ಎಚ್‌ಎಎಲ್‌ಗೆ ರೋಚಕ ಜಯ

7

ಎಚ್‌ಎಎಲ್‌ಗೆ ರೋಚಕ ಜಯ

Published:
Updated:
ಎಚ್‌ಎಎಲ್‌ಗೆ ರೋಚಕ ಜಯ

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಎಚ್‌ಎಎಲ್ ತಂಡದವರು ಐ-ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ 1-0 ಗೋಲಿನಿಂದ ಮುಂಬೈ ಎಫ್‌ಸಿ ತಂಡದ ವಿರುದ್ಧ ರೋಚಕ ಗೆಲುವು ಪಡೆದರು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದ 72ನೇ ನಿಮಿಷದಲ್ಲಿ ಮಾಲೆಂಗಾಂಬ ಮೇಟಿ ಅವರು ಗೋಲು ಗಳಿಸಿ ಎಚ್‌ಎಎಲ್ ತಂಡದ ಗೆಲುವಿನ ರೂವಾರಿ ಎನಿಸಿದರು.ಈ ಗೆಲುವಿನ ಮೂಲಕ ಬೆಂಗಳೂರಿನ ತಂಡ ತನ್ನ ಪಾಯಿಂಟ್‌ಗಳನ್ನು 19ಕ್ಕೆ ಹೆಚ್ಚಿಸಿಕೊಂಡಿದ್ದು, ಒಂದು ಕ್ರಮಾಂಕ ಮೇಲಕ್ಕೇರಿ ಎಂಟನೇ ಸ್ಥಾನ ಪಡೆದಿದೆ. ಎಚ್‌ಎಎಲ್ ಲೀಗ್‌ನಲ್ಲಿ ಒಟ್ಟು 16 ಪಂದ್ಯಗಳನ್ನಾಡಿದೆ. ಮತ್ತೊಂದೆಡೆ ಮುಂಬೈ ಎಫ್‌ಸಿ ತಂಡ 15 ಪಂದ್ಯಗಳಿಂದ 24 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಒಎನ್‌ಜಿಸಿ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿ ತಂಡದ ಗೆಲುವಿನ ಕಾರಣರಾಗಿದ್ದ ಮೇಟಿ ಭಾನುವಾರ ಕೂಡಾ ಮಿಂಚಿನ ಪ್ರದರ್ಶನ ನೀಡಿ ನೆರೆದ ಪ್ರೇಕ್ಷಕರ ಮನಗೆದ್ದರು.ಪಂದ್ಯದ ಆರಂಭದಿಂದಲೇ ಎಚ್‌ಎಎಲ್ ಮೇಲುಗೈ ಸಾಧಿಸಿತ್ತು. ಮೊದಲ ಅವಧಿಯಲ್ಲಿ ತಂಡಕ್ಕೆ ಗೋಲು ಗಳಿಸುವ ಹಲವು ಅವಕಾಶಗಳು ಲಭಿಸಿದ್ದವು. ಎ. ಹಮ್ಜಾ ಅವರು ಮೂರು ಅತ್ಯುತ್ತಮ ಅವಕಾಶಗಳನ್ನು ಸದುಪಯೋಗಪಡಿಸಲು ವಿಫಲರಾದರು. ಮುಂಬೈ ಎಫ್‌ಸಿ ತಂಡ ಒಂದೆರಡು ಬಾರಿ ಚೆಂಡಿನೊಂದಿಗೆ ಎಚ್‌ಎಎಲ್ ಗೋಲುಪೆಟ್ಟಿಗೆ ಗುರಿಯಾಗಿಸಿ ಪ್ರತ್ಯಾಕ್ರಮಣ ನಡೆಸಿತು. ಆದರೆ ಹೊಂದಾಣಿಕೆಯ ಕೊರತೆಯ ಕಾರಣ ಗೋಲು ಗಳಿಸುವ ಪ್ರಯತ್ನ ಯಶ ಕಾಣಲಿಲ್ಲ.ಎರಡನೇ ಅವಧಿಯಲ್ಲೂ ಎಚ್‌ಎಎಲ್ ಪಂದ್ಯದ ಮೇಲಿನ ಹಿಡಿತ ಕೈಬಿಡಲಿಲ್ಲ. ಮಾತ್ರವಲ್ಲ 72ನೇ ನಿಮಿಷದಲ್ಲಿ ತಂಡಕ್ಕೆ ಅರ್ಹವಾಗಿದ್ದ ಗೋಲು ಲಭಿಸಿತು. ಕ್ಸೇವಿಯರ್ ವಿಜಯ್ ಕುಮಾರ್ ಅವರು ಅಂಕಿತ್ ಶರ್ಮಗೆ ಚೆಂಡನ್ನು ಪಾಸ್ ಮಾಡಿದರು. ಅಂಕಿತ್ ಚೆಂಡನ್ನು ಮಾಲೆಂಗಾಂಬ ಮೇಟಿ ಅವರತ್ತ ತಳ್ಳಿದರು. ಮೇಟಿ ಚೆಂಡನ್ನು ಯಶಸ್ವಿಯಾಗಿ ಗುರಿ ಸೇರಿಸಿ ಎಚ್‌ಎಎಲ್ ಗೆಲುವಿಗೆ ಕಾರಣರಾದರು.‘ತಂಡ ನೀಡಿದ ಪ್ರದರ್ಶನದಿಂದ ನನಗೆ ತೃಪ್ತಿಯಾಗಿದೆ. ಗೆಲುವಿನ ಗುರಿಯನ್ನಿಟ್ಟುಕೊಂಡೇ ಕಣಕ್ಕಿಳಿದಿದ್ದೆವು. ಪೂರ್ಣ ಮೂರು ಪಾಯಿಂಟ್ ಪಡೆಯಲು ನಾವು ಅರ್ಹರಾಗಿದ್ದೆವು’ ಎಂದು ಪಂದ್ಯದ ಬಳಿಕ ಎಚ್‌ಎಎಲ್ ಮ್ಯಾನೇಜರ್ ಎಂ. ಮುರಳೀಧರನ್ ನುಡಿದರು. ‘ನಾವು ಇಂದು ಕೆಟ್ಟದಾಗಿ ಆಡಿದೆವು. ಫಿನಿಶಿಂಗ್‌ನಲ್ಲಿ ಲೋಪ ಸಂಭವಿಸಿದವು. ಎಲ್ಲ ಕ್ರೆಡಿಟ್ ಎಚ್‌ಎಎಲ್‌ಗೆ ಸಲ್ಲಬೇಕು. ಅವರು ಚೆನ್ನಾಗಿ ಆಡಿ ಅರ್ಹ ಗೆಲುವು ಪಡೆದರು’ ಎಂದು ಮುಂಬೈ ಎಫ್‌ಸಿ ಮ್ಯಾನೇಜರ್ ಹೆನ್ರಿ ಪಿಕಾರ್ಡೊ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry