ಎಚ್.ಡಿ. ಕೋಟೆ: ಭಾರಿ ಮಳೆ, ಹಾನಿ

7

ಎಚ್.ಡಿ. ಕೋಟೆ: ಭಾರಿ ಮಳೆ, ಹಾನಿ

Published:
Updated:
ಎಚ್.ಡಿ. ಕೋಟೆ: ಭಾರಿ ಮಳೆ, ಹಾನಿ

ಎಚ್.ಡಿ.ಕೋಟೆ: ಪಟ್ಟಣ ಮತ್ತು ಸುತ್ತಲಿನ ಕೆಲ ಗ್ರಾಮಗಳಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ಅಪಾರ ಹಾನಿ ಸಂಭವಿಸಿದೆ. ವಿವಿಧೆಡೆ ಸುಮಾರು 60 ಮನೆಗಳು ಹಾನಗೀಡಾಗಿವೆ, ಸಿಡಿಲಿನಿಂದಾಗಿ ಆದಿವಾಸಿ ಜನಾಂಗದ ಮಹಿಳೆ ಹಾಗೂ ಮಗು ಗಾಯಗೊಂಡಿದ್ದಾರೆ.ಮಳೆಯಿಂದಾಗಿ ಎಚ್.ಡಿ.ಕೋಟೆ ಪಟ್ಟಣ ಪಂಚಾಯಿತಿ ಕಚೇರಿ ಆವರಣ ಕೆರೆಯಾಗಿ ಮಾರ್ಪಟ್ಟಿದೆ. ಆವರಣದಲ್ಲಿದ್ದ ವಾಹನಗಳನ್ನು ಹೊರ ತೆಗೆಯಲಾಗದಷ್ಟು ನೀರು ಸಂಗ್ರಹವಾಗಿದೆ. ಪಟ್ಟಣದ ಹಲವು ರಸ್ತೆಗಳಲ್ಲೂ ನೀರು ತುಂಬಿಕೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ತಾಲ್ಲೂಕಿನ ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ 60ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. ಸಿಡಿಲು ಬಡಿದು ಮೊತ್ತ ಹಾಡಿಯ ಆದಿವಾಸಿ ಮಹಿಳೆ ಪಾರ್ವತಮ್ಮ ಹಾಗೂ ಅವರ ಮಗುವಿಗೆ ಗಾಯಗಳಾಗಿವೆ. ಕಲ್ನಾರು ಶೀಟು ಬಿದ್ದು ಬಸವರಾಜು ಎಂಬುವವರ ಕೈ ಮುರಿದಿದೆ.

ಮಳೆಯಿಂದ ತತ್ತರಿಸಿದ ಎಲ್ಲ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.ನಾಗಹಳ್ಳಿ ಗ್ರಾಮದಲ್ಲಿ ತೆಂಗಿನ ಮರವೊಂದು ಬುಡಸಮೇತ ಕಿತ್ತು ಮನೆ ಮೇಲೆ ಬಿದ್ದಿದೆ. ಅಲ್ಲದೆ  ಹಲವು ಮರಗಳು ಉರುಳಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೆಗ್ಗಡಾಪುರ ಗ್ರಾಮದ ಕೆರೆ ಬಳಿಯ ಜಮೀನಿನಲ್ಲಿದ್ದ ಬಿದಿರು ಹಿಂಡು ಕುಸಿದು ಹೋರಿಯೊಂದು ಅದರಲ್ಲಿ ಸಿಲುಕಿತ್ತು. ಗ್ರಾಮಸ್ಥರ ಸಮಯಪ್ರಜ್ಞೆಯಿಂದಾಗಿ ಹೋರಿ ಪ್ರಾಣಾಪಾಯದಿಂದ ಪಾರಾಗಿದೆ. ಸಿಂಗನಾಯಕ ಅವರಿಗೆ ಸೇರಿದ ಈ ಬಿದಿರು ಹಿಂಡಿನಿಂದ ಹೋರಿಯನ್ನು ರಕ್ಷಿಸಲು ಜೆಸಿಬಿ ಬಳಸಬೇಕಾಯಿತು.ನಾಗನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಕೂಡ ಸಂಪೂರ್ಣ ಜಖಂಗೊಂಡಿದೆ. ಲೋರ್ದಮ್ಮ, ಶಾಂತಪ್ಪ, ರಾಯಪ್ಪ, ಹೃದಯರಾಜ್, ಆರೋಗ್ಯಸ್ವಾಮಿ, ಜಯಮ್ಮ ಅವರ ಮನೆಗಳು ಹಾಗೂ ಸರ್ಕಾರಿ ಶಾಲೆ ಸೇರಿದಂತೆ 30ಕ್ಕೂ ಹೆಚ್ಚು ಕಟ್ಟಡಗಳು ಬಿರುಗಾಳಿ ಮಳೆಗೆ ಸಿಲುಕಿ ಜಖಂಗೊಂಡಿವೆ.ಹೆಗ್ಗಡಾಪುರ ಹಾಗೂ ಕಟ್ಟೇಮನುಗನಹಳ್ಳಿಯ ಹಲವು ಮನೆಗಳ ಮೇಲೆ ಮರಗಳು ಬಿದ್ದಿವೆ. ತಹಶೀಲ್ದಾರ್ ಎನ್.ಸಿ. ಜಗದೀಶ್, ಕಂದಾಯ ನಿರೀಕ್ಷಕ ಸಣ್ಣರಾಮಪ್ಪ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಅಂದಾಜಿನ ಪಟ್ಟಿ ತಯಾರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry