ಎಚ್‌ಐವಿ ಖಿನ್ನತೆ: ಬಲಿಯಾಗದಿರಲಿ ಬಾಳು

7

ಎಚ್‌ಐವಿ ಖಿನ್ನತೆ: ಬಲಿಯಾಗದಿರಲಿ ಬಾಳು

Published:
Updated:
ಎಚ್‌ಐವಿ ಖಿನ್ನತೆ: ಬಲಿಯಾಗದಿರಲಿ ಬಾಳು

ನಾನು ಎಚ್‌ಐವಿ ಪಾಸಿಟಿವ್ ಅಂತ ಗೊತ್ತಾದ ಆ ದಿನ... ಮುಗಿದೇ ಹೋಯಿತು ಈ ಜೀವನ ಎಂದುಕೊಂಡು ನಡುಗಿದೆ. ನಾನು ನಡೆವ ದಾರಿ ಬಾಯ್ಬಿಟ್ಟು ನನ್ನನ್ನು ನುಂಗಲು ಸಜ್ಜಾದಂತೆ, ಆಕಾಶ ಬೆಂಕಿಯ ಮಳೆ ಸುರಿದು ಸುಡಲು ಬಂದಂತೆ....ನಾಳೆಯಿಂದ ನನ್ನ ಅಕ್ಕ-ಪಕ್ಕದ ಮನೆಯವರು ನನ್ನನ್ನು ದೂರ ಇಡುತ್ತಾರೆ. ಮನೆ ಮಾಲೀಕ ಮನೆ ಖಾಲಿ ಮಾಡಲು ಹೇಳುತ್ತಾನೆ. ನಾನು ಕೆಲಸ ಮಾಡುವ ಕಚೇರಿಯ ಮ್ಯಾನೇಜರು ನನ್ನ ಕೈಗೆ ಈ ಹದಿನೈದು ದಿನದ ಸಂಬಳ ನೀಡಿ ನಾಳೆಯಿಂದ ಬರಬೇಡ ಅಂದುಬಿಡುತ್ತಾರೆ. ತವರಿಗೆ ಹೋದರೆ ಅಪ್ಪ `ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ~  ಅನ್ನುತ್ತಾರೆ. ನನ್ನ ಗತಿ ಏನು? ನನ್ನ ಮಗನ ಭವಿಷ್ಯವೇನು?

ನನ್ನ ಹಾಗೂ ನನ್ನ ಪತಿಯ ಔಷಧ, ಚಿಕಿತ್ಸೆ ಸರ್ಕಾರದ್ದಾಗಬಹುದು. ಆದರೆ ಎರಡು ಹೊತ್ತಿನ ಊಟಕ್ಕೇನು ಮಾಡಲಿ? ಅಲ್ಲದೇ ಪೌಷ್ಟಿಕ ಆಹಾರವೇ ಆಗಬೇಕಂತೆ ಎಲ್ಲಿಂದ ತರಲಿ... ಬದುಕು ಇದಕ್ಕಿಂತ ಹೆಚ್ಚು ಕ್ರೌರ್ಯ ಚೆಲ್ಲಲು ಸಾಧ್ಯವೇ? ಕಣ್ಣೀರು ಒರೆಸಿಕೊಂಡರು ಸುಮಿತ್ರಾ.ನಿಜ, ಇಂತಹ ಕಾರಣಗಳಿಂದಾಗಿ ಎಚ್‌ಐವಿಯೊಂದಿಗೇ ಹೆಜ್ಜೆ ಇಡುವ ಮತ್ತೊಂದು ಸಮಸ್ಯೆ ಎಂದರೆ ಮಾನಸಿಕ ಖಿನ್ನತೆ. ಅದೆಷ್ಟು ಕ್ರೂರವಾಗಿ ಕಾಡುತ್ತದೆ ಎಂದರೆ ಜೀವನವೇ ಸಾಕು. ವರ್ಷಾರು ತಿಂಗಳಲ್ಲಿ ಸಾಯೋದು ಇದ್ದೇ ಇದೆ. ಈಗಲೇ ಆಗಿ ಹೋಗಲಿ ಎನ್ನುವ ಆಲೋಚನೆಗಳೂ ಬಾರದೇ ಇರದು. ಆದರೆ ಈ ಒತ್ತಡ, ಚಿಂತೆ, ಅವಮಾನ, ಆತಂಕ ಇಂತಹ ಭಾವನೆಗಳನ್ನು ಹತ್ತಿಕ್ಕಿ ನೆಮ್ಮದಿಯನ್ನು ಕಾಣಲು ಸಾಕಷ್ಟು ಮಾರ್ಗಗಳಿವೆ.  `ಬಿಪಿ/ಶುಗರು ಇದ್ದೋರೆಲ್ಲ ಅದರೊಂದಿಗೆ ರಾಜಿ ಮಾಡಿಕೊಂಡು ನೆಮ್ಮದಿಯಿಂದ ಬಾಳುತ್ತಿರಬೇಕಾದರೆ ನಾವೇಕೆ ಎಚ್‌ಐವಿ ಯೊಂದಿಗೆ ಹೊಂದಿಕೊಳ್ಳಬಾರದು?~ ಎಂಬ ಸುಮಿತ್ರಾಳ ಮಾತಿನಲ್ಲಿ ಜೀವನೋತ್ಸಾವಿದೆ.ಕಾಡದಿರಲಿ ಖಿನ್ನತೆ

ನಿಜ, ಎಚ್‌ಐವಿ ಅಥವಾ ಏಡ್ಸ್ ಎಂದೊಡನೆ ಏಳುವ ಭಾವನೆಗಳೇ ಅಂಥವು. ಜಗತ್ತೇ ಅಪರಿಚಿತವಾಗಿ ಕಂಡು ಬಿಡುತ್ತದೆ. ಬದುಕೇ ಮುಗಿದು ಹೋಯಿತು ಎನ್ನುವ ಆತಂಕ, ಸಾಮಾಜಿಕ ಬಹಿಷ್ಕಾರದ ಭಯ, ಕುಟುಂಬ ತೊರೆದು ಬಿಡುವುದೆನ್ನುವ ಬೇಗುದಿ, ಜೊತೆಗೆ ದಿನಕ್ಕೊಂದರಂತೆ ದಾಳಿ ನಡೆಸುವ ಅವಕಾಶವಾದಿ ಕಾಯಿಲೆಗಳ ಕೀಟಲೆ. ಇದೆಲ್ಲ ಸಾಲದೆಂಬಂತೆ ಕುಟುಕುವ ಆರ್ಥಿಕ ಸಂಕಷ್ಟ.ಅಂತೆಯೇ ಎಚ್‌ಐವಿ/ಏಡ್ಸ್ ಬಾಧಿತರು ವಿಚಿತ್ರ ಮನೋವ್ಯಾಕುಲಕ್ಕೆ ಒಳಗಾಗುತ್ತಾರೆ. ದೈಹಿಕ ಕಾಯಿಲೆಯ ಜತೆ-ಜತೆಗೇ ಕಾಡುವ ಚಿಂತೆ, ಆತಂಕ, ಖಿನ್ನತೆ, ಮಾನಸಿಕ ಒತ್ತಡಗಳಿಂದ ಸಾವೇ ಹಿತ ಎನ್ನುವಂತಹ ಭಾವನೆಯೂ ಬಂದು ಹೋಗಬಹುದು. ಆದರೆ ಯಾವುದಕ್ಕೂ ಸಾವು ಉತ್ತರವಲ್ಲ. ಪರಿಹಾರಗಳನ್ನು ಕಂಡುಕೊಳ್ಳುವ ಮನೋಬಲ, ಆತ್ಮಸ್ಥೈರ್ಯ ಇರಬೇಕಷ್ಟೆ.ನೀವು ಎಚ್‌ಐವಿ ಪಾಸಿಟಿವ್ ಎಂದು ತಿಳಿದು ಬಂದಾಗ ಎದೆಗುಂದದೇ ಮೊದಲು ವೈದ್ಯರಿಂದ ಸಂಪೂರ್ಣ ತಿಳಿವಳಿಕೆ ಪಡೆಯಿರಿ. ವೃತ್ತಿಪರ ಆಪ್ತ ಸಮಾಲೋಚನೆಗೆ ಒಳಗಾಗುವುದರಿಂದ ಖಿನ್ನತೆ ಹಾಗೂ ಮಾನಸಿಕ ಒತ್ತಡ ತಗ್ಗಬಹುದು. ಅಪೂರ್ಣ ಜ್ಞಾನ ಹೆಚ್ಚಿನ ಭಯ ಹಾಗೂ ಆತಂಕವನ್ನು ಸೃಷ್ಟಿಸುತ್ತದೆ. ಆದ್ದರಿಂದ ಎಚ್‌ಐವಿ/ಏಡ್ಸ್ ನಡುವಿನ ವ್ಯತ್ಯಾಸ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಆಹಾರ, ವ್ಯಾಯಾಮ, ಔಷಧಿ, ಚಿಕಿತ್ಸೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.ಮನೆಯವರಿಂದ ಈ ವಿಷಯ ಮುಚ್ಚಿಡುವುದರಿಂದ ಯಾವ ಲಾಭವೂ ಇಲ್ಲ. ಅವರಿಗೂ ಈ ವಿಷಯ ತಿಳಿದರೆ ನಿಮಗೆ ಆರ್ಥಿಕ ಹಾಗೂ ಭಾವನಾತ್ಮಕ ಸಹಕಾರ ದೊರೆಯಬಹುದು. ಗಂಡನಿಂದ ಹೆಂಡತಿಗೆ ಬಂತೊ, ಹೆಂಡತಿಯಿಂದ ಗಂಡನಿಗೆ ಬಂತೊ ಎಂಬ ಬಗ್ಗೆ ಚರ್ಚೆ ಮನಸ್ತಾಪ ಬೇಡ. ಒಬ್ಬರಿಗೊಬ್ಬರು ಬೆಂಬಲವಾಗಿ, ಸಮಾಧಾನ-ಸಾಂತ್ವನ ಹೇಳಿಕೊಳ್ಳುತ್ತ ಬದುಕುವುದರಲ್ಲಿ ನ್ಯಾಯವಿದೆ.ವ್ಯಾಯಾಮ-ಯೋಗ-ಪಥ್ಯ


ಮನೋಬಲವನ್ನು ವೃದ್ಧಿಸುವ, ದೇಹದ ಜಡತ್ವವನ್ನು ನೀಗಿಸುವ, ಉತ್ಕೃಷ್ಟ ಆಲೋಚನೆಗಳಲ್ಲಿ ತೊಡಗುವಂತೆ ಮಾಡುವ ಶಕ್ತಿ ಯೋಗ-ಧ್ಯಾನಕ್ಕಿದೆ. ಕಾಯಿಲೆನಿಯಂತ್ರಿಸಲು ಔಷಧ-ಚಿಕಿತ್ಸೆಗಳಿವೆ.ಆದರೆ ಮನಸ್ಸಿನ ಸಮತೋಲನ ಕಾಯಲು ಯೋಗ-ಧ್ಯಾನಗಳಿಗಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ. ಹಾಗೆಯೇ ಸರಿಯಾದ ಊಟ, ಪೌಷ್ಟಿಕ ಆಹಾರವೂ ಕೂಡ ಮುಖ್ಯವೇ. ಅಂತೆಯೇ ಈ ಎಲ್ಲ ಎಚ್ಚರಿಕೆ ವಹಿಸಿದ್ದಕ್ಕೆ ಆರು ತಿಂಗಳು ಬದುಕುತ್ತೇನೆ ಎಂದುಕೊಂಡಿದ್ದ ಸುಮಿತ್ರಾ, ಎಚ್‌ಐವಿಯೊಂದಿಗೆ 21ನೇ ವರ್ಷ ಬದುಕುತ್ತಿದ್ದಾರೆ.ಎಚ್‌ಐವಿ/ಏಡ್ಸ್ ಸಮುದಾಯ


ರಾಜ್ಯಾದ್ಯಂತ  ರಾಷ್ಟ್ರವ್ಯಾಪಿಯಾದ ಕೆಲವು ಎಚ್‌ಐವಿ/ಏಡ್ಸ್ ಸಮುದಾಯ/ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಈ ಸಂಸ್ಥೆಗಳು  ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿರುವವರಿಗಾಗಿ ದುಡಿಯುತ್ತಿವೆ. ಅವುಗಳೊಂದಿಗೆ ಗುರುತಿಸಿಕೊಳ್ಳಿ. ಅಲ್ಲಿ ನಿಮ್ಮಂತೆ ನೊಂದವರು ಗೆಳೆಯ/ಗೆಳತಿಯರಾಗುತ್ತಾರೆ. ಸಾಂತ್ವನ ಹೇಳುತ್ತಾರೆ. ಆರೋಗ್ಯ, ಜೀವನ, ಭವಿಷ್ಯದ ಬಗ್ಗೆ ಹೊಸ ಕಲ್ಪನೆ ಮೂಡುತ್ತದೆ. ಸಮುದಾಯಕ್ಕಾಗಿ ದುಡಿಯಲು ವಾರದ ಒಂದು ದಿನವನ್ನಾದರೂ ಮೀಸಲಿಡಿ. ಇದರಿಂದ ನಿಮ್ಮ ಬಗ್ಗೆ ನಿಮಗೇ ಗೌರವ, ಆತ್ಮತೃಪ್ತಿ ದೊರಕುವುದಲ್ಲದೆ ಖಿನ್ನತೆಗೆ ಅವಕಾಶವಿರದು.ಗೆಟ್ಟಿಂಗ್ ಟು ಝೀರೊ

ಡಿಸೆಂಬರ್ 1 ಏಡ್ಸ್ ದಿನ. ಈ ಬಾರಿಯ ಧ್ಯೇಯ ವಾಕ್ಯ

‘Getting to Zero:

Zero new infections

zero stigma and discrimination

zero to AIDS related death’

`ಗೆಟ್ಟಿಂಗ್ ಟು ಝೀರೊ~ ಎಂಬ ಗುರಿಯನ್ನು ಮುಟ್ಟಬೇಕಾದವರು ಎಚ್‌ಐವಿ/ಏಡ್ಸ್ ಹೊಂದಿದ ಜನರು. ಆರ್ಥಿಕವಾಗಿ ಸಾಮಾಜಿಕವಾಗಿ ಅವರಿಗೆ ಭದ್ರತೆ ಒದಗಿಸುವ ಮೂಲಕ, ಅವರ ಮನೋ ದೈಹಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಈ ಗುರಿ ತಲುಪಬಹುದಷ್ಟೆ. ಅವರ ಹಿತಕ್ಕಾಗಿ ಯಾವ ಕ್ರಮವನ್ನೂ ಕೈಗೊಳ್ಳದೇ ಈ ಗುರಿಯ ಸಾಧನೆ ಅಸಾಧ್ಯ. ಅಂದಿನ ಕಾರ್ಯಕ್ರಮಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ, ವಿದೇಶಗಳಿಂದ ಲಕ್ಷಾಂತರ ಹಣ ಹರಿದು ಬರುತ್ತದೆ. ಆದರೆ ಒಂದು ದಿನದ ಕಾರ್ಯಕ್ರಮ. ಹಾರ/ತುರಾಯಿಗಾಗಿ, ಬಂದ ಅತಿಥಿಗಳ ಚಹಾ/ ಪಾನೀಯ, ಇದ್ದು ಹೋಗುವ ಖರ್ಚಿಗಾಗಿ ಈ ಹಣವೆಲ್ಲ ವ್ಯರ್ಥವಾದರೆ ಏನು ಬಂತು? ಇದರಿಂದ ಎಚ್‌ಐವಿ/ಏಡ್ಸ್ ಹೊಂದಿರುವ ಜನರಿಗೆ ಪ್ರಯೋಜನ ಆಗಬೇಕು ಎನ್ನುತ್ತಾರೆ ಕರ್ನಾಟಕ ನೆಟ್‌ವರ್ಕ್ ಫಾರ್ ಪೀಪಲ್ ಲಿವಿಂಗ್ ವಿತ್ ಎಚ್‌ಐವಿ/ಏಡ್ಸ್ (ಕೆಎನ್‌ಪಿ) ಸಂಸ್ಥೆಯ ಅಧ್ಯಕ್ಷೆ ಸರೋಜಾ.ವೇದಿಕೆಯಲ್ಲಿ ನಿಂತು ನಾವು ಎಚ್‌ಐವಿ/ಏಡ್ಸ್‌ಗೆ ಒಳಗಾದವರು ಎಂದು ಗುರುತಿಸಿಕೊಂಡು ಮಾತನಾಡಿದ ನಂತರ ಹೊರಗಡೆ ನಾವು ಅನುಭವಿಸುವ ಅವಮಾನ ನಮಗೇ ಗೊತ್ತು. ಸಭೆ, ಸಮಾರಂಭದಲ್ಲಿ ಕುಳಿತು ಮಾತನಾಡಿದಂತೆ ನಡೆಯುವುದಿಲ್ಲ. ಕೇವಲ ಭಾಷಣದಿಂದ ಯಾವ ಸಾಧನೆಯೂ ಆಗುವುದಿಲ್ಲ. ಅದರೊಂದಿಗೆ ಸಮುದಾಯದ ಜನರಿಗಾಗಿ ಉಪಯುಕ್ತ ಕಾರ್ಯಗಳೂ ನಡೆಯಬೇಕು ಎನ್ನುತ್ತಾರೆ ಸರೋಜಾ.ಎಚ್‌ಐವಿ ವಿಮಾ ಪ್ಯಾಕೇಜ್

ಎಚ್‌ಐವಿ/ಏಡ್ಸ್ ಬಾಧಿತರಿಗೆ ಸರ್ಕಾರದ ಮಟ್ಟದಲ್ಲಿ ಪ್ರತ್ಯೇಕ ವೈದ್ಯಕೀಯ ವಿಮಾ ಪ್ಯಾಕೇಜ್ ಇಲ್ಲ.  ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ) ಅನೇಕ ವಿಮಾ ಕಂಪೆನಿಗಳಿಗೆ, ವಿಮಾ ನಿಯಂತ್ರಣ ಅಭಿವೃದ್ಧಿ  ಸಂಸ್ಥೆ (ಐಆರ್‌ಡಿಎ)ಗೆ ಮನವಿ ಮಾಡಿದೆ. ಆದರೆ ಇನ್ನೂ ಫಲ ದೊರೆತಿಲ್ಲ.ಐಆರ್‌ಡಿಎ ಮುಖಂಡತ್ವದಲ್ಲಿ ಪ್ರಪಂಚದ ಇತರ ಕಡೆ ಎಚ್‌ಐವಿ/ಏಡ್ಸ್ ವಿಮೆ ಹೇಗಿದೆ ಎಂಬ ಬಗ್ಗೆ ಅಧ್ಯಯನ ಕೈಗೊಂಡು ಭಾರತೀಯ ವಾತಾವರಣಕ್ಕೆ ಅನುಕೂಲವಾಗುವಂತೆ ಅದನ್ನು ಮಾರ್ಪಡಿಸಿ ಅಳವಡಿಸಬೇಕಾದ ಕೆಲಸ ಆಗಬೇಕಿದೆ. ಇತರರಂತೆ ನಮಗೂ ವಿಮಾ ಯೋಜನೆಯನ್ನು ಅಳವಡಿಸುವುದರಿಂದ ನಮಗೆ ಇನ್ನೂ ಹೆಚ್ಚಿನ ಹೊರೆಯಾಗಬಹುದು. ಆದರೆ ನಮ್ಮ ಪಾಲಿನ ಪ್ರೀಮಿಯಂ ಮೊತ್ತವನ್ನು ಸರ್ಕಾರ ಅಥವಾ ಸಂಘ-ಸಂಸ್ಥೆಗಳು ಪಾವತಿಸಿದರೆ ಮಾತ್ರ ಅದರಿಂದ ನಮಗೂ, ನಮ್ಮ ಕುಟುಂಬಕ್ಕೂ ಅನುಕೂಲವಾಗುತ್ತದೆ ಎನ್ನುತ್ತಾರೆ ಏಡ್ಸ್ ಬಾಧಿತರೊಬ್ಬರು.ಎಚ್‌ಐವಿ/ಏಡ್ಸ್ ನೊಂದಿಗೆ ಬದುಕುತ್ತಿರುವವರಿಗೆ ಪ್ರಸ್ತುತ ಸ್ಟಾರ್ ಸಮೂಹದ ವಿಮಾ ಕಂಪೆನಿ ವೈಯಕ್ತಿಕ ವಿಮಾ ಯೋಜನೆಯ ಸೌಲಭ್ಯ ಹೊಂದಿದೆ. ಅಂತರರಾಷ್ಟ್ರೀಯ ಅಭಿವೃದ್ಧಿಯ ಅಮೆರಿಕ ಸಂಸ್ಥೆ(ಯುಎಸ್‌ಎಐಡಿ)ಯಡಿ ಎಚ್‌ಐವಿ/ಏಡ್ಸ್ ಬಾಧಿತರಿಗಾಗಿ ಸಮೂಹ ಆರೋಗ್ಯ ವಿಮಾ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದಿಷ್ಟು ಬಿಟ್ಟರೆ ಯಾವುದೇ ಗಮನಾರ್ಹ ವಿಮಾ ಅನುಕೂಲಗಳಿಲ್ಲ ಎನ್ನುತ್ತಾರೆ ಅವರು.(ಎಚ್‌ಐವಿ/ಏಡ್ಸ್ ಹೊಂದಿರುವ ಜನರಿಗಾಗಿ ಕೆಎನ್‌ಪಿ ಕಳೆದ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದೆ. ಎಚ್‌ಐವಿ/ಏಡ್ಸ್ ಹೊಂದಿರುವವರಿಗೆ ಚಿಕಿತ್ಸೆ, ಔಷಧ, ಕೌನ್ಸೆಲಿಂಗ್‌ನಂತಹ ಸೌಲಭ್ಯವನ್ನು ಒದಗಿಸುತ್ತಿದೆ. ಮಾಹಿತಿಗೆ ಸಂಪರ್ಕಿಸಿ: ಸರೋಜಾ ಪಿ. - 9448068488, ತ್ಯಾಗರಾಜ್-  9241135820).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry