿದ್ದ `ರಾ' ಅಧಿಕಾರಿ ರವಿ ನಾಯರ್ ಚೀನಾದ ಬೇಹುಗಾರಿಕಾ ಯುವತಿಯೊಂದಿಗೆ `ಗಾಢ' ಒಡನಾಟ ಹೊಂದಿದ್ದರು.ಅದೇ ರೀತಿ 80ರ ದಶಕದಲ್ಲಿ ಶ್ರೀಲಂಕಾದ ಎಲ್‌ಟಿಟಿಇ ಚಲನವಲನಗಳ ಮಾಹಿತಿ ಸಂಗ್ರಹಿಸುತ್ತಿದ್ದ `ರಾ' ಅಧಿಕಾರಿ ಕೆ.ವಿ.ಉನ್ನಿಕೃಷ್ಣನ್ ಅವರು ಪಾನ್ ಅಮೆರಿಕ ವಿಮಾನ ಸಂಸ್ಥೆಯ ಗಗನಸಖಿಯೊಬ್ಬಳ ಗಾಳಕ್ಕೆ ಸಿಲುಕಿದ್ದರು. ಅವಳು ಕೇವಲ ಗಗನಸಖಿಯಾಗಿರಲಿಲ್ಲ, ಅಮೆರಿಕದ ಗುಪ್ತದಳ `ಸಿಐಎ' ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ರಹಸ್ಯ ಮಾಹಿತಿ ಸೋರಿಕೆ ಆರೋಪದ ಮೇಲೆ ಅವಳನ್ನು 1987ರಲ್ಲಿ ಜೈಲಿಗೆ ಕಳುಹಿಸಲಾಗಿತ್ತು.ನೆಹರೂ ಕಾಲದಲ್ಲಿ ನಡೆದಿತ್ತು...!

ಸ್ವಾತಂತ್ರ್ಯಾ ನಂತರದ ಭಾರತದ ಮೊದಲ `ಹನಿ ಟ್ರ್ಯಾಪಿಂಗ್' ನಡೆದದ್ದು ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ. ಮಾಸ್ಕೊದಲ್ಲಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬ ರಷ್ಯಾದ ಗೂಢಚಾರಿಣಿ ಬೀಸಿದ ಬಲೆಗೆ ಬಿದ್ದ. ಅಲ್ಲಿನ ಬೇಹುಗಾರಿಕೆ ದಳ `ಕೆಜಿಬಿ' ಚಿತ್ರ ಸಮೇತ ಇದನ್ನು ಬಹಿರಂಗಗೊಳಿಸಿತ್ತು. ಇದು ನೆಹರೂ ಗಮನಕ್ಕೆ ಬಂದಾಗ ಅವರು ನಕ್ಕು ಸುಮ್ಮನ್ನಾಗಿದ್ದರು. ಯುವ ಅಧಿಕಾರಿಯನ್ನು ಹತ್ತಿರ ಕರೆದು `ಮೈಮರೆಯದಂತೆ' ಎಚ್ಚರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry