ಎಚ್.ಡಿ.ಕುಮಾರಸ್ವಾಮಿಗೆ ಸಿಎಂ ಸವಾಲು

ಗುರುವಾರ , ಜೂಲೈ 18, 2019
27 °C

ಎಚ್.ಡಿ.ಕುಮಾರಸ್ವಾಮಿಗೆ ಸಿಎಂ ಸವಾಲು

Published:
Updated:

ಬೆಂಗಳೂರು: `ಸಿ.ಎಂ. ನನ್ನೊಂದಿಗೆ ರಾಜಿ ಮಾಡಿಕೊಳ್ಳುವ ಯತ್ನ ನಡೆಸಿದ್ದರು~ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಿಡಿಸಿರುವ ಬಾಂಬ್‌ಗೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, `ನೀವು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಸತ್ಯವೇ ಆಗಿದ್ದಲ್ಲಿ, ಅದೇ ಮಾತನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಎದುರು ಹೇಳಿ~ ಎಂದು ಸವಾಲು ಹಾಕಿದ್ದಾರೆ.ಕೇರಳದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಆಡಿರುವ ಮಾತುಗಳಿಗೆ ಪ್ರತಿಕ್ರಿಯಿಸಿ ಶುಕ್ರವಾರ ಬಹಿರಂಗ ಪತ್ರ ಬರೆದಿದ್ದಾರೆ.`ನನಗೆ ದೇವರಲ್ಲಿ ನಂಬಿಕೆ ಇದೆ, ನಿಮಗೂ ಇದೆ ಎಂದು ನಂಬಿದ್ದೇನೆ. ನಾವಿಬ್ಬರೂ ಧರ್ಮಸ್ಥಳದಲ್ಲಿ ಯಾವ ಸಮಯದಲ್ಲಿ ಭೇಟಿಯಾಗಬಹುದು ಎಂದು ನೀವೇ ಸೂಚಿಸಿ. ಧೈರ್ಯವಿದ್ದರೆ ನೀವು ನನ್ನ ವಿರುದ್ಧ ಆಡಿರುವ ಮಾತುಗಳನ್ನು ಮಂಜುನಾಥ ಸ್ವಾಮಿಯ ಎದುರೂ ಆಡಿ~ ಎಂದು ಯಡಿಯೂರಪ್ಪ ಪಂಥಾಹ್ವಾನ ನೀಡಿದ್ದಾರೆ.`ನಾನು, ರಾಜಿ ಮಾಡಿಕೊಳ್ಳಲು ಮುಂದಾಗಿದ್ದೆ ಎಂದಿರುವುದು ಸಂಪೂರ್ಣ ಆಧಾರರಹಿತ ಎಂದು ಯಾವುದೇ ಸಂದರ್ಭದಲ್ಲೂ ದೇವರೆದುರು ಪ್ರಮಾಣ ಮಾಡಿ ಹೇಳಲು ಸಿದ್ಧ~ ಎಂದಿದ್ದಾರೆ.

`ಹೇಡಿಯಂತೆ ಪಲಾಯನ ಮಾಡಬೇಡಿ. ನಮ್ಮಿಬ್ಬರ ಸತ್ಯಸಂಧತೆಯನ್ನು ಮಂಜುನಾಥ ಸ್ವಾಮಿಯ ಎದುರೇ ಸಾಬೀತು ಮಾಡೋಣ, ಬನ್ನಿ~ ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.`ಹಿಂದೆ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ ಮತ್ತು ಧರ್ಮ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ. ದೇವೇಗೌಡ ಅವರ ಕುಟುಂಬ ಕಿರುಕುಳ ನೀಡಿದ್ದು ಇಡೀ ರಾಜ್ಯಕ್ಕೆ ಗೊತ್ತಿದೆ. ಈಗ ನೀವು ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಾ ನನ್ನ ತೇಜೋವಧೆಗೆ ಯತ್ನಿಸುತ್ತಿದ್ದೀರಿ~ ಎಂದು ಅವರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry